
ಗುರುಪ್ರಸಾದ್ ಎಂದರೆ ಎಷ್ಟು ಜನರಿಗೆ ಪರಿಚಯವಾಗುತ್ತಿತ್ತೋ ಇಲ್ಲವೋ, ಆದರೆ ಮಠ ಗುರುಪ್ರಸಾದ್ ಎಂದರೆ ತಕ್ಷಣ ನೆನಪಿಗೆ ಬರುತ್ತಿದ್ದ ನಿರ್ದೇಶಕ. ಅಷ್ಟರ ಮಟ್ಟಿಗೆ ತನ್ನ ಕೃತಿಯಿಂದಲೇ ಹೆಸರು ದಕ್ಕಿಸಿಕೊಂಡಿದ್ದ ಪ್ರತಿಭಾವಂತ. ಊರು ಕನಕಪುರ. ಪೂರ್ತಿ ಹೆಸರು ಗುರುಪ್ರಸಾದ್ ರಾಮಚಂದ್ರ ಶರ್ಮಾ. ಬುದ್ಧಿವಂತ. ಉತ್ತಮ ಬರಹಗಾರ. ಆರಂಭದಲ್ಲಿ ಹಿರಿಯ ನಿರ್ದೇಶಕ ಟಿಎನ್ ಸೀತಾರಾಮ್ ಅವರ ಜೊತೆಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ನಂತರ ಸಿನಿಮಾ ಜಗತ್ತಿಗೆ ಬಂದರು. ಅವರಿಗೆ ಹೆಸರು ಮತ್ತು ಬದುಕು ಕೊಟ್ಟ ಅವರ ನಿರ್ದೇಶನದ ಮೊದಲ ಸಿನಿಮಾ ‘ಮಠ’.
2006ರಲ್ಲಿ ಬಿಡುಗಡೆ ಆಗಿದ್ದಾಗ ‘ಮಠ’ ಸಂಚಲನ ಸೃಷ್ಟಿಸಿತ್ತು. ನಂತರ ಬಂದ ‘ಎದ್ದೇಳು ಮಂಜುನಾಥ’ ಸಿನಿಮಾ ಕೂಡ ಅಪಾರ ಜನಪ್ರೀತಿ ಗಳಿಸಿತ್ತು. ಡಾಲಿ ಧನಂಜಯ್ ಹೀರೋ ಆಗಿದ್ದ ‘ಡೈರೆಕ್ಟರ್ಸ್ ಸ್ಪೆಷಲ್’ ಸಿನಿಮಾ ಕೂಡ ಭಾರಿ ನಿರೀಕ್ಷೆ ಹುಟ್ಟುಹಾಕಿತ್ತು. ಅವರಿಗೆ ಅಕ್ಷರ ಮತ್ತು ಮಾತು ಕೈ ಹಿಡಿದಿತ್ತು. ಅದ್ಭುತ ಹಾಸ್ಯಪ್ರಜ್ಞೆ ಅವರ ಶಕ್ತಿ ಆಗಿತ್ತು. ಮಾತು ಮತ್ತು ಬರಹ ಎರಡರಲ್ಲೂ ವ್ಯಂಗ್ಯ ತುಂಬಿಕೊಂಡಿದ್ದ ಗುರುಪ್ರಸಾದ್ ಕಿರುತೆರೆಯಲ್ಲೂ ಭಾರಿ ಯಶಸ್ಸು ಗಳಿಸಿದ್ದರು. ಹಲವು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡರು. ಕೆಲವು ಶೋಗಳಲ್ಲಿ ಬರಹಗಾರರಾಗಿ ಕೆಲಸ ಮಾಡಿದರು.
ನಂತರ ‘ಎರಡನೇ ಸಲ’ ಸಿನಿಮಾ ಶುರು ಮಾಡಿದಾಗ ಅವರ ಮೇಲಿದ್ದ ನಿರೀಕ್ಷೆ ಕಡಿಮೆ ಆಗತೊಡಗಿತ್ತು. ಜಗ್ಗೇಶ್ ಜೊತೆ ಜಗಳ ಆಗಿತ್ತು. ‘ಎರಡನೇ ಸಲ’ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಧನಂಜಯ್ ಜೊತೆಗೂ ವಿವಾದ ಮಾಡಿಕೊಂಡರು. ಪ್ರತಿಭೆ ಜೊತೆ ಶಿಸ್ತು ಕೂಡ ಇರಬೇಕು ಅನ್ನುವುದನ್ನು ಅವರಾಗಿಯೇ ತೋರಿಸಿಕೊಟ್ಟಿದ್ದರು. ಹಾಗಿದ್ದರೂ ಚಿತ್ರರಂಗ ಅವರನ್ನು ನಟನೆಗೆ ಬಳಸಿಕೊಳ್ಳುತ್ತಿತ್ತು. ಕಿರಿಯರು ಅವರಿಂದ ಮಾರ್ಗದರ್ಶನ ಪಡೆದುಕೊಳ್ಳುತ್ತಿದ್ದರು.
ಉತ್ತರ ಕರ್ನಾಟಕದ ಪ್ರತಿಭೆಗಳಿಗೆ ಅವಕಾಶ ದೊರೆಯಲಿ: ನಟ ನವೀನ್ ಶಂಕರ್
ಸಾಕಷ್ಟು ವರ್ಷಗಳ ಬಳಿಕ ಜಗ್ಗೇಶ್ ಜೊತೆ ಮಾಡಿದ ‘ರಂಗನಾಯಕ’ ಸಿನಿಮಾದ ಮೇಲಿಟ್ಟಿದ್ದ ನಿರೀಕ್ಷೆ ಒಂದೇ ದಿನದಲ್ಲಿ ಹುಸಿಯಾಗಿತ್ತು. ಅಷ್ಟರಲ್ಲಾಗಲೇ ಅವರು ಮಾತು ಮತ್ತು ಆರ್ಥಿಕ ಶಿಸ್ತು ಎರಡರಲ್ಲೂ ಹಿಡಿತ ಕಳೆದುಕೊಂಡು ಬಿಟ್ಟಿದ್ದರು ಅನ್ನುವುದನ್ನು ಗಾಂಧಿ ನಗರ ಮಾತನಾಡುತ್ತಿತ್ತು. ‘ಎದ್ದೇಳು ಮಂಜುನಾಥ 2’ ಸಿನಿಮಾ ಮಾಡಬೇಕು ಅನ್ನುವುದು ಅವರ ಆಸೆಯಾಗಿತ್ತು. ಆದರೆ ಆಸೆ ಅರ್ಧಕ್ಕೆ ನಿಂತು ಹೋಗಿದೆ. ಪ್ರತಿಭೆಯನ್ನು ಸರಿಯಾಗಿ ದುಡಿಸಿಕೊಂಡಿದ್ದರೆ, ಶಿಸ್ತು ರೂಢಿಸಿಕೊಂಡಿದ್ದರೆ ಯಾವುದೋ ಎತ್ತರಕ್ಕೆ ತಲುಪಬಹುದಾಗಿದ್ದ ಅಪ್ರತಿಮ ಪ್ರತಿಭಾವಂತ ತನ್ನ ಬದುಕಿನಿಂದಲೇ ಪಾಠವೊಂದನ್ನು ಕಲಿಸಿಕೊಟ್ಟು ಅರ್ಧಕ್ಕೆ ಎದ್ದು ಹೋಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.