*ಕೋವಿಡ್ ನಿಯಮ ಪಾಲಿಸಿಯೇ ಹೆಜ್ಜೆ ಹಾಕುತ್ತೇವೆ
* ಪಾದಯಾತ್ರೆ ತಡೆಯಲೆಂದೇ ನಿಷೇಧಾಜ್ಞೆ ಜಾರಿ
*ಜಿಲ್ಲೆಯಲ್ಲಿ ಗೆಸ್ಟ್ ಹೌಸ್‌ಗಳು ಸಿಗದಂತೆ ನಿರ್ಬಂಧ
ಬೆಂಗಳೂರು (ಜ. 9): ಮೇಕೆದಾಟು ಪಾದಯಾತ್ರೆ (Mekedatu Padayatre) ತಡೆಯಬೇಕು ಎಂಬ ದುರುದ್ದೇಶದಿಂದ ರಾಜ್ಯ ಸರ್ಕಾರ ರಾಮನಗರ (Ramanagara) ಜಿಲ್ಲೆಗೆ ಸೀಮಿತವಾಗಿ 144 ಸೆಕ್ಷನ್ ಜಾರಿಗೊಳಿಸಿದೆ. ನಾವು ಕೋವಿಡ್ ನಿಯಮ ಪಾಲಿಸಿಯೇ ಪಾದಯಾತ್ರೆ ಮಾಡುತ್ತೇವೆ. ಇಷ್ಟರ ಮೇಲೂ ಸರ್ಕಾರದವರ ಉದ್ದೇಶಪೂರ್ವಕವಾಗಿ ಹೋರಾಟ ತಡೆಯಲು ಯತ್ನಿಸಿದರೆ ಮಾಡಿಕೊಳ್ಳಲಿ. ನಾವು ಎಲ್ಲದಕ್ಕೂ ಸಿದ್ಧರಿದ್ದೇವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಬಳಿ 144 ಸೆಕ್ಷನ್ ಜಾರಿಯಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಹಾಗೇನಾದರೂ ಜಾರಿ ಮಾಡಿದ್ದರೆ ನಾಲ್ಕೇ ಜನ ಪಾದಯಾತ್ರೆ ಮಾಡುತ್ತೇವೆ. ನಮ್ಮ ಪಾದಯಾತ್ರೆ ಘೋಷಣೆಯಾಗಿ ಎರಡು ತಿಂಗಳಾಯ್ತು. ವಾರಾಂತ್ಯದ ಲಾಕ್ ಡೌನ್ ಘೋಷಣೆ ಆಗಿದ್ದು ಮೊನ್ನೆ ಮೊನ್ನೆ. ಈಗ ರಾಮನಗರಕ್ಕೆ ಸೀಮಿತವಾಗಿ 144 ಸೆಕ್ಷನ್ ಜಾರಿ ಮಾಡಿದ್ದಾರೆ.
ಇದನ್ನೂ ಓದಿ: Mekedatu Padayatreಗೂ ಮುನ್ನ ಡಿಕೆ ಶಿವಕುಮಾರ್ ಕುಟುಂಬ ಸಮೇತರಾಗಿ ಟೆಂಪಲ್ ರನ್!
ಜಿಲ್ಲೆಯಲ್ಲಿ ಗೆಸ್ಟ್ ಹೌಸ್‌ಗಳು ಸಿಗದಂತೆ ನಿರ್ಬಂಧ ಹೇರಿದ್ದಾರೆ. ಇದು ಬೇರೆ ಜಿಲ್ಲೆಗಳಲ್ಲಿ ಏಕಿಲ್ಲ? ಇದು ಹೇಗಾದರೂ ಮಾಡಿ ನಮ್ಮ ಪಾದಯಾತ್ರೆ ತಡೆಯುವ ದುರುದ್ದೇಶವನ್ನು ತೋರುತ್ತದೆ. ನಾವು ಕಾನೂನು ಗೌರವಿಸುತ್ತೇವೆ. ನಿಯಮ ಅನುಸರಿಸಿಯೇ ಪಾದಯಾತ್ರೆ ಮಾಡುತ್ತೇವೆ. ಆದರೂ ನಮ್ಮನ್ನು ಬಂಧಿಸುತ್ತಾರಾ ಬಂಧಿಸಲಿ. ನಾವು ಎಲ್ಲದಕ್ಕೂ ಸಿದ್ಧರಾಗಿದ್ದೇವೆ ಎಂದರು.
ಸಂಧಾನ ಇಲ್ಲ
ಸರ್ಕಾರದೊಂದಿಗೆ ಸಂಧಾನ ಮಾತುಕತೆ ಏನಾದರೂ ನಡೆಸುವಿರಾ ಎಂಬ ಪ್ರಶ್ನೆಗೆ, ಸಂಧಾನ ಮಾಡೋಕೇನಿದೆ? ಈ ಸರ್ಕಾರ ಅಧಿಕಾರಕ್ಕೆ ಬಂದು ಎರಡುವರೆ ವರ್ಷ ಕಳೆದಿದೆ. ಅವತ್ತಿಂದ ಏನು ಮಾಡ್ತಿದ್ದಾರೆ ಹೇಳಲಿ. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸದಾನಂದಗೌಡ ಐದು ವರ್ಷ ಮುಖ್ಯಮಂತ್ರಿಯಾಗಿದ್ದಾಗ ಏನು ಮಾಡಿದ್ದರು ಹೇಳಲಿ.
