PSI Recruitment Scam: ಬೆಂಗ್ಳೂರಲ್ಲಿ 12 ಜನ ಅಭ್ಯರ್ಥಿಗಳು ಅರೆಸ್ಟ್‌!

By Girish GoudarFirst Published May 1, 2022, 4:46 AM IST
Highlights

*    ಒಎಂಆರ್‌, ಬ್ಲೂಟೂತ್‌ ಅಕ್ರಮ: ಕಲಬುರಗಿಯಿಂದಾಚೆಗೆ ವಿಸ್ತರಿಸಿದ ಬೇಟೆ
*  ಇಬ್ಬರು ಸರ್ಕಾರಿ ನೌಕರರು ಸೇರಿ 12 ಸೆರೆ
*  ಸಿಐಡಿ ತನಿಖೆ ಮತ್ತಷ್ಟು ಚುರುಕು
 

ಬೆಂಗಳೂರು(ಮೇ.01):  ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ನೇಮಕಾತಿ ಅಕ್ರಮ(PSI Recruitment Scam) ಜಾಲವು ಕಲಬುರಗಿ(Kalaburagii) ಜಿಲ್ಲೆಯಿಂದ ಈಗ ಬೆಂಗಳೂರಿಗೆ(Bengaluru) ವ್ಯಾಪಿಸಿದ್ದು, ಓರ್ವ ಪೊಲೀಸ್‌ ಕಾನ್‌ಸ್ಟೇಬಲ್‌ ಸೇರಿ ಇಬ್ಬರು ಸರ್ಕಾರಿ ನೌಕರರು ಒಳಗೊಂಡಂತೆ 12 ಮಂದಿ ಅಭ್ಯರ್ಥಿಗಳು ನಗರದಲ್ಲಿ ಶನಿವಾರ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ತನ್ಮೂಲಕ ಅಕ್ರಮ ಬೆಳಕಿಗೆ ಬಂದ ದಿನದಿಂದಲೂ ಕಲಬುರಗಿ ಕೇಂದ್ರಕ್ಕೆ ಸೀಮಿತವಾಗಿದ್ದ ಸಿಐಡಿ ತನಿಖೆಯೂ(CID Investigation) ಈಗ ರಾಜಧಾನಿಗೂ ವಿಸ್ತರಣೆಯಾಗಿದೆ. ಸಿಐಡಿ ದೂರಿನ ಮೇರೆಗೆ ಬೆಂಗಳೂರಿನ ಹೈಗ್ರೌಂಡ್ಸ್‌ ಠಾಣೆ ಪೊಲೀಸರು(Police) ರಾಜಧಾನಿಯಲ್ಲಿ 12 ಮಂದಿಯನ್ನು ಬಂಧಿಸಿದ್ದಾರೆ. ಈ ಪ್ರಕರಣವು ಸೋಮವಾರ ಸಿಐಡಿಗೆ ಹಸ್ತಾಂತರವಾಗಲಿದೆ ಎಂದು ತಿಳಿದು ಬಂದಿದೆ.

