Omicron Threat: ರಾಜ್ಯದಲ್ಲಿ ಮತ್ತೆ ಕೋವಿಡ್‌ ಸ್ಫೋಟ: 3ನೇ ಅಲೆಯ ಆರಂಭದ ಲಕ್ಷಣ ಎಂದ ತಜ್ಞರು

By Kannadaprabha NewsFirst Published Dec 31, 2021, 6:51 AM IST
Highlights

*  ಒಮಿಕ್ರೋನ್‌ನಿಂದ 3ನೇ ಅಲೆ ಸಂಭವ: ಡಾ.ಮಂಜುನಾಥ್‌
*  3 ತಿಂಗಳ ಬಳಿಕ ರಾಜ್ಯದಲ್ಲಿ 707 ಕೇಸ್‌* 
*  ನಿರಂತರ ಏರಿಕೆ 3ನೇ ಅಲೆಯ ಸಂಕೇತ: ತಜ್ಞರ ಅಭಿಮತ
 

ಬೆಂಗಳೂರು(ಡಿ.31): ರಾಜ್ಯದಲ್ಲಿ(Karnataka) ಗುರುವಾರ ಮೂರು ತಿಂಗಳ ನಂತರ ಗರಿಷ್ಠ 707 ಕೋವಿಡ್‌ ಪ್ರಕರಣ ಪತ್ತೆಯಾಗಿದ್ದು, ಮೂವರು ಮೃತರಾಗಿದ್ದಾರೆ.252 ಮಂದಿ ಚೇತರಿಸಿಕೊಂಡಿದ್ದಾರೆ.
ಸೆ.30ಕ್ಕೆ 933 ಪ್ರಕರಣ ದಾಖಲಾಗಿತ್ತು. ಇದಾದ ನಂತರ ಇಳಿಕೆಯಾಗಿದ್ದ ಪ್ರಕರಣಗಳ ಸಂಖ್ಯೆ ಗುರುವಾರ ಏರಿಕೆಯಾಗಿದೆ. ಅದೇ ರೀತಿ ಶೇ.0.61 ಪಾಸಿಟಿವಿಟಿ ದರ ದಾಖಲಾಗಿದೆ. ಇದು ಸಹ 90 ದಿನಗಳ ಗರಿಷ್ಠ ಪಾಸಿಟಿವಿಟಿ ದರವಾಗಿದೆ. ಡಿ.27ರಂದು 289, ಡಿ.28ರಂದು 356, ಡಿ.29ರಂದು 566 ಪ್ರಕರಣ ದಾಖಲಾಗಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಮೂರನೇ ಅಲೆಯ ಆರಂಭವನ್ನು ಪುಷ್ಟೀಕರಿಸುತ್ತಿದೆ ಎಂದು ತಜ್ಞರು ಹೇಳುತ್ತಿದ್ದಾರೆ.

ಹೊಸ ಕೋವಿಡ್‌ ಪ್ರಕರಣಗಳಲ್ಲಿ 565 ಪ್ರಕರಣಗಳು ರಾಜ್ಯ ರಾಜಧಾನಿಯಲ್ಲಿ(Bengaluru) ಪತ್ತೆಯಾಗಿವೆ. ಉಳಿದಂತೆ ಉಡುಪಿ 19, ಹಾಸನ 17, ಮೈಸೂರು 16, ಕೊಡಗು 12 ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 11 ಪ್ರಕರಣ ವರದಿಯಾಗಿದೆ. ಬಾಗಲಕೋಟೆ, ಬೀದರ್‌, ಚಿಕ್ಕಬಳ್ಳಾಪುರ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ರಾಮನಗರ ಜಿಲ್ಲೆಯಲ್ಲಿ ಹೊಸ ಪ್ರಕರಣ ದಾಖಲಾಗಿಲ್ಲ. ಉಳಿದ ಜಿಲ್ಲೆಗಳಲ್ಲಿ ಬೆರಳೆಣಿಕೆಯ ಪ್ರಕರಣಗಳಿವೆ. ಬೆಂಗಳೂರು ನಗರದಲ್ಲಿ ಮಾತ್ರ ಸಾವು ವರದಿಯಾಗಿದೆ.

Covid Vaccine: ಇನ್ಮುಂದೆ ಆಟೋ, ಟ್ಯಾಕ್ಸಿ ಪ್ರಯಾಣಿಕರಿಗೂ 2 ಡೋಸ್‌ ಕಡ್ಡಾಯ?

