Upendra ಹಂಪಿಯಲ್ಲಿ ಯುಐ ಚಿತ್ರೀಕರಣ; ಸಾರ್ವಜನಿಕರು ಮತ್ತು ಸ್ಥಳೀಯ ಕಲಾವಿದರಿಗೂ ಅವಕಾಶ!

By Vaishnavi ChandrashekarFirst Published Oct 11, 2022, 11:26 AM IST
Highlights

 ಶುರುವಾಯ್ತು ಬಹು ನಿರೀಕ್ಷಿತ ಸಿನಿಮಾ ಚಿತ್ರೀಕರಣ. ಹಂಪಿಯಲ್ಲಿ ಉಪ್ಪಿ, ಅಭಿಮಾನಿಗಳು ಫುಲ್ ಖುಷ್..

ಕನ್ನಡ ಚಿತ್ರರಂಗದ ಓನ್ ಆಂಡ್ ಓನ್ಲಿ ರಿಯಲ್ ಸ್ಟಾರ್ ಉಪೇಂದ್ರ ನಟಿಸಿರುವ ಕಬ್ಜ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ, ಸಣ್ಣ ಪುಟ್ಟ ಪೋಸ್ಟ್‌ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು ಸಿನಿಮಾ ಭರ್ಜರಿಯಾಗಿ ತೆರೆ ಮೇಲೆ ಅಬ್ಬರಿಸಲಿದೆ. ಉಪ್ಪಿ ಮುಂದಿನ ಸಿನಿಮಾ ಯಾವುದು ಎಂದು ಪದೇ ಪದೇ ಪ್ರಶ್ನೆ ಮಾಡುತ್ತಿದ್ದವರಿಗೆ ಡೈರೆಕ್ಟರ್ ಆಗುತ್ತಿರುವೆ ಎಂದು ಹೇಳುವ ಮೂಲಕ ಯುಐ ಸಿನಿಮಾ ಘೋಷಣೆ ಮಾಡಿದ್ದರು. ಈಗ ಹಂಪಿಯಲ್ಲಿ ಚಿತ್ರೀಕರಣ ಶುರು ಮಾಡಿದ್ದಾರೆ.

ವಿಶ್ವವಿಖ್ಯಾತ ಹಂಪಿಗೆ ಸೋಮವಾರ ಉಪೇಂದ್ರ ತಮ್ಮ ಯುಐ ಫಿಲ್ಮಂ ಟೀಂ ಜೊತೆ ಪ್ರಮುಖ ಸ್ಮಾರಕಗಳ ವೀಕ್ಷಣೆ ಮಾಡಿದ್ದಾರೆ. ಮೊದಲು ವಿರೂಪಾಕ್ಷೇಶ್ವರ ದೇಗುಲಕ್ಕೆ ಭೇಟಿ ನೀಡಿ ವಿರೂಪಾಕ್ಷ, ಪಂಪಾದೇವಿ ಹಾಗೂ ಭುವನೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಕ್ಟೋಬರ್ 11ರಿಂದ 13ರವರೆಗೂ ಹೊಸ ಪೇಟೆ ಸುತ್ತಮುತ್ತ ಪ್ರದೇಶಗಳಲ್ಲಿ ಯುಐ ಸಿನಿಮಾ ಚಿತ್ರೀಕರಣ ನಡೆಯಲಿದೆ. ಈ ಹಿನ್ನಲೆಯಲ್ಲಿ ವಿಜಯವಿಠಲ ದೇವಾಲಯ ಸೇರಿದಂತೆ ವಿವಿಧ ಸ್ಮಾರಕಗಳನ್ನು ವೀಕ್ಷಣೆ ಮಾಡಿ ಕಣ್ತುಂಬಿಕೊಂಡರು.

ಹೊಸಪೇಟೆಯ ಹಳ್ಳೆಯ ಥಿಯೇಟರ್ ಸರಸ್ವತಿ ಹಾಗೂ ಲಕ್ಷ್ಮಿ ಚಿತ್ರಮಂದಿರಗಳಲ್ಲಿ ಮೂರು ದಿನಗಳ ಕಾಲ ಯುಐ ಸಿನಿಮಾ ಚಿತ್ರೀಕರಣ ಮಾಡಲಿದ್ದು ಸ್ಥಳೀಯ ಕಲಾವಿದರು ಹಾಗೂ ಸಾರ್ವಜನಿಕರೂ ಕೂಡ ಭಾಗಹಿಸಿ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಳ್ಳುವ ಅವಕಾಶ ಪಡೆಯಬಹುದು.

