ನಾನು ರೈತ ಕುಟುಂಬದಿಂದ ಬಂದವನು, ರೈತನ ಕಷ್ಟಕರ್ಪಣ್ಯ ನನಗೂ ಗೊತ್ತಿದೆ. ಬೆಳೆಗೆ ಹಾಕಿದ ಅಸಲು ಕೂಡ ಅನೇಕ ಬಾರಿ ಸಿಗುತ್ತಿಲ್ಲ. ಕಾಡಂಚಿನ ಗ್ರಾಮಗಳ ರೈತರಿಗೆ ಮಾರುಕಟ್ಟೆಬೆಲೆಗೆ ಅನುಗುಣವಾಗಿ ಬೆಳೆಹಾನಿ ಪರಿಹಾರ ನೀಡಿದರೆ ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಪೂರಕವಾಗಿರಲಿದೆ ಎಂದು ರಿಷಬ್ ಶೆಟ್ಟಿ ಅಸಹಾಯಕತೆ ವ್ಯಕ್ತಪಡಿಸಿದರು.
ದೇವರಾಜು ಕಪ್ಪಸೋಗೆ
ಚಾಮರಾಜನಗರ (ಫೆ.01): ನಾನು ರೈತ ಕುಟುಂಬದಿಂದ ಬಂದವನು, ರೈತನ ಕಷ್ಟಕರ್ಪಣ್ಯ ನನಗೂ ಗೊತ್ತಿದೆ. ಬೆಳೆಗೆ ಹಾಕಿದ ಅಸಲು ಕೂಡ ಅನೇಕ ಬಾರಿ ಸಿಗುತ್ತಿಲ್ಲ. ಕಾಡಂಚಿನ ಗ್ರಾಮಗಳ ರೈತರಿಗೆ ಮಾರುಕಟ್ಟೆಬೆಲೆಗೆ ಅನುಗುಣವಾಗಿ ಬೆಳೆಹಾನಿ ಪರಿಹಾರ ನೀಡಿದರೆ ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಪೂರಕವಾಗಿರಲಿದೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ವನ್ಯಜೀವಿ ಅಭಿಯಾನದ ರಾಯಭಾರಿ, ನಟ ರಿಷಬ್ ಶೆಟ್ಟಿ ಅಸಹಾಯಕತೆ ವ್ಯಕ್ತಪಡಿಸಿದರು. ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ವನ್ಯಜೀವಿ ಅಭಿಯಾನದ ಅಂಗವಾಗಿ ಬಂಡೀಪುರ ಕಾಡಂಚಿನ ಕಣ್ಣೇಗಾಲ ಗ್ರಾಪಂನ ಗೋಪಾಲಪುರದಲ್ಲಿ ಪರಿಸರ ಸ್ನೇಹಿ ಗ್ರಾಪಂ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
undefined
ನಾವು ಕೃಷಿ ಮಾಡುತ್ತೇವೆ, ಭತ್ತ, ಬಾಳೆ, ಗೇರು ಬೀಜ, ತೆಂಗು ಮತ್ತು ಅಡಕೆ ಬೆಳೆಯುತ್ತೇವೆ. ಸಾವಯವ ಪದ್ಧತಿಯಲ್ಲಿ ಭತ್ತ ಬೆಳೆಯುತ್ತಿದ್ದು, ಲಾಭಕ್ಕಿಂತ ಖರ್ಚೇ ಹೆಚ್ಚಾಗುತ್ತಿದೆ. ಆದರೂ ಕೃಷಿ ಬಿಡಲಾಗಲ್ಲ. ವರ್ಷ ಪೂರ್ತಿ ಬೀಜ, ಗೊಬ್ಬರಕ್ಕೆ ಸಾಕಷ್ಟುಖರ್ಚಾಗಿರುತ್ತದೆ. ಈ ನಡುವೆ ಕಾಡು ಪ್ರಾಣಿಗಳ ಹಾವಳಿಗೆ ಬೆಳೆ ಕೈಸೇರುತ್ತಿಲ್ಲ ಎಂದು ಬೇಸರ ಹೊರಹಾಕಿದರು.
