
ಒಂದು ಅಪರೂಪದ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಕನ್ನಡ ನಾಡಿನ ಸಾಕ್ಷಿ ಪ್ರಜ್ಞೆಯಂತಿದ್ದ ಲಂಕೇಶ್ ಕುಟುಂಬದ ಮೂರನೇ ತಲೆಮಾರು ಸಮರ್‌ಜಿತ್ ‘ಗೌರಿ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬರುತ್ತಿರುವ ಹೊತ್ತಿನಲ್ಲಿ ಲಂಕೇಶರ ಆಪ್ತರೆಲ್ಲಾ ಸೇರಿಕೊಂಡು ಸಮರ್‌ಜಿತ್‌ಗೆ ಶುಭ ಹಾರೈಸಿದರು. ಹಿರಿಯ ನಿರ್ದೇಶಕ ಟಿ.ಎನ್. ಸೀತಾರಾಮ್ ಅವರು, ‘ಲಂಕೇಶರು ನನಗೆ ಗುರು. ನನಗೆ ಮೆಟ್ಟಿಲು ಹತ್ತಿಸಿದವರು.
ಗೌರಿಬಿದನೂರಿನಲ್ಲಿ ವ್ಯವಸಾಯ ಮಾಡುತ್ತಿದ್ದ ನನ್ನನ್ನು ಕರೆಸಿ ಹೀರೋ ಮಾಡಿದರು. ಕ್ಲಾಸಿಕ್ ಸಿನಿಮಾಗಳನ್ನು ತೋರಿಸಿದವರು. ಪ್ರಪಂಚದ ಜ್ಞಾನವೆಲ್ಲಾ ಅವರಿಗಿತ್ತು. ಅವರ ಮೂರನೇ ತಲೆಮಾರು ಸಮರ್‌ಜಿತ್ ನೋಡಲು ತುಂಬಾ ಚೆನ್ನಾಗಿದ್ದಾನೆ. ಕಲಾವಿದನಾಗಿ ಎತ್ತರಕ್ಕೆ ಬೆಳೆಯಲಿ’ ಎಂದರು. ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ‘ಚಿತ್ರರಂಗಕ್ಕೆ ಹೊಸ ಬಣ್ಣ ಬೇಕು. ಹೊಸತನ ಬೇಕು. ಹಾಗಾಗಿ ಕಿರಿಯರನ್ನು ಪ್ರೀತಿಯಿಂದ ಬರ ಮಾಡಿಕೊಳ್ಳಬೇಕು. ಸಮರ್‌ಜಿತ್, ನೀನು ತುಂಬಾ ಜನಪ್ರಿಯನಾಗು. ಜೊತೆಗೆ ಸದಭಿರುಚಿ ಇಟ್ಟುಕೋ.
ಕ್ಲಾಸ್ ಮತ್ತು ಮಾಸ್ ಎರಡನ್ನೂ ಜೊತೆಗಿಟ್ಟುಕೊಂಡು ಮುಂದೆ ಸಾಗು’ ಎಂದರು. ಕತೆಗಾರ ಜೋಗಿ, ‘ರಂಗಭೂಮಿ, ಸಿನಿಮಾ ವ್ಯಕ್ತಿಗಳ ಮೂರನೇ ತಲೆಮಾರು ಚಿತ್ರರಂಗಕ್ಕೆ ಬರುವುದು ಅಪರೂಪವಲ್ಲ. ಸಾಹಿತಿ, ಪತ್ರಕರ್ತರಾಗಿದ್ದವರ ಮೂರನೇ ತಲೆಮಾರು ಚಿತ್ರರಂಗದಲ್ಲಿರುವುದು ಅಪರೂಪ. ಸಮರ್‌ಜಿತ್ ಲಂಕೇಶರ ಪದ್ಯಗಳನ್ನು ಓದುವುದನ್ನು ನೋಡಿದ್ದೇನೆ. ಸಮರ್‌ಜಿತ್ ಮೇಲೆ ಭರವಸೆ ಇದೆ’ ಎಂದರು.
ಬಂದೇ ಬಿಡ್ತು ಇಂದ್ರಜಿತ್ ಲಂಕೇಶ್ ಮಗನ ಟೈಮ್: ಮಂಡ್ಯ ಹೈದನಾಗಿ ಸಮರ್ಜಿತ್ ಮೋಡಿ ಮಾಡ್ತಾರಾ?
ಹಿರಿಯ ಪತ್ರಕರ್ತ ಸದಾಶಿವ ಶೆಣೈ, ‘ಲಂಕೇಶರು, ಅವರ ಮಕ್ಕಳು ಸಿನಿಮಾ ಮಾಡಿದ್ದರು. ಈಗ ಮೊಮ್ಮಗ ಈ ಪರಂಪರೆ ಬೆಳೆಸುತ್ತಿರುವುದು ನೋಡಿ ಸಂಭ್ರಮ ಆಗುತ್ತದೆ’ ಎಂದರು. ಹಿರಿಯ ಪತ್ರಕರ್ತ ರವೀಂದ್ರ ರೇಷ್ಮೆ, ಇಂದಿರಾ ಲಂಕೇಶ್ ಶುಭ ಹಾರೈಸಿದರು. ನಿರ್ದೇಶಕ ಇಂದ್ರಜಿತ್ ಲಂಕೇಶ್, ಚಿತ್ರದ ನಾಯಕಿ ಸಾನ್ಯಾ ಅಯ್ಯರ್, ಉದ್ಯಮಿ ಗೋಪಾಲ್, ಅಭಿಮನ್ಯು ರಮೇಶ್ ಉಪಸ್ಥಿತರಿದ್ದರು. ‘ಗೌರಿ’ ಸಿನಿಮಾ ಆ.15ರಂದು ಬಿಡುಗಡೆಯಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.