
ಕನ್ನಡ ಚಿತ್ರರಂಗದ ಎವರ್‌ಗ್ರೀನ್ ಸಿನಿಮಾಗಳಲ್ಲಿ ಡಾ. ವಿಷ್ಣುವರ್ಧನ್ ಮತ್ತು ಸುಹಾಸಿನಿ ಅಭಿನಯದ 'ಬಂಧನ' ಚಿತ್ರಕ್ಕೆ ವಿಶೇಷ ಸ್ಥಾನವಿದೆ. 1984ರಲ್ಲಿ ಬಿಡುಗಡೆಯಾದ ಈ ಸಿನಿಮಾ ಪ್ರೇಮಕಥೆ, ಭಾವುಕ ಸನ್ನಿವೇಶ ಮತ್ತು ಅದ್ಭುತ ಅಭಿನಯದಿಂದ ಪ್ರೇಕ್ಷಕರ ಮನಗೆದ್ದಿತ್ತು. ಆದರೆ ಈ ಸಿನಿಮಾ ನಿರ್ಮಾಣವಾಗುವಾಗ ಎದುರಾದ ಸವಾಲುಗಳು ಒಂದೆರಡಲ್ಲ. ನಾಯಕನ ಆಯ್ಕೆಯಿಂದ ಹಿಡಿದು ಸಿನಿಮಾ ಬಿಡುಗಡೆಯವರೆಗೂ ಹಲವು ಅಡೆತಡೆಗಳನ್ನು ಚಿತ್ರತಂಡ ಎದುರಿಸಿತ್ತು. ಅಷ್ಟೇ ಅಲ್ಲ, ಬಿಡುಗಡೆಯ ಸಮಯದಲ್ಲಿ ಚಿತ್ರಮಂದಿರಗಳ ಮೇಲೆಯೇ ದಾಳಿ ನಡೆದಿತ್ತು ಎಂಬ ಸಂಗತಿಯೂ ಇದೆ.
ಆಕ್ಷನ್ ಹೀರೋ ಇಮೇಜ್ ಬದಲಾಗುವ ಭಯ
'ಬಂಧನ' ಚಿತ್ರದಲ್ಲಿ ಡಾ. ಹರೀಶ್ ಎಂಬ ಮೃದು ಸ್ವಭಾವದ, ಪ್ರೇಮಕ್ಕಾಗಿ ನೋವು ಅನುಭವಿಸುವ ವೈದ್ಯನ ಪಾತ್ರದಲ್ಲಿ ವಿಷ್ಣುವರ್ಧನ್ ಕಾಣಿಸಿಕೊಂಡಿದ್ದರು. ಆದರೆ ಆರಂಭದಲ್ಲಿ ಈ ಪಾತ್ರ ಮಾಡಲು ಅವರು ಹಿಂದೇಟು ಹಾಕಿದ್ದರಂತೆ. ಆಗಲೇ 'ಸಾಹಸ ಸಿಂಹ', 'ಕರಾಟೆ ಕಿಂಗ್' ರೀತಿಯ ಆಕ್ಷನ್ ಸಿನಿಮಾಗಳಿಂದ ಜನಪ್ರಿಯರಾಗಿದ್ದ ಅವರಿಗೆ, ತಮ್ಮ ಅಭಿಮಾನಿಗಳು ದೇವದಾಸ್ ಮಾದರಿಯ ದುಃಖಭರಿತ ಪಾತ್ರವನ್ನು ಒಪ್ಪಿಕೊಳ್ಳುತ್ತಾರೆಯೇ ಎಂಬ ಅನುಮಾನವಿತ್ತು.
ಆದರೆ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಅವರಿಗೆ ವಿಷ್ಣುವರ್ಧನ್ ಅವರೇ ಈ ಪಾತ್ರಕ್ಕೆ ಸೂಕ್ತ ಎಂಬ ನಂಬಿಕೆಯಿತ್ತು. ಸಿನಿಮಾ ಸೋತರೆ ಆಗುವ ನಷ್ಟವನ್ನು ತಾವೇ ಭರಿಸುವುದಾಗಿ, ಅಗತ್ಯವಿದ್ದರೆ ಮುಂಬೈಗೆ ಹೋಗಿ ಹಿಂದಿ ಸಿನಿಮಾ ಮಾಡಿ ಹಣ ಗಳಿಸುವುದಾಗಿ ಭರವಸೆ ನೀಡಿದ್ದರಂತೆ. ಕೊನೆಗೆ ವಿಷ್ಣುವರ್ಧನ್ ಒಪ್ಪಿಕೊಂಡರು.
