ರಾಜ್ಯದಲ್ಲಿ ಚಳಿ ಪ್ರಮಾಣ ಹೆಚ್ಚಾಗುತ್ತಿದ್ದು, ಬಹುತೇಕ ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶದ ಪ್ರಮಾಣ 15 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಾಗಿದೆ. ದೆಹಲಿ, ಜಾರ್ಖಂಡ್, ಜಮ್ಮು-ಕಾಶ್ಮೀರ ಸೇರಿದಂತೆ ಉತ್ತರದ ಹಲವು ರಾಜ್ಯಗಳು ಚಳಿಗೆ ತತ್ತರಿಸಿ ಹೋಗಿವೆ.
ಬೆಂಗಳೂರು (ಜ.06): ರಾಜ್ಯದಲ್ಲಿ ಚಳಿ ಪ್ರಮಾಣ ಹೆಚ್ಚಾಗುತ್ತಿದ್ದು, ಬಹುತೇಕ ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶದ ಪ್ರಮಾಣ 15 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಾಗಿದೆ. ಮುಂದಿನ ಮೂರು ದಿನ ಕನಿಷ್ಠ ಉಷ್ಣಾಂಶದಲ್ಲಿ ಸಾಮಾನ್ಯಕ್ಕಿಂತ ಇನ್ನೂ 2 ರಿಂದ 4 ಡಿ.ಸೆ. ಇಳಿಕೆಯಾಗಲಿದೆ. ಮಂಜು ಮುಸುಕಿನ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಭಾರತ ಗಡಗಡ: ದೆಹಲಿ, ಜಾರ್ಖಂಡ್, ಜಮ್ಮು ಕಾಶ್ಮೀರ ಸೇರಿದಂತೆ ಉತ್ತರದ ಹಲವು ರಾಜ್ಯಗಳು ಚಳಿಗೆ ತತ್ತರಿಸಿ ಹೋಗಿವೆ. ಹವಾಮಾನ ವೈಪರೀತ್ಯದಿಂದಾಗಿ ಹಲವು ರಾಜ್ಯಗಳಲ್ಲಿ ನೂರಾರು ವಿಮಾನ, ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ. ರಾಷ್ಟ್ರ ರಾಜಧಾನಿ ದೆಹಲಿ ಜನರಂತೂ ಚಳಿಯ ನಡುಕಕ್ಕೆ ಹೈರಾಣಾಗಿದ್ದಾರೆ. ಪ್ರತಿಕೂಲ ಹವಾಮಾನದಿಂದ ದಟ್ಟ ಮಂಜು ಆವರಿಸಿದ್ದು, ವಿಮಾನಗಳ ಸಂಚಾರದ ಮೇಲೆಯೂ ಪರಿಣಾಮ ಬೀರಿದೆ. ಭಾನುವಾರ ಸುಮಾರು 250 ವಿಮಾನಗಳ ಸಂಚಾರದಲ್ಲಿ ವಿಳಂಬವಾಗಿದೆ. 18 ವಿಮಾನಗಳು ರದ್ದಾಗಿವೆ. ರೈಲುಗಳ ಓಡಾಟದಲ್ಲಿಯೂ ವ್ಯತ್ಯಯವಾಗಿದ್ದು, ಸುಮಾರು 60 ರೈಲುಗಳ ಸಂಚಾರದ ಮೇಲೆ ಪರಿಣಾಮ ಬೀರಿದೆ.
ಕಾಶ್ಮೀರದಲ್ಲಿ -8.1 ಡಿಗ್ರಿ: ಜಮ್ಮು ಕಾಶ್ಮೀರದಲ್ಲಿಯೂ ಇದೇ ರೀತಿಯ ಪರಿಸ್ಥಿತಿಯಿದೆ. ಇಲ್ಲಿನ ಕೋಕರ್‌ನಾಗ್‌ನಲ್ಲಿ ತಾಪಮಾನ ಮೈನಸ್ 8.1 ಡಿಗ್ರಿಗೆ ಕುಸಿದಿತ್ತು. ಶ್ರೀನಗರ, ಗುಲ್ಮಾರ್ಗ್, ಪಹಲ್ಗಾಮ್ ಸೇರಿದಂತೆ ಹಲವೆಡೆ ಅತಿ ಕನಿಷ್ಟ ಮಟ್ಟಕ್ಕೆ ತಾಪಮಾನ ಇಳಿಕೆಯಾಗಿದೆ. ಕಣಿವೆ ರಾಜ್ಯದಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ವಿಮಾನ ಸಂಚಾರದ ಮೇಲೆಯೂ ಪರಿಣಾಮ ಬೀರಿದೆ. ದಟ್ಟ ಮಂಜಿನ ಕಾರಣಕ್ಕೆ ಶ್ರೀನಗರ ಏರ್ಪೋರ್ಟ್‌ನಿಂದ ಹೊರಡುವ 10 ವಿಮಾನಗಳ ಹಾರಾಟ ರದ್ದಾಗಿದೆ.
ಚಳಿಗಾಲದಲ್ಲಿ ಈ ರೀತಿ ಸ್ನಾನ ಮಾಡಿದ್ರೆ ಹಾರ್ಟ್ ಅಟ್ಯಾಕ್ ಆಗುತ್ತಂತೆ ಹುಷಾರ್ !
ಜಾರ್ಖಂಡಲ್ಲಿ ಶಾಲೆಗೆ ರಜೆ: ಜಾರ್ಖಂಡ್ ರಾಜ್ಯದ ಜನತೆ ಕೂಡ ಅತಿಯಾದ ಚಳಿಗೆ ಹೈರಾಣಾಗಿದ್ದಾರೆ. 8 ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಜ.7ರಿಂದ 13ರವರೆಗೆ ರಜೆ ಘೋಷಿಸಿ ಸರ್ಕಾರ ಆದೇಶಿಸಿದೆ. ಇಲ್ಲಿನ ಖುಂಟಿಯಲ್ಲಿ ಕನಿಷ್ಟ 5.3 ಡಿಗ್ರಿ ತಾಪಮಾನ ದಾಖಲಾಗಿತ್ತು. ಹರ್ಯಾಣ, ಪಂಜಾಬ್‌ನಲ್ಲಿಯೂ ಇದೇ ರೀತಿಯ ವಾತಾವರಣವಿದೆ. ಹರ್ಯಾಣದ ಕರ್ನಾಲ್, ಅಂಬಾಲಾ, ಹಿಸಾರ್, ಪಂಜಾಬ್‌ನ ಅಮೃತಸರ, ಗುರುದಾಸಪುರ ಸೇರಿದಂತೆ ಹಲವು ಸ್ಥಳಗಳಲ್ಲಿ ಅತ್ಯಂತ ಕನಿಷ್ಟ ತಾಪಮಾನ ದಾಖಲಾಗಿದೆ.