
ಬೆಂಗಳೂರು (ಜು.22) : ಎರಡು ವರ್ಷಗಳ ಹಿಂದೆ ಬೆಂಗಳೂರಿನಿಂದ ದುಬೈಗೆ ಹಾರಿದ ಬಳಿಕ ಸಂಪರ್ಕಕ್ಕೆ ಸಿಗದ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಯ (ಎಲ್‌ಇಟಿ) ಮೋಸ್ಟ್ ವಾಟೆಂಡ್ ಉಗ್ರ ಮಹಮದ್ ಜುನೈದ್‌ನ ಬಂಧನಕ್ಕೆ ಇಂಟರ್‌ಫೋಲ್‌ಗೆ ವರದಿ ಸಲ್ಲಿಸಲು ಸಿಸಿಬಿ ಸಿದ್ಧತೆ ನಡೆಸಿದೆ.
2021ರಲ್ಲಿ ದುಬೈಗೆ ಜುನೈದ್ ಪ್ರಯಾಣ ಬೆಳೆಸಿರುವ ದಾಖಲೆಗಳು ಸಿಕ್ಕಿವೆ. ಆದರೆ ಆತ ಅಲ್ಲಿಂದ ಎಲ್ಲಿಗೆ ಹೋದ ಎಂಬುದು ಖಚಿತವಾಗಿಲ್ಲ. ಒಂದು ಮೂಲದ ಪ್ರಕಾರ ಜುನೈದ್ ಅಪ್ಘಾನಿಸ್ತಾನ ಗಡಿ ಸೇರಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ಹೇಳಿದ್ದಾರೆ.
ವಿದೇಶದಲ್ಲಿ ನೆಲೆಸಿರುವ ಶಂಕಿತ ಭಯೋತ್ಪಾದಕ ಜುನೈದ್ ಬಗ್ಗೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಹಾಗೂ ಕೇಂದ್ರ ಗುಪ್ತ ದಳ (ಐಬಿ) ಸೇರಿದಂತೆ ಕೇಂದ್ರ ತನಿಖಾ ಸಂಸ್ಥೆಗಳ ಜತೆ ಮಾಹಿತಿ ಹಂಚಿಕೊಳ್ಳಲಾಗಿದೆ. ಅಲ್ಲದೆ ಇಂಟರ್‌ಪೋಲ್‌ಗೆ ಸಹ ವರದಿ ನೀಡಲಾಗಿದ್ದು, ಲುಕ್‌ಔಟ್ ನೋಟಿಸ್ ಹೊರಡಿಸಲಾಗುತ್ತದೆ ಎಂದು ಹೇಳಿದ್ದಾರೆ.
ಸೆಂಟ್ರಲ್ ಜೈಲ್ ಈಗ ಟೆರರಿಸ್ಟ್ ಯುನಿವರ್ಸಿಟಿ: ಪರಪ್ಪನ ಅಗ್ರಹಾರದಲ್ಲಿ ಟೆರರ್ ಉಪನ್ಯಾಸಕರು ..!
ಆರ್.ಟಿ.ನಗರದ ಜುನೈದ್ ಮೇಲೆ ಕೊಲೆ ಹಾಗೂ ರಕ್ತಚಂದನ ಸಾಗಾಣಿಕೆ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ಅಂದು ಆತನನ್ನು ಬಂಧಿಸಿದ್ದ ಸ್ಥಳೀಯರು ಪಾಸ್‌ಪೋರ್ಚ್ ಜಪ್ತಿ ಮಾಡಿರಲಿಲ್ಲ. ಅಲ್ಲದೆ ಕೊಲೆ ಕೃತ್ಯಗಳಲ್ಲಿ ಬಂಧಿಸಿದಾಗ ಆರೋಪಿಗಳ ಪಾಸ್‌ಪೋರ್ಚ್ ವಶಕ್ಕೆ ಪಡೆಯುವುದು ಸಹ ಅಗತ್ಯವಿಲ್ಲ. ಹೀಗಾಗಿ 2020ರಲ್ಲಿ ರಕ್ತಚಂದನ ಅಕ್ರಮ ಸಾಗಾಣಿಕೆ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದ ನಂತರ ತನ್ನ ಅಸಲಿ ಪಾಸ್‌ಪೋರ್ಚ್ ಬಳಸಿಯೇ ದುಬೈಗೆ ಜುನೈದ್ ತೆರಳಿದ್ದಾನೆ. ಪ್ರಸ್ತುತ ದುಬೈನಲ್ಲಿ ಅವಿತುಕೊಂಡು ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿರುವುದು ಖಚಿತವಾಗಿಲ್ಲ ಎಂದು ಉನ್ನತ ಮೂಲಗಳು ಹೇಳಿವೆ.
