ಈ ವರ್ಷ ಭಾರತದಿಂದ ಆಸ್ಕರ್‌ಗೆ ನಾಮನಿರ್ದೇಶನ ಮಾಡಲು ಆಯ್ಕೆ ಸಮಿತಿಯ ಮುಂದೆ ಇದ್ದ 29 ಸಿನಿಮಾಗಳ ಪಟ್ಟಿಯಲ್ಲಿ ಒಂದೂ ಕನ್ನಡ ಸಿನಿಮಾ ಇರಲಿಲ್ಲ. ಯಾಕೆ?ಈ ಬಗ್ಗೆ ಈ ಸಲದ ಆಯ್ಕೆ ಸಮಿತಿಯಲ್ಲಿದ್ದ ಕರ್ನಾಟಕದ ನಿರ್ಮಾಪಕ ಅವಿನಾಶ್ ಶೆಟ್ಟಿ ಅವರನ್ನು ಕೇಳಿದಾಗ ಅವರು ಹೇಳಿದ್ದಿಷ್ಟು..,
ಪ್ರಿಯಾ ಕೆರ್ವಾಶೆ
ಈ ವರ್ಷ ಭಾರತದಿಂದ ಆಸ್ಕರ್‌ಗೆ ನಾಮನಿರ್ದೇಶನ ಮಾಡಲು ಆಯ್ಕೆ ಸಮಿತಿಯ ಮುಂದೆ ಇದ್ದ 29 ಸಿನಿಮಾಗಳ ಪಟ್ಟಿಯಲ್ಲಿ ಒಂದೂ ಕನ್ನಡ ಸಿನಿಮಾ ಇರಲಿಲ್ಲ. ಯಾಕೆ?ಈ ಬಗ್ಗೆ ಈ ಸಲದ ಆಯ್ಕೆ ಸಮಿತಿಯಲ್ಲಿದ್ದ ಕರ್ನಾಟಕದ ನಿರ್ಮಾಪಕ ಅವಿನಾಶ್ ಶೆಟ್ಟಿ ಅವರನ್ನು ಕೇಳಿದಾಗ ಅವರು, ‘ಇದು ಚಿತ್ರಗಳ ಆಯ್ಕೆಗೆ ಕುಳಿತ ನಮಗೂ ಅಚ್ಚರಿಯೇ. ಏಕೆಂದರೆ ಕನ್ನಡದ ಒಬ್ಬನೇ ಒಬ್ಬ ನಿರ್ಮಾಪಕರೂ ಈ ಪ್ರಶಸ್ತಿಯ ನಾಮನಿರ್ದೇಶನಕ್ಕೆ ತನ್ನ ಸಿನಿಮಾ ಕಳಿಸಿರಲಿಲ್ಲ. ಇದಕ್ಕೆ ಮಾಹಿತಿಯ ಕೊರತೆ ಕಾರಣವಾ ಅಥವಾ ಮಾನದಂಡದ ಬಗ್ಗೆ ಇರುವ ಗೊಂದಲ ಕಾರಣವಾ.. ಇಲ್ಲವೇ ಇದಕ್ಕೆ ಒಂದಿಷ್ಟು ಹಣ ಖರ್ಚಾಗುತ್ತದೆ, ಅಷ್ಟು ಖರ್ಚು ಮಾಡಿಯೂ ಸಿನಿಮಾಕ್ಕೆ ಪ್ರಶಸ್ತಿ ಬರುವ ಭರವಸೆ ಇಲ್ಲ ಎಂಬ ಮನಸ್ಥಿತಿ ಕಾರಣವಾ ಎಂಬುದು ತಿಳಿಯುತ್ತಿಲ್ಲ. ಈ ಬಗ್ಗೆ ಆಯ್ಕೆ ಸಮಿತಿಯ ಅಧ್ಯಕ್ಷರಾದ ಜಾಹ್ನೂ ಬರುವಾ ಅವರೂ ನಮ್ಮ ಬಳಿ ವಿಚಾರಿಸಿದರು. ಜಗತ್ತಿಗೆ ಕೆಜಿಎಫ್, ಕಾಂತಾರದಂಥಾ ಗೇಮ್ ಚೇಂಜಿಂಗ್ ಸಿನಿಮಾ ಕೊಟ್ಟ ನಮ್ಮ ಇಂಡಸ್ಟ್ರಿಯಿಂದ ಒಂದೇ ಒಂದು ಸಿನಿಮಾವೂ ಬಂದಿಲ್ಲ ಅನ್ನುವುದು ನಮಗಂತೂ ಬೇಸರ ತಂದಿತು’ ಎಂದಿದ್ದಾರೆ. ಈ ಬಗ್ಗೆ ‘ಸಪ್ತಸಾಗರದಾಚೆ ಎಲ್ಲೋ’ ಹೇಮಂತ್ ರಾವ್, ‘ನನಗೆ ಈ ಬಗ್ಗೆ ಮಾಹಿತಿ ಸಿಕ್ಕಾಗ ಕೊನೆಯ ದಿನಾಂಕ ಆಗಿಹೋಗಿತ್ತು. ಇಲ್ಲವಾದರೆ ನಮ್ಮ ಸಿನಿಮಾ ಕಳಿಸಬಹುದಿತ್ತು. ಈ ಪ್ರಶಸ್ತಿಗೆ ನಿರ್ಮಾಪಕರೇ ಸಿನಿಮಾ ಕಳಿಸಬೇಕು, ಸರ್ಕಾರ ಕಳಿಸೋದಿಲ್ಲ. ಜೊತೆಗೆ ಇದರ ಮಾನದಂಡಗಳ ಬಗೆಗೂ ನಮ್ಮಲ್ಲಿ ಹೆಚ್ಚಿನವರಿಗೆ ಮಾಹಿತಿ ಇಲ್ಲ’ ಎಂದಿದ್ದಾರೆ.
