ನಿಮ್ಮ ಸಿನಿಮಾ ನಾವು ಯಾಕಾಗಿ ನೋಡಬೇಕು?: ಹತಾಶ ಪ್ರೇಕ್ಷಕನಿಂದ 10 ಪ್ರಶ್ನೆಗಳು

Published : Apr 11, 2025, 12:21 PM ISTUpdated : Apr 11, 2025, 12:42 PM IST
ನಿಮ್ಮ ಸಿನಿಮಾ ನಾವು ಯಾಕಾಗಿ ನೋಡಬೇಕು?: ಹತಾಶ ಪ್ರೇಕ್ಷಕನಿಂದ 10 ಪ್ರಶ್ನೆಗಳು

ಸಾರಾಂಶ

ನಿಮ್ಮ ತಂಡದ ಸಿನಿಮಾಗಳನ್ನು ಬಿಟ್ಟು ಕನ್ನಡ ಭಾಷೆಯ ಬೇರೆ ಸಿನಿಮಾಗಳನ್ನು ನೋಡುತ್ತಿದ್ದೀರಾ? ಆ ಸಿನಿಮಾಗಳು ಹೇಗಿರುತ್ತವೆ ಎಂಬ ಅಂದಾಜಾದರೂ ನಿಮಗಿದೆಯೇ? ಆರು ತಿಂಗಳು ಪ್ರತೀ ವಾರ ರಿಲೀಸಾಗುವ ಸಿನಿಮಾಗಳನ್ನು ಮೊದಲ ದಿನ, ಮೊದಲ ಶೋ ನೋಡಿ.

ರಾಜೇಶ್‌ ಶೆಟ್ಟಿ

ಪ್ರತೀ ಸಲ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ, ಚಿತ್ರಮಂದಿರಕ್ಕೆ ದಯವಿಟ್ಟು ಬನ್ನಿ ಅಂತ ಕರೀತೀರಿ. ಆದರೆ ನೀವು ಎಂಥಾ ಸಿನಿಮಾಗಳನ್ನು ಮಾಡ್ತಿದೀರಿ ಅಂತ ನಿಮಗೆ ಅಂದಾಜಿದೆಯೇ? ನಿಮ್ಮ ತಂಡದ ಸಿನಿಮಾಗಳನ್ನು ಬಿಟ್ಟು ಕನ್ನಡ ಭಾಷೆಯ ಬೇರೆ ಸಿನಿಮಾಗಳನ್ನು ನೋಡುತ್ತಿದ್ದೀರಾ? ಆ ಸಿನಿಮಾಗಳು ಹೇಗಿರುತ್ತವೆ ಎಂಬ ಅಂದಾಜಾದರೂ ನಿಮಗಿದೆಯೇ? ಆರು ತಿಂಗಳು ಪ್ರತೀ ವಾರ ರಿಲೀಸಾಗುವ ಸಿನಿಮಾಗಳನ್ನು ಮೊದಲ ದಿನ, ಮೊದಲ ಶೋ ನೋಡಿ. ಆಮೇಲೆ ನಿಮ್ಮ ಸಿನಿಮಾ ನಾವು ಯಾಕಾಗಿ ನೋಡಬೇಕು ಹೇಳಿ.

1. ಈ ವರ್ಷ ರಿಲೀಸಾದ ಸಿನಿಮಾಗಳ ಸಂಖ್ಯೆ ಬಹುತೇಕ 100 ತಲುಪುತ್ತಿವೆ. ಅವುಗಳಲ್ಲಿ ಗೆದ್ದಿದೆ ಅಂತ ಎದೆತಟ್ಟಿ ಹೇಳುವುದಕ್ಕೆ ಒಂದು ಸಿನಿಮಾ ಇಲ್ಲ. ಯಾಕೆ ಅಂತ ನಿಮಗೆ ಸಣ್ಣ ಕುತೂಹಲವೂ ಇಲ್ಲವೇ? ಆತ್ಮವಿಮರ್ಶೆ ಮಾಡಬೇಕು ಎಂಬ ಕಿಂಚಿತ್‌ ಭಾವವೂ ಇಲ್ಲವೇ? ನಿಮ್ಮ ಸಮಸ್ಯೆಗೆ ಉತ್ತರ ಹುಡುಕಲು ನಿಮಗೆ ಆಸಕ್ತಿ ಇಲ್ಲದಿದ್ದ ಮೇಲೆ ಪ್ರೇಕ್ಷಕರ ಮೇಲೆ ಯಾಕೆ ಗೂಬೆ ಕೂರಿಸುತ್ತೀರಿ?

