ಗೆಲುವು ಕೊಟ್ಟ ನಿರ್ದೇಶಕರು ಕಾಣೆಯಾಗಿದ್ದಾರೆ: ಸ್ಯಾಂಡಲ್‌ವುಡ್‌ನಲ್ಲಿ ಏನಾಗುತ್ತಿದೆ?

Published : Aug 12, 2026, 11:33 PM IST
Sandalwood Directors

ಸಾರಾಂಶ

ಕನ್ನಡ ಚಿತ್ರರಂಗಕ್ಕೆ ಹಿಟ್ ಸಿನಿಮಾಗಳನ್ನು ನೀಡಿದ ಕಿರಣ್‌ ರಾಜ್‌, ಸಂತೋಷ್‌ ಆನಂದ್‌ರಾಮ್‌, ನರ್ತನ್‌, ಪವನ್‌ ಕುಮಾರ್‌, ತರುಣ್‌ ಸುಧೀರ್‌ ಸೇರಿದಂತೆ ಹಲವು ನಿರ್ದೇಶಕರ ಮುಂದಿನ ಸಿನಿಮಾ ಏನು? ಸ್ಯಾಂಡಲ್‌ವುಡ್‌ನ ಸದ್ಯದ ಸ್ಥಿತಿಯ ಕುರಿತ ವಿಶೇಷ ವರದಿ.

‘777 ಚಾರ್ಲಿ’ ಸಿನಿಮಾ ಕೊಟ್ಟ ಕಿರಣ್‌ ರಾಜ್‌, ‘ಮಿಸ್ಟರ್‌ ಆಂಡ್‌ ಮಿಸಸ್‌ ರಾಮಾಚಾರಿ’, ‘ರಾಜಕುಮಾರ’, ‘ಯುವರತ್ನ’ ಚಿತ್ರಗಳ ಸಂತೋಷ್‌ ಆನಂದ್‌ರಾಮ್‌, ‘ಮಫ್ತಿ’ ಚಿತ್ರದ ನರ್ತನ್‌, ‘ಲೂಸಿಯಾ’, ‘ಯೂ ಟರ್ನ್‌’ ಚಿತ್ರಗಳ ಪವನ್‌ ಕುಮಾರ್‌, ‘ಕಾಟೇರ’ ನಿರ್ದೇಶಕ ತರುಣ್‌ ಸುಧೀರ್‌, ‘ಗುರುಶಿಷ್ಯರು’ ಜಡೇಶ್ ಹಂಪಿ ಇವರೆಲ್ಲಾ ಯಾವ ಸಿನಿಮಾ ಮಾಡುತ್ತಿದ್ದಾರೆ ಎಂದು ಕೇಳಿದರೆ ಉತ್ತರ ಸಿಗುವುದಿಲ್ಲ.

ತರುಣ್‌ ಸುಧೀರ್‌ ಕಿರುತೆರೆಯಲ್ಲಿ ಸುದ್ದಿಯಾಗುತ್ತಿದ್ದಾರೆ. ನರ್ತನ್‌ ರೈಟಿಂಗ್‌ನಲ್ಲಿ ಬ್ಯುಸಿ ಇದ್ದೇನೆ ಎನ್ನುತ್ತಾರೆ. ಪ್ರಯೋಗ ಮತ್ತು ಕಂಟೆಂಟ್‌ ಸಿನಿಮಾಗಳ ಪವನ್‌ ಕುಮಾರ್‌ ಯಾವ ಚಿತ್ರವನ್ನೂ ಘೋಷಣೆ ಮಾಡಿಲ್ಲ. ಸಂತೋಷನ್‌ ಆನಂದರಾಮ್‌ ಅವರು ‘ಯುವ’ ನಂತರ ಕಾಣೆಯಾಗಿದ್ದಾರೆ. ಕ್ಲಾಸ್‌ ಸಿನಿಮಾ ಮಾಡಿ ಎಲ್ಲಾ ವರ್ಗದ ಪ್ರೇಕ್ಷಕರನ್ನು ತಲುಪಿದ ಕಿರಣ್‌ ರಾಜ್‌ ಅವರ ಮುಂದಿನ ಸಿನಿಮಾ ಯಾವಾಗ ಗೊತ್ತಿಲ್ಲ.