Latest Videos

PSI Recruitment Scam: ಬಿರುಸು ಆಡಳಿತ ಮಾಡಿದರೆ ಡಿಕೆಶಿ ತಡೆದುಕೊಳ್ಳಲ್ಲ: ಸಿಎಂ ಬೊಮ್ಮಾಯಿ

ಬಂಧಿತರ ಪೈಕಿ ಪೊಲೀಸ್‌ ಕಾನ್‌ಸ್ಟೇಬಲ್‌ ಮಹಾಂತೇಶ್‌ ಹೆಸರು ಪತ್ತೆಯಾಗಿದ್ದು, ಇನ್ನುಳಿದವರ ಹೆಸರು ಬಹಿರಂಗವಾಗಿಲ್ಲ. ಒಎಂಆರ್‌ ಶೀಟ್‌(OMR Sheet) ಹಾಗೂ ಕಾರ್ಬನ್‌ ಪ್ರತಿಯಲ್ಲಿ ವ್ಯತ್ಯಾಸ ಕಂಡು ಹಿನ್ನೆಲೆಯಲ್ಲಿ ಈ ಅಭ್ಯರ್ಥಿಗಳು ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಕೆಲವು ಪರೀಕ್ಷಾ ಕೇಂದ್ರಗಳಲ್ಲಿಯೂ ಅಕ್ರಮ ನಡೆದಿರುವ ಬಗ್ಗೆ ಮಾಹಿತಿ ಪಡೆದಿರುವ ಸಿಐಡಿ ಅಧಿಕಾರಿಗಳ ತಂಡ, ಕಲಬುರಗಿಯಲ್ಲಿ ಮೊದಲ ಹಂತದ ತನಿಖೆಯ ನಂತರ ಬೆಂಗಳೂರು ಮತ್ತು ಇನ್ನಿತರ ಕಡೆಗಳಲ್ಲೂ ತನಿಖೆ ಚುರುಕುಗೊಳಿಸಿದೆ. ಇದರ ಮೊದಲ ಹಂತವಾಗಿ ಅನುಮಾನಕ್ಕೆ ತುತ್ತಾಗಿರುವ 22 ಅಭ್ಯರ್ಥಿಗಳ ಪೈಕಿ 12 ಮಂದಿ ಬಂಧನವಾಗಿದೆ(Arrest). ಇನ್ನುಳಿದವರ ಪತ್ತೆಗೆ ತನಿಖೆ ಮುಂದುವರೆದಿದೆ ಎಂದು ವಿಶ್ವಸನೀಯ ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಪಿಎಸ್‌ಐ ನೇಮಕಾತಿ ಪರೀಕ್ಷಾ ಅಕ್ರಮದ ಪ್ರಮುಖ ಆರೋಪಿಗಳಾದ ಕಲಬುರಗಿ ಜಿಲ್ಲೆಯ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ(Dvivya Hagaragi) ಹಾಗೂ ಕಾಂಗ್ರೆಸ್‌ ಮುಖಂಡ ರುದ್ರಗೌಡ ಪಾಟೀಲ್‌(Rudragouda Patil) ತಂಡ ಸಿಕ್ಕಿಬಿದ್ದ ಬೆನ್ನಲ್ಲೇ ಈಗ ಅಕ್ರಮದ ಜಾಲವು ಕಲಬುರಗಿ ಹೊರಗೂ ಹಬ್ಬಿರುವ ಮಾಹಿತಿ ಬೆಳಕಿಗೆ ಬಂದಿದೆ. ಅಲ್ಲದೆ ಇದುವರೆಗೆ ಪ್ರಕರಣ ಸಂಬಂಧ ಕಲ್ಯಾಣ ಕರ್ನಾಟಕದ(Kalyana Karnataka) ಕೋಟಾದಡಿ ಆಯ್ಕೆಯಾಗಿದ್ದ 7 ಅಭ್ಯರ್ಥಿಗಳು ಸಿಐಡಿ ಬಲೆಗೆ ಬಿದ್ದಿದ್ದು, ಎರಡನೇ ಹಂತದಲ್ಲಿ ಕಲ್ಯಾಣ ಕರ್ನಾಟಕದ ಹೊರಗಿನವರು ಗಾಳಕ್ಕೆ ಸಿಲುಕಿದ್ದಾರೆ.

ಒಎಂಆರ್‌ ಶೀಟ್‌ ತಿದ್ದುಪಡಿ?:

ಈ ಪ್ರಕರಣ ಸಂಬಂಧ ಪಿಎಸ್‌ಐ ಆಯ್ಕೆ ಪಟ್ಟಿಯಲ್ಲಿದ್ದ ಎಲ್ಲ ಅಭ್ಯರ್ಥಿಗಳನ್ನು ಸಿಐಡಿ ವಿಚಾರಣೆ ನಡೆಸಿತ್ತು. ಆ ವೇಳೆ 22 ಅಭ್ಯರ್ಥಿಗಳ ಕಾರ್ಬನ್‌ ಒಎಂಆರ್‌ ಶೀಟ್‌ಗಳನ್ನು ಜಪ್ತಿ ಮಾಡಿದ ಸಿಐಡಿ ಅಧಿಕಾರಿಗಳು, ಇವುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್‌)ಕ್ಕೆ ಪರೀಕ್ಷೆಗೆ ಕಳುಹಿಸಿದ್ದರು. ಆಗ ಈ ಶಂಕಿತ ಅಭ್ಯರ್ಥಿಗಳ ಒಎಂಆರ್‌ ಶೀಟ್‌ಗಳಲ್ಲಿ ತಿದ್ದಲಾಗಿದೆ ಎಂದು ಎಫ್‌ಎಸ್‌ಎಲ್‌ ವರದಿ ನೀಡಿತು. ಈ ವರದಿ ಆಧರಿಸಿ ಸಿಐಡಿ ಡಿವೈಎಸ್ಪಿ ನರಸಿಂಹಮೂರ್ತಿ ಅವರು, ನಗರದ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದರು. ಅಂತೆಯೇ ಸಿಐಡಿ ಹಾಗೂ ಹೈಗ್ರೌಂಡ್‌್ಸ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, 12 ಮಂದಿಯನ್ನು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳಿಗೆ ಪೊಲೀಸರು ಹುಡುಕಾಟ ನಡೆಸಿದ್ದು, ಭಾನುವಾರ ಸಂಜೆಯೊಳಗೆ ಆರೋಪಿಗಳ ಬಂಧನವಾಗಲಿದೆ ಎಂದು ಮೂಲಗಳು ಹೇಳಿವೆ.

