ಕೊರೋನಾ ನಾಲ್ಕನೇ ಅಲೆಯ ಅಪಾಯದ ಬಗ್ಗೆ ಸರ್ಕಾರ ಸತತವಾಗಿ ಎಚ್ಚರಿಕೆ ನೀಡುತ್ತಿದ್ದರೂ, ರಾಜ್ಯದ 15 ಜಿಲ್ಲೆಗಳಲ್ಲಿ ವಯಸ್ಕ ಗುಂಪಿನಡಿ (18ರಿಂದ 59 ವರ್ಷ ವಯೋಮಾನದವರು) ಬರುವ ಒಬ್ಬರೇ ಒಬ್ಬರು ಕೂಡಾ ಬೂಸ್ಟರ್ ಡೋಸ್ ಪಡೆದಿಲ್ಲ.
ರಾಕೇಶ್ ಎನ್.ಎಸ್.
ಬೆಂಗಳೂರು (ಮೇ.01): ಕೊರೋನಾ ನಾಲ್ಕನೇ ಅಲೆಯ (Covid 4th Wave) ಅಪಾಯದ ಬಗ್ಗೆ ಸರ್ಕಾರ ಸತತವಾಗಿ ಎಚ್ಚರಿಕೆ ನೀಡುತ್ತಿದ್ದರೂ, ರಾಜ್ಯದ (Karnataka) 15 ಜಿಲ್ಲೆಗಳಲ್ಲಿ ವಯಸ್ಕ ಗುಂಪಿನಡಿ (18ರಿಂದ 59 ವರ್ಷ ವಯೋಮಾನದವರು) ಬರುವ ಒಬ್ಬರೇ ಒಬ್ಬರು ಕೂಡಾ ಬೂಸ್ಟರ್ ಡೋಸ್ (Booster Dose) ಪಡೆದಿಲ್ಲ. ಬಳ್ಳಾರಿ, ಬಾಗಲಕೋಟೆ, ಹಾಸನ, ರಾಯಚೂರು, ಮಂಡ್ಯ, ಬೀದರ್, ಚಿತ್ರದುರ್ಗ, ಕೋಲಾರ, ಹಾವೇರಿ, ಕೊಪ್ಪಳ, ಚಿಕ್ಕಬಳ್ಳಾಪುರ, ಗದಗ, ಯಾದಗಿರಿ, ರಾಮನಗರ, ಚಾಮರಾಜನಗರ ಜಿಲ್ಲೆಯಲ್ಲಿ ಏ.26ರವರೆಗೆ ಒಬ್ಬರೇ ಒಬ್ಬರು ಬೂಸ್ಟರ್ ಡೋಸ್ ಪಡೆದಿಲ್ಲ. ತುಮಕೂರು ಜಿಲ್ಲೆಯಲ್ಲಿ ಒಬ್ಬರು ಮಾತ್ರ ಲಸಿಕೆ (Vaccine) ಪಡೆದಿದ್ದಾರೆ.
undefined
ವಿಜಯಪುರ 10, ಕಲಬುರಗಿ 33, ಬೆಂಗಳೂರು ಗ್ರಾಮಾಂತರ 45, ಉತ್ತರ ಕನ್ನಡ 58, ಚಿಕ್ಕಬಳ್ಳಾಪುರ 77 ಮತ್ತು ದಾವಣಗೆರೆ ಜಿಲ್ಲೆಯಲ್ಲಿ 90 ಮಂದಿ ಮಾತ್ರ ಬೂಸ್ಟರ್ ಡೋಸ್ ಸ್ವೀಕರಿಸಿದ್ದಾರೆ. ಎರಡನೇ ಡೋಸ್ ಪಡೆದು ಒಂಬತ್ತು ತಿಂಗಳ ಬಳಿಕ ಮುನ್ನೆಚ್ಚರಿಕೆ ಡೋಸ್ ಪಡೆಯಲು ಅರ್ಹರಾಗಿರುವುದರಿಂದ ಸದ್ಯರಾಜ್ಯದಲ್ಲಿ 25 ಲಕ್ಷಕ್ಕೂ ಹೆಚ್ಚು ಮಂದಿ ವಯಸ್ಕರು ಅರ್ಹತೆ ಹೊಂದಿದ್ದಾರೆ. ಆದರೆ ಕೇವಲ 46,296 ಮಂದಿ ಮಾತ್ರ ಲಸಿಕೆ ಪಡೆದಿದ್ದಾರೆ. 18- 59ರ ವಯೋಮಾನ ಅತ್ಯಂತ ಚಲನಶೀಲ ವಯೋಮಾನ. ಇಲ್ಲಿ ಪದವಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಮತ್ತು ಸಮಾಜದ ದುಡಿಯುವ ವರ್ಗ ಬರುತ್ತದೆ.