‘ನಿರ್ದೇಶಕ ಹೇಳಿದ ಕತೆ ಸರಿ ಇದ್ದರೆ ಅದಕ್ಕೆ ನಿರ್ಮಾಪಕನ ಬಜೆಟ್‌ ತೂಗಲ್ಲ. ಕತೆ, ಬಜೆಟ್‌ ಎರಡೂ ಇದ್ದಾಗ ಹೀರೋ ಕಾಲ್‌ಶೀಟ್‌ ಸಿಗಲ್ಲ. ಹೋಗಲಿ ಹೊಸ ಹೀರೋಗಳ ಜತೆಗೆ ಸಿನಿಮಾ ಮಾಡೋಣ ಅಂದರೆ ನಿರ್ಮಾಪಕರು ರಿಟರ್ನ್‌ ಗ್ಯಾರಂಟಿ ಕೇಳ್ತಾರೆ’ ಎನ್ನುತ್ತಾರೆ ನಿರ್ದೇಶಕರೊಬ್ಬರು. ‘ನಾನು ಸ್ಟಾರ್‌ ಹೀರೋಗೇ ಸಿನಿಮಾ ಮಾಡಬೇಕು ಅಂತ ಕಾಯುತ್ತಿಲ್ಲ. ಆದರೆ, ಹೊಸ ಹೀರೋ ಜೊತೆಗೆ ಸಿನಿಮಾ ಮಾಡುತ್ತೇನೆ ಎಂದರೆ ನಿರ್ಮಾಪಕರೇ ಒಪ್ಪಲ್ಲ. ಯಾಕೆಂದರೆ ಕಾಂಬಿನೇಶನ್ ವರ್ಕ್‌ ಆಗಲ್ಲ ಅಂತಾರೆ’ ಅಂತಾರೆ ಮತ್ತೊಬ್ಬ ನಿರ್ದೇಶಕ.

‘ನಮ್ಮಲ್ಲಿ ಬ್ಯಾನರ್‌, ಪ್ರೊಡಕ್ಷನ್‌ ಹೌಸ್‌ ಕಲ್ಚರ್‌ ಕಣ್ಮರೆಯಾಗಿದೆ. ಈ ಹಿಂದೆ ವಜ್ರೇಶ್ವರಿ ಕಂಬೈನ್ಸ್‌, ಈಶ್ವರಿ ಪ್ರೊಡಕ್ಷನ್‌, ಕೆಸಿಎನ್‌, ರಾಕ್‌ಲೈನ್‌ ಸಿನಿಮಾಸ್‌, ಜಯಣ್ಣ- ಭೋಗೇಂದ್ರ ಸಿನಿಮಾಸ್‌, ದ್ವಾರಕೀಶ್‌ ಫಿಲಮ್ಸ್‌ ಹೀಗೆ ಹೆಸರಿನಿಂದಲೇ ಗಮನ ಸೆಳೆಯುತ್ತಿದ್ದ ನಿರ್ಮಾಪಕ ಹಾಗೂ ನಿರ್ಮಾಣ ಸಂಸ್ಥೆಗಳು ಇದ್ದವು. ಅವರಿಗೆ ಕತೆಗಳು ಬರುತ್ತಿದ್ದವು. ಆ ಕತೆಗಳಿಗೆ ಅವರು ನಿರ್ದೇಶಕ, ನಟ- ನಟಿಯರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಎಲ್ಲರೂ ಒಂದು ನಂಬಿಕೆಯ ಮೇಲೆ ಸಿನಿಮಾ ಮಾಡುತ್ತಿದ್ದರು.

ನಂಬಿಕೆಯ ಕೊಂಡಿಗಳಾಗಿರುವ ಬ್ಯಾನರ್‌ ಸಂಸ್ಕೃತಿ ಈಗಿಲ್ಲ. ಯಾರು ಯಾರನ್ನೂ ನಂಬುತ್ತಿಲ್ಲ. ನಿರ್ದೇಶಕ ಸಿನಿಮಾ ಮಾಡೋ ಜೊತೆಗೆ ನಿರ್ಮಾಪಕನಿಗೆ ಬ್ಯುಸಿನೆಸ್‌ ಗ್ಯಾರಂಟಿ ಕೊಡಬೇಕಿದೆ. ಆದರೂ ಯಾರೋ ಒಬ್ಬರು ರಿಸ್ಕ್‌ ತೆಗೆದುಕೊಳ್ಳಬೇಕು. ಎಲ್ಲರೂ ಸೇರಿ ಮಾತುಕತೆ ಮಾಡಬೇಕು. ಕನ್ನಡದ ಹೀರೋಗಳು, ಕಲಾವಿದರು, ತಂತ್ರಜ್ಞರು ಮೊದಲು ಕನ್ನಡದಲ್ಲೇ ಸಿನಿಮಾ ಮಾಡಿ ಎಂದು ಹೇಳುವವರು ಬೇಕು. ಹೀಗೆ ಮಾಡಿದರೆ ಖಂಡಿತ ಬದಲಾವಣೆ ಸಾಧ್ಯ’ ಎನ್ನುವುದು ಯಶಸ್ವಿ ನಿರ್ದೇಶಕರೊಬ್ಬರ ನಂಬಿಕೆ.

