ಸ್ಯಾಂಡಲ್‌ವುಡ್ ಹಿರಿಯ ನಟ ದ್ವಾರಕೀಶ್ ಅವರು ನಿಧನರಾಗಿದ್ದಾರೆ. ಡಾ.ವಿಷ್ಣುವರ್ಧನ್ ಜೊತೆ ಕಳ್ಳ ಕುಳ್ಳ ಚಿತ್ರದಲ್ಲಿ ನಟಿಸಿದ ದ್ವಾರಕೀಶ್ ಕನ್ನಡ ಚಿತ್ರರಂಗದ ಖ್ಯಾತ ನಟರ ಚಿತ್ರಗಳನ್ನೂ ನಿರ್ಮಿಸಿ ಸೈ ಎನಿಸಿಕೊಂಡಿದ್ದರು.
ಬೆಂಗಳೂರು (ಏ.16): ಸ್ಯಾಂಡಲ್‌ವುಡ್ ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ದ್ವಾರಕೀಶ್ ಅವರು ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ 81 ವರ್ಷ ವಯಸ್ಸಾಗಿತ್ತು. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ತಮ್ಮ ಮನೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಪರಪ್ಪನ ಅಗ್ರಹಾರ ಬಳಿ ಇರೋ ಮನೆಯಲ್ಲೇ ಪಾರ್ಥಿವ ಶರೀರವಿದ್ದು, ಅಭಿಮಾನಿಗಳಿಗೆ ಕಡೆಯ ದರ್ಶನದ ವ್ಯವಸ್ಥೆ ಮಾಡಲಾಗುತ್ತದೆ, ಎಂದು ಕುಟುಂಬದ ಮೂಲಗಳು ತಿಳಿಸಿವೆ.
ದ್ವಾರಕೀಶ್ 1942 ಆಗಸ್ಟ್ 19ರಂದು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಜನನ. ಬಂಗ್ಲೆ ಶಾಮರಾವ್ ದ್ವಾರಕಾನಾಥ್ ಎಂಬುದು ದ್ವಾರಕೀಶ್ ಅವರ ನಿಜನಾಮ. ಇವರ ತಂದೆ ಶಾಮರಾವ್ ಮತ್ತು ತಾಯಿ ಜಯಮ್ಮ. ಶಿಕ್ಷಣ: ಶಾರದ ವಿಲಾಸ್ & ಬನುಮ್ಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಫ್ರೌಡಶಿಕ್ಷಣದ ನಂತರ ಸಿಪಿಸಿ ಪಾಕಿಟೆಕ್ನಿಕ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮಾಡಿದ್ದರು. ನಂತರ ತಮ್ಮ ಸಹೋದರನ ಜೊತೆ ಸೇರಿ ಭಾರತ್ ಆಟೋ ಸ್ಪೇರ್ ಸ್ಟೋರ್ ಆರಂಭಿಸಿದರು. 1963ರಲ್ಲಿ ವ್ಯಾಪಾರ ಬಿಟ್ಟು ನಟನೆಯತ್ತ ಮುಖ ಮಾಡಿದರು. 1964ರಲ್ಲಿ ವೀರ ಸಂಕಲ್ಪ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ, ಮೇಯರ್ ಮುತ್ತಣ ಸಿನಿಮಾವನ್ನು ಸ್ವತಂತ್ರವಾಗಿ ನಿರ್ಮಿಸಿದ್ದರು. 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, 53 ಸಿನಿಮಾಗಳನ್ನು ನಿರ್ಮಿಸಿದ ಖ್ಯಾತಿ ದ್ವಾರಕೀಶ್‌ಗೆ ಸಲ್ಲುತ್ತದೆ.
