ಸಾಹಿತಿ ಡಾ.ಎಂ.ಎಂ.ಕಲಬುರ್ಗಿ ಹಾಗೂ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಗಳ ವಿಚಾರಣೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಅನುವಾಗುವಂತೆ ಪ್ರತ್ಯೇಕ ವಿಶೇಷ ನ್ಯಾಯಾಲಯಗಳನ್ನು ರಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಳಾಡಳಿತ ಇಲಾಖೆಗೆ ಆದೇಶಿಸಿದ್ದಾರೆ.
ಸುವರ್ಣ ವಿಧಾನಸೌಧ (ಡಿ.07): ಸಾಹಿತಿ ಡಾ.ಎಂ.ಎಂ.ಕಲಬುರ್ಗಿ ಹಾಗೂ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಗಳ ವಿಚಾರಣೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಅನುವಾಗುವಂತೆ ಪ್ರತ್ಯೇಕ ವಿಶೇಷ ನ್ಯಾಯಾಲಯಗಳನ್ನು ರಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಳಾಡಳಿತ ಇಲಾಖೆಗೆ ಆದೇಶಿಸಿದ್ದಾರೆ. ಗೌರಿ ಲಂಕೇಶ್ ಹತ್ಯೆ ಕೇಸಿನ ವಿಚಾರಣೆಗೆ ಪೂರ್ಣಾವಧಿ ನ್ಯಾಯಾಧೀಶರನ್ನು ನೇಮಿಸುವಂತೆಯೂ ಅವರು ಆದೇಶಿಸಿದ್ದಾರೆ.
ಸದ್ಯದಲ್ಲೇ ಒಳಾಡಳಿತ ಇಲಾಖೆಯಿಂದ ಅಧಿಕೃತ ಸರ್ಕಾರ ಆದೇಶ ಹೊರಬೀಳಲಿದ್ದು, ಎರಡೂ ಪ್ರಕರಣಗಳಿಗೆ ಪ್ರತ್ಯೇಕವಾಗಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು. ತನ್ಮೂಲಕ ಬಲಪಂಥೀಯ ವಿರೋಧಿ ನಿಲುವುಗಳನ್ನು ಹೊಂದಿದ್ದ ಕಾರಣಕ್ಕೆ ಹತ್ಯೆಯಾಗಿದ್ದ ಇಬ್ಬರು ಪ್ರಮುಖರ ಹತ್ಯೆಗೆ ನ್ಯಾಯ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಳಾಡಳಿತ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಎರಡು ಪ್ರತ್ಯೇಕ ಟಿಪ್ಪಣಿಗಳನ್ನು ಕಳುಹಿಸಿದ್ದಾರೆ.
ಬಿಜೆಪಿ ಬ್ರಾಂಡ್ ಬೆಂಗಳೂರು ಮಾಡಿದ್ದಾರೆಯೇ?: ಸಿಎಂ ಸಿದ್ದರಾಮಯ್ಯ
ಮೊದಲನೆಯದಾಗಿ, 2015ರಲ್ಲಿ ಧಾರವಾಡದ ಸ್ವಗೃಹದಲ್ಲಿ ಸಾಹಿತಿ ಡಾ.ಎಂ.ಎಂ. ಕಲಬುರ್ಗಿ ಅವರು ಹತ್ಯೆಯಾಗಿದ್ದರು. ಈ ಬಗ್ಗೆ 2018-19 ರಲ್ಲಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಮೃತರ ಕುಟುಂಬದವರ ವಿಚಾರಣೆಗಳು ಪೂರ್ಣಗೊಂಡಿದ್ದರೂ ನ್ಯಾಯಾಲಯದಲ್ಲಿ ವಿಚಾರಣೆಗಳು ಮುಂದುವರೆದಿವೆ. ಈಗಾಗಲೇ ಸಾಕಷ್ಟು ಸಮಯ ಆಗಿರುವುದರಿಂದ ವಿಶೇಷ ನ್ಯಾಯಾಲಯ ರಚಿಸುವಂತೆ ಮೃತರ ಪತ್ನಿ ಉಮಾದೇವಿ ಎಂ. ಕಲಬುರ್ಗಿ ಅವರು ಕೋರಿದ್ದು, ಈ ಬಗ್ಗೆ ಜರೂರಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಮತ್ತೊಂದು ಟಿಪ್ಪಣಿಯಲ್ಲಿ ಖ್ಯಾತ ಪತ್ರಕರ್ತೆ ಹಾಗೂ ಸಾಮಾಜಿಕ ಕಾರ್ಯಕರ್ತೆಯಾಗಿದ್ದ ಗೌರಿ ಲಂಕೇಶ್ ಅವರನ್ನು 2017ರ ಸೆ.5 ರಂದು ಹತ್ಯೆ ಮಾಡಲಾಗಿತ್ತು. ಈ ಸಂಬಂದ ವಿಶೇಷ ತನಿಖಾ ದಳ ರಚಿಸಿ ಇದುವರೆಗೆ 18 ಆರೋಪಿಗಳು ಬಂಧಿಸಲಾಗಿದೆ. ಅಲ್ಲದೆ, 1,200 ಪುರಾವೆ ಹಾಗೂ 500ಕ್ಕೂ ಹೆಚ್ಚು ವಿವಿಧ ಬಗೆಯ ಸಾಕ್ಷ್ಯಗಳನ್ನು ಒಳಗೊಂಡ ಚಾರ್ಜ್‌ಶೀಟ್‌ನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ಲಕ್ಷ್ಮೀ ಹೆಬ್ಬಾಳ್ಕರ್ ಬೆಳೆದು ಬಂದಿರುವುದು ಯಾವ ರೀತಿ ಎಂಬುದು ಗೊತ್ತು?: ರಮೇಶ್ ಜಾರಕಿಹೊಳಿ
ಜು.2022ರಿಂದ ನ್ಯಾಯಾಲಯದಲ್ಲಿ ವಿಚಾರಣೆ ಪ್ರಾರಂಭಗೊಂಡಿದ್ದು, ನ್ಯಾಯಾಲಯದ ಅನುದಿನದ ಪ್ರಕರಣಗಳು ಸಾಕಷ್ಟು ಸಂಖ್ಯೆಯಲ್ಲಿ ಇರುವುದರಿಂದ ವಿಚಾರಣೆಯು ನಿಧಾನಗತಿಯಲ್ಲಿ ಸಾಗಿದೆ. ಆದ್ದರಿಂದ ಈ ಪ್ರಕರಣದ ವಿಚಾರಣೆಗೆ ವಿಶೇಷ ನ್ಯಾಯಾಲಯ ರಚಿಸಿ ಪೂರ್ಣಾವಧಿ ನ್ಯಾಯಾಧೀಶರನ್ನು ನೇಮಕ ಮಾಡುವಂತೆ ಮೃತರ ಸಹೋದರಿ ಕವಿತಾ ಲಂಕೇಶ್ ಅವರು ಕೋರಿದ್ದಾರೆ. ಹೀಗಾಗಿ ಈ ಬಗ್ಗೆ ಜರೂರಾಗಿ ಅಗತ್ಯ ಕ್ರಮ ವಹಿಸಿ ಎಂದು ಸೂಚಿಸಿದ್ದಾರೆ.