ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಬೈಕ್, ಆಟೋ, ಟ್ರ್ಯಾಕ್ಟರ್ ಸಂಚಾರ ನಿಷೇಧಿಸಿದ ನಂತರ ನಿಯಮ ಉಲ್ಲಂಘಿಸಿ ಮೊದಲ ಬಾರಿಗೆ 500 ರೂ. ದಂಡ ಕಟ್ಟಿದ ಬೈಕ್ ಸವಾರ ಇವರೇ ನೋಡಿ..
ಬೆಂಗಳೂರು (ಆ.1): ರಾಜ್ಯದ ರಾಜಧಾನಿ ಹಾಗೂ ಸಾಂಸ್ಕೃತಿ ರಾಜಧಾನಿ ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಇಂದಿನಿಂದ (ಆ.1) ಬೈಕ್, ಆಟೋ, ಟ್ರ್ಯಾಕ್ಟರ್ ಸಂಚಾರ ನಿರ್ಬಂಧಿಸಲಾಗಿದೆ. ಆದರೂ, ನಿಯಮ ಉಲ್ಲಂಘಿಸಿ ದಶಪಥ ಹೆದ್ದಾರಿಯಲ್ಲಿ ಬಂದು 500 ರೂ. ದಂಡ ಕಟ್ಟಿದ ಮೊದಲ ಬೈಕ್ ಸವಾರ ಇವರೇ ನೋಡಿ...
ಹೌದು, ರಾಜ್ಯದಲ್ಲಿರುವ ಏಕೈಕ ಎಕ್ಸ್‌ಪ್ರೆಸ್‌ವೇ ಎಂದರೆ ಅದು ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ಆಗಿದೆ. ಈ ರಸ್ತೆ ನಿರ್ಮಾಣದಿಂದ ಉದ್ಘಾಟನೆಗೊಂಡು, ಟೋಲ್ ಶುಲ್ಕ ವಸೂಲಿ ಮಾಡುವವರೆಗೂ ಒಂದಲ್ಲಾ ಒಂದು ವಿವಾದವನ್ನು ಎದುರಿಸುತ್ತಲೇ ಬಂದಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಲ್ಲ ಕಾರ್ಯಗಳಿಗೂ ಸ್ಥಳೀಯ ಸಾರ್ವಜನಿಕರು ವಿರೋಧ ಮಾಡುತ್ತಲೇ ಬಂದಿದ್ದಾರೆ. ಇತ್ತೀಚೆಗೆ ಜು.12ರಂದು ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಬೈಕ್, ಆಟೋ, ಟ್ರ್ಯಾಕ್ಟರ್ ಸೇರಿ ಕೆಲವು ವಾಹನಗಳ ಸಂಚಾರ ನಿಷೇಧಿಸಿ ಗೆಜೆಟ್ ನೋಟಿಫಿಕೇಶನ್ ಹೊರಡಿಸಲಾಗಿದ್ದು, ಆಗಸ್ಸ್ 1ರಿಂದ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ. ಆದರೆ, ಈ ಮಾಹಿತಿ ತಿಳಿಯದೇ ಹೆದ್ದಾರಿಯಲ್ಲಿ ಬಂದ ಬೈಕ್ ಸವಾರನೊಬ್ಬ 500 ರೂ. ದಂಡ ಕಟ್ಟಿದ್ದಾನೆ. ಮೊದಲ ದಂಡ ಕಟ್ಟಿದ ಬೈಕ್ ಸವಾರ ಇಲ್ಲಿದ್ದಾರೆ.