ಅರಣ್ಯ, ವನ್ಯಜೀವಿ ಉಳಿದರೆ ಮಾತ್ರ ಮನುಕುಲ ಉಳಿವು: ರಿಷಬ್ ಶೆಟ್ಟಿ
ನಟ ಅಭಯ: ಕಾಡಂಚಿನ ಗ್ರಾಮಗಳಿಗೆ ವನ್ಯಜೀವಿಗಳು ದಾಳಿ ಮಾಡಿ ಬೆಳೆ ಹಾನಿಮಾಡುತ್ತಿರುವುದರಿಂದ ಮಾನವ-ವನ್ಯಪ್ರಾಣಿ ಸಂಘರ್ಷ ಹೆಚ್ಚಾಗುತ್ತಿದೆ. ರೈಲ್ವೆ ತಡೆಗೋಡೆ ಮತ್ತು ಸೋಲಾರ್ ತಂತಿ ಬೇಲಿ ನಿರ್ಮಾಣ ಹೆಚ್ಚಾಗಿ ಆಗಬೇಕು. ಜೊತೆಗೆ ಇದರ ನಿರ್ವಹಣೆ ಸಮರ್ಪಕವಾಗಿ ನಡೆದರೆ ಮಾತ್ರ ವನ್ಯಜೀವಿ ಹಾವಳಿ ತಡೆಯಲು ಸಾಧ್ಯ. ಕಾಡಂಚಿನ ಗ್ರಾಮದ ರೈತರು ವನ್ಯಜೀವಿ ಹಾವಳಿ ಇದ್ದರೂ ಅರಣ್ಯ ಸಿಬ್ಬಂದಿ ಮೇಲೆ ಕಾಳಜಿ ಮತ್ತು ಪ್ರೀತಿ ಹೊಂದಿರುವುದು ಸಂವಾದದಲ್ಲಿ ವ್ಯಕ್ತವಾಗಿದೆ. ಕಾಡಂಚಿನ ಗ್ರಾಮಗಳ ರೈತರಿಗೆ ಮಾರುಕಟ್ಟೆಬೆಲೆಗೆ ಅನುಗುಣವಾಗಿ ಬೆಳೆಹಾನಿ ಪರಿಹಾರ ನೀಡಿದರೆ ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಪೂರಕವಾಗಿರಲಿದೆ ಎಂದು ರಿಷಬ್ ಅಭಿಪ್ರಾಯಪಟ್ಟರು.
ಅರಣ್ಯ ಸಿಬ್ಬಂದಿಗೆ ಟಾರ್ಚ್, ಅತ್ಯಾಧುನಿಕ ರೈಫಲ್ ಮತ್ತು ಸರ್ಕಾರದಿಂದ ಅವರಿಗೆ ಎಲ್ಲಾ ಸೌಲಭ್ಯ ಕೊಡಿ ಎಂದು ಕಾಡಂಚಿನ ಗ್ರಾಮಸ್ಥರು ಹೇಳಿದ್ದಾರೆ. ನಿಮ್ಮ ಸಮಸ್ಯೆ ಕೇಳಿ, ಪರಿಹಾರ ಕಂಡುಕೊಳ್ಳಬೇಕು. ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ನಟ ಭರವಸೆ ಕೊಟ್ಟರು. ನಾನು ಡೈಲಾಗ್ ಹೊಡೆದು ಹೋಗಲು ಬಂದಿಲ್ಲ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ನೀಡಲು ಬಂದಿದ್ದೇನೆ. ಸಮಯ ಸಿಕ್ಕಾಗಲೆಲ್ಲ ನಿಮ್ಮ ಪರ ಕೆಲಸ ಮಾಡುತ್ತೇನೆ ಎಂದು ಅಭಯ ನೀಡಿದರು.
ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚಿನ ಅರಣ್ಯ ಪ್ರದೇಶವಿದೆ. ಇಲ್ಲಿ ಬಹುತೇಕರು ಕೃಷಿ ಮಾಡುತ್ತಾರೆ, ಇಲ್ಲಿನ ಸಮಸ್ಯೆಗಳು ಒಂದು ದಿನಕ್ಕೆ ಮುಗಿಯುವುದಿಲ್ಲ. ನಿರಂತರ ಪ್ರಯತ್ನದಿಂದ ಮಾತ್ರ ಶಾಶ್ವತ ಪರಿಹಾರ ಸಿಗಲಿದೆ. ಬಂಡೀಪುರದಲ್ಲಿ ಎಷ್ಟೇ ಸಂಘರ್ಷ ಇದ್ದರೂ ಕಾಡು ಕಾಪಾಡಬೇಕು ಎಂಬ ಭಾವನೆ ಇಲ್ಲಿನ ಜನರಲ್ಲಿರುವುದರಿಂದ ಬಂಡೀಪುರ ಆನೆ, ಹುಲಿ ಸೇರಿ ಹಲವು ವನ್ಯಜೀವಿಗಳ ವಾಸಸ್ಥಳದಲ್ಲಿ ನಂ.1ಸ್ಥಾನ ಪಡೆದುಕೊಂಡಿದೆ ಎಂದು ಖುಷಿಪಟ್ಟರು.
ಸಾಮಾಜಿಕ ಕಳಕಳಿಗೆ ಸಲಾಂ: ಮಾಧ್ಯಮಗಳ ಪೈಕಿ ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ವನ್ಯಜೀವಿ ಸಂರಕ್ಷಣೆ ನಿಟ್ಟಿನಲ್ಲಿ ಸಾಮಾಜಿಕ ಕಾಳಜಿವಹಿಸಿ ಒಳ್ಳೆಯ ಕೆಲಸ ಮಾಡುತ್ತಿದೆ. ಕಾಡಂಚಿನ ಗ್ರಾಮಸ್ಥರನ್ನು ಪ್ರೊತ್ಸಾಹಿಸುವ ಉದ್ದೇಶದಿಂದ ಕನ್ನೇಗಾಲ ಅತ್ಯುತ್ತಮ ಅರಣ್ಯ ಸ್ನೇಹಿ ಗ್ರಾಪಂ ಪ್ರಶಸ್ತಿ ಪ್ರದಾನ ಮಾಡಿರುವುದು ನನಗೆ ತುಂಬಾ ಖುಷಿಕೊಟ್ಟಿದೆ. ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಈ ಸಾಮಾಜಿಕ ಕಳಕಳಿ ಅನುಕರಣೀಯ ಹಾಗೂ ಮಾದರಿ ಎಂದು ರಿಷಬ್ ಶೆಟ್ಟಿಶ್ಲಾಘನೆ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳ ಜೊತೆ ಬೆರೆತ ನಟ: ಕಾರ್ಯಕ್ರಮದುದ್ದಕ್ಕೂ ಎದುರಾಗುತ್ತಿದ್ದ ಶಾಲಾ ಮಕ್ಕಳ ಜೊತೆ ನಟ ರಿಷಬ್ ಶೆಟ್ಟಿಆತ್ಮೀಯವಾಗಿ ಬೆರೆತು ಕಾಡು, ಪ್ರಾಣಿ ಹಾಗೂ ಪಠ್ಯದ ಬಗ್ಗೆ ಪ್ರಶ್ನೆ ಕೇಳಿ ತಿಳಿದುಕೊಳ್ಳುತ್ತಿದ್ದರು. ಶಾಲಾ ಬಾಲಕಿಯೊಬ್ಬಳು ಕಾಂತಾರ ಚಿತ್ರದ ದೈವದ ಚಿತ್ರವನ್ನು ಬರೆದು ರಿಷಬ್ ಬಳಿ ಆಟೋಗ್ರಾಫ್ ಪಡೆದುಕೊಂಡು ಸಂತಸಪಟ್ಟಳು.