ನಂಗೆ ಲವ್‌ ಮಾಡೋಕೆ ತುಂಬಾ ಇಷ್ಟ, ಆದರೆ ಯಾರೂ ಅವಕಾಶ ಕೊಡ್ತಿಲ್ಲ: ದರ್ಶನ್

2. ಒಳ್ಳೆಯ ಸ್ಕ್ರಿಪ್ಟ್ ಬೇಕು ಎಂದು ಎಲ್ಲರೂ ಹೇಳುತ್ತಾರೆ. ಒಳ್ಳೆಯ ಸ್ಕ್ರಿಪ್ಟ್ ಮಾಡುವುದು ಬಿಡಿ, ಈಗ ನೀವು ಪಾರ್ಟ್ 2 ಹುಚ್ಚಿಗೆ ಬಿದ್ದು ಸಿನಿಮಾ ಕತೆಗಳನ್ನು ಅರ್ಧರ್ಧಕ್ಕೆ ನಿಲ್ಲಿಸುತ್ತಿದ್ದೀರಿ. ಸಿನಿಮಾ ನೋಡುವ ನಮ್ಮ ಉತ್ಸಾಹವನ್ನೇ ಭಂಗ ಮಾಡುತ್ತಿದ್ದೀರಿ. ಕತೆಯೇ ನೆಟ್ಟಗಿಲ್ಲದಿದ್ದ ಮೇಲೆ ನಮ್ಮ ಎರಡೂವರೆ ಗಂಟೆಯನ್ನು ನಾವು ಯಾಕಾದರೂ ಕೊಡಬೇಕು?

3. ಪ್ರಮೋಷನ್ ಹೆಸರಿನಲ್ಲಿ ನಾನಾ ಥರದ ಗಿಮಿಕ್‌ಗಳನ್ನು ಮಾಡುವುದನ್ನು ಕಲಿತಿದ್ದೀರಿ. ಏನೇನೋ ಸುದ್ದಿ ಹುಟ್ಟಿಸುತ್ತೀರಿ. ಆದರೆ ಸ್ಕ್ರಿಪ್ಟ್‌ ಚೆನ್ನಾಗಿರಬೇಕು ಎಂಬ ಕನಿಷ್ಠ ಆಸೆಯನ್ನೇ ಇಟ್ಟುಕೊಳ್ಳುವುದಿಲ್ಲ. ಕತೆಗಿಂತ ಜಾಸ್ತಿ ಪ್ರಚಾರಕ್ಕೆ ಮಹತ್ವ ಕೊಡುತ್ತೀರಿ. ಬುಡವೇ ಸರಿ ಇಲ್ಲದಿದ್ದ ಮೇಲೆ ಕಟ್ಟಡ ಹೇಗೆ ಕಟ್ಟುತ್ತೀರಿ. ಮಾಡೋ ಕೆಲಸ ಸರಿಯಾಗಿ ಮಾಡದೆ ಪ್ರೇಕ್ಷಕನ ಮೇಲೆ ಯಾಕೆ ಬೇಜಾರಾಗುತ್ತೀರಿ?

4. ನಿಮ್ಮ ಸುತ್ತ ನೀವೇ ಒಂದು ವರ್ತುಲ ಕಟ್ಟಿಕೊಳ್ಳುತ್ತೀರಿ. ಆ ವರ್ತುಲದ ಒಳಗಿರುವವರು ಹೇಳಿದ್ದೇ ಸರಿ. ಅದರಾಚೆಗೆ ಯಾರನ್ನೂ ಬಿಟ್ಟುಕೊಳ್ಳುವುದಿಲ್ಲ. ಸಾಂಸ್ಕೃತಿಕ ಪ್ರಪಂಚದ ಒಡನಾಟವಿಲ್ಲ. ಆಪ್ತತೆ ಇಲ್ಲ. ಬೇರೆ ಭಾಷೆಯಲ್ಲಿ ಏನೇನು ಸಿನಿಮಾಗಳು ಬರುತ್ತವೆ ಎಂಬ ಅಂದಾಜು ಇದೆಯೋ ಇಲ್ಲವೋ. ಅದ್ಯಾವುದಕ್ಕೂ ಗಮನ ಕೊಡದೆ ಮನಸ್ಸಿಗೆ ಬಂದ ಸಿನಿಮಾ ಮಾಡಿ, ನಮ್ಮ ಸಿನಿಮಾನೇ ಗ್ರೇಟ್‌ ಅಂತ ನಿಮಗೆ ನೀವೇ ಸುಳ್ಳು ಹೇಳಿಕೊಂಡು ನಮ್ಮ ಮುಂದೆ ಬರುತ್ತೀರಿ. ಮೌನವಾಗಿ ಕುಳಿತು ನಿಮ್ಮನ್ನು ನೀವೇ ಕೇಳಿಕೊಳ್ಳಿ, ನೀವು ಸರಿ ದಾರಿಯಲ್ಲಿದ್ದೀರೇ?