ನೀವು ಸಾಕಿದ, ಬೆಳೆಸಿದ ದ್ವಾರಕೀಶ್ ಚೆನ್ನಾಗಿದ್ದೀನಿ; ವದಂತಿಗೆ ಬ್ರೇಕ್ ಹಾಕಿದ ನಿರ್ಮಾಪಕ ದ್ವಾರಕೀಶ್
1964ರಲ್ಲಿ ವೀರ ಸಂಕಲ್ಪ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ದ್ವಾರಕೀಶ್, ನಟರಾಗಿ, ಹಾಸ್ಯ ಕಲಾವಿದರಾಗಿ, ಪೋಷಕ ನಟನಾಗಿ ಕನ್ನಡ ಸಿನಿ ಅಭಿಮಾನಿಗಳ ಹೃದಯದಲ್ಲಿ ಕುಳ್ಳನಾಗಿ, ಕಿಟ್ಟಿಯಾಗಿ ವಿಶೇಷ ಸ್ಥಾನ ಗಿಟ್ಟಿಸಿಕೊಂಡಿದ್ದರು. ದಿವಂಗತ ನಟ ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಜೋಡಿ ಕಳ್ಳ-ಕುಳ್ಳ ಎಂದೇ ಪ್ರಸಿದ್ಧವಾಗಿತ್ತು. ಇವರಿಬ್ಬರೂ ಉತ್ತಮ ಸ್ನೇಹಿತರಾಗಿದ್ದು, ದ್ವಾರಕೀಶ್ ವಿಷ್ಣು ಅಭಿನಯದ ಬಹುತೇಕ ಚಿತ್ರಗಳಲ್ಲಿ ತೆರೆ ಹಂಚಿಕೊಂಡಿದ್ದರು. 1966ರಲ್ಲಿ ಮಮತೆಯ ಬಂಧನ ಸಿನಿಮಾವನ್ನು ದ್ವಾರಕೀಶ್ ಅವರು ಮತ್ತಿಬ್ಬರು ನಿರ್ಮಾಪಕರ ಜೊತೆ ಸೇರಿ ತುಂಬಾ ಪಿಕ್ಚರ್ಸ್ ಬ್ಯಾನರ್‌ನಲ್ಲಿ ನಿರ್ಮಾಣ ಮಾಡಿದ್ದರು. 1969ರಲ್ಲಿ ಡಾ.ರಾಜ್‌ಕುಮಾರ್ ಅಭಿನಯದ ಮೇಯರ್ ಮುತ್ತಣ್ಣ ಎಂಬ ಸಿನಿಮಾಗೆ ಬಂಡವಾಳ ಹಾಕುವ ಮೂಲಕ ಸ್ವತಂತ್ರ ನಿರ್ಮಾಪಕರಾಗಿ ಯಶಸ್ವಿಯಾದರು. ಈ ಚಿತ್ರ ಸೂಪರ್ ಹಿಟ್ ಆಗಿತ್ತು.
1985ರಲ್ಲಿ ನೀ ಬರೆದ ಕಾದಂಬರಿ ಎಂಬ ಚಿತ್ರಕ್ಕೆ ಮೊದಲ ಬಾರೊಗೆ ಡೈರೆಕ್ಟರ್ ಕ್ಯಾಪ್ ತೊಟ್ಟರು. ಇದು ಸೂಪರ್ ಹಿಟ್ ಆಗಿತ್ತು. ಡಾನ್ಸ್ ರಾಜ ಡಾನ್ಸ್, ಶ್ರುತಿ, ಶ್ರುತಿ ಹಾಕಿದ ಹೆಜ್ಜೆ, ರಾಯರು ಬಂದರು ಮಾವನ ಮನೆಗೆ ಸೇರಿ ಸುಮಾರು ಬ್ಲಾಕ್ ಬಸ್ಟರ್ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ವಿಷ್ಣು ವರ್ಧನ್ ಮತ್ತು ದ್ವಾರಕೀಶ್ ಜೋಡಿಯಾಗಿ ನಟಿಸಿ, ಸೂಪರ್ ಹಿಟ್ ಚಿತ್ರಗಳು ಆಪ್ತಮಿತ್ರ,ಕಳ್ಳ ಕುಳ್ಳ,ಕಿಲಾಡಿಗಳು,ಸಿಂಗಾಪುರದಲ್ಲಿ ರಾಜ ಕುಳ್ಳ, ಕಿಟ್ಟು ಪುಟ್ಟು.
