
ಚಂದನವನದ ಮಿನುಗುತಾರೆ ಕಲ್ಪನಾ ಸಾಯುವ ಹಿಂದಿನ ದಿನ ನಡೆದ ಘಟನೆಯನ್ನು ರಂಗಭೂಮಿ ಕಲಾವಿದೆ, ಹಿರಿಯ ನಟಿ ಜಯಲಕ್ಷ್ಮೀ ಪಾಟೀಲ್ ಹೇಳಿದ್ದಾರೆ. ಯುಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿರುವ ಜಯಲಕ್ಷ್ಮೀ ಪಾಟೀಲ್, ರಂಗಭೂಮಿಯ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಇದೇ ಸಂದರ್ಶನದಲ್ಲಿ ಕಲ್ಪನಾ ಸಾಯುವ ಹಿಂದಿನ ನಡೆದ ಘಟನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ನಾಟಕ ಕಂಪನಿ ಮಾಲೀಕ ಬಸವರಾಜ್ ಗುಡಿಗೇರಿ ಮತ್ತು ಕಲ್ಪನಾ ನಡುವೆ ಏನಾಯ್ತು ಎಂಬ ಸತ್ಯವನ್ನು ಹೇಳಿದ್ದಾರೆ. ಒಮ್ಮೆ ಬಸವರಾಜ್ ಅವರ ಬೈಕ್ ಮೇಲೆ ಕಲ್ಪನಾ ಬರೋದನ್ನು ನೋಡಿ ನಮಗೆ ಒಂದು ರೀತಿ ಖುಷಿಯಾಯ್ತು. ಅಂದು ನಮ್ಮ ಜೊತೆ ಸ್ಪಲ್ಪ ಸಮಯ ಮಾತನಾಡಿದರು. ನಂತರ ಮತ್ತೊಂದು ದಿನ ನಮ್ಮೆಲ್ಲರನ್ನು ಕರೆಸಿಕೊಂಡು ಹೊಟ್ಟೆ ತುಂಬಾ ಮಾತನಾಡಿದ್ದರು ಎಂದು ಹೇಳಿದ್ದರು.
ಕಲ್ಪನಾ ಸಾಯುವ ಹಿಂದಿನ ದಿನ ನಾಟಕದಲ್ಲಿ ಭಾಗಿಯಾಗಿದ್ದರು. ಅಂದಿನ ನಾಟಕದಲ್ಲಿ ಕಲ್ಪನಾ ಮತ್ತು ಬಸವರಾಜ್ ಗುಡಿಗೇರಿ ತಾಯಿ-ಮಗನ ಪಾತ್ರದಲ್ಲಿ ನಟಿಸಿದ್ದರು. ಹಾಲು ಕುಡಿ ರಾಮ ಅಂತ ಹೇಳುವ ಬದಲು ಹುಲ್ಲು ಕುಡಿ ರಾಮ ಎಂದು ಕಲ್ಪನಾ ಹೇಳಿದರು. ಮುಂದೆಯೇ ಕುಳಿತಿದ್ದ ಜನಕ್ಕೆ ಕಲ್ಪನಾಜೀ ಡೈಲಾಗ್ ತಪ್ಪು ಹೇಳಿದರು ಅನ್ನೋದು ಗೊತ್ತಾಯ್ತು. ಹಿಂದೆ ಇದ್ದವರಿಗೆ ಗೊತ್ತಾಗಿರಲಿಲ್ಲ. ಬಸವರಾಜ್ ಸುಮ್ಮನೇ ಇದ್ದಿದ್ರೆ ಏನು ಆಗುತ್ತಿರಲಿಲ್ಲ. ಆದ್ರೆ ಅವರು, ಏನಂದೆ... ನಾನು ಹುಲ್ಲು ಕುಡಿಬೇಕಾ ಎಂದು ಮರು ಪ್ರಶ್ನೆ ಮಾಡಿದರು. ಆಗ ಎಲ್ಲಾ ವೀಕ್ಷಕರಿಗೂ ಗೊತ್ತಾಯ್ತು. ಆಗ ಕಲ್ಪನಾ ಅವರಿಗೆ ಸ್ವಲ್ಪ ಬೇಜಾರು ಆಯ್ತು. ಆ ಕ್ಷಣದಲ್ಲಿಯೇ ಡೈಲಾಗ್ ಇಂಪ್ರೂವ್ ಮಾಡಿಕೊಂಡ ಕಲ್ಪನಾ, ನಾನು ಹಾಲು ಕುಡಿಯುತ್ತೇನೆ. ನೀನು ಹುಲ್ಲು ಕುಡಿ ಎಂದರು.
