* ಎತ್ತಿ ಆಡಿಸಿದ ಮಗು ಅವನು, ಹೀಗೆ ಹೋಗಬಾರದಿತ್ತು
* ಆತನ ಸಾವಿನ ಸುದ್ದಿಯಿಂದ ತಲೆ ಗುಮ್ ಎನ್ನುತ್ತಿದೆ
* ಕನ್ನಡಕ್ಕಾಗಿ ಒಟಿಟಿ ಮಾಡೋಣ ಎಂದುಕೊಂಡಿದ್ದೆವು. ಈಗ ಒಟಿಟಿ ಬಗ್ಗೆ ಯಾರನ್ನು ಕೇಳಲಿ?
ಬೆಂಗಳೂರು(ಅ.31): ನಾನು ಮತ್ತು ಪುನೀತ್ ರಾಜ್‌ಕುಮಾರ್ ಜೊತೆಯಾಗಿ ನಟಿಸಿದ ಮೊದಲ ಸಿನಿಮಾ ‘ಭಕ್ತ ಪ್ರಹ್ಲಾದ’. ರಾಜ್‌ಕುಮಾರ್ ಅವರ ಜೊತೆ ನಾನು ಆಗಲೇ ‘ಕಾಮನಬಿಲ್ಲು’ ಸಿನಿಮಾದಲ್ಲಿ ನಟಿಸಿದ್ದೆ. ಹಾಗಾಗಿ ‘ಭಕ್ತ ಪ್ರಹ್ಲಾದ’ ಸಿನಿಮಾದಲ್ಲಿ ನಾರದನ ಪಾತ್ರದಲ್ಲಿ ನಟಿಸಲು ಕೇಳಿಕೊಂಡಿದ್ದರು. ನಾನು ಒಪ್ಪಿದ್ದೆ. ಅಲ್ಲಿ ಪ್ರಹ್ಲಾದನಾಗಿ ಸಿಕ್ಕವನು ಪುನೀತ್ ರಾಜ್‌ಕುಮಾರ್(Puneeth Rajkumar). ಪುಟ್ಟಹುಡುಗ. ನಾನು ಎತ್ತಿ ಆಡಿಸಿದ ಮಗು. ಅವನ ಮೂಡ್‌ಗೆ ತಕ್ಕಂತೆ ನಟನೆ ನಡೆಯುತ್ತಿತ್ತು. ಒಳ್ಳೆಯ ಮೂಡ್‌ನಲ್ಲಿದ್ದಾಗ ನಟಿಸುತ್ತಿದ್ದ. ಇಲ್ಲದಿದ್ದರೆ ಎದ್ದು ಹೋಗಿ ಬಿಡುತ್ತಿದ್ದ. ಆಮೇಲೆ ಅವನ ಅಮ್ಮ ರಮಿಸಿ ಒಪ್ಪಿಸಿ ಈಗ ನಟಿಸುತ್ತಾನಂತೆ ಎಂದು ಹೇಳುತ್ತಿದ್ದರು. ಅವನಿಗೆ ಮೂಡ್ ಬಂದಾಗ ನಾವೂ ರೆಡಿ ಇರಬೇಕಿತ್ತು. ಮತ್ತೆ ನಟನೆ ಶುರುವಾಗುತ್ತಿತ್ತು ಅಂತ ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್(Anant Nag) ತಿಳಿಸಿದ್ದಾರೆ.
