Brahmana Mahasabha : ಅಶೋಕ್‌ ಹಾರನಹಳ್ಳಿ ಬ್ರಾಹ್ಮಣ ಸಭೆ ಅಧ್ಯಕ್ಷ

By Kannadaprabha NewsFirst Published Dec 20, 2021, 7:42 AM IST
Highlights
  • ಅಶೋಕ್‌ ಹಾರನಹಳ್ಳಿ ಬ್ರಾಹ್ಮಣ ಸಭೆ ಅಧ್ಯಕ್ಷ
  •  ರಘುನಾಥ್‌ ವಿರುದ್ಧ 455 ಮತಗಳ ಅಂತರದ ಜಯ

ಬೆಂಗಳೂರು (ಡಿ.20):  ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ ಅಧ್ಯಕ್ಷ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಹೈಕೋರ್ಟ್‌ನ ಹಿರಿಯ ವಕೀಲ ಅಶೋಕ್‌ ಹಾರನಹಳ್ಳಿ (4424 ಮತ) ಜಯಶೀಲರಾಗಿದ್ದಾರೆ. ಪ್ರತಿಸ್ಪರ್ಧಿಯಾಗಿದ್ದ ಎಸ್‌.ರಘುನಾಥ್‌(ಪಡೆದ ಮತ 3960) 455 ಮತಗಳ ಅಂತರದಿಂದ ಸೋಲು ಅನುಭವಿಸಿದ್ದಾರೆ. ಮತ್ತೊಬ್ಬ ಅಭ್ಯರ್ಥಿ ಲಕ್ಷ್ಮೇಕಾಂತ್‌ 2239 ಮತ ಪಡೆದು 3ನೇ ಸ್ಥಾನಕ್ಕೆ ಕುಸಿದಿದ್ದಾರೆ.

"

ಈ ಬಾರಿ ಚುನಾವಣೆಯು 2 ಹಂತದಲ್ಲಿ ನಡೆದಿತ್ತು. ಮೊದಲ ಹಂತದಲ್ಲಿ ಮೈಸೂರು, ಶಿವಮೊಗ್ಗ, ಹಾಸನ, ಹುಬ್ಬಳ್ಳಿ ಹಾಗೂ ರಾಯಚೂರಿನಲ್ಲಿ ಮತದಾನ ನಡೆದಿತ್ತು. 2ನೇ ಹಂತದಲ್ಲಿ ಬೆಂಗಳೂರು ನಗರ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ, ಕೋಲಾರ ಹಾಗೂ ತುಮಕೂರಿನ ಜಿಲ್ಲೆಯ ಮತದಾರರ ಭಾನುವಾರ ತಮ್ಮ ಹಕ್ಕು ಚಲಾಯಿಸಿದ್ದರು.

ಮತದಾನ ಪ್ರಮಾಣ ಕುಸಿತ:

ಮಹಾಸಭಾಕ್ಕೆ 44 ಸಾವಿರ ಸದಸ್ಯರಿದ್ದಾರೆ. ಈ ಸದಸ್ಯರಲ್ಲಿ ಶೇ.60 ಅಂದರೆ 26 ಸಾವಿರ ಸದಸ್ಯರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಬೆಂಗಳೂರಿನ ಮತದಾರರಲ್ಲೂ ಬಸವನಗುಡಿ, ಪದ್ಮನಾಭನಗರ ಹಾಗೂ ಜಯನಗರ ವಿಧಾನಸಭಾ ಕ್ಷೇತ್ರಗಳಲ್ಲೇ ಬ್ರಾಹ್ಮಣ ಮಹಾಸಭಾಕ್ಕೆ ಹೆಚ್ಚು ಸದಸ್ಯರಿದ್ದಾರೆ. ಆರಂಭದಲ್ಲಿ ಮಹಾಸಭಾಕ್ಕೆ ಸದಸ್ಯರಾದವರ ಪೈಕಿ ಕೆಲವರು ನಿಧನರಾಗಿದ್ದರೂ ಆ ಹೆಸರುಗಳನ್ನು ಪಟ್ಟಿಯಿಂದ ತೆಗೆಯಲಾಗಿಲ್ಲ. ಅನೇಕರು ಮನೆಯ ವಿಳಾಸಗಳು ಬದಲಾವಣೆಯಾಗಿದ್ದು, ಚುನಾವಣೆ ವಿಚಾರ ತಿಳಿದಿಲ್ಲ. ಅಲ್ಲದೆ, ಐದು ಜಿಲ್ಲಾ ಕೇಂದ್ರಗಳಲ್ಲಿ 25 ಜಿಲ್ಲೆಗಳ ಮತದಾರರು ಹಕ್ಕು ಚಲಾಯಿಸಬೇಕು. ಬೀದರ್‌ ಮತದಾರ ರಾಯಚೂರಿಗೆ, ಉಡುಪಿಯಿಂದ ಶಿವಮೊಗ್ಗಕ್ಕೆ, ಮಂಗಳೂರಿನಿಂದ ಹಾಸನಕ್ಕೆ ಬಂದು ಮತ ಚಲಾಯಿಸಬೇಕು. ಇದೇ ಕಾರಣಕ್ಕೆ ಮತದಾನ ಪ್ರಮಾಣ ಕುಸಿತವಾಗಿದೆ ಎಂದು ಸಭಾದ ಮೂಲಗಳು ತಿಳಿಸಿವೆ.