ವಿಷ್ಣುವರ್ಧನ್ ಮತ್ತು ಸುಹಾಸಿನಿ ಆಯ್ಕೆಯಾಗುವ ಮೊದಲು ಅನಂತ್ ನಾಗ್ ಮತ್ತು ಲಕ್ಷ್ಮಿ ಜೋಡಿಯ ಬಗ್ಗೆಯೂ ಚಿತ್ರತಂಡ ಯೋಚಿಸಿತ್ತು. ಅಂಬರೀಶ್ ಮತ್ತು ಆರತಿ ಅವರನ್ನೂ ಪರಿಗಣಿಸಲಾಗಿತ್ತು. ಆದರೆ ಬೇರೆ ಬೇರೆ ಕಾರಣಗಳಿಂದ ಈ ಜೋಡಿಗಳು ಅಂತಿಮವಾಗಲಿಲ್ಲ. ಈ ಚಿತ್ರದಲ್ಲಿ ಡಾ. ನಂದಿನಿ ಪಾತ್ರ ಮಾಡಲು ನಟಿ ಕಲ್ಪನಾ ಒಮ್ಮೆ ಆಸೆ ವ್ಯಕ್ತಪಡಿಸಿದ್ದರ ನೆನಪಿಗಾಗಿ, ಚಿತ್ರತಂಡ ಶೀರ್ಷಿಕೆ ಕಾರ್ಡ್‌ನಲ್ಲಿ ಅವರಿಗೆ ಗೌರವ ಸಲ್ಲಿಸಿತ್ತು.
ಪ್ರೇಕ್ಷಕರನ್ನು ಹೆದರಿಸಲು ಮೆಣಸಿನ ಪುಡಿ, ಬ್ಲೇಡ್ ಬಳಕೆ!
1984ರ ಆಗಸ್ಟ್‌ನಲ್ಲಿ 'ಬಂಧನ' ಸಿನಿಮಾ ಬಿಡುಗಡೆಯಾದಾಗ ಕೆಲವು ಕಿಡಿಗೇಡಿಗಳಿಂದ ಚಿತ್ರಮಂದಿರಗಳಲ್ಲಿ ಗಲಾಟೆ ನಡೆದಿತ್ತು. ಮಹಿಳಾ ಪ್ರೇಕ್ಷಕರು ಸಿನಿಮಾ ನೋಡಲು ಬರಬಾರದು ಎಂಬ ಉದ್ದೇಶದಿಂದ ಚಿತ್ರಮಂದಿರಗಳ ಒಳಗೆ ಮೆಣಸಿನ ಪುಡಿ ಎರಚುವುದು, ಟಿಕೆಟ್ ಕೌಂಟರ್‌ಗಳ ಬಳಿ ಬ್ಲೇಡ್‌ನಿಂದ ಜನರ ಮೇಲೆ ಹಲ್ಲೆ ಮಾಡುವುದು ಸೇರಿದಂತೆ ಆತಂಕಕಾರಿ ಘಟನೆಗಳು ನಡೆದಿದ್ದವು ಎನ್ನಲಾಗಿದೆ.
ಇದರಿಂದ ಚಿತ್ರಮಂದಿರಗಳಿಗೆ ಪೊಲೀಸ್ ಭದ್ರತೆ ಒದಗಿಸುವಂತೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಮೊರೆ ಹೋಗಿದ್ದರು. ಜೀವ್ರಾಜ್ ಆಳ್ವ ಅವರ ಮೂಲಕ ಮುಖ್ಯಮಂತ್ರಿಗಳನ್ನು ಸಂಪರ್ಕಿಸಿದ್ದರು. ಬಳಿಕ ಚಿತ್ರಮಂದಿರಗಳಿಗೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಯಿತು. ಗಲಾಟೆ ನಡೆಸುತ್ತಿದ್ದ ಸುಮಾರು 25 ಮಂದಿಯನ್ನು ಪೊಲೀಸರು ಬಂಧಿಸಿದ್ದರು.