ಕನ್ನೇಗಾಲ ಗ್ರಾಪಂಗೆ ಅತ್ಯುತ್ತಮ ಪರಿಸರ ಸ್ನೇಹಿ ಪ್ರಶಸ್ತಿ: ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಸಹಭಾಗಿತ್ವದಲ್ಲಿ ವನ್ಯಜೀವಿ ಸಂರಕ್ಷಣಾ ಅಭಿಯಾನದಲ್ಲಿ ನೀಡುವ ಅತ್ಯುತ್ತಮ ಪರಿಸರ ಸ್ನೇಹಿ ಪ್ರಶಸ್ತಿಗೆ ತಾಲೂಕಿನ ಕನ್ನೇಗಾಲ ಗ್ರಾಪಂ ಭಾಜನವಾಗಿದೆ. ಕನ್ನೇಗಾಲ ಗ್ರಾಪಂಗೆ ಸೇರಿದ ಗೋಪಾಲಪುರ ಗ್ರಾಮದಲ್ಲಿ ನಡೆದ ವನ್ಯಜೀವಿ ಸಂರಕ್ಷಣಾ ಅಭಿಯಾನ ಸಮಾರಂಭದಲ್ಲಿ ಶಾಸಕ ಸಿ.ಎಸ್.ನಿರಂಜನ್‌ಕುಮಾರ್, ಅಭಿಯಾನದ ರಾಯಭಾರಿ ಹಾಗೂ ನಟ ರಿಷಬ್ ಶೆಟ್ಟಿಅವರು ಗ್ರಾಪಂ ಅಧ್ಯಕ್ಷೆ ಮಂಜುಳಾಗೆ ಪ್ರಶಸ್ತಿ ವಿತರಿಸಿದರು.
ಕಾಡು ಉಳಿದರೆ ನಾಡು ಉಸಿರಾಡುತ್ತದೆ: ನಟ ರಿಷಬ್ ಶೆಟ್ಟಿ
ಪ್ರಶಸ್ತಿ ಸ್ವೀಕರಿಸಿದ ಕನ್ನೇಗಾಲ ಗ್ರಾಪಂ ಅಧ್ಯಕ್ಷೆ ಮಂಜುಳಾ ಮಾತನಾಡಿ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ಗೆ ಗ್ರಾಪಂ ವತಿಯಿಂದ ಧನ್ಯವಾದ ತಿಳಿಸಿದರು. ಗ್ರಾಪಂ ಉಪಾಧ್ಯಕ್ಷೆ ಲಕ್ಷ್ಮಮ್ಮ, ಗ್ರಾಪಂ ಪಿಡಿಒ ಪಾಲಾಕ್ಷ, ಸದಸ್ಯರಾದ ನಾಗರಾಜು, ಯೋಗೇಶ್, ನಾಗುಸ್ವಾಮಿ, ಜಿ.ಕೆ.ಲೋಕೇಶ್, ಮಂಜುಳಾ, ಶಿವಮಲ್ಲು, ಮಮತಾ, ಗೋಪಮ್ಮ ಸೇರಿದಂತೆ ಗ್ರಾಪಂ ಸದಸ್ಯರು ಇದ್ದರು.
ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭದ ಸಾಮಾಜಿಕ ಕಳಕಳಿ ಶ್ಲಾಘನೀಯ. ಕಾರ್ಯಕ್ರಮದ ರಾಯಭಾರಿಯಾಗಿ ಜನರ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರುತ್ತೇನೆ.
-ರಿಷಬ್ ಶೆಟ್ಟಿ, ನಟ ಹಾಗೂ ವನ್ಯಜೀವಿ ಅಭಿಯಾನದ ರಾಯಭಾರಿ