
ನಾಗ್ಪುರ(ಫೆ.17): ರಣಜಿ ಚಾಂಪಿಯನ್ ವಿದರ್ಭ ಡಬಲ್ ಸಂಭ್ರಮ ಆಚರಿಸಿದೆ. ಶೇಷ ಭಾರತ (ರೆಸ್ಟ್ ಆಫ್ ಇಂಡಿಯಾ) ವಿರುದ್ಧ ಇರಾನಿ ಟ್ರೋಫಿ ಪಂದ್ಯವನ್ನು ಡ್ರಾ ಮಾಡಿಕೊಂಡು, ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರದ ಮೇಲೆ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಇದರೊಂದಿಗೆ ರಣಜಿ ಹಾಗೂ ಇರಾನಿ ಟ್ರೋಫಿ ಎರಡನ್ನೂ ಉಳಿಸಿಕೊಂಡು ಕೇವಲ 3ನೇ ತಂಡ ಎನ್ನುವ ದಾಖಲೆ ಬರೆದಿದೆ. ಮುಂಬೈ ಹಾಗೂ ಕರ್ನಾಟಕ ತಂಡಗಳ ಮಾತ್ರ ಈ ಸಾಧನೆ ಮಾಡಿದ್ದವು. 2017-18ರ ಸಾಲಿನ ರಣಜಿ ಹಾಗೂ ಇರಾನಿ ಟ್ರೋಫಿ ಎರಡರಲ್ಲೂ ವಿದರ್ಭ ಚಾಂಪಿಯನ್ ಆಗಿತ್ತು.
ಇದನ್ನೂ ಓದಿ: ವಿಶ್ವಕಪ್ 2019: ತಂಡದ ಯಶಸ್ಸಿಗೆ ಕಾರಣರಾಗೋ 5 ಆರಂಭಿಕರು!
280 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ್ದ ವಿದರ್ಭ, 5ನೇ ದಿನದಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 269 ರನ್ ಗಳಿಸಿತು. ಗೆಲುವಿಗೆ ಕೇವಲ 11 ರನ್ ಬೇಕಿದ್ದಾಗ ಉಭಯ ತಂಡಗಳು ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಒಪ್ಪಿದ ಕಾರಣ, ಆಟ ನಿಲ್ಲಿಸಲಾಯಿತು.
ಇರಾನಿ ಟ್ರೋಫಿ ಗೆಲುವು ವಿದರ್ಭ ದೇಸಿ ಚಾಂಪಿಯನ್ ಎನಿಸಿಕೊಳ್ಳಲು ಅರ್ಹ ಎನ್ನುವುದನ್ನು ಸಾಬೀತು ಪಡಿಸಿದೆ. ಶೇಷ ಭಾರತ ತಂಡದಲ್ಲಿ ಭಾರತ ತಂಡದ ಆಟಗಾರರಾದ ಅಜಿಂಕ್ಯ ರಹಾನೆ, ಹನುಮ ವಿಹಾರಿ, ಮಯಾಂಕ್ ಅಗರ್‌ವಾಲ್, ಶ್ರೇಯಸ್ ಅಯ್ಯರ್ ಇದ್ದರು. ಅದರಲ್ಲೂ ವಿದರ್ಭಕ್ಕೆ ವಾಸೀಂ ಜಾಫರ್ ಹಾಗೂ ಉಮೇಶ್ ಯಾದವ್ ಅನುಪಸ್ಥಿತಿ ಇತ್ತು. ಆದರೂ ತಂಡ ಪಂದ್ಯದುದ್ದಕ್ಕೂ ಪ್ರಾಬಲ್ಯ ಮೆರೆಯಿತು. ದುರ್ಬಲ ಬೌಲಿಂಗ್ ಪಡೆಯೇ ಶೇಷ ಭಾರತ ಹಿನ್ನಡೆ ಅನುಭವಿಸಲು ಕಾರಣವಾಯಿತು. ಆದರೂ ಶೇಷ ಭಾರತ ನಾಯಕ ರಹಾನೆ, 2ನೇ ಇನ್ನಿಂಗ್ಸನ್ನು ಡಿಕ್ಲೇರ್ ಮಾಡಿಕೊಂಡು ವಿದರ್ಭಕ್ಕೆ ಸ್ಪರ್ಧಾತ್ಮಕ ಗುರಿ ನೀಡಿದ್ದು ಮೆಚ್ಚುಗೆಗೆ ಪಾತ್ರವಾಯಿತು.
ಇದನ್ನೂ ಓದಿ: ವಿಶ್ವಕಪ್ 2019: 15 ಸದಸ್ಯರ ಸಂಭವನೀಯ ಟೀಂ ಇಂಡಿಯಾ ಇಲ್ಲಿದೆ!
ಗಣೇಶ್, ಅಥರ್ವ ಮಿಂಚು: 4ನೇ ದಿನದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 37 ರನ್ ಗಳಿಸಿದ್ದ ವಿದರ್ಭ, 5ನೇ ಹಾಗೂ ಅಂತಿಮ ದಿನವಾದ ಶನಿವಾರ ಆತ್ಮವಿಶ್ವಾಸದೊಂದಿಗೆ ಬ್ಯಾಟಿಂಗ್ ಮುಂದುವರಿಸಿತು. ಆರಂಭಿಕ ಆಟಗಾರ ಸಂಜಯ್ ರಾಮಸ್ವಾಮಿ(42) ಹಾಗೂ ಅಂಡರ್-19 ಆಟಗಾರ ಅಥರ್ವ ಟೈಡೆ ತಂಡದ ಮೊತ್ತವನ್ನು 100 ರನ್‌ಗಳ ಗಡಿ ದಾಟಿಸಿದರು. 2ನೇ ವಿಕೆಟ್‌ಗೆ ಇವರಿಬ್ಬರ ನಡುವೆ 116 ರನ್ ಜೊತೆಯಾಟ ಮೂಡಿಬಂತು.
