ಗೃಹಜ್ಯೋತಿ ನೋಂದಣಿಗೆ ಇಂದಿನಿಂದ 2000 ಸೇವಾ ಕೇಂದ್ರ: 4 ದಿನದಲ್ಲಿ 12.51 ಲಕ್ಷ ನೋಂದಣಿ

Published : Jun 22, 2023, 10:07 AM IST
ಗೃಹಜ್ಯೋತಿ ನೋಂದಣಿಗೆ ಇಂದಿನಿಂದ 2000 ಸೇವಾ ಕೇಂದ್ರ: 4 ದಿನದಲ್ಲಿ 12.51 ಲಕ್ಷ ನೋಂದಣಿ

ಸಾರಾಂಶ

‘ಗೃಹ ಜ್ಯೋತಿ’ ನೋಂದಣಿಗೆ ಸೇವಾಸಿಂಧು ಪೋರ್ಟಲ್‌ನಲ್ಲಿ ಸರ್ವರ್‌ ಸಮಸ್ಯೆ ಮುಂದುವರೆದಿದ್ದು ನಾಲ್ಕನೇ ದಿನವಾದ ಬುಧವಾರವೂ ಸಾರ್ವಜನಿಕರು ನೋಂದಣಿಗೆ ಪರದಾಡುವಂತಾಯಿತು.

ಬೆಂಗಳೂರು (ಜೂ.22): ‘ಗೃಹ ಜ್ಯೋತಿ’ ನೋಂದಣಿಗೆ ಸೇವಾಸಿಂಧು ಪೋರ್ಟಲ್‌ನಲ್ಲಿ ಸರ್ವರ್‌ ಸಮಸ್ಯೆ ಮುಂದುವರೆದಿದ್ದು ನಾಲ್ಕನೇ ದಿನವಾದ ಬುಧವಾರವೂ ಸಾರ್ವಜನಿಕರು ನೋಂದಣಿಗೆ ಪರದಾಡುವಂತಾಯಿತು. ನಿತ್ಯ ನಡೆದಿರುವ ಗ್ರಾಹಕರ ಪರದಾಟ ತಪ್ಪಿಸಲು ಹಾಗೂ ಸೇವಾಸಿಂಧು ಸರ್ವರ್‌ ಮೇಲೆ ಬೀಳುತ್ತಿರುವ ಹೊರೆ ನಿವಾರಿಸಲು ಇಂಧನ ಇಲಾಖೆಯು ಗುರುವಾರದಿಂದ ಎರಡು ಸಾವಿರ ಸೇವಾ ಕೇಂದ್ರಗಳಲ್ಲಿ ನೋಂದಣಿಗೆ ಅವಕಾಶ ನೀಡಲು ನಿರ್ಧರಿಸಿದೆ.

ಜತೆಗೆ, ಈ ಕಚೇರಿಗಳಲ್ಲಿ ನೋಂದಣಿಗಾಗಿಯೇ ಹೊಸ ಲಿಂಕ್‌ ನೀಡಿದೆ. ತನ್ಮೂಲಕ ಸರ್ವರ್‌ ಸಮಸ್ಯೆ ಬಗೆಹರಿಯಬಹುದು ಎಂಬ ವಿಶ್ವಾಸವನ್ನು ಇಂಧನ ಇಲಾಖೆ ಹೊಂದಿದೆ. ಜೂ.18 ರಿಂದ https://sevasindhugs.karnataka.gov.in ವೆಬ್‌ಸೈಟ್‌ನಲ್ಲಿ ಸಾರ್ವಜನಿಕರಿಗೆ ನೋಂದಣಿಗೆ ಮುಕ್ತ ಅವಕಾಶ ನೀಡಲಾಗಿತ್ತು. ಜತೆಗೆ ಬೆಂಗಳೂರು ಒನ್‌ ಕೇಂದ್ರ, ಗ್ರಾಮ ಒನ್‌, ಕರ್ನಾಟಕ ಒನ್‌, ನಾಡ ಕಚೇರಿ, ಆಯ್ದ ವಿದ್ಯುತ್‌ ಕಚೇರಿಗಳಿಗೂ ಇದೇ ವೆಬ್‌ಸೈಟ್‌ನಲ್ಲೇ ನೋಂದಣಿಗೆ ಅವಕಾಶ ಕಲ್ಪಿಸಲಾಗಿತ್ತು.