ಕಲ್ಪನಾ ಅವರ ಈ ಡೈಲಾಗ್‌ಗೆ ಜನರು ಶಿಳ್ಳೆ ಹಾಕಿ ಚಪ್ಪಾಳೆ ತಟ್ಟಿದರು. ಇದರಿಂದ ವೇದಿಕೆ ಮೇಲಿದ್ದ ಬಸವರಾಜ್ ಅವರಿಗೆ ಮುಜುಗರ ಉಂಟಾಯ್ತು. ವೇದಿಕೆಯಲ್ಲಿ ಕಲ್ಪನಾ ಕೌಂಟರ್ ಕೊಟ್ಟಿದ್ದಕ್ಕೆ ಬಸವರಾಜ್ ಅವರಿಗೆ ಸಿಟ್ಟು ಬಂತು. ತೆರೆಯ ಹಿಂದೆ ಇದೇ ವಿಷಯವಾಗಿ ಇಬ್ಬರ ನಡುವೆ ಜಗಳ ಶುರುವಾಯ್ತು. ಕಲ್ಪನಾ ಎಷ್ಟು ಎತ್ತರವಾಗಿದ್ರೂ ಹೈ ಹೀಲ್ಸ್ ಹಾಕುತ್ತಿದ್ದರು. ಜಗಳದ ಸಂದರ್ಭದಲ್ಲಿ ಕಲ್ಪನಾ ಧರಿಸಿದ್ದ ಚಪ್ಪಲಿ ಬೆಲ್ಟ್ ಕಳಚಿತ್ತು. ಅದನ್ನು ಸರಿಮಾಡಿಕೊಳ್ಳಲು ಬಾಗಿದಾಗ, ನನಗೆ ಚಪ್ಪಲಿ ತೆಗೆದುಕೊಂಡೆಯಾ ಎಂದು ಬಸವರಾಜ್ ಹೊಡೆಯಲು ಆರಂಭಿಸಿದರು. ಕಲ್ಪನಾ ಅವರಿಗೆ ಹೇಳಲು ಅವಕಾಶ ಸಹ ಕೊಡದೇ ತುಂಬಾನೇ ಹೊಡೆದರು. ಎಷ್ಟು ಜನ ಬಂದು ಬಿಡಿಸಿದ್ರೂ ಬಸವರಾಜ್ ಕೇಳಲಿಲ್ಲ. ನಾಟಕ ಮುಗಿದ್ಮೇಲೆ ನಾನೆಲ್ಲಿ ನಿನಗೆ ಚಪ್ಪಲಿ ತೆಗೆದುಕೊಂಡೆ, ನಾನು ಅದನ್ನು ಸರಿ ಮಾಡಿಕೊಳ್ಳುತ್ತಿದ್ದೆ ಅಂದಾಗ ಬಸವರಾಜ್ ಅವರಿಗೆ ವಿಷಯ ಗೊತ್ತಾಯ್ತು ಎಂದು ಜಯಲಕ್ಷ್ಮೀ ಪಾಟೀಲ್ ಸಂದರ್ಶನದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಮಿನುಗುತಾರೆ ಕಲ್ಪನಾ ಆಶೀರ್ವಾದ ಪಡೆದ ಈ ಮಗು ಯಾರು ಗೊತ್ತಾ?