ಅಪ್ಪು ಪುತ್ಥಳಿಗೆ ನಮನ:

ಕೆಲವು ತಿಂಗಳುಗಳ ಹಿಂದೆ ಹೊಸಪೇಟೆ ಅಭಿಮಾನಿಗಳು ಕೈ ಜೋಡಿಸಿ ನಿರ್ಮಾಣ ಮಾಡಿರುವ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಪುತ್ಥಳಿಗೆ ಉಪೇಂದ್ರ ಮತ್ತು ಟೀಂ ನಮನ ಸಲ್ಲಿಸಿದ್ದಾರೆ. ಅಪ್ಪು ಪುತ್ಥಳಿಗೆ ಮಾಲಾರ್ಪಣೆ ಮತ್ತು ಪುಷ್ಪಾರ್ಚನೆ ಮಾಡಿದ್ದಾರೆ. ರಿಯಲ್ ಸ್ಟಾರ್‌ನ ಕಂಡು ಸೆಲ್ಫಿಗಾಗಿ ಅಭಿಮಾನಿಗಳು ಮುಗಿ ಬಿದ್ದಿದ್ದಾರೆ, ಜನರನ್ನು ನಿಯಂತ್ರಿಸಲು ಪೊಲೀಸರು ಹರ ಸಾಹಸ ಮಾಡಿದ್ದಾರೆ. ಪ್ರೀತಿಯ ನಟನಿಗೆ ಡಾ.ರಾಜ್‌ಕುಮಾರ್ ಫ್ಯಾಮಿಲಿ ಫೋಟೋ ಮತ್ತು ಪುನೀತ್ ರಾಜ್‌ಕುಮಾರ್ ಫೋಟೋ ಗಿಫ್ಟ್ ಮಾಡಿದ್ದಾರೆ.

ಯು-ಐ ಅನ್ನಿ, ಮೂರು ನಾಮ ಅನ್ನಿ, ನಿಮಗೆ ಬಿಟ್ಟಿದ್ದು: Upendra

'ಅಪ್ಪು ಅವರಿಗೆ ಗೌರವ ಕೊಡಬೇಕು ಅಂದ್ರೆ ನಾವು ಅವರ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜೀವನದಲ್ಲಿ ಅಪ್ಪು ತರ ಬದುಕಬೇಕು. ಅಪ್ಪು ಪುತ್ಥಳಿ ಮಾಡಿದ್ದಾರೆ ಅಂತ ಹೂವಿನ ಹಾರ ಹಾಕಿ ಮನೆಗೆ ಹೋಗೋದಲ್ಲ ಅವರ ಗುಣಗಳನ್ನು ಜೀವನದಲ್ಲಿ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಯಾರು ಕೈ ಬಿಟ್ಟರು ನಮ್ಮ ಹೊಸಪೇಟೆ ಜನ ನಮ್ಮ ಕೈ ಬಿಡೋಲ್ಲ ಅಂದಿದ್ದರು ಅಪ್ಪು ನನಗೆ. ವಿಜಯನಗರದ ಮಣ್ಣಿನಲ್ಲಿದ್ದೀರಿ ನೀವು ವಿಜಯನಗರ ಸಾಮ್ರಾಜ್ಯ ದೊಡ್ಡ ಸಾಮ್ರಾಜ್ಯ' ಎಂದು ಅಪ್ಪು ಪುತ್ಥಳಿ ಮುಂದೆ ಉಪೇಂದ್ರ ಮಾತನಾಡಿದ್ದಾರೆ.

ಲಹರಿ ಫಿಲಂಸ್ ಮತ್ತು ವೀನಸ್ ಎಂಟರ್ ಟೈನರ್ಸ್ ಜಂಟಿ ನಿರ್ಮಾಣದಲ್ಲಿ ತಯಾರಾಗುತ್ತಿರುವ ಚಿತ್ರಕ್ಕೆ ಲಹರಿ ಫಿಲಂಸ್ ಮನೋಹರನ್ ಹಾಗೂ ಕೆ.ಪಿ ಶ್ರೀಕಾಂತ್ ಚಿತ್ರದ ನಿರ್ಮಿಸುತ್ತಿದ್ದಾರೆ. ರಾ ರಾ ರಕ್ಕಮ್ಮ ಖ್ಯಾತಿಯ ಅಜನೀಶ್ ಲೋಕನಾಥ್  ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಯುಐ ಸಿನಿಮಾ ಮುಹೂರ್ತದಲ್ಲಿ ಉಪ್ಪಿ ಹೇಳಿದ ಮಾತುಗಳು:

1. ಈ ಸಿನಿಮಾ ವಿಭಿನ್ನವಾಗಿರುತ್ತದೆ. ದೊಡ್ಡದಾಗಿ ಇರಲಿದೆ. ಬಜೆಟ್‌ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ ಎಂದು ನಿರ್ಮಾಪಕರು ಹೇಳಿದ್ದಾರೆ. ಇಡೀ ದೇಶವೇ ತಿರುಗಿ ನೋಡುವಂತಹ ಸಿನಿಮಾ ಮಾಡುತ್ತೇವೆ. ಬೇರೆ ಬೇರೆ ಭಾಷೆಯ ಕಲಾವಿದರು ನಟಿಸಲಿದ್ದಾರೆ.