ನಾಳೆಯಿಂದ ಬೆಂಗಳೂರು- ಮೈಸೂರು ದಶಪಥದಲ್ಲಿ ಬೈಕ್, ಆಟೋ ನಿಷೇಧ: ನಿಯಮ ಉಲ್ಲಂಘಿಸಿದರೆ 500 ರೂ. ದಂಡ
ಇನ್ನು ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಬೆಳಗ್ಗೆಯಿಂದಲೇ ಬೈಕ್, ಆಟೋ, ಟ್ರ್ಯಾಕ್ಟರ್ ನಿಷೇಧ ಮಾಡಲಾಗಿದ್ದು, ಪೊಲೀಸ್ ಇಲಾಖೆಯಿಂದ ಯಾವುದೇ ಫಲಕವನ್ನು ಅಳವಡಿಕೆ ಮಾಡಿರಲಿಲ್ಲ. ಇನ್ನು 10 ಗಂಟೆ ನಂತರ ಕರ್ತವ್ಯಕ್ಕಿಳಿದ ಪೊಲೀಸರು ಏಕಾಏಕಿ ಹೆದ್ದಾರಿಯಲ್ಲಿ ಬಂದವರಿಗೆ ದಂಡ ವಿಧಿಸಲು ಮುಂದಾಗಿದ್ದಾರೆ. ಇನ್ನು ರಸ್ತೆಯಲ್ಲಿ ಬೈಕ್ ಸಂಚಾರ ನಿಷೇಧ ಮಾಡಿರುವ ಮಾಹಿತಿ ಗೊತ್ತಿಲ್ಲದೇ ಮೈಸೂರಿನಿಂದ ಬೆಂಗಳೂರಿನತ್ತ ಆಗಮಿಸುತ್ತಿದ್ದ ಬೈಕ್ ಸವಾರನೊಬ್ಬನಿಗೆ ರಾಮನಗರ ಜಿಲ್ಲಾ ಪೊಲೀಸರು 500 ರೂ. ದಂಡ ವಿಧಿಸಿದ ಹಣವನ್ನು ಪಾವತಿಸಿಕೊಂಡು ರಶೀದಿಯನ್ನು ನೀಡಿದ್ದಾರೆ.
ಸೂಚನಾ ಫಲಕ ಅಳವಡಿಸದ ಪೊಲೀಸರು: ಇನ್ನು ಬೆಂಗಳೂರಿನಿಂದ ಮೈಸೂರುವರೆಗೆ ಸುಮಾರು 145 ಕಿ.ಮೀ ಮಾರ್ಗವು ಒಟ್ಟು ನಾಲ್ಕು ಜಿಲ್ಲಾ ಕೇಂದ್ರಗಳಿಗೆ ಸಂಪರ್ಕವನ್ನು ಕಲ್ಪಿಸುತ್ತದೆ. ಬೆಂಗಳೂರು, ರಾಮಗರ, ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳು ಸಂಪರ್ಕ ಪಡೆದುಕೊಂಡಿವೆ. ಆದರೆ, ನಾಲ್ಕು ಜಿಲ್ಲೆಗಳ ಜಿಲ್ಲಾ ಪೊಲೀಸರು ಕೂಡ ದಂಡ ವಸೂಲಿಗೆ ಕಾತರರಾಗಿದ್ದಾರೆಯೇ ಹೊರತು ಸಾರ್ವಜನಿಕರಿಗೆ ಅರಿವು ಮೂಡಿಸುವಲ್ಲಿ ವಿಫಲರಾಗಿದ್ದಾರೆ. ಎಕ್ಸ್‌ಪ್ರೆಸ್ ವೇನ ಎಂಟ್ರಿ ಮತ್ತು ಎಕ್ಸಿಟ್‌ನಲ್ಲಿ ಯಾವುದೇ ಸೂಚನಾ ಫಲಕಗಳನ್ನು ಅಳವಡಿಕೆ ಮಾಡಿಲ್ಲ. ಆದ್ದರಿಂದ ಕೆಲ ಬೈಕ್ ಸವಾರರು ಮಾಹಿತಿ ಇಲ್ಲದೇ ರಸ್ತೆಯಲ್ಲಿ ಹೋಗಿ ದಂಡ ಕಟ್ಟಿದ್ದಾರೆ.