ಬ್ಲೂಟೂತ್‌ ಬಳಕೆ ಬಗ್ಗೆ ಸಹ ಶಂಕೆ:

ಬೆಂಗಳೂರಿನ ಪರೀಕ್ಷಾ ಕೇಂದ್ರದಲ್ಲಿ ಬ್ಲೂಟೂತ್‌ ಬಳಸಿ ಅಕ್ರಮ ನಡೆಸಿರುವ ಬಗ್ಗೆ ಸಿಐಡಿ ಅಧಿಕಾರಿಗಳಿಗೆ ಬಲವಾದ ಗುಮಾನಿ ವ್ಯಕ್ತವಾಗಿದೆ. ಈ ಕಾರಣಕ್ಕೆ ‘ಶಂಕಿತ’ ಪರೀಕ್ಷಾ ಕೇಂದ್ರಗಳ ಸಿಸಿಟಿವಿ ಕ್ಯಾಮೆರಾಗಳನ್ನು ವಶಕ್ಕೆ ಪಡೆದು ಅಧಿಕಾರಿಗಳು ಪರಿಶೀಲನೆ ಕೂಡ ನಡೆಸಿದ್ದಾರೆ. ಅಲ್ಲದೆ ನೋಟಿಸ್‌ ಹಿನ್ನೆಲೆಯಲ್ಲಿ ಪ್ರಾಥಮಿಕ ವಿಚಾರಣೆಗೆ ಹಾಜರಾಗಿದ್ದ, ಅನುಮಾನಕ್ಕೀಡಾಗಿರುವ ಅಭ್ಯರ್ಥಿಗಳ ದಾಖಲೆಗಳನ್ನು ಕೂಲಂಕುಷವಾಗಿ ಪರೀಕ್ಷಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಲೋಕೋಪಯೋಗಿ ಇಲಾಖೆಯ(PWD) ಕಿರಿಯ ಎಂಜಿನಿಯರ್‌ ನೇಮಕಾತಿ ಪರೀಕ್ಷೆ ವೇಳೆ ಬೆಂಗಳೂರಿನಲ್ಲಿ ಬ್ಲೂಟೂತ್‌ ಬಳಸಿ ಪರೀಕ್ಷೆ ಬರೆಯಲು ಯತ್ನಿಸಿದ್ದಾಗ ಕಲಬುರಗಿ ಜಿಲ್ಲೆಯ ವೀರಣ್ಣಗೌಡ ಹಾಗೂ ಶಾಂತಕುಮಾರ್‌ ಸಿಕ್ಕಿಬಿದ್ದಿದ್ದರು. ಈ ಅಕ್ರಮದಲ್ಲಿ ಕಲುಬುರಗಿ ಜಿಲ್ಲೆಯ ಆಳಂದ ತಾಲೂಕಿನ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್‌ ಮಂಜುನಾಥ್‌ ಮೇಳಕುಂದಿ ಬಂಧನವಾಗಿತ್ತು. ಈಗ ಪಿಎಸ್‌ಐ ನೇಮಕಾತಿ ಹಗರಣದಲ್ಲೂ ಎಇ ಮಂಜುನಾಥ್‌ ಮೇಳಕುಂದಿ ಹೆಸರು ಕೇಳಿ ಬಂದಿದೆ. ಹೀಗಾಗಿ ಪಿಎಸ್‌ಐ ಪರೀಕ್ಷೆ ವೇಳೆ ಕಲಬುರಗಿ ಹೊರತುಪಡಿಸಿ ಬೇರೆಡೆ ಬ್ಲೂಟೂತ್‌ ಬಳಸಿ ಅಕ್ರಮ ನಡೆಸಿರುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

