
2009ರಲ್ಲಿ ʼಸಾಹಸ ಸಿಂಹʼ ಡಾ ವಿಷ್ಣುವರ್ಧನ್ ನಿಧನರಾದರು. ಬೆಂಗಳೂರಿನ ಹೊರಭಾಗದಲ್ಲಿರುವ ನಟ ಬಾಲಣ್ಣ ಒಡೆತನದ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಅಂತ್ಯಕ್ರಿಯೆ ಮಾಡಲಾಗಿದೆ. ಅಲ್ಲಿಯೇ ಸಮಾಧಿ ಕೂಡ ಇತ್ತು ( Dr Vishnuvardhan Samadhi ). ಈಗ ಹೈಕೋರ್ಟ್ ಆಜ್ಞೆ ಮೇರೆಗೆ ರಾತ್ರೋರಾತ್ರಿ ಸಮಾಧಿಯನ್ನು ನೆಲಸಮ ಮಾಡಲಾಗಿದೆ. ಅಭಿಮಾನಿಗಳು ಆಕ್ರೋಶ ಹೊರಹಾಕಲಿದ್ದಾರೆ ಎಂದು ಪೊಲೀಸರು ಕೂಡ ಅಲ್ಲಿ ಭದ್ರತೆ ನೀಡುತ್ತಿದ್ದಾರೆ. ಈ ಜಾಗದ ಸಲುವಾಗಿ ಬಾಲಣ್ಣ ಕುಟುಂಬದಲ್ಲಿ ಒಂದಷ್ಟು ವಿರೋಧ ಇತ್ತು. ವಿಷ್ಣುವರ್ಧನ್ ಸಮಾಧಿ ಜಾಗ ಉಳಿಸಿಕೊಡಿ ಎಂದು ಅಭಿಮಾನಿಗಳು ಹೋರಾಟ ಮಾಡಿದ್ದರೂ ಕೂಡ ಅದೀಗ ವಿಫಲವಾಗಿದೆ. ಈ ಬಗ್ಗೆ ವಿಷ್ಣುವರ್ಧನ್ ಅಭಿಮಾನಿ ಸಂಘದ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರು ಮಾಧ್ಯಮದ ಜೊತೆ ಮಾತನಾಡಿದ್ದಾರೆ.
“ಇದು ಕರಾಳ ದಿನ, ನಾಚಿಕೆಗೇಡಿನ ಸರ್ಕಾರ. ಬಾಲಣ್ಣನ ದುರಾಸೆಯ ಕುಟುಂಬ, ನಮ್ಮನ್ನು ಅರ್ಥಮಾಡಿಕೊಳ್ಳಲಾಗದ ವಿಷ್ಣು ಕುಟುಂಬ. ಈ ಮೂವರ ಪ್ರಯತ್ನದ ಫಲವಾಗಿ ಈ ರೀತಿ ಆಗಿದೆ. ನಾವು ಪರಿಪರಿಯಾಗಿ ಬೇಡಿಕೊಂಡೆವು, ಹೈಕೋರ್ಟ್‌ನವರು ನಮಗೆ ಆರಂಭದಲ್ಲಿ ನಮ್ಮ ಮನವಿ ಸ್ವೀಕಾರ ಮಾಡಿ, ಆಮೇಲೆ ನಮ್ಮ ಟೈಮ್ ಯಾಕೆ ವೇಸ್ಟ್ ಮಾಡ್ತೀರಾ ಅಂತ ಜಡ್ಜ್ ಹೇಳಿದ್ದರು” ಎಂದು ವೀರಕಪುತ್ರ ಶ್ರೀನಿವಾಸ್ ಹೇಳಿದ್ದಾರೆ.
“ಬಾಲಣ್ಣನವರ ಅಭಿಮಾನಿ ಸ್ಟುಡಿಯೋದಲ್ಲಿ ಮಾಲ್ ಕಟ್ಟಬೇಕು ಎಂದು ನೋಡುತ್ತಿದ್ದಾರೆ. ಹಣದ ಆಸೆ ಸಲುವಾಗಿ ಬಾಲಣ್ಣನ ಕುಟುಂಬ ಈ ರೀತಿ ಮಾಡಿದೆ. ಕಲಾವಿದರಿಗೋಸ್ಕರ ಅಭಿಮಾನ್ ಸ್ಟುಡಿಯೋ ಕಟ್ಟಲಾಗಿತ್ತು, ಈಗ ಅಲ್ಲಿ ಮಾಲ್ ಮಾಡಲಾಗುತ್ತಿದೆಯಂತೆ” ಎಂದು ವೀರಕಪುತ್ರ ಶ್ರೀನಿವಾಸ್ ಹೇಳಿದ್ದಾರೆ.
