ಕನ್ನಡ ಸಿನಿಮಾರಂಗದ ದಿಗ್ಗಜರೆಲ್ಲ ಸೇರಿ ಸರ್ಪಶಾಂತಿ ಹೋಮ, ಮೃತ್ಯುಂಜಯ ಹೋಮ ಇತ್ಯಾದಿ ಮಾಡಿಸಿದ್ರು. ಇದನ್ನು ದರ್ಶನ್‌ಗಾಗಿ ಮಾಡಲಾಯ್ತು ಅನ್ನೋ ಮಾತು ಯಾಕೆ ಕೇಳಿ ಬರ್ತಿದೆ?
ಕನ್ನಡ ಚಿತ್ರರಂಗ ಸರಿಯಾದ ಸಿನಿಮಾಗಳನ್ನು ತಯಾರು ಮಾಡುತ್ತೋ ಇಲ್ವೋ ಗೊತ್ತಿಲ್ಲ. ಆದರೆ ಧಾರ್ಮಿಕ ಕಾರ್ಯಗಳನ್ನು ಮಾಡೋದ್ರಲ್ಲಿ ಎಂದೂ ಹಿಂದೆ ಬಿದ್ದಿಲ್ಲ. ಇದರ ಬಗ್ಗೆ ಪರ, ವಿರೋಧದ ಚರ್ಚೆಗಳೇನೇ ನಡೆದರೂ ಸರ್ಪಶಾಂತಿ ಹೋಮ, ಪೂಜೆ ಇತ್ಯಾದಿ ಶ್ರದ್ಧಾ ಭಕ್ತಿಯಿಂದ ನಡೆದಿದೆ. ಈ ವೇಳೆ ನಟಿ ಜ್ಯೋತಿ ಅಂಥವರಿಗೆ ಮೈಮೇಲೆ ದರ್ಶನ ಬಂದದ್ದೂ ನಡೆದಿದೆ. ಆದರೆ ಇದೀಗ ಈ ಹೋಮ, ಹವನಗಳನ್ನು ನಿಜಕ್ಕೂ ಸಿನಿಮಾರಂಗದ ಒಳಿತಿಗಾಗಿ ನಡೆಸಲಾಯಿತ ಅಥವಾ ಬೇರೇನಾದರೂ ಅಜೆಂಡಾಗಳಿದ್ದವಾ ಅನ್ನೋ ಚರ್ಚೆ ತೆರೆ ಮರೆಯಲ್ಲಿ ಮಾತ್ರ ಅಲ್ಲ. ತೆರೆಯ ಮುಂದೆಯೇ ನಡೆಯುತ್ತಿದೆ. ಈ ಬಗ್ಗೆ ಕೆಲವು ಕಲಾವಿದರು ಮಾತನಾಡಿಯೂ ಇದ್ದಾರೆ. ಇನ್ನೊಂದೆಡೆ ಕೊಲೆ ಆರೋಪದಡಿ ಬಂಧಿತನಾಗಿ, ಅದಕ್ಕೆ ತಕ್ಕಂತೆ ಸಾಕ್ಷಿಗಳೂ ಸಿಗುತ್ತಿರುವ ಹೊತ್ತಲ್ಲಿ ಚಿತ್ರರಂಗದವರು ಈ ಥರ ಮಾಡ್ತಿದ್ದಾರೆ ಅಂದರೆ ಇದಕ್ಕೆಲ್ಲ ಏನರ್ಥ ಎಂಬ ರೀತಿಯ ಮಾತುಗಳೂ ಕೇಳಿ ಬರ್ತಿವೆ.
ಆದರೆ ಸದ್ಯ ಈ ಪೂಜೆ ಏರ್ಪಡಿಸಿದವರು, ಇದರಲ್ಲಿ ಭಾಗಿಯಾದವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿದ ನಟ ಜಗ್ಗೇಶ್, ' ಮೊದಲು ನನಗೂ ಅದೇ ಥರ ಮಾಹಿತಿ ಬಂತು. ಇದು ಆ ರೀತಿ ಆಗಿದ್ದರೆ, ನಾನು ಕೂಡ ಬರ್ತಾ ಇರಲಿಲ್ಲ. ಅದು ಬೇರೆನೇ ಆಯಾಮ ತೆಗೆದುಕೊಳ್ಳುತ್ತಿತ್ತು. ಆದರೆ ಇದು ಅದಲ್ಲ. ಇದು ಕಲಾವಿದರ ಒಳಿತಿಗಾಗಿ ನಡೆದ ಪೂಜೆ. ಯಾರೋ ಕೆಲವರಿಗೆ ಮಾಹಿತಿ ಕೊರತೆ ಆಗಿರಬಹುದು. ಆದ್ದರಿಂದ ಅವರು ಅಪಾರ್ಥ ಮಾಡಿಕೊಂಡಿರಬಹುದು. ನನಗೂ ಕೂಡ ಬೇರೆ ವಲಯಗಳಿಂದ ಅನೇಕರು ಫೋನ್ ಮಾಡಿದ್ದರು. ನನಗೂ ಅನುಮಾನ ಬಂತು. ಈ ಪೂಜೆ ಅದಕ್ಕೆ ಇರಬಹುದೇನೋ ಅಂದ್ಕೊಂಡೆ. ನಂತರ ವಿಚಾರಿಸಿದಾಗ ಇದು ಆ ಥರ ಅಲ್ಲ ಎಂಬುದು ಗೊತ್ತಾಯಿತು. ಆ ಕಾರಣಕ್ಕಾಗಿ ನಾನು