ಪ್ರಹ್ಲಾದನಾಗಿ ಸಿಕ್ಕವನು ಮುಂದೆ ಬೆಳೆದು ದೊಡ್ಡವನಾಗಿ ನಾಯಕನಾದ ಮೇಲೆ ‘ಪರಮಾತ್ಮ’ ಚಿತ್ರದಲ್ಲಿ ಸಿಕ್ಕ. ಆಗ ವಿಚಾರ ಶಕ್ತಿ ಬೆಳೆಸಿಕೊಂಡಿದ್ದ. ನಟನೆ ಕುರಿತಾಗಿ ಪ್ರಶ್ನೆ ಕೇಳುತ್ತಿದ್ದ. ಚರ್ಚೆ ಮಾಡುತ್ತಿದ್ದೆವು. ನಿಮ್ಮ ಎಲ್ಲಾ ಸಿನಿಮಾ ನೋಡಿದ್ದೇನೆ, ಅಭಿಮಾನಿ(Fan) ನಾನು ಎಂದಿದ್ದ. ನಿಮ್ಮ ಬರ ಸಿನಿಮಾ ನೋಡಿದ್ದೇನೆ, ಅದೇ ಸ್ಫೂರ್ತಿಯಿಂದ ನಾನು ಪೃಥ್ವಿ ಸಿನಿಮಾ ಮಾಡಿದ್ದೇನೆ, ನೀವು ನೋಡಬೇಕು ಎಂದು ಕೇಳಿಕೊಂಡಿದ್ದ. ನೀವು ‘ಬರ’ ಚಿತ್ರದಲ್ಲಿ ಜಿಲ್ಲಾಧಿಕಾರಿಯಾಗಿ ನಟಿಸಿದಂತೆ ‘ಪೃಥ್ವಿ ’ ಸಿನಿಮಾದಲ್ಲಿ ನಾನು ಜಿಲ್ಲಾಧಿಕಾರಿಯಾಗಿ ನಟಿಸಿದ್ದೇನೆ ಎಂದು ಮಕ್ಕಳಂತೆ ಖುಷಿಯಿಂದ ಹೇಳಿದ್ದ. ತನ್ನ ಐಡಲ್ ನಟಿಸಿದ ಪಾತ್ರದಲ್ಲಿ ತಾನೂ ನಟಿಸಿದ್ದೇನೆ ಎಂದು ಹೇಳುವಾಗಿನ ಮುಗ್ಧತೆ ಇತ್ತು ಆ ದನಿಯಲ್ಲಿ. ಆ ಚಿತ್ರದ ಸಿಡಿಯನ್ನೂ ಕಳುಹಿಸಿಕೊಟ್ಟಿದ್ದ. ನಾನು ಮತ್ತು ಗಾಯತ್ರಿ ಈ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದೆವು. ಪುನೀತ್‌ಗೆ ಈ ಸಿನಿಮಾದ ತನ್ನ ಪಾತ್ರದ ಮೇಲೆ ತುಂಬಾ ಹೆಮ್ಮೆ ಇತ್ತು.
ಪುನೀತ್ ಸಾವಿಗೆ ಕಾರಣ ಬಹಿರಂಗಪಡಿಸಿದ ವೈದ್ಯರು
‘ರಾಜಕುಮಾರ’ ಚಿತ್ರದಲ್ಲಿ ನಟಿಸುವಾಗಲೂ ಅಷ್ಟೇ ನಟನೆ ಕುರಿತ ಮಾತುಕತೆ ನಡೆಯುತ್ತಿತ್ತು. ಅವನು ನಿರ್ಮಿಸಿದ ‘ಕವಲುದಾರಿ’ ಸಿನಿಮಾ(Movie) ಸಂದರ್ಭದಲ್ಲಿ ಅವನೇ ಬಂದು ನಾನೇ ನಿಮ್ಮನ್ನು ಸಂದರ್ಶನ(Interview) ಮಾಡುತ್ತೇನೆ ಆಗಬಹುದಾ ಎಂದಿದ್ದ. ನಾನು ನಕ್ಕು ಸರಿ ಎಂದಿದ್ದೆ. ಮನೆಗೆ ಬಂದು ಸುಮಾರು ಮೂರು ಗಂಟೆ ಕಾಲ ಸಂದರ್ಶನ ಮಾಡಿದ್ದ. ಅಂಥಾ ಉತ್ಸಾಹಿ ಅವನು. ತನ್ನ ನಿರ್ಮಾಣ ಸಂಸ್ಥೆಯಲ್ಲಿ ಹೊಸ ಹುಡುಗರಿಗೆ ಅವಕಾಶ ಕೊಡುತ್ತಿದ್ದ. ಕಡಿಮೆ ಬಜೆಟ್‌ನಲ್ಲಿ ಸಿನಿಮಾ ಮಾಡಿ ಹೊಸ ಪ್ರತಿಭೆಗಳನ್ನು ಬೆಳಕಿಗೆ ತರುವ ಕನಸು ಹೊತ್ತಿದ್ದ. ಕವಲುದಾರಿ ಸಿನಿಮಾ ಸಂದರ್ಭದಲ್ಲಿ ನಾನು ಅವನ ಬಳಿ ಕನ್ನಡಕ್ಕಾಗಿಯೇ(Kannanda) ಮೀಸಲಾಗಿರುವ ಒಂದು ಓಟಿಟಿ(OTT) ಮಾಡಬೇಕು, ಹೊಸ ಪ್ರತಿಭೆಗಳಿಗೆ ಧೈರ್ಯ ಸಿಗುತ್ತದೆ ಎಂದಿದ್ದೆ. ಅವನು ಒಪ್ಪಿಕೊಂಡಿದ್ದ. ಕೊರೋನಾ ಗಲಾಟೆ ಮುಗಿದ ಮೇಲೆ ಮಾಡೋಣ ಎಂದಿದ್ದ. ನಾನು ನನ್ನ ಬಳಿ ಬಂದ ಹೊಸ ಹುಡುಗರ ಐದಾರು ಸ್ಕ್ರಿಪ್ಟ್‌ಗಳನ್ನು ಒಪ್ಪಿಕೊಂಡಿದ್ದೆ. ಅವರಿಗೆಲ್ಲಾ ಕನ್ನಡದ ಸಿನಿಮಾಗಳಿಗಾಗಿ ಹೊಸ ಓಟಿಟಿ ಬರುತ್ತದೆ ಎಂದು ಹೇಳಿದ್ದೆ. ಈಗ ಯಾರನ್ನು ಕೇಳಲಿ?
