ಕುಂಚದಲ್ಲರಳಿ ಕಣ್ಮನ ಸೆಳೆವ ತರಹೇವಾರಿ ಕಲಾಕೃತಿಗಳ ರಾಶಿ, ಅಬಾಲವೃದ್ದರು ಸಂಭ್ರಮಿಸುವಂತೆ ಮಾಡಿದ ಹತ್ತಾರು ಬಗೆಯ ಕಲಾಕೃತಿಗಳು, ಅಂಗೈ ಅಗಲದಿಂದ ಹಿಡಿದು ಆಳೆತ್ತರದ ಭವ್ಯವಾದ ಕೃತಿಗಳಿಗೆ ಬೆರಗುಗೊಂಡ ಕಲಾ ರಸಿಕರು.
ಬೆಂಗಳೂರು (ಜ.06): ಕುಂಚದಲ್ಲರಳಿ ಕಣ್ಮನ ಸೆಳೆವ ತರಹೇವಾರಿ ಕಲಾಕೃತಿಗಳ ರಾಶಿ, ಅಬಾಲವೃದ್ದರು ಸಂಭ್ರಮಿಸುವಂತೆ ಮಾಡಿದ ಹತ್ತಾರು ಬಗೆಯ ಕಲಾಕೃತಿಗಳು, ಅಂಗೈ ಅಗಲದಿಂದ ಹಿಡಿದು ಆಳೆತ್ತರದ ಭವ್ಯವಾದ ಕೃತಿಗಳಿಗೆ ಬೆರಗುಗೊಂಡ ಕಲಾ ರಸಿಕರು. ಇದು ಭಾನುವಾರದ 22ನೇ ಚಿತ್ರಸಂತೆಯ ನೋಟ. ನಗರದ ಕುಮಾರಕೃಪಾ ರಸ್ತೆಯಲ್ಲಿ ಚಿತ್ರಕಲೆಗಳ ಜಾತ್ರೆ ನಡೆಯಿತು. ಕಲೋಪಾಸಕರಲ್ಲಿ ಯಾವುದನ್ನು ನೋಡಲಿ, ಯಾವುದು ಕೊಳ್ಳಲಿ ಎಂಬ ಧಾವಂತ. ರಾತ್ರಿವರೆಗೆ ಸುಮಾರು 4 ಲಕ್ಷಕ್ಕೂ ಅಧಿಕ ಜನ ಬಂದು ಚಿತ್ರಸಂತೆಯ ಸವಿಯುಂಡರು.
ಬೆಳಗ್ಗೆ 7 ರಿಂದಲೇ ಚಿತ್ರಸಂತೆ ಆರಂಭವಾಗಿತ್ತು. ಕುಮಾರಕೃಪಾ, ಕ್ರೆಸೆಂಟ್ ರಸ್ತೆ ಶಿವಾನಂದ ಸರ್ಕಲ್ ರಸ್ತೆಯ ಇಕ್ಕೆಲಗಳಲ್ಲಿ ತಾವು ರಚಿಸಿದ ವಿವಿಧ ಕೃತಿಗಳನ್ನು ಒಪ್ಪವಾಗಿಟ್ಟಿದ್ದರು. ಟೇಬಲ್ ವೇಟ್ ಗಾತ್ರದಿಂದ ಹಿಡಿದು ಆಳೆತ್ತರದವರೆಗಿನ, ₹100ರಿಂದ ಹಿಡಿದು ₹14 ಲಕ್ಷದವರೆಗಿನ ಕಲಾಕೃತಿಗಳು ಪ್ರದರ್ಶಿತಗೊಂಡವು.
ಚಿತ್ರಸಂತೆ ಅವಾರ್ಡ್ ಫೋಟೊ ಶೇರ್ ಮಾಡಿದ ಹರ್ಷಿಕಾ, ಪ್ರೆಗ್ನೆಂಟಾ ಕೇಳಿದ್ದಕ್ಕೆ ಫೋಟೊ ಡಿಲೀಟ್!
