ಗ್ರಾಮ ವಾಸ್ತವ್ಯದಲ್ಲಿ ಶಾಸಕರ ಹಾಜರಿ ಕಡ್ಡಾಯ?: ಸಚಿವ ಅಶೋಕ್‌

By Govindaraj S  |  First Published Aug 22, 2022, 4:15 AM IST

ರಾಜ್ಯ ಕಂದಾಯ ಸಚಿವ ಆರ್‌.ಅಶೋಕ ಅವರು ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ತೆಲಂಗಾಣ ಗಡಿಯಲ್ಲಿರುವ ಆಡಕಿ ಗ್ರಾಮವಾಸ್ತವ್ಯಕ್ಕೆ ಯಶಸ್ವಿ ತೆರೆಬಿದ್ದಿದೆ. ಏಕಕಾಲಕ್ಕೆ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳಡಿ 28,900 ಫಲಾನುಭವಿಗಳಿಗೆ ಸವಲತ್ತು ಹಂಚುವ ಮೂಲಕ ಹೊಸ ದಾಖಲೆ ಬರೆದಿದೆ. 


ಶೇಷಮೂರ್ತಿ ಅವಧಾನಿ

ಆಡಕಿ (ಆ.22): ರಾಜ್ಯ ಕಂದಾಯ ಸಚಿವ ಆರ್‌.ಅಶೋಕ ಅವರು ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ತೆಲಂಗಾಣ ಗಡಿಯಲ್ಲಿರುವ ಆಡಕಿ ಗ್ರಾಮವಾಸ್ತವ್ಯಕ್ಕೆ ಯಶಸ್ವಿ ತೆರೆಬಿದ್ದಿದೆ. ಏಕಕಾಲಕ್ಕೆ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳಡಿ 28,900 ಫಲಾನುಭವಿಗಳಿಗೆ ಸವಲತ್ತು ಹಂಚುವ ಮೂಲಕ ಹೊಸ ದಾಖಲೆ ಬರೆದಿದೆ. ಇದೇ ವೇಳೆ ಗ್ರಾಮ ವಾಸ್ತವ್ಯಕ್ಕೆ ಹೊಸ ರೂಪ ನೀಡುವ ಇಂಗಿತ ವ್ಯಕ್ತಪಡಿಸಿರುವ ಸಚಿವ ಅಶೋಕ ಅವರು, ಜಿಲ್ಲಾಧಿಕಾರಿ, ತಹಸೀಲ್ದಾರ್‌ ನಡೆಸುವ ಮಾಸಿಕ ಗ್ರಾಮ ವಾಸ್ತವ್ಯದಲ್ಲಿ ಆಯಾ ಕ್ಷೇತ್ರಗಳ ಶಾಸಕರ ಪಾಲ್ಗೊಳ್ಳುವಿಕೆಯನ್ನೂ ಕಡ್ಡಾಯಗೊಳಿಸಿ ಶೀಘ್ರವೇ ಸೂಕ್ತ ನಿರ್ಣಯ ಕೈಗೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ.

Tap to resize

Latest Videos

ಕಂದಾಯ ಸಚಿವರು ಗ್ರಾಮ ವಾಸ್ತವ್ಯ ಮಾಡಿದ ಕಡೆ .1 ಕೋಟಿ ಗ್ರಾಮಾಭಿವೃದ್ಧಿಗೆ ನೀಡಲಾಗುತ್ತದೆ. ಜನರ ಮನೆ ಬಾಗಿಲಿಗೆ ಹೋಗುವ ಮತ್ತು ಅವರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಇದು ರಾಜ್ಯದಲ್ಲಿ ಹೊಸ ಅಧ್ಯಾಯವಾಗಿದೆ. ಈ ಕಾರ್ಯಕ್ರಮ ಆರಂಭವಾದ ನಂತರ ಅಧಿಕಾರಿಗಳು ಹಳ್ಳಿಗೆ ಬರ್ತಾರೆ, ಜನಪ್ರತಿನಿಧಿ ಎಲ್ಲಿ ಎಂಬ ಮಾತು ಕೇಳಿ ಬರುತ್ತಿದೆ. ಹೀಗಾಗಿ ಇನ್ನು ಮುಂದೆ ತಾಲೂಕಿನಲ್ಲಿ ಪ್ರತಿ ತಿಂಗಳು ಜಿಲ್ಲಾಧಿಕಾರಿ, ತಹಸೀಲ್ದಾರ ಜೊತೆಗೆ ಸ್ಥಳೀಯ ಶಾಸಕರು ಭಾಗವಹಿಸುವಂತೆ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ ಎಂದು ಅಶೋಕ ಹೇಳಿದ್ದಾರೆ.

ಸಿದ್ದು ಅವರನ್ನು ಯಾವ ಲಿಂಗಾಯಿತರೂ ನಂಬೋದಿಲ್ಲ: ಸಚಿವ ಅಶೋಕ್‌

ಬೇಗ ಬೆಂಗಳೂರಿಗೆ ತೆರಳಿದ ಸಚಿವ: ಅಶೋಕ ಗ್ರಾಮ ವಾಸ್ತವ್ಯದಲ್ಲಿದ್ದಾಗಲೇ ಬೆಂಗಳೂರಿನಲ್ಲಿ ಅವರ ಚಿಕ್ಕಮ್ಮ ನಿಧನರಾದ ಹೋದ ಸುದ್ದಿ ಬಂತು. ಅಷ್ಟೊತ್ತಿಗೆ ಊರಲ್ಲಿ 3 ಪ್ರಮುಖ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಾಗಿದ್ದ ಅಶೋಕ ಅವರು ನಿಧನ ವಾರ್ತೆಯಿಂದ ತುಸು ವಿಚಲಿತಗೊಂಡಂತೆ ಕಂಡರು. ತಕ್ಷಣ ಆಡಕಿಯಲ್ಲಿ ಇನ್ನೂ 3 ಗಂಟೆ ಕಾಲ ಇದ್ದು ಮ.2.30ಕ್ಕೆ ಅಲ್ಲಿಂದ ಕಲಬುರಗಿಗೆ ಬಂದು ವಿಮಾನ ಹತ್ತುವುದಿತ್ತು. ಅದನ್ನೆಲ್ಲ ರದ್ದು ಮಾಡಿ ಬೆಳಗಿನ 11.30 ಗಂಟೆಯ ವಿಮಾನದಲ್ಲಿ ಸಚಿವರು ಬೆಂಗಳೂರಿಗೆ ತೆರಳಿದರು.