ಜು.3ರಿಂದ 10 ದಿನ ವಿಧಾನಸಭೆ ಅಧಿವೇಶನ: ಜು.7ಕ್ಕೆ ಬಜೆಟ್‌ ಮಂಡನೆ

ಸಾರ್ವಜನಿಕರು ಮೊಬೈಲ್‌, ಲ್ಯಾಪ್‌ಟಾಪ್‌, ಕಂಪ್ಯೂಟರ್‌ಗಳ ಮೂಲಕ ಲಕ್ಷಾಂತರ ಸಂಖ್ಯೆಯಲ್ಲಿ ನೋಂದಣಿಗೆ ಮುಂದಾಗಿದ್ದು, ಇಂಧನ ಇಲಾಖೆ ಗುರುತಿಸಿರುವ ನೋಂದಣಿ ಕೇಂದ್ರಗಳಲ್ಲೂ ಸಾರ್ವಜನಿಕರು ಸಾಲುಗಟ್ಟಿ ನೋಂದಣಿಗೆ ಮುಗಿಬಿದ್ದಿದ್ದರು. ಹೀಗಾಗಿ ಸತತ 4ನೇ ದಿನವೂ ಸರ್ವರ್‌ ಮೇಲೆ ಒತ್ತಡ ಹೆಚ್ಚಾಗಿ ಬಹುತೇಕ ಸಮಯ ‘ಪೇಜ್‌ ಈಸ್‌ ನಾಟ್‌ ಅವೈಲಬಲ್‌ ಎಂದೇ ತೋರುತ್ತಿತ್ತು. ಇದರ ನಡುವೆಯೂ ಸಾರ್ವಜನಿಕರು ಸ್ವಂತ ಸಾಧನಗಳು, ಬೆಂಗಳೂರು ಒನ್‌, ಕರ್ನಾಟಕ ಒನ್‌ ಹಾಗೂ ಗ್ರಾಮ ಒನ್‌ ಕೇಂದ್ರಗಳಲ್ಲಿ ಬುಧವಾರ 3.50 ಲಕ್ಷ ನೋಂದಣಿ ಮಾಡಲಾಗಿದೆ.

ಹೊಸ ಲಿಂಕ್‌ ಟ್ರಯಲ್‌: ಒಂದೇ ಲಿಂಕ್‌ನಲ್ಲಿ ಸಾರ್ವಜನಿಕರು ಹಾಗೂ ನೋಂದಣಿ ಕೇಂದ್ರಗಳಲ್ಲಿ ನೋಂದಣಿಗೆ ಮುಂದಾಗುತ್ತಿರುವುದರಿಂದ ಒತ್ತಡ ಹೆಚ್ಚಾಗುತ್ತಿದೆ. ಹೀಗಾಗಿ ಬುಧವಾರ ಬೆಂಗಳೂರು ಒನ್‌ ಕೇಂದ್ರಗಳಿಗೆ ಸೀಮಿತವಾಗಿ ಪರೀಕ್ಷಾರ್ಥ ಹೊಸ ಲಿಂಕ್‌ನ್ನು ಇಡಿಸಿಎಸ್‌ ನಿರ್ದೇಶನಾಲಯ ನೀಡಿತ್ತು. ಹೊಸ ಲಿಂಕ್‌ ಮೂಲಕ 30 ಸೆಕೆಂಡ್‌ನಿಂದ 60 ಸೆಕೆಂಡ್‌ ಒಳಗಾಗಿ ಅರ್ಜಿ ನೋಂದಾಯಿಸಬಹುದು ಎಂದು ಇ-ಆಡಳಿತ ಇಲಾಖೆ ತಿಳಿಸಿತ್ತು.

ಇದಕ್ಕಾಗಿ ಪ್ರತ್ಯೇಕ ಯೂಸರ್‌ ಐಡಿ ಹಾಗೂ ಪಾಸ್‌ವರ್ಡ್‌ ನೀಡಿತ್ತು. ಆರಂಭದಲ್ಲಿ ವೇಗವಾಗಿ ಕೆಲಸ ಮಾಡಿದ ಲಿಂಕ್‌ನಲ್ಲೂ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತ್ತು. ಮೊಬೈಲ್‌ಗಳಿಗೆ ಒಟಿಪಿ ಹೋಗುವುದು ಸ್ಥಗಿತಗೊಂಡಿತ್ತು. ಈ ಸಮಸ್ಯೆಯನ್ನು ಬಗೆಹರಿಸಿ ಸುಗಮವಾಗಿ ನೋಂದಣಿ ಮಾಡಲಾಯಿತು. ವಿಧಾನಸೌಧದ ಬೆಂಗಳೂರು ಒನ್‌ ಕೇಂದ್ರದಲ್ಲೇ 2 ಗಂಟೆ ಅವಧಿಯಲ್ಲಿ 30 ಮಂದಿ ನೋಂದಾಯಿಸಿಕೊಂಡರು ತಿಳಿದುಬಂದಿದೆ.