22 ರಾಜ್ಯ 1500 ಕಲಾವಿದರು: ದೇಶದ ವಿವಿಧ ಭಾಗಗಳಿಂದ 1,500 ಕಲಾವಿದರು ಚಿತ್ರಸಂತೆಯಲ್ಲಿ ಭಾಗವಹಿಸಿ ಕಲಾಕೃತಿಗಳನ್ನು ಪ್ರದರ್ಶಿಸಿದರು. ಕರ್ನಾಟಕದ ಜತೆಗೆ ಅಸ್ಸಾಂ, ಪಶ್ಚಿಮ ಬಂಗಾಳ, ಬಿಹಾರ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ, ಪಂಜಾಬ್, ಒಡಿಶಾ ಸೇರಿದಂತೆ 22 ರಾಜ್ಯಗಳ ಕಲಾವಿದರು ಪಾಲ್ಗೊಂಡಿದ್ದರು. ಆಯಾರಾಜ್ಯಗಳ ಪಾರಂಪರಿಕ ಕಲೆ, ಜನಪದ, ಕ್ರೀಡೆ, ಆಚರಣೆ ಬಿಂಬಿಸುವ ಚಿತ್ರಗಳನ್ನು ಪ್ರದರ್ಶಿಸಿದರು. ಪರಿಷತ್ತಿನ ಗ್ಯಾಲರಿಗಳಲ್ಲಿ ಹಿರಿಯ ಹಾಗೂ ಹೆಸರಾಂತ ಕಲಾವಿದರು ರಚಿಸಿದ ಕಲಾಕೃತಿಗಳ ಪ್ರದರ್ಶನ ಇತ್ತು.
ಜನಪ್ರವಾಹ: ಬಿಸಿಲೇರುತ್ತಿದ್ದಂತೆ ಚಿತ್ರಸಂತೆಯುದ್ದಕ್ಕೂ ಕಾಲಿಡಲೂ ಆಗದಷ್ಟು ನೂಕುನುಗ್ಗಲು ಉಂಟಾಗಿತ್ತು. ಮಧ್ಯಾಹ್ನ 12ರ ಬಳಿಕ ಚಿತ್ರಸಂತೆಯಲ್ಲಿ ಜನಪ್ರವಾಹವಿತ್ತು. ಅಂಗವಿಕಲರು, ವೃದ್ಧರಿಗಾಗಿ ಎಲೆಕ್ಟ್ರಿಕ್ ವಾಹನದ ವ್ಯವಸ್ಥೆಯಿತ್ತು. ಹಲವರು ವ್ಹೀಲ್‌ಚೇರ್‌ನಲ್ಲಿಯೇ ಬಂದು ಚಿತ್ರಗಳನ್ನು ವೀಕ್ಷಿಸಿ ಸಂತೋಷಪಟ್ಟರು. ಕಲಾವಿದರನ್ನು ಮಾತನಾಡಿಸಿ ವಿವರ ಪಡೆಯುವುದು, ದರ ಕೇಳುವುದು, ಚೌಕಾಸಿ ವ್ಯಾಪಾರ ನಡೆದಿತ್ತು. ಯುವಕ ಯುವತಿಯರು ಕೆನ್ನೆ, ಹಣೆಯ ಮೇಲೆ ನೆಚ್ಚಿನ ಚಿತ್ರ ಬರೆದುಕೊಂಡು ಓಡಾಡಿ ಸಂಭ್ರಮಿಸಿದರು. ಕಳ್ಳೆಪುರಿ, ಕಡಲೆಕಾಯಿ, ಸ್ವೀಟ್ ಕಾರ್ನ್ ಬಾಯಿಗಿಳಿಸಿಕೊಳ್ಳುತ್ತ ಚಿತ್ರಸಂತೆಯಲ್ಲಿ ನಡೆದರು.