ನಾನು ಎಲ್ಲೇ ಕಂಡರೂ ಬಂದು ನನ್ನ ಪಾದಕ್ಕೆ ಬೀಳುತ್ತಿದ್ದ. ಅವನಷ್ಟೇ ಅಲ್ಲ ರಾಜ್‌ಕುಮಾರ್ ಅವರ ಮೂವರು ಮಕ್ಕಳು ಕೂಡ ನಾನಷ್ಟೇ ಅಲ್ಲ ಯಾರೇ ಹಿರಿಯರು ಕಂಡರೂ ಪಾದಕ್ಕೆ ನಮಸ್ಕರಿಸುವ ವಿನಯ ಬೆಳೆಸಿಕೊಂಡಿದ್ದರು. ಅವರ ತಂದೆ ಅವರಿಗೆ ಆ ಸಂಸ್ಕಾರ ಕೊಟ್ಟಿದ್ದರು. ಯಾವ ವಿವಾದಕ್ಕೂ ಈ ಹುಡುಗರು ಸಿಲುಕಿಕೊಂಡವರಲ್ಲ. ಸಿಟ್ಟನ್ನು ಸಾರ್ವಜನಿಕವಾಗಿ ತೋರಿಸಿಕೊಂಡವರಲ್ಲ. ಅದೇ ಕಾರಣಕ್ಕೆ ಜನರು ಕೂಡ ಅವರಿಗೆ ಅಪಾರವಾದ ಪ್ರೀತಿಯನ್ನು ತೋರಿಸುತ್ತಾರೆ.
ಪುನೀತ್ ಇನ್ನಿಲ್ಲ ಎಂಬ ಸುದ್ದಿ ಕಿವಿಗೆ ಬಿದ್ದಾಗ ನಾನು ನಂಬಲೇ ಇಲ್ಲ. ಕೊನೆಗೂ ಸತ್ಯ ಅಂತ ಗೊತ್ತಾಯಿತು. ನಮ್ಮ ಸೆಟ್‌ನ ಹುಡುಗರು ತಕ್ಷಣ ಕಣ್ಣೀರು ಹಾಕಿದರು. ನಾನು ಒಂದು ಗಂಟೆ ಸುಮ್ಮನೆ ಕುಳಿತೇ ಇದ್ದೆ. ಹುಬ್ಬಳ್ಳಿಯಿಂದ ಹೊರಟು ಬೆಂಗಳೂರಿಗೆ ಹೋಗೋಣ ಅನ್ನಿಸಿತು. ಆದರೆ ವಯಸ್ಸು ನನ್ನನ್ನು ಕಟ್ಟಿಹಾಕಿತು.
10 ಲಕ್ಷ ಅಭಿಮಾನಿಗಳಿಂದ ಅಪ್ಪು ಅಂತಿಮ ದರ್ಶನ!