ರಾಜ್ಯದಲ್ಲಿ ಈವರೆಗೆ ಒಟ್ಟು 30.06 ಲಕ್ಷ ಮಂದಿಯಲ್ಲಿ ಕೋವಿಡ್‌(Covid19) ಕಾಣಿಸಿಕೊಂಡಿದ್ದು 29.59 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 8,227 ಸಕ್ರಿಯ ಪ್ರಕರಣಗಳಿವೆ. 38,327 ಮಂದಿ ಮರಣವನ್ನಪ್ಪಿದ್ದಾರೆ(Death). ಕೋವಿಡ್‌ ಸೋಂಕಿತ 29 ಮಂದಿ ಅನ್ಯ ಕಾರಣದಿಂದ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಗುರುವಾರ 1.63 ಲಕ್ಷ ಮಂದಿ ಕೋವಿಡ್‌ ಲಸಿಕೆ(Covid Vaccine) ಪಡೆದುಕೊಂಡಿದ್ದಾರೆ.

ಏರುಗತಿ ದಿನಾಂಕ ಕೇಸ್‌

ಡಿ.27 289
ಡಿ.28 356
ಡಿ.29 566
ಡಿ.30 707

3ನೇ ಅಲೆಯ ಆರಂಭದ ಲಕ್ಷಣ

ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದು ಕೋವಿಡ್‌ ಮೂರನೇ ಅಲೆಯ ಆರಂಭದ ಲಕ್ಷಣ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಮತ್ತು ರಾಜ್ಯ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಡಾ.ಸಿ.ಎನ್‌. ಮಂಜುನಾಥ್‌(Dr CN Manjunath) ಹೇಳಿದ್ದಾರೆ.

ಸಾಮಾನ್ಯವಾಗಿ ಪಾಸಿಟಿವಿಟಿ ದರ ಶೇ.2 ದಾಟಿದಾಗ ಅಲೆ ಆರಂಭವಾಗಿದೆ ಎಂದು ಪರಿಗಣಿಸಬಹುದು. ಆದರೆ ಕೋವಿಡ್‌ ಪ್ರಕರಣಗಳಲ್ಲಿ ಒಂದೆರಡು ದಿನದಲ್ಲೇ ಎರಡು ಪಟ್ಟು ಏರಿಕೆ ಆಗಿರುವುದು, ನಾಲ್ಕೈದು ದಿನಗಳ ಹಿಂದೆ ಶೇ.0.30 ಇದ್ದ ಪಾಸಿಟಿವಿಟಿ ದರ ಈಗ ಶೇ.0.60 ದಾಟಿರುವುದು ಮೂರನೇ ಅಲೆಯ ಆರಂಭದ ದ್ಯೋತಕ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಕನ್ನಡಪ್ರಭ’(Kannada Prabha) ಜೊತೆ ಮಾತನಾಡಿದ ಅವರು ರಾಜ್ಯದಲ್ಲಿನ ಕೋವಿಡ್‌ ತಳಿ ಪರೀಕ್ಷೆಯಲ್ಲಿ ಸದ್ಯ ಡೆಲ್ಟಾತಳಿಯೇ(Delta) ಹೆಚ್ಚು ಕಂಡುಬರುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ಕೊರೋನಾದ(Coronavirus) ಹೊಸ ರೂಪಾಂತರಿ ಒಮಿಕ್ರೋನ್‌(Omicron) ಹೆಚ್ಚಾಗಿ ಪತ್ತೆ ಆಗಬಹುದು. ಕೋವಿಡ್‌ನ ಮೂರನೇ ಅಲೆಗೆ ಒಮಿಕ್ರೋನ್‌ ಕಾರಣವಾಗಬಹುದು ಎಂದು ಅವರು ತಿಳಿಸಿದ್ದಾರೆ.

ಕೊರೋನಾದ ಹಿನ್ನೆಲೆಯನ್ನು ಗಮನಿಸಿದರೆ ಅದು ಜನವರಿ, ಫೆಬ್ರವರಿ ತಿಂಗಳಿನಲ್ಲಿ ಪ್ರಬಲವಾಗಿರುವುದು ಸ್ಪಷ್ಟವಾಗುತ್ತದೆ. ಕೊರೋನಾ 2019ರ ಕೊನೆಗೆ ಪತ್ತೆಯಾಗಿದ್ದರೂ ಜಗತ್ತಿನಾದ್ಯಂತ ತನ್ನ ಕಂಬಂಧ ಬಾಹುವನ್ನು ಚಾಚಿದ್ದು 2020ರ ಜನವರಿ, ಫೆಬ್ರವರಿಯಲ್ಲಿ. ಅದೇ ರೀತಿ 2021ರ ಜನವರಿ, ಫೆಬ್ರವರಿಯಲ್ಲಿ ಡೆಲ್ಟಾತಳಿ ಸೃಷ್ಟಿಯಾಗಿ ಮಾರ್ಚ್‌ ಬಳಿಕ ಎರಡನೇ ಅಲೆಗೆ ಕಾರಣವಾಗಿತ್ತು. ಇದೀಗ ಮತ್ತೆ ಜನವರಿಯ ಹೊಸ್ತಿಲಲ್ಲಿ ಮೂರನೇ ಅಲೆಯ ಆತಂಕ ಕಾಡುತ್ತಿದೆ ಎಂದು ಅವರು ವಿವರಿಸಿದ್ದಾರೆ.