ಒಬ್ಬೊಬ್ಬ ನಿರ್ದೇಶಕನ ಸಿನಿಮಾ ಶೈಲಿಯೂ ಒಂದೊಂದು ರೀತಿ

‘ಪ್ರತಿ ಚಿತ್ರವೂ ಕೆಜಿಎಫ್‌ ಆಗಬೇಕು, ಎಲ್ಲವೂ ಕಾಂತಾರ ಆಗಬೇಕು ಅನ್ನೋ ನಿರ್ಮಾಪಕರ ಸಂಖ್ಯೆ ಹೆಚ್ಚಿದೆ. ನಾವು ಅವರ ಮೂಗಿನ ನೇರಕ್ಕೆ ಸಿನಿಮಾ ಮಾಡಬೇಕು. ಇದು ಸಾಧ್ಯವಿಲ್ಲ. ಯಾಕೆಂದರೆ ಒಬ್ಬೊಬ್ಬ ನಿರ್ದೇಶಕನ ಸಿನಿಮಾ ಶೈಲಿಯೂ ಒಂದೊಂದು ರೀತಿ ಇರುತ್ತದೆ. ಕೆಜಿಎಫ್‌ ಅಥವಾ ಕಾಂತಾರ ಸಿನಿಮಾಗಳ ಯಶಸ್ಸು ನಮಗೆ ಸ್ಫೂರ್ತಿ ಆಗಬೇಕೆ ಹೊರತು, ಅದೇ ರೀತಿಯ ಸಿನಿಮಾ ಮಾಡಿ ಅಂತ ಹೇಳಬಾರದು. ಈ ವಿಚಾರದಲ್ಲಿ ನಿರ್ಮಾಪಕರು ಬದಲಾದರೆ. ನಾವು ಖಾಲಿ ಕೂರಬೇಕಿಲ್ಲ’ ಎನ್ನುತ್ತಾರೆ ಯುವ ನಿರ್ದೇಶಕ.

ಚಿತ್ರರಂಗದಲ್ಲಿ ಪ್ರತಿಭಾವಂತ ಯುವ ನಿರ್ದೇಶಕರು ಸಿಗುತ್ತಾರೆ, ಈ ಎಲ್ಲಾ ನಿರ್ದೇಶಕರನ್ನು ದುಡಿಸಿಕೊಳ್ಳುವ ಸವಾಲನ್ನು ನಿರ್ಮಾಪಕರು ಸ್ವೀಕರಿಸಬೇಕಿದೆ ಅನ್ನುವುದು ಬಹುತೇಕ ನಿರ್ದೇಶಕರ ಮಾತು. ಯಾಕೆಂದರೆ ಎಲ್ಲರಿಗೂ ಪ್ರಶಾಂತ್‌ ನೀಲ್‌ ಬೇಕು ಅಂದರೆ ಸಿಗಲ್ಲ. ಯಶ್‌, ರಿಷಬ್‌ ಶೆಟ್ಟಿ ಬ್ಯುಸಿ ಮತ್ತು ದುಬಾರಿ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕನ್ನಡದ ಚೆಲುವೆಗೆ ಬಂಪರ್‌ ಚಾನ್ಸ್‌: ಯಶ್‌, ಜೂ.ಎನ್‌ಟಿಆರ್‌ ಬಳಿಕ ರುಕ್ಮಿಣಿ ವಸಂತ್‌ ಮುಂದಿನ ಹೆಜ್ಜೆ ಏನು?
ಸ್ಯಾಂಡಲ್‌ವುಡ್‌ನಲ್ಲಿ ಭೀಮನ ಅಮವಾಸ್ಯೆ ಕಳೆ ಹೆಚ್ಚಿಸಿದ ನಟಿ-ನಟಿಯರು!