undefined
ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ಇದರ ಹಿಂದಿನ ಕೆಲವು ಅಂಶಗಳನ್ನು ಬಿಚ್ಚಿಡುತ್ತಾರೆ. ‘ಆಸ್ಕರ್ ಅನ್ನೋದು ಭ್ರಮೆ ಆಗಿದೆ. ಇದರಲ್ಲಿ ಬಹಳ ಲಾಬಿ ನಡೀತಿದೆ. ಯಾವ್ಯಾವುದೋ ದೇಶದ ನೂರಿನ್ನೂರು ಸದಸ್ಯರು ಕೂತು ಸಿನಿಮಾ ನೋಡೋದು, ಅವರಿಗೆ ಕೋಟಿಗಟ್ಟಲೆ ಖರ್ಚು ಮಾಡಿ ಊಟ, ಪಾರ್ಟಿ ಕೊಡೋದು, ಲೇಬಲ್ ಕ್ರಿಯೇಟ್ ಮಾಡೋದು, ಇದೆಲ್ಲ ಅನಿವಾರ್ಯ ಆಗಿಬಿಟ್ಟಿದೆ. ಕಳೆದ ವರ್ಷ ತೆಲುಗು ಸಿನಿಮಾವೊಂದು 25 ಕೋಟಿ ರು.ನಷ್ಟು ಹಣ ಖರ್ಚು ಮಾಡಿದ್ದು ಸುದ್ದಿಯಾಗಿತ್ತಲ್ಲಾ. ನಾವು ನಮ್ಮ ಸಿನಿಮಾವನ್ನು ಹೀಗೆ ಕೋಟಿಗಟ್ಟಲೆ ಸುರಿದು ಪ್ರಚಾರ ಲಾಬಿ ಮಾಡಿಯೂ ಆ ಪ್ರಶಸ್ತಿ ಬರುವ ಯಾವ ಭರವಸೆಯೂ ಇಲ್ಲ. ಹೀಗಾಗಿ ಮೌಲ್ಯ ಕಳೆದುಕೊಂಡಿರುವ ಈ ಪ್ರಶಸ್ತಿಗೆ ಖರ್ಚು ಮಾಡೋದಕ್ಕಿಂತ ಸುಮ್ಮನಿರೋದು ವಾಸಿ’ ಎನ್ನುತ್ತಾರೆ.
ಸ್ಟಾರ್ ನಟರು ನಾಪತ್ತೆ; ಹೊಸಬರೇ ಚಿತ್ರರಂಗದ ಪಾಲಿನ ಅನ್ನದಾತರು!
ಯುವ ನಿರ್ದೇಶಕ ನಟೇಶ್ ಹೆಗ್ಡೆ ಅವರು ಲಾಪತಾ ಲೇಡೀಸ್ ಸಿನಿಮಾ ಬಗ್ಗೆ ತಕರಾರು ಎತ್ತಿದ್ದಾರೆ. ‘ಲಾಪತಾ ಲೇಡೀಸ್ ಸಿನಿಮಾದ ಆಯ್ಕೆ ಬಗ್ಗೆ ಸಮಿತಿ ನೀಡಿದ ಕಾರಣದಲ್ಲಿ ಇಂಡಿಯನ್‌ನೆಸ್ ಅನ್ನೋ ಪಾಯಿಂಟ್ ಇದೆ. ಭಾರತೀಯತೆ ಅನ್ನೋದು ಈ ಸಿನಿಮಾದಲ್ಲಿ ಏನಿದೆ, ಭಾರತದ ನೆಲದಲ್ಲಿ ತಯಾರಾಗುವ ಪ್ರತಿ ಸಿನಿಮಾ ಕೂಡ ಭಾರತೀಯತೆಯ ಅಂಶ ಹೊಂದಿರುವುದೇ. ಭಾರತವನ್ನು ಪಾಸಿಟಿವ್ ಆಗಿ ತೋರಿಸೋದೇ ಭಾರತೀಯತೆಯಾ? ಹಾಗಿದ್ದರೆ ಈಗ ಆಯ್ಕೆ ಮಾಡಿರುವ ಸಿನಿಮಾದಲ್ಲೂ ನೆಗೆಟಿವ್ ಅಂಶಗಳಿವೆ. ಇಲ್ಲಿ ಆ ಅವಾರ್ಡ್‌ನ ಮಾನದಂಡಕ್ಕೆ ತಕ್ಕಂತೆ ಪ್ರಶಸ್ತಿ ಗೆಲ್ಲುವಂಥಾ ಸಿನಿಮಾಗಳನ್ನು ಆಯ್ಕೆ ಮಾಡೋದು ಮುಖ್ಯವಾಗಬೇಕು. ನನ್ನ ಪ್ರಕಾರ ಆ ಅರ್ಹತೆ ಪಾಯಲ್ ಕಪಾಡಿಯಾ ಅವರ ‘ಆಲ್ ವಿ ಇಮ್ಯಾಜಿನ್ ಈಸ್ ಲೈಟ್’ ಸಿನಿಮಾಕ್ಕಿತ್ತು’ ಎನ್ನುತ್ತಾರೆ.