ಇಂಟರ್‌ನೆಟ್ ಕಾಲ್ ಬಳಕೆ:
ವಿದೇಶದಲ್ಲಿರುವ ತನ್ನ ಇರುವಿಕೆಯ ಜಾಗ ತಿಳಿಯದಂತೆ ಎಚ್ಚರಿಕೆ ವಹಿಸಿರುವ ಜುನೈದ್, ಬೆಂಗಳೂರಿನಲ್ಲಿರುವ ತನ್ನ ಸಹಚರರು ಹಾಗೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಎಲ್‌ಇಟಿ ಶಂಕಿತ ಉಗ್ರ ನಸಿರ್ ಜತೆ ಮಾತನಾಡಲು ಇಂಟರ್‌ನೆಟ್ ಕಾಲ್ ಬಳಸಿರುವುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆನ್‌ಲೈನ್‌ನಲ್ಲಿ ಸಂವಹನಕ್ಕೆ ಹಲವು ಆ್ಯಪ್‌ಗಳಿವೆ. ಅವುಗಳನ್ನು ಉಪಯೋಗಿಸಿ ಆತ ಇಂಟರ್‌ನೆಟ್ ಕಾಲ ಮಾಡುತ್ತಿದ್ದಾನೆ. ಇದರಿಂದ ಆತನ ಅಡಗುದಾಣ ತಿಳಿಯುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಶಂಕಿತ ಉಗ್ರರ ವಿಚಾರಣೆ:
ಬೆಂಗಳೂರಿನಲ್ಲಿ ಸರಣಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿ ಸಿಕ್ಕಿಬಿದ್ದಿರುವ ಐವರು ಶಂಕಿತ ಉಗ್ರರ ವಿಚಾರಣೆಯನ್ನು ಸಿಸಿಬಿ ಪೊಲೀಸರು ಮುಂದುವರೆಸಿದ್ದಾರೆ. ಮಡಿವಾಳದ ವಿಚಾರಣಾ ಕೇಂದ್ರದಲ್ಲಿ ಬಿಗಿ ಪೊಲೀಸ್ ಬಂದೋಬಸ್‌್ತನಲ್ಲಿ ಶಂಕಿತ ಭಯೋತ್ಪಾದಕರನ್ನು ಇಡಲಾಗಿದೆ.
ಬಗೆದಷ್ಟು ಬಯಲಾಗ್ತಿದೆ ದುಷ್ಕರ್ಮಿಗಳ ನಿಗೂಢ ಹೆಜ್ಜೆ: ಬೆಂಗಳೂರು ಮಾತ್ರ ಶಂಕಿತ ಉಗ್ರರ ಟಾರ್ಗೆಟ್ ಆಗಿತ್ತಾ..?
ನಸಿರ್ ವಶಕ್ಕೆ ಸಿಸಿಬಿ ನಿರ್ಧಾರ
ಐವರು ಶಂಕಿತ ಉಗ್ರರ ವಿಚಾರಣೆಯಲ್ಲಿ ಲಭ್ಯವಾಗುವ ಮಾಹಿತಿ ಆಧರಿಸಿ ಬಂಧಿತರಿಗೆ ಜಿಹಾದ್ ಬೋಧಿಸಿದ್ದ ಎಲ್‌ಇಟಿ ಶಂಕಿತ ಉಗ್ರ ನಸೀರ್‌ನನ್ನು ವಶಕ್ಕೆ ಪಡೆಯಲು ಸಿಸಿಬಿ ಅಧಿಕಾರಿಗಳು ನಿರ್ಧರಿಸಿದ್ದಾರೆ. ಹೀಗಾಗಿ ಸೋಮವಾರ ಅಥವಾ ಮಂಗಳವಾರ ನಸೀರ್ ವಶಕ್ಕೆ ಪಡೆಯಲು ನ್ಯಾಯಾಲಯಕ್ಕೆ ಸಿಸಿಬಿ ಅರ್ಜಿ ಸಲ್ಲಿಸಲಿದೆ. ನಸೀರ್ ಸದ್ಯ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