ಬೆಂಗಳೂರು ವಿವಿ ಘಟಿಕೋತ್ಸವದಲ್ಲಿ ನಟ ದ್ವಾರಕೀಶ್‌ಗೆ ಗೌರವ ಡಾಕ್ಟರೇಟ್ ಪ್ರದಾನ
ಜನ್ಮರಹಸ್ಯ, ಮಂಕುತಿಮ್ಮ,ಪೆದ್ದ ಗೆದ್ದ,ಕಿಟ್ಟು ಪುಟ್ಟು, ಸಿಂಗಾಪುರದಲ್ಲಿ ರಾಜಾಕುಳ್ಳ, ಮನೆ ಮನೆ ಕಥೆ, ಆಫ್ರಿಕಾದಲ್ಲಿ ಶೀಲಾ, ಆಪ್ತಮಿತ್ರ, ಭಲೇ ಹುಡುಗ, ಬಂಗಾರದ ಮನುಷ್ಯ, ಗಲಾಟೆ ಸಂಸಾರ,ಪ್ರಚಂಡ ಕುಳ್ಳ, ಆಪ್ತಮಿತ್ರ, ಗುರುಶಿಷ್ಯರು, ವಿಷ್ಣುವರ್ಧನ,ಕಳ್ಳ ಕುಳ್ಳ, ಮುದ್ದಿನ ಮಾವ, ರಾಯರು ಬಂದರು ಮಾವನ ಮನೆಗೆ, ಆಟಗಾರ, ಚೌಕ, ಪ್ರೀತಿ ಮಾಡು ತಮಾಷೆ ನೋಡು ಮುಂತಾದ ಚಿತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಅದರಲ್ಲಿಯೂ ಗುರು ಶಿಷ್ಯರು ಚಿತ್ರದಲ್ಲಿ ಇವರ ಅಭಿನಯ ಇಂದಿಗೂ ಕನ್ನಡ ಚಿತ್ರ ರಸಿಕರ ಮನಸ್ಸಿನಲ್ಲಿದ್ದು, ಚಿತ್ರದ ಕೆಲವು ದೃಶ್ಯಗಳನ್ನು ನೆನಪಿಸಿಕೊಂಡು ಬಿದ್ದು ಬಿದ್ದು ನಗುವವರಿದ್ದಾರೆ.
ಏಪ್ರಿಲ್ 26, 1967 ರಂದು ದ್ವಾರಕೀಶ್ ತಮ್ಮ ಸಂಬಂಧಿಯೇ ಆದ ಅಂಬುಜಾ ಅವರನ್ನು ಮದುವೆಯಾದರು. ದ್ವಾರಕೀಶ್ ಗೆ ಮೂವರು ಪತ್ನಿಯರು ಮತ್ತು 6 ಮಕ್ಕಳು. ಶೈಲಜಾ ಎರಡನೇ ಪತ್ನಿ. ಮೊದಲನೇ ಮಗ ತಂದೆಯೊಂದಿಗೆ ಚಿತ್ರ ನಿರ್ಮಾಣದಲ್ಲಿ ತೊಡಗಿದ್ದರೆ, ಉಳಿದವರು ಒಂದೆರಡು ಚಿತ್ರಗಳಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಿ ಈಗ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮೂರು ವರ್ಷಗಳ ಹಿಂದೆ ಅವರ ಮೊದಲನೇ ಪತ್ನಿ ಅಂಬುಜಾರನ್ನು ಇದೇ ದಿನ ಅಗಲಿದ್ದರು.
ನಾಳೆ ಅಂತ್ಯಕ್ರಿಯೆ: ತಮ್ಮ ಕೊನೆಯ ದಿನಗಳಲ್ಲಿ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಸ್ಮೈಲ್ ಗ್ರೀನ್ಸ್ ವಿಲ್ಲಾದಲ್ಲಿ ತಮ್ಮ ಮಗ ಯೋಗೀಶ್ ದ್ವಾರಕೀಶ್ ಜೊತೆ ವಾಸವಿದ್ದರು. ನಾಳೆ ಚಾಮರಾಜಪೇಟೆಯ ಟಿಆರ್ ಮಿಲ್ ನಲ್ಲಿ ದ್ವಾರಕೀಶ್ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.