Covid Vaccine: ಜ.3ರಿಂದ ಮಕ್ಕಳಿಗೆ ಕೊರೋನಾ ಲಸಿಕೆ: ಸಿಎಂ ಬೊಮ್ಮಾಯಿ

ಇಂದು ಅಮೆರಿಕದಲ್ಲಿ(America) ಪ್ರತಿದಿನ ನಾಲ್ಕೈದು ಲಕ್ಷ, ಯುರೋಪ್‌ನಲ್ಲಿ ಸುಮಾರು ಎರಡು ಲಕ್ಷ ಪ್ರಕರಣ ವರದಿಯಾಗುತ್ತಿದೆ. ಅಲ್ಲಿ ಸೋಂಕಿನ ತೀವ್ರತೆ ಕಡಿಮೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ನಮ್ಮಲ್ಲಿ ಸೋಂಕು ಎಷ್ಟುಮಂದಿಗೆ ಹಬ್ಬುತ್ತದೆ ಎಂಬುದು ಅತಿ ಮುಖ್ಯ ಸಂಗತಿಯಾಗಿದೆ. ನಮ್ಮಲ್ಲಿ ಸೋಂಕು ವ್ಯಾಪಕವಾಗಿ ಹಬ್ಬಿ ಶೇ.5ರಷ್ಟುಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾದ ಸ್ಥಿತಿ ಬಂದರೆ ಪರಿಸ್ಥಿತಿ ಬಿಗಡಾಯಿಸಬಹುದು. ಆದ್ದರಿಂದ ತಕ್ಷಣವೇ ಕೋವಿಡ್‌ ಮುನ್ನೆಚ್ಚರಿಕೆ ಕ್ರಮಗಳನ್ನು ಬಿಗಿಗೊಳಿಸಬೇಕು ಎಂದು ಮಂಜುನಾಥ್‌ ಎಚ್ಚರಿಸಿದ್ದಾರೆ.

ಗುಂಪು ಸೇರುವಿಕೆ ಬಂದ್‌ ಮಾಡಿ

ಸರ್ಕಾರ ತಕ್ಷಣವೇ ಗುಂಪು ಸೇರುವ ಚಟುವಟಿಕೆಗಳಿಗೆ ನಿರ್ಬಂಧ ಹೇರಲೇಬೇಕು. ರಾಜಕೀಯ ರಾರ‍ಯಲಿ, ಪ್ರತಿಭಟನೆ, ಹಬ್ಬ ಹರಿದಿನ ಎಂದು ಜನ ಗುಂಪು ಸೇರುವುದನ್ನು ಮುಂದುವರಿಸಿದರೆ ಕೋವಿಡ್‌ ಮತ್ತೆ ತೀವ್ರ ವೇಗದಲ್ಲಿ ಹರಡುವುದು ನಿಶ್ಚಿತ. ಜನ ಗುಂಪು ಸೇರುವ ಅನ್ಯಚಟುವಟಿಕೆಗಳಿಗೆ ಅವಕಾಶ ನೀಡಲೇಬಾರದು. ವಾಣಿಜ್ಯ ಚಟುವಟಿಕೆಗಳಿಗೆ ಸದ್ಯ ಅವಕಾಶ ನೀಡಬಹುದು. ಮಾಸ್ಕ್‌ ಧಾರಣೆ, ಸಾಮಾಜಿಕ ಅಂತರದ ಪಾಲನೆ ಮತ್ತು ಲಸಿಕಾಕರಣ ಪ್ರಕ್ರಿಯೆಗೆ ಒತ್ತು ನೀಡುವುದನ್ನು ಮುಂದುವರಿಸಬೇಕು ಎಂದು ಡಾ.ಮಂಜುನಾಥ್‌ ಸಲಹೆ ನೀಡಿದ್ದಾರೆ.
 

click me!