ಹೊರಜಗತ್ತಿನ ಜೊತೆಗೆ ಸಂಪರ್ಕವೇ ಇರಲಿಲ್ಲ. ನಾವೆಲ್ಲಿದ್ದೇವೆ, ಇವತ್ತು ಬದುಕಿರುತ್ತೇವೋ ಇಲ್ಲವೋ ಎಂಬುದೂ ಗೊತ್ತಿರುತ್ತಿರಲಿಲ್ಲ. ಈಗ ಭಾರತಕ್ಕೆ ಮರಳಿದ್ದೇವೆ ಎಂಬುದನ್ನು ನಂಬುವುದಕ್ಕೆ ಆಗುತ್ತಿಲ್ಲ ಎಂದು ಹೇಳಿದ ಕನ್ನಡಿಗರು.
ಹೈದರಾಬಾದ್(ಸೆ.15): ರಷ್ಯಾದಲ್ಲಿ ನೌಕರಿ ಸಿಗುತ್ತದೆಯೆಂಬ ಆಸೆಯಿಂದ ಹೋಗಿ, ವಂಚಕರ ಕೈಗೆ ಸಿಲುಕಿ, ಅಲ್ಲಿನ ಖಾಸಗಿ ಸೇನೆಗೆ ಬಲವಂತವಾಗಿ ಸೇರ್ಪಡೆಯಾಗಿದ್ದ ಮೂವರು ಕನ್ನಡಿಗರು ಎಂಟು ತಿಂಗಳ ನಂತರ ಕೊನೆಗೂ ತಾಯ್ನಾಡಿಗೆ ಮರಳಿದ್ದಾರೆ. ಇನ್ನೂ ಸುಮಾರು 60 ಮಂದಿ ಭಾರತೀಯರು ಇದೇ ರೀತಿ ರಷ್ಯಾ ಹಾಗೂ ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಸಿಲುಕಿದ್ದು, ಅವರು ಯಾವಾಗ ಮರಳುತ್ತಾರೆಂಬುದರ ಬಗ್ಗೆ ಯಾವುದೇ ಮಾಹಿತಿ ಲಭಿಸಿಲ್ಲ.
ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರ ನೆರವಿನಿಂದಾಗಿ ತಾವು ಜೀವ ಉಳಿಸಿಕೊಂಡು ವಾಪಸಾಗಿದ್ದೇವೆ ಎಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಷ್ಯಾದಿಂದ ಶುಕ್ರವಾರ ಬಂದಿಳಿದ ಮೂವರು ಕರ್ನಾಟಕದವರು ಹಾಗೂ ಒಬ್ಬ ತೆಲಂಗಾಣದ ವ್ಯಕ್ತಿ ಹೇಳಿದ್ದಾರೆ.
undefined
ಮೋದಿ ಆದೇಶ.. ಶಾಂತಿ ಸಂದೇಶ.. ಏನಿದರ ಗುಟ್ಟು? ಜಗತ್ತನ್ನೇ ಗೆಲ್ಲಲು ಸಿದ್ಧವಾದ ರಣತಂತ್ರವೇನು ಗೊತ್ತಾ?
ತಾಯ್ನಾಡಿಗೆ ಮರಳಿದವರು 20 ವರ್ಷಗಳ ಆಸುಪಾಸಿನಲ್ಲಿರುವ ಮೊಹಮ್ಮದ್ ಸೂಫಿಯಾನ್ (ತೆಲಂಗಾಣ), ಅಬ್ದುಲ್ ನಯೀಂ (ಕರ್ನಾಟಕ) ಹಾಗೂ ಸೈಯದ್ ಇಲಿಯಾಸ್ ಹುಸೇನಿ (ಕಲಬುರಗಿ) ಎಂದು ತಿಳಿದುಬಂದಿದೆ. ಇನ್ನೊಬ್ಬ ಕನ್ನಡಿಗ ಯಾರೆಂಬುದು ಖಚಿತವಾಗಿಲ್ಲ. ‘ನಾನು ಮತ್ತು ಕರ್ನಾಟಕದ ಮೂವರು ಮರಳಿದ್ದೇವೆ’ ಎಂದು ಸೂಫಿಯಾನ್ ಹೇಳಿದ್ದಾನೆ.