ಮೈಸೂರಿನಲ್ಲಿ ವಿಷ್ಣುವರ್ಧನ್ ಅವರ ಬೃಹತ್ ಕಟೌಟ್‌ಗೆ ಕಿಡಿಗೇಡಿಗಳು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು. ಅಭಿಮಾನಿಗಳು ಹೊಸ ಕಟೌಟ್ ಹಾಕಿಸಿಕೊಡುವುದಾಗಿ ಮುಂದೆ ಬಂದರೂ ನಿರ್ದೇಶಕರು ಅದಕ್ಕೆ ಒಪ್ಪಲಿಲ್ಲ. ಸುಟ್ಟುಹೋದ ಕಟೌಟ್‌ನ್ನೇ ದೃಷ್ಟಿ ಪರಿಹಾರವೆಂದು ಭಾವಿಸಿ ಸಿನಿಮಾ ಪ್ರದರ್ಶನದ 25 ವಾರಗಳ ಕಾಲ ಹಾಗೆಯೇ ಉಳಿಸಿಕೊಂಡಿದ್ದರಂತೆ.
'ಬಂಧನ' ಸಿನಿಮಾ ಬಿಡುಗಡೆಯಾದ ಬಳಿಕ ದೊಡ್ಡ ಯಶಸ್ಸು ಕಂಡಿತು. ಒಂದು ಚಿತ್ರಮಂದಿರದಲ್ಲಿ ಬರೋಬ್ಬರಿ 469 ದಿನಗಳ ಕಾಲ ಪ್ರದರ್ಶನ ಕಂಡಿತು. ಕನ್ನಡದ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದುಕೊಂಡಿತು. ಆದರೆ ಚಿತ್ರದ ಯಶಸ್ಸಿನ ಬಳಿಕ ವಿಷ್ಣುವರ್ಧನ್ ಮತ್ತು ಡಾ. ರಾಜ್‌ಕುಮಾರ್ ಅಭಿಮಾನಿಗಳ ನಡುವೆ ಕೆಲವು ಕಡೆ ಸಂಘರ್ಷಗಳು ನಡೆದವು. ಪರಿಸ್ಥಿತಿಯಿಂದ ಬೇಸತ್ತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮುಂಬೈಗೆ ತೆರಳಿ ಸುಮಾರು ಐದು ವರ್ಷಗಳ ಕಾಲ ಅಲ್ಲಿಯೇ ನೆಲೆಸಿದ್ದರು ಎನ್ನಲಾಗಿದೆ.
ಆದರೆ 'ಬಂಧನ' ಸಿನಿಮಾ ವಿಷ್ಣುವರ್ಧನ್ ಅವರ ವೃತ್ತಿಜೀವನಕ್ಕೆ ಹೊಸ ಆಯಾಮ ನೀಡಿತು. ಆಕ್ಷನ್ ಹೀರೋ ಎಂಬ ಇಮೇಜ್‌ನಿಂದ ಹೊರಬಂದು ಭಾವುಕ ಪಾತ್ರಗಳಲ್ಲೂ ತಾವು ಸೈ ಎಂಬುದನ್ನು ಸಾಬೀತುಪಡಿಸಿದರು. ಈ ಪಾತ್ರಕ್ಕಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನೂ ಪಡೆದರು. ಭಾಷೆ ಅರ್ಥವಾಗದ ಪ್ರೇಕ್ಷಕರೂ ಅವರ ಅಭಿನಯ ನೋಡಲು ಚಿತ್ರಮಂದಿರಗಳಿಗೆ ಬರುತ್ತಿದ್ದರು. ಹೀಗೆ ಹಲವು ಅಡೆತಡೆಗಳನ್ನು ದಾಟಿ 'ಬಂಧನ' ಕನ್ನಡ ಚಿತ್ರರಂಗದ ಮರೆಯಲಾಗದ ಸಿನಿಮಾ ಎನಿಸಿಕೊಂಡಿತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.