ಗಾಯಕಿ ಮಂಗ್ಲಿ ಸಂಗೀತ ಸಂಜೆ: ಅಡಕಿ ಗ್ರಾಮವಾಸ್ತವ್ಯ ಅಂಗವಾಗಿ ಸಾಯಂಕಾಲ ಮೋರಾರ್ಜಿ ದೇಸಾಯಿ ವಸತಿ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಸಂಜೆಯಲ್ಲಿ ತೆಲುಗಿನ ಖ್ಯಾತ ಗಾಯಕಿ ಮಂಗ್ಲಿಯ ಗೀತಗಾಯನಕ್ಕೆ ಯುವಪಡೆ ಕುಣಿದು ಕುಪ್ಪಳಿಸಿದರು. ಕನ್ನಡದ ವಿಕ್ರಾಂತ ರೋಣ ಚಿತ್ರದ ‘ರಾರಾ ರಕ್ಕಮ್ಮ’, ರಾಬರ್ಚ್‌ ಚಿತ್ರದ ‘ಕಣ್ಣು ಹೊಡೆಯಾಕಾ’, ತೆಲುಗಿನ ಅಲ್ಬಂ ಸಾಂಗ್‌ ನರಸಪಲ್ಲೆ-ನರಸಪಲ್ಲೆ ಗೀತೆ ಹಾಡಿ ರಂಜಿಸಿದರು. ಮಂಗ್ಲಿ ಅವರ 45 ನಿಮಿಷದ ಸಂಗೀತ ಸಂಜೆ ಯಶಸ್ಸಿಗೆ ಸಹ ಗಾಯಕರಾದ ರಾಜು, ಇಂದ್ರಾವತಿ ಸಾಥ್‌ ನೀಡಿದರು. ಪುಟ್ಟಗೌರಿ ಖ್ಯಾತಿಯ ರಂಜನಿ ರಾಘವ ಹಾಡಿ ಸಭಿಕರ ಮನಗೆದ್ದರು.

ಕಲಬುರಗಿ: ಸಚಿವ ಅಶೋಕ್‌ ಆಡಕಿ ಗ್ರಾಮವಾಸ್ತವ್ಯ ದಾಖಲೆ..!

ದಲಿತ ರೈತನ ಮನೆಯಲ್ಲಿ ಜೋಳದ ರೊಟ್ಟಿ ಊಟ: ತಮ್ಮ ಗ್ರಾಮ ವಾಸ್ತವ್ಯದ ನಿಮಿತ್ತವಾಗಿ ಆಡಕಿ ಮೊರಾರ್ಜಿ ವಸತಿ ಶಾಲೆಯಲ್ಲಿರುವ ಪ್ರಾಚಾರ್ಯರ ಕೋಣೆಯಲ್ಲಿಯೇ ಮಲಗಿದ್ದ ಕಂದಾಯ ಸಚಿವ ಅಶೋಕ ಭಾನುವಾರ ಬೆಳಗ್ಗೆ ಶಾಸಕ ರಾಜಕುಮಾರ್‌ ತೇಲ್ಕೂರ್‌, ಬಸವರಾಜ ಮತ್ತಿಮಡು, ಜಿಲ್ಲಾಧಿಕಾರಿ ಯಶವಂತ ಅವರ ಜೊತೆ ಸೇರಿಕೊಂಡು ಶಾಲಾ ಆವರಣದಲ್ಲಿ 100 ಗಿಡಗಳನ್ನು ನೆಟ್ಟರು. ಬಳಿಕ ಗ್ರಾಮದ ದಲಿತ ಸಮುದಾಯದ ರೈತ ದಶರಥ ರಾಠೋಡ ಹಾಗೂ ವಿಮಲಾಬಾಯಿ ದಂಪತಿ ಮನೆಯಲ್ಲಿ ಜೋಳದ ರೊಟ್ಟಿಊಟ ಸವಿದರು. ಜೋಳದ ರೊಟ್ಟಿ, ಪುಂಡಿಪಲ್ಯಾ, ಘಟಬ್ಯಾಳಿ, ಹೆಸರುಕಾಳು, ಮೊಸರು, ಶೇಂಗಾ ಹಿಂಡಿ ಜೊತೆಗೆ ಸೌತೆಕಾಯಿ, ಗಜರಿ ಹೋಳುಗಳ ಹಸಿರು ತರಕಾರಿಯ ಸಲಾಡ್‌ಗಳನ್ನು ದಂಪತಿ ಉಣ ಬಡಿಸಿದರು. ಬಳಿಕ ಸಚಿವರು ಅಲ್ಲಿಂದ ಊರಲ್ಲೆಲ್ಲಾ ಸುತ್ತಾಡಿ ವೀಕ್ಷಿಸಿದರು. ಸಂಸದ ಡಾ.ಉಮೇಶ ಜಾಧವ, ಸ್ಥಳೀಯ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಬಸವರಾಜ ಮತ್ತಿಮೂಡ ಜೊತೆಗಿದ್ದರು.

click me!