ಕೆಲಸದ ಆಮಿಷ, ಖಾಸಗಿ ಸೇನೆಗೆ ಸೇರ್ಪಡೆ:
ರಷ್ಯಾದಲ್ಲಿ ಕೆಲಸ ಕೊಡಿಸುತ್ತೇವೆಂದು ಆಮಿಷವೊಡ್ಡಿ ಸುಮಾರು 60 ಭಾರತೀಯರನ್ನು 2023ರ ಡಿಸೆಂಬರ್‌ನಲ್ಲಿ ಚೆನ್ನೈ ಹಾಗೂ ದುಬೈ ಮೂಲಕ ರಷ್ಯಾಕ್ಕೆ ಕರೆದೊಯ್ಯಲಾಗಿತ್ತು. ಅಲ್ಲಿ ಸೆಕ್ಯುರಿಟಿ ಗಾರ್ಡ್ ಅಥವಾ ಸಹಾಯಕರ ಕೆಲಸ ಕೊಡಿಸುತ್ತೇವೆ ಎಂದು ಏಜೆಂಟರು ಹೇಳಿದ್ದರು. ಆದರೆ, ರಷ್ಯಾಕ್ಕೆ ತಲುಪಿದ ಮೇಲೆ ಇವರ ಪಾಸ್‌ಪೋರ್ಟ್ ಕಿತ್ತುಕೊಂಡು, ಎಲ್ಲರನ್ನೂ ಖಾಸಗಿ ಸೇನೆಗೆ ಸೇರಿಸಿ, ಬಲವಂತವಾಗಿ ರಷ್ಯಾದ ಪರ ಉಕ್ರೇನ್ ಯುದ್ಧದಲ್ಲಿ ಹೋರಾಡುವುದಕ್ಕೆ ಯಾವುದೋ ಕಾಡಿನಲ್ಲಿ ನಿಯೋಜಿಸಲಾಗಿತ್ತು. ಕೆಲ ತಿಂಗಳ ಕಾಲ ಇವರಿಗೆ ತಮ್ಮ ಮನೆಯವರನ್ನು ಸಂಪರ್ಕಿಸುವುದಕ್ಕೂ ಆಗಿರಲಿಲ್ಲ. ನಂತರ ಹೇಗೋ ಮನೆಯವರನ್ನು ಸಂಪರ್ಕಿಸಿ ನೆರವು ಯಾಚಿಸಿದ್ದರು. ಅವರು ಕೇಂದ್ರ ಸರ್ಕಾರಕ್ಕೆ ದೂರು ನೀಡಿದ ಮೇಲೆ, ಇತ್ತೀಚೆಗೆ ರಷ್ಯಾಕ್ಕೆ ತೆರಳಿದ್ದ ಪ್ರಧಾನಿ ಮೋದಿಯವರು ಇವರ ಬಿಡುಗಡೆಗೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಒಪ್ಪಿಸಿದ್ದರು.
ದಿನಕ್ಕೆ 15 ಗಂಟೆ ‘ನರಕದ ಕೆಲಸ’:
ರಷ್ಯಾದಿಂದ ಬಿಡಿಸಿಕೊಂಡು ಬಂದವರು ಅಲ್ಲಿ ತಾವು ಅನುಭವಿಸುತ್ತಿದ್ದ ನರಕಯಾತನೆಯನ್ನು ಬಿಚ್ಚಿಟ್ಟಿದ್ದಾರೆ. ‘ನಾವು ಅಲ್ಲಿ ಗುಲಾಮರಂತೆ ಕಾಡಿನಲ್ಲಿದ್ದೆವು. ದಿನಕ್ಕೆ 15 ತಾಸು ನಿದ್ದೆ-ವಿಶ್ರಾಂತಿಯಿಲ್ಲದೆ ಕೆಲಸ ಮಾಡಬೇಕಿತ್ತು. ಸುಸ್ತಾಗಿದೆ ಅಂದರೆ ನಮ್ಮತ್ತ ಗುಂಡು ಹಾರಿಸುತ್ತಿದ್ದರು. ನಮ್ಮನ್ನು ಗುಂಡಿ ತೋಡುವ ಹಾಗೂ ಸ್ಫೋಟಕಗಳನ್ನು ಸಿಡಿಸುವ ಕೆಲಸಕ್ಕೆ ಹಚ್ಚುತ್ತಿದ್ದರು. ಕಲಾಷ್ನಿಕೋವ್ ಗನ್‌ಗಳನ್ನು ಬಳಸಲು, ಹ್ಯಾಂಡ್ ಗ್ರೆನೇಡ್ ಮತ್ತು ಇತರ ಸ್ಫೋಟಕಗಳನ್ನು ಬಳಸಲು ತರಬೇತಿ ನೀಡಿದ್ದರು. ಹೊರಜಗತ್ತಿನ ಜೊತೆಗೆ ಸಂಪರ್ಕವೇ ಇರಲಿಲ್ಲ. ನಾವೆಲ್ಲಿದ್ದೇವೆ, ಇವತ್ತು ಬದುಕಿರುತ್ತೇವೋ ಇಲ್ಲವೋ ಎಂಬುದೂ ಗೊತ್ತಿರುತ್ತಿರಲಿಲ್ಲ. ಈಗ ಭಾರತಕ್ಕೆ ಮರಳಿದ್ದೇವೆ ಎಂಬುದನ್ನು ನಂಬುವುದಕ್ಕೆ ಆಗುತ್ತಿಲ್ಲ’ ಎಂದು ಹೇಳಿದ್ದಾರೆ.