2. ನಾನು ಕನ್ಫ್ಯೂಸ್‌ ಮಾಡುತ್ತೇನೆ ಅಂತಾರೆ. ಸತ್ಯವೇ ಗೊಂದಲ ಆಗಿಬಿಟ್ಟಿದೆ ನಮ್ಮ ಜನರಿಗೆ. ನಾನು ಕನ್ವಿನ್ಸ್‌ ಮಾಡುವುದಕ್ಕೆ ಪ್ರಯತ್ನಿಸುತ್ತೇನೆ. ಕನ್ವಿನ್ಸ್‌ ಆಗುವವರು ಆಗುತ್ತಾರೆ. ಕನ್ಫ್ಯೂಸ್‌ ಆಗುವವರು ಯಾವಾಗರೂ ಕನ್ಫ್ಯೂಸ್‌ ಆಗಿರುತ್ತಾರೆ.

3. ಸಿನಿಮಾ ಕೆಜಿಎಫ್‌ ತರಬೇಕು ಅಂತ ಏನೂ ಇಲ್ಲ. ಅದೊಂದು ಸಿನಿಮಾ ಅಷ್ಟೇ. ನಾವು ಇನ್ನೊಂದು ಸಿನಿಮಾ ಮಾಡೋಣ. ಜನ ಅದರ ಬಗ್ಗೆಯೂ ಮಾತನಾಡಬೇಕು. ಅದು ನಿಜವಾದ ಸಾಧನೆ. ನಾವು ಹೋಲಿಕೆ ಮಾಡಬಾರದು. ಮಕ್ಕಳಿಗೆ ತೆಂಡೂಲ್ಕರ್‌ ಆಗು, ಕಲಾಂ ಆಗು, ರಾಜ್‌ಕುಮಾರ್‌ ಆಗು ಅಂತ ಹೇಳಬಾರದು. ನೀನು ನೀನೇ ಆಗು ಅಂತ ಹೇಳಬೇಕು.

4. ಜನ ನನ್ನನ್ನು ನನ್ನ ಯೋಗ್ಯತೆಗಿಂತ ಜಾಸ್ತಿ ಹೊಗಳಿದ್ದಾರೆ. ನನ್ನ ತಲೆ ಸ್ಪೆಷಲ್‌ ಆಗಿ ಓಡುತ್ತದೆ ಎನ್ನುತ್ತಾರೆ. ದೇವರಾಣೆ ಏನೂ ಓಡುವುದಿಲ್ಲ. ನಾನು ತಲೆ ಖಾಲಿ ಇಟ್ಟುಕೊಳ್ಳುತ್ತೇನೆ. ಖಾಲಿ ಇಟ್ಟುಕೊಂಡಾಗಲೇ ಹೊಸ ಐಡಿಯಾಗಳು ಬರುತ್ತವೆ.

5. ನಾನು ನಿರ್ದೇಶಕನಾಗಿದ್ದಾಗ ತುಂಬಾ ಸ್ಟ್ರಾಂಗ್‌ ಆಗಿರುತ್ತೇನೆ. ಕಮಾಂಡಿಂಗ್‌ ಆಗಿ ಇರುತ್ತೇನೆ. ಪ್ಯಾನ್‌ ಇಂಡಿಯಾ ಅಂತ ಯಾವ ಸಿನಿಮಾಗಳೂ ಇರುವುದಿಲ್ಲ. ಸಿನಿಮಾ ಚೆನ್ನಾಗಿದ್ದರೆ ಅದನ್ನು ಎಲ್ಲಾ ಕಡೆಗೆ ತೆಗೆದುಕೊಂಡು ಹೋಗಬಹುದು. ಸಿನಿಮಾ ಚೆನ್ನಾಗಿ ಮಾಡುವುದು ನನ್ನ ಕರ್ತವ್ಯ. ಅದನ್ನು ನಿಭಾಯಿಸುತ್ತೇನೆ.

6. ಈ ಸಿನಿಮಾ ಕತೆ ಮಾಡಿಕೊಂಡಿದ್ದು 15-20 ವರ್ಷಗಳ ಹಿಂದೆ. ಈಗ ಸಿನಿಮಾ ಮಾಡುತ್ತಿದ್ದೇನೆ. ನಾನು ಸಹ ನಿರ್ದೇಶಕರಿಂದ ಹಿಡಿದು ಪ್ರೊಡಕ್ಷನ್‌ ಬಾಯ್‌ವರೆಗೂ ಎಲ್ಲರಿಗೂ ಸ್ಕ್ರಿಪ್ಟ್‌ ಹೇಳುತ್ತೇನೆ. ಎಲ್ಲರೂ ಸ್ಕ್ರಿಪ್ಟ್‌ ಒಳಗಿದ್ದರೆ ಮಾತ್ರ ಸಿನಿಮಾ ಚೆನ್ನಾಗಿರುತ್ತದೆ ಎನ್ನುವುದು ನನ್ನ ನಂಬಿಕೆ.

click me!