‘ಡೇರ್ ಡೆವಿಲ್ ಮುಸ್ತಾಫಾ’ ನಿರ್ದೇಶಕ ಶಶಾಂಕ್ ಸೋಗಾಲ್, ‘ನೀವು ಹಣಕಾಸಿನ ವಿಚಾರದಲ್ಲಿ ಸ್ಟ್ರಾಂಗ್ ಆಗಿದ್ರೆ ವರ್ಲ್ಡ್ ಲೆವೆಲ್‌ನಲ್ಲಿ ಪಿಆರ್ ಮಾಡುವ ತಾಕತ್ತು ಇದ್ದರೆ ಈ ಅವಾರ್ಡಿಗೆ ಪ್ರಯತ್ನಿಸಬಹುದೇನೋ. ಆದರೆ ಮೌಲ್ಯದ ವಿಚಾರ ಬಂದಾಗ ನಮ್ಮ ಕಾಸರವಳ್ಳಿ, ಇತ್ತೀಚೆಗೆ ನಟೇಶ್ ಹೆಗ್ಡೆ ಅಂಥವರು ಇದಕ್ಕಿಂತ ಮೌಲ್ಯಯುತವಾದ ಬೂಸಾನ್, ವೆನ್ನಿಸ್, ಕ್ಯಾನ್‌ನಂಥಾ ಇಂಟರ್‌ನ್ಯಾಷನಲ್ ಫಿಲಂ ಫೆಸ್ಟಿವಲ್ ಅವಾರ್ಡ್ ಪಡೆದಿದ್ದಾರೆ’ ಎನ್ನುತ್ತಾರೆ.
ಉಪಸಂಹಾರ
ಕಾರಣಗಳು ಏನೇ ಇರಬಹುದು. ಆಸ್ಕರ್ ನಾಮನಿರ್ದೇಶನಕ್ಕೆ ಆಯ್ಕೆಯಾಗುವ ಸಿನಿಮಾಗಳ ಪಟ್ಟಿಯಲ್ಲಿ ಕನ್ನಡದ ಒಂದೂ ಸಿನಿಮಾ ಇಲ್ಲ ಎಂದಾಗ ಪ್ರೇಕ್ಷಕ ಸಮೂಹಕ್ಕೆ ಕೊಂಚ ಪಿಚ್ಚೆನ್ನಿಸುತ್ತದೆ. ಎಲ್ಲಾ ಕಡೆಯೂ ಕನ್ನಡ ಇರಬೇಕು ಅನ್ನುವುದು ಎಲ್ಲಾ ಕನ್ನಡಿಗರ ಆಸೆ. ಹಾಗಾಗಿ ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಆಲೋಚನೆ ಮಾಡುವುದು ಒಳಿತು. ಹಿಂದೆ ಉಳಿದಷ್ಟೂ ಅಕ್ಕಪಕ್ಕದಲ್ಲಿ ಇರುವವರು ಮುಂದೆ ಹೋಗಿರುತ್ತಾರೆ.
ನಮ್ಮಲ್ಲಿ ಕೊನೆಯ ಸುತ್ತಿನವರೆಗೆ ಹೋಗುವ ಮಾತ್ರ ಅಲ್ಲ, ಬೆಸ್ಟ್ 3 ರೇಸ್‌ನಲ್ಲಿ ನಿಲ್ಲುವಂಥಾ ಸಿನಿಮಾಗಳೂ ಇದ್ದವು. ಆದರೆ ನಿರ್ಮಾಪಕರು ಈ ಬಗ್ಗೆ ಗಮನ ಹರಿಸದ್ದರಿಂದ ದೊಡ್ಡ ಗೌರವ ತಪ್ಪಿಹೋಯಿತು.
- ಅವಿನಾಶ್ ಶೆಟ್ಟಿ, ಆಸ್ಕರ್ ನಾಮ ನಿರ್ದೇಶನ ಸಮಿತಿ ಸದಸ್ಯ