PSI ಮರು ಪರೀಕ್ಷೆ: ಸರ್ಕಾರ ತೀರ್ಮಾನಕ್ಕೆ ಪಾಸಾದ ಅಭ್ಯರ್ಥಿಗಳ ಕಣ್ಣೀರು..!

ಮೂರು ಕೇಂದ್ರಗಳ ಮೇಲೆ ಸಿಐಡಿ ಕಣ್ಣು:

ಬೆಂಗಳೂರಿನ 7 ಪರೀಕ್ಷಾ ಕೇಂದ್ರಗಳ ಪೈಕಿ ಮೂರು ಕೇಂದ್ರಗಳಲ್ಲಿ ಪರೀಕ್ಷಾ ಅಕ್ರಮ ನಡೆದಿರುವ ಬಗ್ಗೆ ಸಿಐಡಿ ಶಂಕಿಸಿದೆ. ಈ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳನ್ನು ಎರಡನೇ ಬಾರಿಗೆ ವಿಚಾರಣೆ ನಡೆಸಲು ಸಿಐಡಿ ಮುಂದಾಗಿದೆ ಎಂದು ತಿಳಿದು ಬಂದಿದೆ.

ಮೊಬೈಲನ್ನೇ ನಾಶಮಾಡಿದ ದಿವ್ಯಾ?:

ಕಲಬುರಗಿ: ಪಿಎಸ್‌ಐ ಪರೀಕ್ಷೆ ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿಯನ್ನು 18 ದಿನಗಳ ಕಾಲ ಹುಡುಕಾಡಿ ಕಡೆಗೂ ಬಂಧಿಸಿರುವ ಸಿಐಡಿ ತಂಡ ಇದೀಗ ಆಕೆ ಬಳಸುತ್ತಿದ್ದ ಮೊಬೈಲ್‌ ಹಿಂದೆ ಬಿದ್ದಿ​ದೆ. ತನಿ​ಖೆ​ಯಲ್ಲಿ ಮುಖ್ಯವೂ ಆಗಿ​ರುವ ಆ ಮೊಬೈಲ್‌ ಅನ್ನು ಆಕೆ ಪುಣೆ​ಯನ್ನೇ ನಾಶ ಮಾಡಿದ್ದಾಳೆ ಎನ್ನ​ಲಾ​ಗಿದೆ.

ತನಿಖೆ ವಿಸ್ತರಣೆ

1. ಇದುವರೆಗೆ ಕಲಬುರಗಿ ಕೇಂದ್ರವೊಂದನ್ನೇ ಗುರಿಯಾಗಿಸಿ ನಡೆದ ಸಿಐಡಿ ತನಿಖೆ
2. ರಾಜ್ಯದ ಇತರೆಡೆಯೂ ಅಕ್ರಮ ನಡೆದ ಬಗ್ಗೆ ಸಿಐಡಿ ಅಧಿಕಾರಿಗಳಿಗೆ ಸುಳಿವು ಲಭ್ಯ
3. ಬೆಂಗಳೂರಿನ 7 ಪರೀಕ್ಷಾ ಕೇಂದ್ರಗಳ ಪೈಕಿ 3 ಕೇಂದ್ರಗಳಲ್ಲಿ ಅಕ್ರಮದ ಅನುಮಾನ
4. ಒಎಂಆರ್‌ ಶೀಟ್‌ ಹಾಗೂ ಬ್ಲೂಟೂತ್‌ ಬಳಸಿ ಪರೀಕ್ಷಾ ಅಕ್ರಮ ನಡೆಸಿದ ಶಂಕೆ
5. ಅನುಮಾನಿತ 22 ಅಭ್ಯರ್ಥಿಗಳ ಪೈಕಿ ಮೊದಲ ಹಂತದಲ್ಲಿ 12 ಮಂದಿಯ ಬಂಧನ
 

click me!