ಇದನ್ನೂ ಓದಿ: Mekedatu Padayatra, ಮೇಕೆದಾಟು ಪಾದಯಾತ್ರೆ, ಡಿಕೆಶಿಗೆ ರಾಮನಗರ ಎಸ್‌ಪಿ ಖಡಕ್ ಎಚ್ಚರಿಕೆ
ಕಾವೇರಿ ಜಲ ವಿವಾದ ಇತ್ಯರ್ಥವಾಗಿದ್ದು, 2018ರ ಫೆಬ್ರವರಿಯಲ್ಲಿ. ಅದಾದ ಮೇಲೆ ತಮಿಳುನಾಡಿಗೆ (Tamil Nadu) 177.25 ಟಿಎಂಸಿ ನೀರು ಬಿಡುತ್ತಿದ್ದೇವೆ. ಸಾಮಾನ್ಯ ವರ್ಷದಲ್ಲಿ ಇಷ್ಟುನೀರು ಬಿಡೋಣ. ಆದರೆ ಹೆಚ್ಚು ಮಳೆಯಾದಾಗ ನೀರು ಸಮುದ್ರಕ್ಕೆ ಹೋಗಿ ವ್ಯರ್ಥವಾಗುತ್ತಿದೆ. ಅದನ್ನು ತಡೆಯಲು ಒಂದು ಜಲಾಶಯ ನಿರ್ಮಾಣ ಮಾಡಿ ಆ ನೀರನ್ನು ಕುಡಿಯುವ ಉದ್ದೇಶಕ್ಕೆ ಬಳಸಬಹುದು ಎಂದರು.
ಡಬಲ್ ಎಂಜಿನ್:
ಯಡಿಯೂರಪ್ಪ (B. S. Yediyurappa) ಮುಖ್ಯಮಂತ್ರಿ ಆಗಿದ್ದಾಗ ಬೊಮ್ಮಾಯಿ (Basavaraj Bommai) ಅವರು ಜಲ ಸಂಪನ್ಮೂಲ ಸಚಿವರಾಗಿದ್ದರು ಆಗ ಯಾಕೆ ಯೋಜನೆ ಜಾರಿ ಮಾಡಿಲ್ಲ? ಈಗ ಸುಪ್ರೀಂ ಕೋರ್ಟ್, ಕಾವೇರಿ ಜಲ ಪ್ರಾಧಿಕಾರ, ಹಸಿರು ನ್ಯಾಯಾಧೀಕರಣ ಎಲ್ಲಿಯೂ ಯೋಜನೆ ಜಾರಿ ಮಾಡದಂತೆ ತಡೆ ನೀಡಿಲ್ಲ. ಎರಡೂ ಕಡೆ ಬಿಜೆಪಿಯವರ ಸರ್ಕಾರವೇ ಇದೆ, ಅಣೆಕಟ್ಟು ನಿರ್ಮಾಣಕ್ಕೆ ಬೇರಾವ ತೊಂದರೆ ಇದೆ ಹೇಳಲಿ.
ಕೇವಲ ಒಂದು ಪರಿಸರ ಇಲಾಖೆ ಒಪ್ಪಿಗೆ ಪತ್ರ ಪಡೆಯಲು ಎರಡುವರೆ ವರ್ಷ ಬೇಕಾ? ಸಿದ್ದರಾಮಯ್ಯ ಅವರ ಸರ್ಕಾರ ಏನೂ ಮಾಡಿಲ್ಲ ಎಂದು ಇದಕ್ಕೆ ರಾಜಕೀಯ ಬಣ್ಣ (Politics) ಬಳಿಯಲು ನೋಡುತ್ತಿದ್ದಾರೆ. ನಾವಿದ್ದಾಗಲೇ ಯೋಜನೆ ಜಾರಿ ಪ್ರಕ್ರಿಯೆ ಆರಂಭವಾಗಿದ್ದು, ಡಿಪಿಆರ್ (DPR) ಸಿದ್ಧಪಡಿಸಿ ಕೇಂದ್ರದ ಅನುಮತಿಗೆ ಕಳುಹಿಸಿದ್ದು ಕೂಡ ನಾವೇ ಎಂದು ಪುನರುಚ್ಚರಿಸಿದರು. ಇದೇ ವೇಳೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (H D Kumarswamy) ಅವರ ಆರೋಪ ಕುರಿತ ಪ್ರಶ್ನೆಗೆ, ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಅವರು ಹತಾಶೆಯಿಂದ ಏನೇನೋ ಹೇಳ್ತಾರೆ, ಅದಕ್ಕೆಲ್ಲ ನಾನು ಉತ್ತರ ಕೊಡಲ್ಲ ಎಂದರು.