5. ಓಟಿಟಿಗೆ ಬೈಯುತ್ತೀರಿ. ಸ್ಯಾಟಲೈಟ್‌ನವರು ಸಿನಿಮಾ ಖರೀದಿ ಮಾಡಲ್ಲ ಅಂತೀರಿ. ಓಟಿಟಿಯಲ್ಲಿ ನೀವು ಇತ್ತೀಚೆಗೆ ಒಳ್ಳೆಯ ಕನ್ನಡ ಸಿನಿಮಾ ಎಷ್ಟು ನೋಡಿದ್ದೀರಿ ಎಂದು ನೆನಪಿಸಿಕೊಳ್ಳಿ. ಕೇವಲ ಬೆರಳೆಣಿಕೆಯಷ್ಟು. ಅದಕ್ಕಿಂತ ಜಾಸ್ತಿ ಬೇರೆ ಭಾಷೆಯ ಸಿನಿಮಾ ನೋಡಿದ್ದಾರೆ ಜನ. ಯಾಕೆ ಎಂದರೆ ಕಂಟೆಂಟ್. ಕಂಟೆಂಟ್‌ ಸರಿ ಇಲ್ಲದಿದ್ದ ಮೇಲೆ ಅವರು ಯಾಕಾದರೂ ನಿಮ್ಮ ಸಿನಿಮಾ ಖರೀದಿ ಮಾಡುತ್ತಾರೆ?

6. ಜಗತ್ತೇ ಈಗ ನಮ್ಮ ಮೊಬೈಲಲ್ಲಿದೆ. ನಮಗೆ ಇಡೀ ಜಗತ್ತನ್ನು ಮರೆಯುವ ಕಂಟೆಂಟ್ ಅನ್ನು ಕೊಟ್ಟರೆ ಮಾತ್ರ ನಾವು ಸಿನಿಮಾ ನೋಡುತ್ತೇವೆ. ಇಲ್ಲದಿದ್ದರೆ ನಮಗೆ ರೀಲ್ಸ್ ಇದೆ. ಓಟಿಟಿ ಇದೆ. ನೀವು ನಮ್ಮನ್ನು ಮೊಬೈಲ್‌ ಎತ್ತದಂತೆ ಮಾಡುವ ಒಳ್ಳೆಯ, ವಿಭಿನ್ನ ಕಾನ್ಸೆಪ್ಟನ್ನು ತಂದು ಎಷ್ಟು ಕಾಲವಾಯಿತು ಹೇಳಿ? ಸೋಲುವುದಾದರೆ ಪರವಾಗಿಲ್ಲ, ಘನತೆಯಿಂದ ಸೋಲಬೇಕು. ಸೋಲಿಗೂ ಇಲ್ಲಿ ಒಂದು ಘನತೆ ಇಲ್ಲವಾಗಿದೆ.

7. ಪ್ರತೀ ವಾರ ಮೂರೋ ನಾಲ್ಕೋ ನಿರ್ಮಾಪಕರು, ಲಕ್ಷವನ್ನೋ ಕೋಟಿಯನ್ನೋ ಕಳೆದುಕೊಳ್ಳುವಾಗ ನಮಗೆ ಬೇಜಾರಾಗುತ್ತದೆ. ಆದರೆ ತಪ್ಪು ಯಾರದು? ನಿರ್ಮಾಪಕರೇ, ನಿಮ್ಮ ದುಡ್ಡನ್ನು ಯಾವುದಕ್ಕೆ ಹಾಕಬೇಕು, ಯಾರಿಗಾಗಿ ಹಾಕಬೇಕು ಎಂಬ ಜವಾಬ್ದಾರಿ ನಿಮ್ಮದೇ ಅಲ್ಲವೇ? ನೀವು ಸಿನಿಮಾಗೆ ಬರುವುದೇ ಆದರೆ ಮೂರು ತಿಂಗಳು ಪ್ರತೀ ದಿನ ಒಂದೊಂದು ಸಿನಿಮಾ ನೋಡಿ. ಆಮೇಲೆ ಯೋಚಿಸಿ ಬನ್ನಿ. ಇಲ್ಲದಿದ್ದರೆ ನಮ್ಮ ಮುಂದೆ ಬಂದು ಸಿನಿಮಾ ಉಳಿಸಿಕೊಡಿ ಎಂದು ಕೇಳುವ ಅರ್ಹತೆ ಇರುತ್ತದೆಯೇ?