ಸರ್ವಿಸ್ ರಸ್ತೆಯು ಸರಿಯಾಗಿಲ್ಲ: ದಶಪಥ ಹೆದ್ದಾರಿಯ ಕಾಮಗಾರಿ ಸಂಪೂರ್ಣವಾಗಿ ಮುಗಿದಿದೆ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೇಳುತ್ತಿದ್ದರೂ ಸರ್ವಿಸ್ ರಸ್ತೆಯ ಕಾಮಗಾರಿ ಅಲ್ಲಲ್ಲಿ ಬಾಕಿಯಿದೆ. ಇನ್ನು ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಅಂಡರ್‌ಪಾಸ್‌ಗಳಲ್ಲಿ ನೀರು ನಿಲ್ಲುತ್ತಿದ್ದು ಮಳೆಗಾಲದಲ್ಲಿ ಜನರು ಪರದಾಡುವಂತಾಗಿದೆ. ಇನ್ನು ಎಂಟ್ರಿ ಮತ್ತು ಎಕ್ಸಿಟ್‌ಗಳು ಸಂಪೂರ್ಣವಾಗಿ ಸರಿಯಾಗಿಲ್ಲ. 25ಕ್ಕೂ ಹೆಚ್ಚು ಅಪಘಾತ ವಲಯಗಳು ಇದ್ದು, ವಾಹನ ಸವಾರರಿಗೆ ಈಗಲೂ ಆತಂಕವಾಗಿದೆ. ಆದರೆ, ಈಗಾಗಲೇ ಹೆದ್ದಾರಿಯಲ್ಲಿ ಬೈಕ್, ಆಟೋ ಮತ್ತು ಟ್ರ್ಯಾಕ್ಟರ್ ನಿಷೇಧ ಮಾಡಿದ್ದರಿಂದ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ.
ಮೈಸೂರು ಅರಮನೆಗೆ ಎರಡು ದಿನ ಪ್ರವೇಶ ನಿಷೇಧ: ಪ್ರವಾಸಿಗರೇ ಗಮನಿಸಿ
ನಿಯಮ ಪಾಲಿಸದ ಮಂಡ್ಯದ ಜನತೆ: ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಬೆಂಗಳೂರು ಮತ್ತು ರಾಮನಗರದ ಗಡಿಭಾಗವಾದ ಕಣಿಮಿಣಿಕೆ ಹಾಗೂ ಮಂಡ್ಯ ಮತ್ತು ಮೈಸೂರು ಜಿಲ್ಲೆಯ ಗಡಿಭಾಗವಾದ ಶ್ರೀರಂಗಪಟ್ಟಣದ ಬಳಿ ಟೋಲ್ ಗೇಟ್‌ಗಳಿವೆ. ಆದರೆ, ಮಂಡ್ಯ ಜಿಲ್ಲೆಯ ಬಹುತೇಕ ಭಾಗದಲ್ಲಿ ಟೋಲ್ ಗೇಟ್ ಇಲ್ಲ. ಆದ್ದರಿಂದ ಕೆಲವರು ಟೋಲ್ ಕಟ್ಟದೇ ಹೆದ್ದಾರಿಯನ್ನು ಬಳಸಿಕೊಂಡು ಹೋಗಿ ಇನ್ನೊಂದು ಮಾರ್ಗದಲ್ಲಿ ಹೊರ ಬರುತ್ತಿದ್ದಾರೆ. ಆದ್ದರಿಂದ, ಮಂಡ್ಯ ಸೇರಿ ಕೆಲವೆಡೆ ಬೈಕ್ ಸವಾರರು ಹೆದ್ದಾರಿಯಲ್ಲಿ ಬೈಕ್ ಸಂಚಾರ ನಿಷೇಧವಿದ್ದರೂ ನಿಯಮ ಉಲ್ಲಂಘಿಸಿ ಸಂಚಾರ ಮಾಡುತ್ತಿದ್ದಾರೆ.