ಕೂಡ ಬಂದೆ. ಕಲಾವಿದರು ಕಲಾವಿದರ ಸಂಘದ ಸದಸ್ಯತ್ವ ಪಡೆಯಬೇಕು. ಇಲ್ಲಿ ಒಂದು ಹಬ್ಬದ ವಾತಾವರಣ ಸೃಷ್ಟಿಯಾಗುವಂತೆ ಮಾಡಬೇಕಿದೆ. ಎಲ್ಲರು ಬಂದಮೇಲೆ ಯಾರೋ ಒಬ್ಬರನ್ನು ಮುಖ್ಯಸ್ಥರನ್ನಾಗಿ ಮಾಡಬೇಕು. ಇದು ನನ್ನ ಅಭಿಪ್ರಾಯ. ಯಾವುದೇ ಕೆಲಸಗಳು ನಿಂತು ಹೋದಾಗ, ಅದನ್ನು ಶುರು ಮಾಡಬೇಕು ಎಂದರೆ ಪೂಜೆ ಮಾಡಬೇಕು. ಸನಾತನ ಧರ್ಮದಲ್ಲಿ ನಂಬಿಕೆ ಇರುವವರಿಗೆ ಇದು ತಿಳಿದಿರುತ್ತದೆ. ರಾಕ್‌ಲೈನ್ ವೆಂಕಟೇಶ್ ಮುಂದಾಳತ್ವದಲ್ಲಿ ಇಂದು ಪೂಜೆ ಆಗಿದೆ. ನನಗೆ ವೈಯಕ್ತಿಕವಾಗಿ ಸಂತೋಷವಾಗಿದೆ' ಎಂದು ಜಗ್ಗೇಶ್ ಹೇಳಿದ್ದಾರೆ.
undefined
ಪ್ರಕಾಶ್ ರಾಜ್ ಜೊತೆ ಕೆಲಸ ಮಾಡುವ ಅನುಭವ ಹೇಗಿರತ್ತೆ? ಪ್ರಿಯಾಮಣಿ ಓಪನ್ ಮಾತಿದು...
ಹಾಗೆ ನೋಡಿದರೆ ಈ ಪೂಜೆಯ ಪ್ರಸ್ತಾಪ ಬಂದಾಗಲೇ ನಿರ್ಮಾಪಕ ರಾಕ್‌ಲೈನ್ ಅವರಿಗೂ ಇಂಥಾದ್ದೊಂದು ಪ್ರಶ್ನೆ ಎದುರಾಗಿತ್ತು. ಅದಕ್ಕೆ ಅವರು, 'ದರ್ಶನ್‍ಗಾಗಿಯೇ ಈ ಪೂಜೆ ಮಾಡಿಸಬೇಕು ಅಂದ್ರೆ, ಅದನ್ನ ವೈಯಕ್ತಿಕವಾಗಿ ನನ್ನ ಮನೆಯಲ್ಲೋ ಅಥವಾ ದರ್ಶನ್ ಮನೆಯಲ್ಲೋ ಮಾಡುತ್ತೇನೆ. ಪೂಜೆ ಮಾಡುತ್ತಿರುವುದು ಕನ್ನಡ ಚಿತ್ರರಂಗದ ಒಳಿತಿಗಾಗಿ. ಇದು ಕಲಾವಿದರ ಸಂಘದ ವತಿಯಿಂದ ನಡೆಯುತ್ತಿರುವ ಪೂಜೆ' ಎಂದು ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದರು.
ಸದ್ಯಕ್ಕೆ ಹೋಮವಂತೂ ನಡೆದಿದೆ. ಎಲ್ಲರೂ ಶ್ರದ್ಧಾ ಭಕ್ತಿಗಳಿಂದ ಪ್ರಾರ್ಥನೆ ಸಲ್ಲಿಸಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಯಾರಿಗೆ ಏನು ಒಳ್ಳೆಯದಾಗುತ್ತೆ ಅನ್ನೋದನ್ನು ಕಾದು ನೋಡಬೇಕಿದೆ. ಇದನ್ನೆಲ್ಲ ನಂಬಬೇಕೋ ಬೇಡವೋ ಅನ್ನೋದೆಲ್ಲ ವಯಕ್ತಿಕ. ಆದರೆ ಪೂಜೆ ಮಾಡಿ ಸುಮ್ಮನೆ ಕುಳಿತರೆ ಚಿತ್ರರಂಗ ಉದ್ಧಾರ ಆಗುತ್ತಾ? ಇದಕ್ಕಿಂತಲೂ ಒಳ್ಳೆ ಸಿನಿಮಾ ನಿರ್ಮಿಸುವ, ಸಂಕಷ್ಟದಲ್ಲಿರುವ ಸಿನಿಮಾಗಳಿಗೆ ನೆರವಾಗುವ, ಸ್ವತಂತ್ರ್ಯ ಓಟಿಟಿ ಶುರುಮಾಡುವಂಥಾ ಕೆಲಸ ಮಾಡಿದ್ರೆ ಒಳ್ಳೇದಿತ್ತಲ್ವಾ ಅನ್ನೋ ಪ್ರಜ್ಞಾವಂತ ಮಾತೂ ಸಖತ್ ಹೈಪ್ ಕ್ರಿಯೇಟ್ ಮಾಡ್ತಿದೆ.