ಅಂದು ರಾತ್ರಿ ಬಸವರಾಜ್ ಗುಡಿಗೇರಿ ಅವರು ಕಲ್ಪನಾ ಜೊತೆಯಲ್ಲಿ ಐಬಿಗೆ ಹೋಗಿ ಸಮಾಧಾನ ಮಾಡಿದ್ರೆ ಅವರು ಆ*ತ್ಮಹತ್ಯೆಯ ನಿರ್ಧಾರ ತೆಗೆದುಕೊಳ್ಳುತ್ತಿರಲಿಲ್ಲ ಅನ್ನೋದು ನನ್ನ ಅಭಿಪ್ರಾಯ. ಆದ್ರೆ ರಾತ್ರಿ ನೀವು ಮತ್ತೆ ಹೋಗಿ ಜಗಳ ಮಾಡಿಕೊಂಡ್ರೆ ಹೇಗೆ ಎಂದು ಕೆಲವರು ಬೇರೊಬ್ಬ ಹುಡುಗನ ಬೈಕ್ ಮೇಲೆ ಕಲ್ಪನಾ ಅವರನ್ನು ಕಳುಹಿಸಿದ್ದರು. ಬಸವರಾಜ್ ಅವರು ಕೆಲಸದ ನಿಮಿತ್ತ ಹುಬ್ಬಳ್ಳಿಗೆ ಹೋದರು. ಆ ರಾತ್ರಿ ಬಸವರಾಜ್ ಐಬಿಗೆ ಹೋಗಿದ್ದರೆ ಕಲ್ಪನಾ ಸಾಯುತ್ತಿರಲಿಲ್ಲ ಎಂದು ಜಯಲಕ್ಷ್ಮೀ ಪಾಟೀಲ್ ಹೇಳಿದರು.
ರಾತ್ರಿ ಸಂಕೇಶ್ವರದಲ್ಲಿ ನಮ್ಮ ನಾಟಕ ಶುರುವಾಗಿದ್ದ ಸಂದರ್ಭದಲ್ಲಿ ಕಲ್ಪನಾ ಇನ್ನಿಲ್ಲ ಎಂಬ ವಿಷಯ ಬಂತು. ಅಲ್ಲಿ ಬಸವರಾಜ್ ಗುಡಿಗೇರಿಯವರು ಇಲ್ಲ. ನಾಟಕ ಅಲ್ಲಿಗೆ ನಿಂತು ಹೋಯ್ತು, ಬೆಳಗ್ಗೆ ಕಲ್ಪನಾ ಅವರನ್ನು ಬೆಳಗಾವಿ ಆಸ್ಪತ್ರೆಗೆ ಕೊಂಡೊಯ್ಯಲಾಯ್ತು. ತಾಯಿ ಕೊಟ್ಟಿದ್ದ ಕಿತ್ತಳೆ ಬಣ್ಣದ ಸೀರೆ ಧರಿಸಿ, ದೊಡ್ಡ ಕುಂಕುಮ ಇಟ್ಕೊಂಡದ್ದರು. ಲಿಪ್‌ಸ್ಟಿಕ್ ಹಾಕಿದ್ದರು. ಆ ದೃಶ್ಯ ಇನ್ನು ನನ್ನ ಕಣ್ಮುಂದಿದೆ. ನಂತರ ಅಲ್ಲಿಂದ ಅವರ ತಾಯಿ ಬಂದು ಕಲ್ಪನಾ ಶವ ತೆಗೆದುಕೊಂಡು ಹೋದರು ಎಂಬ ವಿಷಯ ನಮಗೆ ತಿಳಿಯಿತು ಎಂದು ಜಯಲಕ್ಷ್ಮೀ ಪಾಟೀಲ್ ಹೇಳಿದ್ದಾರೆ.
ಇದನ್ನೂ ಓದಿ: ಅದೊಂದು ಡೈಲಾಗ್‌ಗೆ ಪ್ರಾಣವನ್ನೇ ಬಿಟ್ಟ ಕಲ್ಪನಾ; ಆ ಕರಾಳ ರಾತ್ರಿ ಸತ್ಯವಾಗಿ ನಡೆದಿದ್ದೇನು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.