ಡಿಕೆಶಿ ಕೇಸ್‌ ಡೈರಿ ಮುಚ್ಚಿದ ಲಕೋಟೆಯಲ್ಲಿ ಆ.2ರೊಳಗೆ ಸಲ್ಲಿಸಲು ಸಿಬಿಐಗೆ ಹೈಕೋರ್ಟ್ ಸೂಚನೆ

By Gowthami KFirst Published Aug 1, 2023, 10:47 AM IST
Highlights

ಡಿಕೆಶಿ ಕೇಸ್‌ ಡೈರಿ ಸಲ್ಲಿಸಲು ಸಿಬಿಐಗೆ ಹೈಕೋರ್ಟ್ ಸೂಚನೆ ನೀಡಿದೆ. ತನಿಖೆ ಕುರಿತು ಸಂಶಯ ವ್ಯಕ್ತಪಡಿಸಿದ ಡಿಕೆಶಿ ಪರ ವಕೀಲರು.  ಕೇಸ್‌ ಡೈರಿ ತರಿಸಿಕೊಂಡು ಪರಿಶೀಲನೆಗೆ ಕೋರ್ಟ್ ನಿರ್ಧಾರ ಮಾಡಿದೆ.

ಬೆಂಗಳೂರು (ಜು.1): ಆದಾಯ ಮೀರಿ ಆಸ್ತಿ ಗಳಿಕೆ ಮಾಡಿದ ಆರೋಪದಡಿ ಸಿಬಿಐ ದಾಖಲಿಸಿರುವ ಎಫ್‌ಐಆರ್‌ ರದ್ದು ಪಡಿಸುವಂತೆ ಕೋರಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿರುವ ಹೈಕೋರ್ಟ್ , ಪ್ರಕರಣ ಕುರಿತ ಕೇಸ್‌ ಡೈರಿಯನ್ನು ಎರಡು ದಿನಗಳ ಒಳಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಸಿಬಿಐ ತನಿಖಾಧಿಕಾರಿಗಳಿಗೆ ಸೂಚಿಸಿದೆ.

ಡಿ.ಕೆ.ಶಿವಕುಮಾರ್‌ ಅವರ ತಕರಾರು ಅರ್ಜಿ ಸಂಬಂಧ ಸೋಮವಾರ ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಕೆ.ನಟರಾಜನ್‌ ಅವರ ನ್ಯಾಯಪೀಠ ತೀರ್ಪು ಕಾಯ್ದಿರಿಸಿತು. ಇದೇ ವೇಳೆ ಶಿವಕುಮಾರ್‌ ಪರ ವಕೀಲರು ತನಿಖೆಯ ಕುರಿತು ಸಂಶಯ ವ್ಯಕ್ತಪಡಿಸಿ, ಕೇಸ್‌ ಡೈರಿಯನ್ನು ತರಿಸಿಕೊಂಡು ನ್ಯಾಯಾಲಯ ಪರಿಶೀಲನೆ ಮಾಡಬೇಕು ಎಂದು ಕೋರಿದರು.

Latest Videos

ಅಕ್ರಮ ಆಸ್ತಿ ಗಳಿಕೆ ಕೇಸಲ್ಲಿ ಡಿ.ಕೆ. ಶಿವಕುಮಾರ್‌ಗೆ ಬಿಗ್‌ ರಿಲೀಫ್‌ ಕೊಟ್ಟ ಸುಪ್ರೀಂ ಕೋರ್ಟ್: ಸಿಬಿಐಗೆ ಹಿನ್ನಡೆ

ಈ ಮನವಿ ಮೇರೆಯ ಪ್ರಕರಣಕ್ಕೆ ಸಂಬಂಧಿಸಿದ ಕೇಸ್‌ ಡೈರಿಯನ್ನು ಆ.2ರೊಳಗೆ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸಿಬಿಐ ತನಿಖಾಧಿಕಾರಿಗಳಿಗೆ ನ್ಯಾಯಪೀಠ ನಿರ್ದೇಶಿಸಿತು.

ಶಿವಕುಮಾರ್‌ ಅವರ ನವದೆಹಲಿ, ಬೆಂಗಳೂರು ಸೇರಿದಂತೆ ಇತರೆಡೆಯ ಮನೆಗಳ ಮೇಲೆ 2017ರ ಆ.2ರಂದು ಆದಾಯ ತೆರಿಗೆ ದಾಳಿ ನಡೆಸಲಾಗಿತ್ತು. ಈ ವೇಳೆ ಅವರ ನಿಕಟವರ್ತಿಗಳ ಮನೆಯಲ್ಲಿ ದೊರೆತಿದ್ದ ಹಣವನ್ನು, ಶಿವಕುಮಾರ್‌ ಬೇನಾಮಿಯಾಗಿ ಇರಿಸಿದ್ದಾರೆ ಎಂದು ಆರೋಪಿಸಿ ಸಿಬಿಐ 2020ರ ಅ.3ರಂದು ಎಫ್‌ಐಆರ್‌ ದಾಖಲಿಸಿತ್ತು. ಸಿಬಿಐ ದಾಖಲಿಸಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಶಿವಕುಮಾರ್‌ ಹೈಕೋರ್ಟ್ ಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ.

ಲೋಕಸಭೆ ಚುನಾವಣೆ ಚರ್ಚೆಗೆ ರಾಹುಲ್‌ ಸಭೆ: ಡಿಕೆಶಿ

ಶಿವಕುಮಾರ್ 2013ರಿಂದ 2018ರ ನಡುವೆ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂದು ಸಿಬಿಐ ಆರೋಪಿಸಿದೆ.  ಸೆಪ್ಟೆಂಬರ್ 3, 2020 ರಂದು ಎಫ್‌ಐಆರ್ ಅನ್ನು ಸಿಬಿಐ ದಾಖಲಿಸಿದೆ. ಶಿವಕುಮಾರ್ ಅವರು 2021 ರಲ್ಲಿ ಹೈಕೋರ್ಟ್‌ನಲ್ಲಿ ಎಫ್‌ಐಆರ್ ಅನ್ನು ಪ್ರಶ್ನಿಸಿದರು.

ಆದಾಯ ತೆರಿಗೆ ಇಲಾಖೆಯು 2017 ರಲ್ಲಿ ಶಿವಕುಮಾರ್ ಅವರ ಕಚೇರಿಗಳು ಮತ್ತು ನಿವಾಸಗಳಲ್ಲಿ ಶೋಧ ಮತ್ತು ಜಪ್ತಿ ಕಾರ್ಯಾಚರಣೆಯನ್ನು ನಡೆಸಿತ್ತು, ಅದರ ಆಧಾರದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅವರ ವಿರುದ್ಧ ತನ್ನದೇ ಆದ ತನಿಖೆಯನ್ನು ಪ್ರಾರಂಭಿಸಿತು.

ಇಡಿ ತನಿಖೆಯ ಆಧಾರದ ಮೇಲೆ ಸಿಬಿಐ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲು ರಾಜ್ಯ ಸರ್ಕಾರದಿಂದ ಅನುಮತಿ ಕೋರಿದೆ. ಸೆಪ್ಟೆಂಬರ್ 25, 2019 ರಂದು ರಾಜ್ಯ ಸರ್ಕಾರವು ಮಂಜೂರಾತಿ ನೀಡಿತು ಮತ್ತು ಒಂದು ವರ್ಷದ ನಂತರ ಎಫ್‌ಐಆರ್ ದಾಖಲಿಸಲಾಗಿತ್ತು.  

click me!