ಕನ್ನಡ ಚಿತ್ರರಂಗದಲ್ಲಿ ಹಂಸಲೇಖ ಹಾಗೂ ರವಿಚಂದ್ರನ್ ಅವರ ಕಾಂಬಿನೇಷನ್ ಹಲವು ಮ್ಯಾಜಿಕ್ಗಳನ್ನು ಸೃಷ್ಟಿಸಿದೆ. ಆದರೆ, ರವಿಚಂದ್ರನ್ ಅವರ ಸಿನಿಮಾಗಳಿಗಾಗಿ ಸಿದ್ಧಪಡಿಸಿದ್ದ ಎರಡು ವಿಶೇಷ ಹಾಡು ಮತ್ತು ಟ್ಯೂನ್ಗಳು ಆ ಚಿತ್ರಗಳಲ್ಲಿ ಬಳಕೆಯಾಗದೆ ಉಳಿದು, ಬಳಿಕ 'ಸಾಮ್ರಾಟ್' ಹಾಗೂ 'ದಿಗ್ಗಜರು' ಸಿನಿಮಾಗಳಲ್ಲಿ ಸೂಪರ್ ಹಿಟ್ ಹಾಡುಗಳಾಗಿ ಹೊರಹೊಮ್ಮಿದ ಕುತೂಹಲಕಾರಿ ಸಂಗತಿ ಇಲ್ಲಿದೆ.
ರವಿಚಂದ್ರನ್ ನಿರ್ದೇಶನ ಮಾಡಿದ 'ಚಿನ್ನ' ಸಿನಿಮಾಗಾಗಿ ಹಂಸಲೇಖ ಅವರು ಕನ್ನಡದ ಮೇಲಿನ ಒಂದು ಸುಂದರ ಹಾಡನ್ನು ಸಿದ್ಧಪಡಿಸಿದ್ದರು. ಎಸ್.ಪಿ. ಬಾಲಸುಬ್ರಹ್ಮಣ್ಯಂ ಹಾಗೂ ಮಾಲ್ಗುಡಿ ಶುಭ ಅವರು ಈ ಹಾಡನ್ನು ಸೊಗಸಾಗಿ ಹಾಡಿದ್ದರು. ರವಿಚಂದ್ರನ್ ಅವರಿಗೂ ಈ ಹಾಡು ಕೇಳಿ ತುಂಬಾ ಖುಷಿಯಾಗಿತ್ತು. ಆದರೆ, ಚಿತ್ರದಲ್ಲಿ ಆ ಹಾಡಿಗೆ ತಕ್ಕ ಸನ್ನಿವೇಶ (ಸಿಚುವೇಷನ್) ಇಲ್ಲದ ಕಾರಣ ಅದನ್ನು ಬಳಸಿಕೊಳ್ಳದೆ ಹಾಗೆಯೇ ಉಳಿಸಿಕೊಂಡಿದ್ದರು. ಆನಂತರ 'ಚಿನ್ನ' ಚಿತ್ರದಲ್ಲಿ ಹ್ಯೂಮನ್ ಬಾಂಬ್ ಬಂದು ರವಿಚಂದ್ರನ್ ಅವರನ್ನು ಕೊಲ್ಲುವಂತಹ ಸನ್ನಿವೇಶ ಸೃಷ್ಟಿಸಿ, ಅಲ್ಲಿ ಸಿಲ್ಕ್ ಸ್ಮಿತಾ ಅವರ ವಿಶೇಷ ಹಾಡನ್ನು ಚಿತ್ರೀಕರಿಸಲಾಗಿತ್ತು.
ಮುಂದೆ ಸ್ಟುಡಿಯೋ ಸಂಕೇತ್ನಲ್ಲಿ ನಿರ್ದೇಶಕ ನಾಗಣ್ಣ ಅವರು 'ಸಾಮ್ರಾಟ್' ಸಿನಿಮಾದ ಹಾಡುಗಳ ಕಂಪೋಸಿಂಗ್ ನಡೆಸುತ್ತಿದ್ದಾಗ, ಹಂಸಲೇಖ ಅವರು 'ಚಿನ್ನ' ಚಿತ್ರಕ್ಕಾಗಿ ಮಾಡಿ ಉಳಿಸಿಕೊಂಡಿದ್ದ ಈ ಹಾಡನ್ನು ಕೇಳಿಸಿದರು. ಹಾಡು ಕೇಳಿ ಮೆಚ್ಚಿಕೊಂಡ ನಾಗಣ್ಣ, "ಇದು ತುಂಬಾ ಚೆನ್ನಾಗಿದೆ, ವಿಷ್ಣು ಸರ್ಗೆ ತುಂಬಾ ಸೂಟ್ ಆಗುತ್ತೆ. ನಾನೇ ಸನ್ನಿವೇಶ ಸೃಷ್ಟಿಸಿ ಈ ಹಾಡನ್ನು ಬಳಸಿಕೊಳ್ಳುತ್ತೇನೆ" ಎಂದು ಕೇಳಿದರು. ಅದಕ್ಕೆ ಹಂಸಲೇಖ, "ರವಿಚಂದ್ರನ್ ಅವರ ಸುಪರ್ದಿಯಲ್ಲಿ ಈ ಹಾಡಿದೆ, ಅವರು ಒಪ್ಪಿದರೆ ನನ್ನದೇನೂ ಅಭ್ಯಂತರವಿಲ್ಲ" ಎಂದರು. ವಿಷ್ಣುವರ್ಧನ್ ಅವರಿಗಾಗಿ ಎಂಬ ಕಾರಣಕ್ಕೆ ರವಿಚಂದ್ರನ್ ತಕ್ಷಣವೇ ಒಪ್ಪಿಗೆ ನೀಡಿದರು. ಹೀಗೆ 'ಚಿನ್ನ' ಚಿತ್ರದಲ್ಲೇ ಉಳಿದಿದ್ದ ಹಾಡು 'ಸಾಮ್ರಾಟ್' ಸಿನಿಮಾದಲ್ಲಿ "ಹುಬ್ಬಳ್ಳಿಯಾದರೇನು ಭದ್ರಾವತಿಯಾದರೇನು..." ಎಂಬ ಸೂಪರ್ ಹಿಟ್ ಗೀತೆಯಾಯಿತು.