ರಸ್ತೆ ಬಂದ್‌:  ಶಂಕರಪುರದಲ್ಲಿರುವ ಶ್ರೀ ಚಂದ್ರಶೇಖರ ಭಾರತಿ ಕಲ್ಯಾಣ ಮಂಟಪದಲ್ಲಿ 2ನೇ ಹಂತದ ಮತದಾನ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಪಂಪ ಮಹಾಕವಿ ರಸ್ತೆಯನ್ನು ಬಂದ್‌ ಮಾಡಲಾಗಿತ್ತು. ಇದರಿಂದ ಸವಾರರಿಗೆ ತುಸು ತೊಂದರೆಯಾಯಿತು.

1 ಗಂಟೆ ವಿಸ್ತರಣೆ:  ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಮೂರು ಗಂಟೆ ಕಳೆದರೂ ಮತದಾರರು ಮತ ಚಲಾಯಿಸಲು ಆಗಮಿಸುತ್ತಿದ್ದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ 4 ಗಂಟೆವರೆಗೆ ಮತದಾನ ಮಾಡುವುದಕ್ಕೆ ಅವಕಾಶ ಕಲ್ಪಿಸಿದ್ದರು.

ಮತ ಎಣಿಕೆ ಮುಂದೂಡಿಕೆಗೆ ಒತ್ತಾಯ :  ಸಂಘದಿಂದ ಚುನಾವಣಾಧಿಕಾರಿಗೆ 464 ಮತದಾರರ ಪಟ್ಟಿಯನ್ನು ನೀಡದ ಹಿನ್ನೆಲೆಯಲ್ಲಿ ಹಾಗೂ ಅವರಿಗೆ ಮತದಾನ ಮಾಡುವುದಕ್ಕೆ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿ ಕೆಲವರು ಮತ ಎಣಿಕೆ ಪ್ರಕ್ರಿಯೆಯನ್ನು ಮುಂದೂಡಬೇಕೆಂದು ಒತ್ತಾಯಿಸಿದ್ದರು. ಈ ಬಗ್ಗೆ ಚುನಾವಣಾಧಿಕಾರಿ ಮೂವರು ಅಭ್ಯರ್ಥಿಗಳ ಜತೆ ಚರ್ಚಿಸಿ ಅನುಮತಿ ಪಡೆದ ಬಳಿಕ ಮತ ಎಣಿಕೆಗೆ ಅವಕಾಶ ಕೊಟ್ಟರು.

ಹೆಲ್ತ್ ಕಾರ್ಡ್ : 

ಅಖಿಲ ಕರ್ನಾಟಕ ಮಹಾಸಭಾದ ಸದಸ್ಯರುಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಇಂದು(ಸೋಮವಾರ) ಮಹಾಸಭಾದ ಅಧ್ಯಕ್ಷ ಅಶೋಕ್‌ ಹಾರ್ನಳ್ಳಿ ಯುನೈಟೆಡ್‌ ಆಸ್ಪತ್ರೆಯ ವತಿಯಿಂದ ಸದಸ್ಯರುಗಳಿಗೆ ವಿಶೇಷವಾಗಿ ಹೊರತಂದಿರುವ ಯುನೈಟೆಡ್‌ ಆಸ್ಪತ್ರೆ ಹೆಲ್ತ್‌ಕಾರ್ಡನ್ನು ಬಿಡುಗಡೆಗೊಳಿಸಿದ್ದಾರೆ. 

ಇಂದು(ಸೋಮವಾರ) ನಗರದ ಎನ್‌ಆರ್‌ ಕಾಲೋನಿಯ ರಾಮ ಮಂದಿರ ಕಲ್ಯಾಣ ಮಂಟದಲ್ಲಿ ಯುನೈಟೆಡ್‌ ಆಸ್ಪತ್ರೆಯ ವತಿಯಿಂದ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಈ ಹೆಲ್ತ್‌ಕಾರ್ಡ್‌ ಸೌಲಭ್ಯವನ್ನು ಬ್ರಾಹ್ಮಣ ಮಹಾಸಭಾದ ಸದಸ್ಯರುಗಳಿಗೆ ಬಿಡುಗಡೆ ಮಾಡಲಾಯಿತು. 

ಈ ಸಂದರ್ಭದಲ್ಲಿ ಮಾತನಾಡಿದ ಯುನೈಟೆಡ್‌ ಆಸ್ಪತ್ರೆಯ ಸಂಸ್ಥಾಪಕ ಅಧ್ಯಕ್ಷ ಡಾ. ವಿಕ್ರಮ್‌ ಸಿದ್ದಾರೆಡ್ಡಿ, ಈ ಹೆಲ್ತ್‌ಕಾರ್ಡ್‌ ಮೂಲಕ ಸದಸ್ಯರು ಹಾಗೂ ಅವರ ಕುಟುಂಬದವರು ತಮ್ಮ ಆರೋಗ್ಯದ ಹಲವಾರು ಅವಶ್ಯಕತೆಯನ್ನು ಅತಿಕಡಿಮೆ ವೆಚ್ಚದಲ್ಲಿ ಪೂರೈಸಿಕೊಳ್ಳಬಹುದಾಗಿದೆ. ಇಸಿಜಿ, ಎಕ್ಸ್‌ರೇ, ಸಿಟಿ ಸ್ಕ್ಯಾನ್‌, ಲ್ಯಾಬೋರೇಟರಿ ಪರೀಕ್ಷೆಗಳು ಮತ್ತು ಸೂಪರ್‌ ಸ್ಪೆಷಾಲಿಟಿ ಕನ್ಸ್‌ಲ್ಟೇಶನ್‌ನ್ನು ಇದರಲ್ಲಿ ಪಡೆದುಕೊಳ್ಳಬಹುದಾಗಿದೆ ಎಂದುನ ತಿಳಿಸಿದ್ದಾರೆ. 

click me!