8. ಥಿಯೇಟರ್‌ಗಳು ಒಂದೊಂದಾಗಿ ಸಾಯುತ್ತಿವೆ. ಚಿತ್ರಮಂದಿರಗಳು ಸಿನಿಮಾ ದೇಗುಲಗಳು. ಆದರೆ ನೀವು ಸಿಂಗಲ್‌ ಸ್ಕ್ರೀನ್‌ಗಳನ್ನೆಲ್ಲಾ ಸಾಯಲು ಬಿಟ್ಟಿರಿ. ಮಲ್ಟಿಪ್ಲೆಕ್ಸ್‌ಗಳು ಬಂದು ದರಗಳು ಆಕಾಶಕ್ಕೇರಿದರೂ ನೀವು ಆ ಬಗ್ಗೆ ಯೋಚಿಸಲಿಲ್ಲ. ನೀವು ಚಿತ್ರಮಂದಿರಗಳ ಕೈ ಹಿಡಿಯಲಿಲ್ಲ, ನಮ್ಮ ಕೈಹಿಡಿಯಲಿಲ್ಲ. ಆದರೆ ನಿಮ್ಮ ಸಿನಿಮಾ ಬಂದಾಗ ಮಾತ್ರ ಪ್ರೇಕ್ಷಕರು ಕೈ ಹಿಡಿಯಬೇಕು. ಇದು ನ್ಯಾಯವೇ?

ಚಿರು, ವೆಂಕಿ, ನಾಗ್ ಬೇಡ.. ಬಾಲಯ್ಯ ಜೊತೆ ಮಾತ್ರ ರೊಮ್ಯಾನ್ಸ್ ಮಾಡಲು ಒಪ್ಪಿಕೊಂಡ ಮಾಧುರಿ ದೀಕ್ಷಿತ್!

9. ಸ್ಟಾರ್‌ಗಳೇ, ದೊಡ್ಡ ಕಲಾವಿದರೇ ಸಣ್ಣ ಸಿನಿಮಾಗಳನ್ನೂ ನೀವು ಮಾಡಬಹುದಲ್ಲವೇ. ಹೋಲಿಕೆ ಅಂದ್ಕೋಬೇಡಿ. ಮೋಹನ್‌ಲಾಲ್‌ ‘ಎಂಪುರಾನ್‌’ ಮಾಡುವುದರ ಜೊತೆಗೆ ‘ತೂದರಮ್’ ಸಿನಿಮಾ ಮಾಡಿದ್ದಾರೆ. ಒಂದು ತಿಂಗಳ ಅಂತರದಲ್ಲಿ ಎರಡು ಸಿನಿಮಾ ಬರ್ತಿದೆ. ನೀವೂ ಪ್ರೇಕ್ಷಕರ, ಚಿತ್ರರಂಗದ ಕಡೆಗೆ ಗಮನ ಕೊಡಿ. ಇಲ್ಲದಿದ್ದರೆ ನಿಮ್ಮ ಸಿನಿಮಾ ಬರುವಾಗ ಏನಾಗಿರುತ್ತದೋ ಏನೋ?

10. ಇನ್ನು ನಿರ್ದೇಶಕರು ಸಿನಿಮಾದ ಜೀವಾಳ. ನಿಮ್ಮ ಎದೆಯನ್ನು ಮೀಟದ, ನಿಮ್ಮಲ್ಲಿ ಕಣ್ಣೀರು ಹುಟ್ಟಿಸದ, ನಿಮ್ಮಲ್ಲಿ ನಗುವನ್ನು ಮೂಡಿಸದ ಸಿನಿಮಾವನ್ನು ಖಂಡಿತಾ ಮಾಡಬೇಡಿ. ಅರ್ಥ ಆಗುತ್ತದೆಯಲ್ಲವೇ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆಂಧ್ರಪ್ರದೇಶದ X MLA Gummadi Narsaiah ಮನೆಗೆ ಹೋದಾಗ ನನ್ನ ತಂದೆ ಬಳಿಗೆ ಹೋದಂತಾಯ್ತು: Shiva Rajkumar
ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್