ಇದನ್ನೂ ಓದಿ: ಮಕ್ಕಳೆಂದು ಪರಿಗಣಿಸಬೇಡಿ- ಸೆಹ್ವಾಗ್‌ಗೆ ವಿಡೀಯೋ ಮೂಲಕ ಹೇಡನ್ ತಿರುಗೇಟು!
ಸಂಜಯ್ ಔಟಾದ ಬಳಿಕ ಅಥರ್ವ ಕೂಡಿಕೊಂಡ ಕರ್ನಾಟಕದ ಗಣೇಶ್ ಸತೀಶ್ ಆತ್ಮವಿಶ್ವಾಸದೊಂದಿಗೆ ಇನ್ನಿಂಗ್ಸ್ ಕಟ್ಟಿದರು. 185 ಎಸೆತಗಳ ತಾಳ್ಮೆಯುತ ಇನ್ನಿಂಗ್ಸ್ ಆಡಿದ ಅಥರ್ವ 72 ರನ್ ಗಳಿಸಿ ಔಟಾದರು. ಗಣೇಶ್ ಜತೆ 4ನೇ ವಿಕೆಟ್‌ಗೆ ಕ್ರೀಸ್ ಹಂಚಿಕೊಂಡ ಮತ್ತೊಬ್ಬ ಯುವ ಬ್ಯಾಟ್ಸ್‌ಮನ್ ಮೋಹಿತ್ ಕಾಳೆ (37), ಶೇಷ ಭಾರತ ಪುಟಿದೇಳಲು ಅವಕಾಶ ನೀಡಲಿಲ್ಲ.
ಇವರಿಬ್ಬರು ಸುಮಾರು 30 ಓವರ್ ಬ್ಯಾಟ್ ಮಾಡಿ 83 ರನ್ ಸೇರಿಸಿದರು. ಶೇಷ ಭಾರತ, ಹಾಲಿ ಚಾಂಪಿಯನ್ನರನ್ನು ಆಲೌಟ್ ಮಾಡುವ ಆಸೆ ಕೈಬಿಟ್ಟಿತು. ಮೊದಲ ಇನ್ನಿಂಗ್ಸ್‌ನಲ್ಲಿ 48 ರನ್ ಗಳಿಸಿದ್ದ ಗಣೇಶ್, ಆಕರ್ಷಕ 87 ರನ್ ಗಳಿಸಿದರು. ಬೌಲಿಂಗ್‌ಗಿಳಿದು ಎಸೆದ ಮೊದಲ ಎಸೆತದಲ್ಲೇ ಹನುಮ ವಿಹಾರಿ, ಗಣೇಶ್ ವಿಕೆಟ್ ಪಡೆದರು. ಅವರ ವಿಕೆಟ್ ಪತನಗೊಳ್ಳುತ್ತಿದ್ದಂತೆ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು. ಗಣೇಶ್ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ, 1 ಸಿಕ್ಸರ್ ಇತ್ತು. ವಿಕೆಟ್ ಕೀಪರ್ ಅಕ್ಷಯ್ ವಾಡ್ಕರ್ 10 ರನ್ ಗಳಿಸಿ ಅಜೇಯರಾಗಿ ಉಳಿದರು. ಶೇಷ ಭಾರತ ಪರ ಲೆಗ್ ಸ್ಪಿನ್ನರ್ ರಾಹುಲ್ ಚಾಹರ್ 2 ವಿಕೆಟ್ ಕಿತ್ತರು. ರಾಜ್ಯದ ಕೆ.ಗೌತಮ್ ಮೈದಾನಕ್ಕೇ ಇಳಿಯಲಿಲ್ಲ.
ಇದನ್ನೂ ಓದಿ: ದಾಳಿಯಲ್ಲಿ ಹುತಾತ್ಮರಾದ ಎಲ್ಲಾ ಯೋಧರ ಮಕ್ಕಳಿಗೆ ಸೆಹ್ವಾಗ್ ಉಚಿತ ಶಿಕ್ಷಣ!
ಯೋಧರ ಕುಟುಂಬಗಳಿಗೆ ಬಹುಮಾನ ಮೊತ್ತ
ಇರಾನಿ ಟ್ರೋಫಿ ಗೆದ್ದ ವಿದರ್ಭ ತಂಡ ಬಿಸಿಸಿಐನಿಂದ ಪಡೆದ ಬಹುಮಾನ ಮೊತ್ತವನ್ನು ಪುಲ್ವಾಮದಲ್ಲಿ ಆಹ್ಮಾಹುತಿ ಬಾಂಬ್ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್ ಯೋಧರ ಕುಟುಂಬಗಳಿಗೆ ನೀಡಿದೆ. ವಿದರ್ಭ ನಾಯಕ ಫೈಯಾಜ್ ಫಜಲ್ ಗೆಲುವಿನ ಬಳಿಕ ಈ ವಿಷಯವನ್ನು ಘೋಷಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.