“ಬದುಕಿರುವಾಗ ನೋವು ಕೊಡುತ್ತಾರೆ, ಸತ್ತಮೇಲೆ ಈ ರೀತಿ ನೋವು ಕೊಡುತ್ತಾರೆ ಎನ್ನೋದು ಬೇಸರ. ವಿಶ್ವದಲ್ಲೇ ಈ ರೀತಿ ಯಾವ ಕಲಾವಿದನಿಗೂ ಆಗಿರೋದಿಲ್ಲ ಅನಿಸುತ್ತದೆ. ಸಮಾಧಿಗೆ ಹತ್ತು ಗುಂಟೆ ಜಾಗ ಕೊಡಿ ಅಂತ ನಾವು ಕೇಳಿಕೊಂಡರೂ ಕೂಡ ಸರ್ಕಾರ ಬೆಲೆ ಕೊಡಲಿಲ್ಲ. ವಿಷ್ಣುವರ್ಧನ್ ಅವರು ಬದುಕಿದ್ದಾಗ ಅವರ ಪೋಸ್ಟರ್‌ಗಳನ್ನು ಸುಡುತ್ತಿದ್ದರು, ಈಗ ಸಮಾಧಿಯನ್ನು ಎತ್ತಂಗಡಿ ಮಾಡುತ್ತಾರೆ. ವಿಷ್ಣುವರ್ಧನ್ ನಿಧನರಾಗಿ ಹದಿನೈದು ವರ್ಷಗಳು ಕಳೆದಿವೆ, ಈಗಲೂ ಅವರ ಕಟೌಟ್ ಮೆರವಣಿಗೆ ಮಾಡಿದ ಎರಡು ಕಾಲು ಲಕ್ಷ ಜನರು ಸೇರಿದ್ದರು. ಇಷ್ಟು ದೊಡ್ಡ ಅಭಿಮಾನ ಇರುವ ನಟನಿಗೆ ಈ ರೀತಿ ಆಗಿರೋದು ಬೇಸರ ತಂದಿದೆ” ಎಂದು ವೀರಕಪುತ್ರ ಶ್ರೀನಿವಾಸ್ ಹೇಳಿದ್ದಾರೆ.
ಎರಡು ವರ್ಷಗಳ ಹಿಂದೆ ಬಾಲಣ್ಣ ಅವರ ಮಗಳು ಗೀತಾ ಬಾಲಿ ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ್ದು, “ಇಲ್ಲಿರುವ 20 ಎಕರೆಯಲ್ಲಿ 10 ಎಕರೆ ಅವ್ಯವಹಾರ ಆಗಿದೆ. ಬೇರೆ ರೀತಿಯಲ್ಲಿ ಅವ್ಯವಹಾರವಾಗಿ ಈ ಜಾಗ ಮಾರಾಟ ಆಗಿದೆ, ಇದು ನನಗೆ 2004ರಲ್ಲಿ ಗೊತ್ತಾಯ್ತು. ಇದು ನನ್ನ ತಂದೆಯ ಜಾಗ, ಇಲ್ಲಿ ನನ್ನ ತಂದೆ 30 ವರ್ಷಗಳ ಕಾಲ ಇದ್ದರು. ಹೀಗಾಗಿ ನಾನು ಕೇಸ್ ಹಿಂಪಡೆಯೋದಿಲ್ಲ. ಕೇಸ್ ಮರಳಿ ಪಡೆದರೆ ನನ್ನ ತಂದೆಗೆ ಮೋಸ ಆಗುತ್ತದೆ. ವಿಷ್ಣುವರ್ಧನ್ ಅವರಿಗೆ ಎರಡು ಎಕರೆ ಜಮೀನು ಕೊಡಲು ನನಗೆ ಸಮಸ್ಯೆ ಇಲ್ಲ. ಆದರೆ ಇಲ್ಲಿ ಕಾನೂನಾತ್ಮಕ ಸಮಸ್ಯೆ ಇದೆ. ಇದು ಅವರ ಅಭಿಮಾನಿಗಳಿಗೆ ಕೆಲವರಿಗೆ ಅರ್ಥ ಆಗಿಲ್ಲ” ಎಂದು ಹೇಳಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.