Covid 4th Wave: ಬೂಸ್ಟರ್ ಡೋಸ್ ಅಂತರ ಶೀಘ್ರ 6 ತಿಂಗಳಿಗೆ ಇಳಿಕೆ ಸಾಧ್ಯತೆ
ಕೋವಿಡ್‌ಗೆ (Covid19) ಅತ್ಯಂತ ಸುಲಭವಾಗಿ ಸಿಲುಕುವುದೇ ಈ ವಯೋಮಾನದ ಗುಂಪು. ರಾಜ್ಯದಲ್ಲಿ ಈವರೆಗೆ 40,057 ಮಂದಿ ಕೋವಿಡ್‌ನಿಂದ ಪ್ರಾಣ ಕಳೆದುಕೊಂಡಿದ್ದು ಈ ಪೈಕಿ 17,705 ಮಂದಿ 18 ರಿಂದ 59 ವರ್ಷದವರು. ಅದೇ ರೀತಿ ಈವರೆಗೆ ಪತ್ತೆಯಾಗಿರುವ 39.47 ಲಕ್ಷ ಕೋವಿಡ್ ಪ್ರಕರಣಗಳಲ್ಲಿ ಈ ವಯೋಮಾನದ ಪಾಲು ಬರೋಬ್ಬರಿ 28.83 ಲಕ್ಷ. ಅಂದರೆ ಕೋವಿಡ್ ಸೋಂಕಿತರಲ್ಲಿ ಶೇ.73 ಭಾಗ ಈ ವಯಸ್ಸಿನವರು. ಇದೀಗ ನಾಲ್ಕನೇ ಅಲೆ ಸನ್ನಿಹಿತವಾಗಿದೆ ಎಂಬಂತಹ ಬೆಳವಣಿಗೆಗಳು ನಡೆಯುತ್ತಿದ್ದರೂ ಕೋವಿಡ್‌ಗೆ ಸುಲಭ ತುತ್ತಾಗುವ ಈ ವಯೋಮಾನದವರಲ್ಲಿ ಬೂಸ್ಟರ್ ಡೋಸ್ ಪಡೆಯುವ ಉತ್ಸಾಹ ಕಾಣುತ್ತಿಲ್ಲ.
ಉಚಿತದ ನಿರೀಕ್ಷೆ: ಸದ್ಯ ಈ ವಯೋಮಾನದವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಬೂಸ್ಟರ್ ಡೋಸ್ ನೀಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಮೂರನೇ ಡೋಸ್ ಪಡೆಯಲು ಒಟ್ಟು 386 ರು. ವೆಚ್ಚವಾಗುತ್ತದೆ. ಇಷ್ಟೊಂದು ಹಣ ನೀಡುವ ಬದಲು ಇನ್ನೇನು ನಾಲ್ಕನೇ ಅಲೆ ಆರಂಭಗೊಂಡರೆ ಸರ್ಕಾರವೇ ಉಚಿತವಾಗಿ ನೀಡಬಹುದು ಎಂದು ಲೆಕ್ಕ ಹಾಕಿಕೊಂಡು ಅನೇಕರು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.
Covid vaccine ಬೂಸ್ಟರ್ ಪಡೆದ 70% ಜನರಿಗೆ ಸೋಂಕಿಲ್ಲ!
ಇದೇ ವೇಳೆ ಖಾಸಗಿ ಆಸ್ಪತ್ರೆಗಳಲ್ಲಿಯೂ ಲಸಿಕೆಯ ಲಭ್ಯತೆಯಿಲ್ಲ. ಲಸಿಕಾ ಅಭಿಯಾನದಲ್ಲಿ ಎರಡು ಡೋಸ್ ನೀಡುವ ಸಂದರ್ಭದಲ್ಲಿಯೂ ಖಾಸಗಿ ಆಸ್ಪತ್ರೆಗಳತ್ತ ಜನ ಸುಳಿಯದೇ ದಾಸ್ತಾನು ನಿರ್ವಹಣೆ ಕಠಿಣವಾದ ಹಿನ್ನೆಲೆಯಲ್ಲಿ ಈ ಬಾರಿ ಲಸಿಕೆ ಸಂಗ್ರಹಕ್ಕೆ ಹಿಂದೇಟು ಹಾಕುತ್ತಿವೆ. ಸರ್ಕಾರ ಯಾವುದೇ ಕ್ಷಣದಲ್ಲಿ ಉಚಿತವಾಗಿ ಲಸಿಕೆ ನೀಡುತ್ತೇವೆ ಎಂದು ಘೋಷಿಸುವ ಸಾಧ್ಯತೆ ಇರುವುದರಿಂದ ಮತ್ತೆ ದಾಸ್ತಾನು ನಿರ್ವಹಣೆ ಕಷ್ಟವಾಗಬಹುದು ಎಂಬುದು ಖಾಸಗಿ ಆಸ್ಪತ್ರೆಗಳ ಅಭಿಪ್ರಾಯ.