2000 ಕೇಂದ್ರಗಳಿಗೆ ಹೊಸ ಲಿಂಕ್‌: ಹೊಸ ಲಿಂಕ್‌ನ್ನು ರಾಜ್ಯದ ಒಟ್ಟು 2,000 ಕೇಂದ್ರಗಳಿಗೆ ಗುರುವಾರದಿಂದ ನೀಡಲಾಗುವುದು. ಬೆಂಗಳೂರು ಒನ್‌ ಕೇಂದ್ರ, ಕರ್ನಾಟಕ ಒನ್‌, ಗ್ರಾಮ ಒನ್‌, ವಿದ್ಯುಚ್ಛಕ್ತಿ ಕಚೇರಿಗಳು (750), ಗ್ರಾಮ ಪಂಚಾಯಿತಿಗಳು ಹಾಗೂ ನಾಡ ಕಚೇರಿಗಳಲ್ಲಿ ಪ್ರತ್ಯೇಕ ಲಿಂಕ್‌ ಮೂಲಕ ಗೃಹ ಜ್ಯೋತಿ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು.

ಮುಂದೆ ಸಾರ್ವಜನಿಕರಿಗೂ ಹೊಸ ಲಿಂಕ್‌ ಲಭ್ಯ: ಪ್ರಸ್ತುತ ನೋಂದಣಿ ಕೇಂದ್ರಗಳಿಗೆ ಮಾತ್ರ ಹೊಸ ಲಿಂಕ್‌ ನೀಡಲಾಗುತ್ತದೆ. ಹೊಸ ಲಿಂಕ್‌ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂದು ಪರಿಶೀಲಿಸಿ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೂ ಅವಕಾಶ ನೀಡಲಾಗುವುದು. ಅಲ್ಲಿಯವರೆಗೆ ಹಳೆಯ ಲಿಂಕ್‌ ಮೂಲಕವೇ ನೋಂದಣಿ ಮಾಡಬೇಕು. ಇಲ್ಲದಿದ್ದರೆ ನೋಂದಣಿ ಕೇಂದ್ರಗಳ ಮೂಲಕ ನೋಂದಣಿ ಮಾಡಿಕೊಳ್ಳಬೇಕು ಎಂದು ಇಂಧನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ನೂತನ ಶಾಸಕರಿಗೆ ಮೂರು ದಿನ ತರಬೇತಿ ಶಿಬಿರ: ಸ್ಪೀಕರ್‌ ಯು.ಟಿ.ಖಾದರ್‌

12.51 ಲಕ್ಷ ನೋಂದಣಿ: ಸರ್ವರ್‌ ಸಮಸ್ಯೆಯ ನಡುವೆಯೂ ಬುಧವಾರದ ವೇಳೆಗೆ 12.51 ಲಕ್ಷ ಗ್ರಾಹಕರು ಸೇವಾ ಸಿಂಧು ಪೋರ್ಟಲ್‌ನಲ್ಲಿ ‘ಗೃಹ ಜ್ಯೋತಿ’ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಮೊದಲ ದಿನ 96,305, 2ನೇ ದಿನ 3.34 ಲಕ್ಷ, 3ನೇ ದಿನ 4.64 ಲಕ್ಷ ಮಂದಿ ನೋಂದಣಿ ಮಾಡಿಕೊಂಡಿದ್ದರು. 5ನೇ ದಿನವಾದ ಬುಧವಾರ ಸಂಜೆ 6 ಗಂಟೆ ವೇಳೆಗೆ 3.56 ಲಕ್ಷ ಮಂದಿ ನೋಂದಣಿ ಮಾಡಿಕೊಂಡಿದ್ದರು.

ನೋಂದಣಿ ಹೇಗೆ?: ಮಾಸಿಕ 200 ಯುನಿಟ್‌ಗಿಂತ ಕಡಿಮೆ ವಿದ್ಯುತ್‌ ಬಳಕೆ ಮಾಡುವ ಅರ್ಹ ಗೃಹಬಳಕೆ ವಿದ್ಯುತ್‌ ಗ್ರಾಹಕರು https://sevasindhugs.karnataka.gov.in ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಮೊಬೈಲ್‌, ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಜತೆಗೆ ಬೆಂಗಳೂರು ಒನ್‌, ಗ್ರಾಮ ಒನ್‌, ಕರ್ನಾಟಕ ಒನ್‌ ಕೇಂದ್ರ, ನಾಡಕಚೇರಿ, ಎಲ್ಲ ವಿದ್ಯುತ್‌ ಕಚೇರಿಗಳಲ್ಲೂ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ಆಲೂಗಡ್ಡೆಗೆ ಮೊಳಕೆ ಬಂದರೆ ತಿನ್ನಬಹುದಾ? ತಜ್ಞರ ಎಚ್ಚರಿಕೆ ಏನು, ಯಾವುದು- ಯಾರಿಗೆ ಅಪಾಯ?