'ಚಿನ್ನ' ಚಿತ್ರದಲ್ಲಿ ಸಿಚುವೇಷನ್ ಇಲ್ಲದೆ ಉಳಿದು, ಬಳಿಕ 'ಸಾಮ್ರಾಟ್' ಸಿನಿಮಾ ಸೇರಿದ "ಹುಬ್ಬಳ್ಳಿಯಾದರೇನು ಭದ್ರಾವತಿಯಾದರೇನು..." ಹಾಡು ಕೇವಲ ಸಿನಿಮಾ ಹಾಡಾಗಿ ಉಳಿಯಲಿಲ್ಲ. ಹಂಸಲೇಖ ಅವರ ಸಾಹಿತ್ಯ, ಎಸ್.ಪಿ.ಬಿ ಮತ್ತು ಮಾಲ್ಗುಡಿ ಶುಭ ಅವರ ಗಾಯನದ ಈ ಹಾಡು ಇಂದಿಗೂ ಕರ್ನಾಟಕದಾದ್ಯಂತ ಕನ್ನಡ ರಾಜ್ಯೋತ್ಸವ ಹಾಗೂ ಸಾಂಸ್ಕೃತಿಕ ವೇದಿಕೆಗಳಲ್ಲಿ ಮೊಳಗುವ ಎವರ್ಗ್ರೀನ್ ಗೀತೆಯಾಗಿದೆ.
ಇದೇ ರೀತಿ, 'ಯಾರೇ ನೀನು ಚೆಲುವೆ' ಸಿನಿಮಾಗೆ ಮೊದಲು ಬಾಲಾಜಿ ಅವರು ಆಯ್ಕೆಯಾಗಿದ್ದರು. ಆ ವೇಳೆ ಬಿ. ಬಾಬು, ಬಾಲಾಜಿ ಹಾಗೂ ಹಂಸಲೇಖ ಹೋಟೆಲ್ನಲ್ಲಿ ಕುಳಿತು, ಚಿತ್ರದ 'ಬುಲ್ಬುಲ್ ಕಿ ಗಿಲಿಗಿಲಿ' ಹಾಡಿನ ಸನ್ನಿವೇಶಕ್ಕಾಗಿ ಒಂದು ಸುಂದರ ಟ್ಯೂನ್ ಸಿದ್ಧಪಡಿಸಿದ್ದರು. ಆದರೆ, ನಂತರ ಬಾಲಾಜಿ ಅವರ ಸ್ಥಾನಕ್ಕೆ ರವಿಚಂದ್ರನ್ ಬಂದಿದ್ದರಿಂದ ಚಿತ್ರದ ಹಾಡುಗಳೆಲ್ಲಾ ಬದಲಾದವು ಮತ್ತು ಆ ಟ್ಯೂನ್ ಹಾಗೆಯೇ ಉಳಿಯಿತು. ಮುಂದೆ ಅದೇ ಟ್ಯೂನ್ಗೆ ಸಾಹಿತ್ಯ ಬರೆದು 'ದಿಗ್ಗಜರು' ಸಿನಿಮಾದಲ್ಲಿ ಬಳಸಿಕೊಳ್ಳಲಾಯಿತು. ಅದುವೇ "ಕೋಮಲೆ ಕೋಮಲೆ ನೀ ಹೂವಿನಂತೆ ಕೋಮಲೆ..." ಎಂಬ ಜನಪ್ರಿಯ ಹಾಡಾಯಿತು. 'ದಿಗ್ಗಜರು' ಚಿತ್ರವು ತಮಿಳಿನ 'ನಟ್ಪುಕ್ಕಾಗ' ಸಿನಿಮಾದ ರೀಮೇಕ್ ಆಗಿತ್ತು. ಇದರಲ್ಲಿ ಡಾ. ವಿಷ್ಣುವರ್ಧನ್ ದ್ವಿಪಾತ್ರದಲ್ಲಿ ಹಾಗೂ ಅಂಬರೀಷ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.