ಅಗಲಿಕೆ ನನಗೆ ಇಷ್ಟುನೋವು ಕೊಟ್ಟಿದ್ದು ಇದು ಎರಡನೇ ಸಲ. ಮೊದಲ ಸಲ ಶಂಕರ್‌ನಾಗ್(Shankar Nag)ತೀರಿಕೊಂಡಾಗ. ಅವನೂ ಹಿಂದಿನ ದಿನ ರಾತ್ರಿ ಇದ್ದ. ಕತ್ತಲು ಕಳೆದು ಬೆಳಕು ಹರಿದ ಮೇಲೆ ಹೊರಡು ಎಂದಿದ್ದೆ. ಅವನು ರಾತ್ರಿಯೇ ಹೊರಟ. ದೂರ ಹೊರಟು ಹೋದ. ಪುನೀತ್ ಕೂಡ ಯಾರೂ ನಿರೀಕ್ಷೆ ಮಾಡದ ಗಳಿಗೆಯಲ್ಲಿ ಹೊರಟು ಬಿಟ್ಟಿದ್ದಾನೆ. ಅವನು ಇನ್ನಿಲ್ಲ ಅಂತ ಸುದ್ದಿ ಗೊತ್ತಾದ ಕ್ಷಣದಿಂದ ತಲೆ ಮೇಲೆ ಜೋರಾಗಿ ಏಟು ಬಿದ್ದಂತೆ ತಲೆ ಗುಮ್ ಎನ್ನುತ್ತಿದೆ. ಅವನ ಪತ್ನಿ ಮಕ್ಕಳನ್ನು ನೆನೆಯುವುದೇ ಕಷ್ಟವಾಗುತ್ತಿದೆ.
ಜನರು ವಿಧಿ ಮತ್ತು ಭಗವಂತ(God) ಒಂದೇ ಎಂಬಂತೆ ಮಾತನಾಡುತ್ತಿದ್ದಾರೆ. ಆದರೆ ವಿಧಿಯೇ ಬೇರೆ ಭಗವಂತನೇ ಬೇರೆ. ಸಂಚಿತ ಕರ್ಮ, ಆಗಾಮಿ ಕರ್ಮ(Karma) ಮತ್ತು ಪ್ರಾರಬ್ಧ ಕರ್ಮ ಸೇರಿಕೊಂಡು ವಿಧಿ ಆಗುತ್ತದೆ. ವಿಧಿ ನಿರ್ಧರಿಸಿದ್ದನ್ನು ನಿಯಂತ್ರಿಸುವ ಶಕ್ತಿ ಭಗವಂತನಿಗೆ ಇರುತ್ತದೆ. ಆದರೆ ಇಲ್ಲಿ ಭಗವಂತ ವಿಧಿಯನ್ನು ನಿಯಂತ್ರಿಸುವ ಮನಸ್ಸು ಮಾಡಲಿಲ್ಲ. ಆಸ್ಪತ್ರೆಗೆ(Hospital) ಹೋದ ಪುನೀತ್ ವಾಪಸ್ ಬರಲಿಲ್ಲ. ಶಂಕರ ಇರಬೇಕಿತ್ತು ಅಂತ ನನಗೆ ಯಾವಾಗಲೂ ಅನ್ನಿಸುತ್ತಿರುತ್ತದೆ. ಪುನೀತ್ ಇರಬೇಕಿತ್ತು ಅಂತ ಈಗ ತುಂಬಾ ಅನ್ನಿಸುತ್ತಿದೆ.
ಪುನೀತ್ ಇನ್ನಿಲ್ಲ ಎಂಬ ಸುದ್ದಿ ಕಿವಿಗೆ ಬಿದ್ದಾಗ ನಾನು ನಂಬಲೇ ಇಲ್ಲ. ಕೊನೆಗೂ ಸತ್ಯ ಅಂತ ಗೊತ್ತಾಯಿತು. ಜನರು ವಿಧಿ ಮತ್ತು ಭಗವಂತ ಒಂದೇ ಎಂಬಂತೆ ಮಾತನಾಡುತ್ತಿದ್ದಾರೆ. ಆದರೆ ವಿಧಿಯೇ ಬೇರೆ ಭಗವಂತನೇ ಬೇರೆ. ಶಂಕರ ಇರಬೇಕಿತ್ತು ಅಂತ ನನಗೆ ಯಾವಾಗಲೂ ಅನ್ನಿಸುತ್ತಿರುತ್ತದೆ. ಪುನೀತ್ ಇರಬೇಕಿತ್ತು ಅಂತ ಈಗ ತುಂಬಾ ಅನ್ನಿಸುತ್ತಿದೆ. ಅವನ ಪತ್ನಿ ಮಕ್ಕಳನ್ನು ನೆನೆಯುವುದೇ ಕಷ್ಟವಾಗುತ್ತಿದೆ ಅಂತ ಅನಂತ್ ನಾಗ್ ಹೇಳಿದ್ದಾರೆ.