ತರಹೇವಾರಿ ಕಲಾಕೃತಿಗಳು: ಮೈಸೂರು ಸಾಂಪ್ರದಾಯಿಕ ಶೈಲಿ, ಪಶ್ಚಿಮ ಬಂಗಾಳದ ಪಟ ಚಿತ್ರ, ರಾಜಸ್ಥಾನಿ ಮಧುಬನಿ ಶೈಲಿ, ಪಂಜಾಬಿನ ಫೂಲ್ಕಾರಿ, ಬಿಹಾರದ ಟಿಕುಲಿ ಕಲಾಕೃತಿಗಳಿದ್ದವು. ಇನ್ನು, ಅಕ್ರಾಲಿಕ್, ವಾಟರ್ ಪೇಂಟಿಂಗ್, ಕೊಲಾಜ್ ಲಿಥೋಗ್ರಾಫ್, ಉಬ್ಬುಶಿಲ್ಪದ ಮಾದರಿ, ಕ್ಲೇ ಆರ್ಟ್, ಡಾಟ್ ಪೇಯಿಂಟಿಂಗ್, ರಿವರ್ಸ್ ಪೇಯಿಂಟಿಂಗ್ ಕಲಾಕೃತಿಗಳಿದ್ದವು. ವಿಶೇಷವಾಗಿ ವಿವಿಧ ವರ್ಣದ ಮರಗಳ ಪೀಸನ್ನು ಜೋಡಿಸಿ ತಯಾರಿಸಲಾಗಿದ್ದ ವುಡ್‌ಇನ್‌ಲೇ ಶೈಲಿಯ ₹4 ಲಕ್ಷ ಬೆಲೆಬಾಳುವ ಚಿತ್ರಣಗಳು ಗಮನ ಸೆಳೆದವು. ಮನೆ, ರೆಸ್ಟೋರೆಂಟ್, ಸ್ಟಾರ್ ಹೋಟೆಲ್‌ಗಳಲ್ಲಿ ಇಡಬಹುದಾದ ಕಲಾಕೃತಿಗಳು ಗಮನಸೆಳೆದವು.
ಸಿಲಿಕಾನ್ ಸಿಟಿಯಲ್ಲಿ 'ಕಲರ್‌ಫುಲ್' ಚಿತ್ರಸಂತೆ; ಕಣ್ಮನ ಸೆಳೆಯುತ್ತಿದೆ ಕಲಾಕೃತಿಗಳು!
₹4- ₹5 ಕೋಟಿ ವಹಿವಾಟು: ಚಿತ್ರಸಂತೆಗೆ ಹಿಂದೆಗಿಂತ ಹೆಚ್ಚಿನ ಸಂಖ್ಯೆಯ ಕಲಾಸಕ್ತರು ಈ ಬಾರಿ ಭೇಟಿ ನೀಡಿದ್ದಾರೆ. ಈ ಬಾರಿ ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ಕಲಾಪ್ರೇಮಿಗಳು ಚಿತ್ರಸಂತೆಗೆ ಭೇಟಿ ನೀಡಿದ್ದು, ಕಳೆದ ಬಾರಿಗಿಂತ ಶೇ.20ರಷ್ಟು ಹೆಚ್ಚು ಅಂದರೆ ಅಂದಾಜು ₹4- ₹5 ಕೋಟಿಗೂ ಹೆಚ್ಚು ವಹಿವಾಟು ನಡೆದಿದೆ. ಇನ್ನು ಆನ್‌ಲೈನ್‌ನಲ್ಲಿ ಇರುವ ಚಿತ್ರಗಳು ಒಂದು ತಿಂಗಳು ಮಾರಾಟವಾಗಲಿದ್ದು, ಹೆಚ್ಚಿನ ವಹಿವಾಟು ನಡೆಯಲಿದೆ ಎಂದು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್.ಶಂಕರ್ ತಿಳಿಸಿದರು.