Karnataka High Court: ಎಲ್ಲ ಕೊಲೆ ಕೇಸಲ್ಲೂ ಬೇಲ್‌ ನಿರಾಕರಿಸಬೇಕಿಲ್ಲ!

By Govindaraj S  |  First Published May 23, 2022, 3:00 AM IST

ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಬಹುದಾದ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬ ಕಾರಣಕ್ಕೆ ಯಾವಾಗಲೂ ಜಾಮೀನು ನಿರಾಕರಿಸಬೇಕು ಎಂಬುದು ಕಾನೂನು ಅಲ್ಲ. 


ವೆಂಕಟೇಶ್‌ ಕಲಿಪಿ

ಬೆಂಗಳೂರು (ಮೇ.23): ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಬಹುದಾದ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬ ಕಾರಣಕ್ಕೆ ಯಾವಾಗಲೂ ಜಾಮೀನು ನಿರಾಕರಿಸಬೇಕು ಎಂಬುದು ಕಾನೂನು ಅಲ್ಲ. ಘೋರ ಹಾಗೂ ಗಂಭೀರ ಅಪರಾಧ ಪ್ರಕರಣಗಳ ಹಿನ್ನೆಲೆ ಹೊಂದದವರು ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಬಹುದಾದ ಅಪರಾಧದಲ್ಲಿ ಭಾಗಿಯಾಗಿದ್ದರೆ ಅಂತಹ ಪ್ರಕರಣಗಳನ್ನು ಭಿನ್ನವಾಗಿ ಪರಿಗಣಿಸಬೇಕು ಎಂದು ಹೈಕೋರ್ಟ್‌ ಆದೇಶಿಸಿದೆ. 

Tap to resize

Latest Videos

ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಬಹುದಾದ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬ ಏಕೈಕ ಕಾರಣಕ್ಕೆ ಬೆಂಗಳೂರಿನ ಹಾರೋಕ್ಯಾತನಹಳ್ಳಿ ನಿವಾಸಿ ನೇತ್ರಾಗೆ ಜಾಮೀನು ನಿರಾಕರಿಸಿದ ವಿಚಾರಣಾ ನ್ಯಾಯಾಲಯದ ಕ್ರಮ ಒಪ್ಪದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನ್ಯಾಯಪೀಠ ಈ ಆದೇಶ ಮಾಡಿದೆ.

ಗಂಡನ ತೊರೆದು ಬೇರೆಡೆ ವಾಸಿಸುವ ಪತ್ನಿ ಜೀವನಾಂಶಕ್ಕೆ ಅರ್ಹ: ಕೋರ್ಟ್‌

ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್‌ 437 ಪ್ರಕಾರ, ಆರೋಪಿ ಮರಣ ದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಬಹುದಾದ ಅಪರಾಧದಲ್ಲಿ ಪಾಲ್ಗೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದರೆ ಜಾಮೀನು ನೀಡಬಾರದು. ಆದರೆ, ಅಪರಾಧ ಚಟುವಟಿಕೆಗಳ ಹಿನ್ನೆಲೆ ಹೊಂದದವರು ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಬಹುದಾದ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದರೂ ಆ ಪ್ರಕರಣಗಳನ್ನು ಭಿನ್ನವಾಗಿ ಪರಿಗಣಿಸಬೇಕು ಎಂದು ನ್ಯಾಯಪೀಠ ಆದೇಶಿಸಿದೆ.

ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಬಹುದಾದ ಅಪರಾಧದಲ್ಲಿ ಪಾಲ್ಗೊಂಡಿರುವ ಆರೋಪಿಯು 16 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ಮಹಿಳೆಯಾಗಿದ್ದರೆ, ಅಸ್ವಸ್ಥ ಅಥವಾ ಅನಾರೋಗ್ಯಕ್ಕೆ ತುತ್ತಾಗಿದ್ದರೆ ಜಾಮೀನು ಮೇಲೆ ಬಿಡುಗಡೆ ಮಾಡಲು ಕಾನೂನಿನಲ್ಲಿಯೇ ಅವಕಾಶವಿದೆ ಎಂದು ಹೈಕೋರ್ಚ್‌ ಆದೇಶ ಮಾಡಿದೆ.

ಈ ಪ್ರಕರಣದಲ್ಲಿ ಪರಸ್ತ್ರೀಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಪತಿಯನ್ನು ಕೊಲೆ ಮಾಡಿದ ನಂತರ ಆರೋಪಿ ಪೊಲೀಸರ ಮುಂದೆ ಶರಣಾಗಿದ್ದಾರೆ. ಅಲ್ಲದೇ ನೇತ್ರಾ ಬೇರೆ ಯಾವುದೇ ಕ್ರಿಮಿನಲ್‌ ಚಟುವಟಿಕೆ ಹೊಂದಿಲ್ಲ, ಜಾಮೀನಿನ ಮೇಲೆ ಬಿಡುಗಡೆ ಮಾಡುವುದರಿಂದ ಸಮಾಜಕ್ಕೆ ಯಾವುದೇ ಬೆದರಿಕೆ ಇಲ್ಲ, ಈಗಾಗಲೇ ಪೊಲೀಸರು ತನಿಖೆಯ ಅಂತಿಮ ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಆದ ಕಾರಣ ಜಾಮೀನು ಪಡೆಯಲು ನೇತ್ರಾ ಅರ್ಹರಾಗಿದ್ದಾರೆ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ವಿವರ: ನೇಹಾ ವಿರುದ್ಧ ಅವರ ಮಾವ 2021ರ ನ.7ರಂದು ಮಾದನಾಯಕನಹಳ್ಳಿ ಪೊಲೀಸ್‌ಗೆ ಠಾಣೆಗೆ ದೂರು ನೀಡಿದ್ದರು. ತನ್ನ ಪುತ್ರ ಪಾಲಾರ್‌ ಸ್ವಾಮಿಯನ್ನು ನೇತ್ರಾ 2021ರ ನ.6ರಂದು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ದೂರಿನ ಅನ್ವಯ ನೇತ್ರಾ ಅವರನ್ನು ಬಂಧಿಸಿ, ತನಿಖೆ ನಡೆಸಿದ ನಂತರ ಪೊಲೀಸರು ದೋಷಾರೋಪ ಪಟ್ಟಿಸಲ್ಲಿಸಿದ್ದರು. ಬಳಿಕ ನೇತ್ರಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದರು. ಆದರೆ ಜೀವಾವಧಿ ಮತ್ತು ಮರಣ ದಂಡನೆ ಶಿಕ್ಷೆ ವಿಧಿಸಬಹುದಾದ ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವ ಕಾರಣಕ್ಕೆ ನೇತ್ರಾಗೆ ಜಾಮೀನು ನಿರಾಕರಿಸಿ 2022ರ ಫೆ.17ರಂದು ವಿಚಾರಣಾ ನ್ಯಾಯಾಲಯ ಆದೇಶಿಸಿತ್ತು.

ಅಪಘಾತದಿಂದ ಸಾವು ನೋವು, ಸಂತ್ರಸ್ತರಿಗೆ ನೆಮ್ಮದಿ ಕೊಟ್ಟ ಕೋರ್ಟ್‌ ಆದೇಶ!

ಅಪರಾಧ ಕೃತ್ಯಗಳ ಸಂಬಂಧ ಜಾಮೀನು ನೀಡುವ ಸಂದರ್ಭದಲ್ಲಿ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಬಹುದಾದ ಅಪರಾಧದಲ್ಲಿ ಆರೋಪಿ ಭಾಗಿಯಾಗಿದ್ದಾನೆಯೇ ಅಥವಾ ಇಲ್ಲವೇ ಎಂಬುದು ನ್ಯಾಯಾಲಯ ಪ್ರಮುಖವಾಗಿ ಪರಿಗಣಿಸುವ ಅಂಶ. ಕೊಲೆ, ಅಪರಾಧಿಕ ನರಹತ್ಯೆ ಹಾಗೂ ಅತ್ಯಾಚಾರ ಸೇರಿದಂತೆ ಮರಣದಂಡನೆ ಮತ್ತು ಜೀವಾವಧಿ ಅಥವಾ ಏಳು ವರ್ಷಕ್ಕಿಂತ ಹೆಚ್ಚು ಕಾಲ ಜೈಲು ಶಿಕ್ಷೆ ವಿಧಿಸಬಹುದಾದ ಇತರೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಆರೋಪಿಗೆ ಅಂತಿಮ ತನಿಖಾ ವರದಿ (ದೋಷಾರೋಪ ಪಟ್ಟಿ) ಸಲ್ಲಿಕೆಯಾಗುವವರೆಗೂ ನ್ಯಾಯಾಲಯ ಜಾಮೀನು ನೀಡುವ ಸಾಧ್ಯತೆ ವಿರಳ.
-ಟಿ.ಎಲ್‌. ಸುಹಾಸ್‌, ಹೈಕೋರ್ಟ್‌ ವಕೀಲರು

click me!