ಕಿಚ್ಚ ಸುದೀಪ್ ಅವರ ತಾಯಿ ಸರೋಜಮ್ಮ ಅವರು ನಿಧನರಾಗಿ ಒಂದು ವಾರ ಕಳೆದಿದೆ. ಬಿಗ್ ಬಾಸ್ ವೇದಿಕೆಯಲ್ಲಿ ಸುದೀಪ್ ಅವರು ತಮ್ಮ ತಾಯಿಯ ನೆನಪುಗಳನ್ನು ಹಂಚಿಕೊಂಡಿದ್ದಾರೆ, ಅವರ ತಾಯಿ ಅವರನ್ನು ಹೇಗೆ ಪ್ರೀತಿಯಿಂದ ಬೈಯುತ್ತಿದ್ದರು ಎಂಬುದನ್ನು ವಿವರಿಸಿದ್ದಾರೆ.
ಬೆಂಗಳೂರು (ಅ.03): ಕನ್ನಡ ಚಿತ್ರರಂಗದ ಬಾದ್‌ಷಾ ಎಂದೇ ಖ್ಯಾತವಾಗಿರುವ ಕಿಚ್ಚ ಸುದೀಪ್ ಅವರು ಕನ್ನಡ ಚಿತ್ರರಂಗ ಮಾತ್ರವಲ್ಲದೇ ಬಾಲಿವುಡ್‌ನಲ್ಲಿಯೂ ತಮ್ಮ ಛಾಪು ಮೂಡಿಸಿದವರಾಗಿದ್ದಾರೆ. ಸಿನಿಮಾ ಮತ್ತು ಜೀವನದಲ್ಲಿ ಎಲ್ಲಿಯೂ ವಿವಾದ ಮೈಮೇಲೆ ಎಳೆದುಕೊಳ್ಳದೇ ಉತ್ತಮ ಅಭಿನಯದ ಮೂಲಕ ಹಾಗೂ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ನಿರೂಪಣೆ ಮೂಲಕ ಕೋಟ್ಯಂತರ ಕನ್ನಡಿಗರಿಗೆ ಹತ್ತಿರವಾಗಿದ್ದಾರೆ. ಸುದೀಪ ಅವರಿಗೆ ಸ್ವತಃ ಅವರ ಅಮ್ಮನೇ ಹೇ.. ಥೂ. ನಾಯಿ.. ಎಂದು ಬೈಯುತ್ತಿದ್ದರು ಎಂಬುದನ್ನು ಸ್ವತಃ ಕಿಚ್ಚ ಸುದೀಪ್ ಅವರೇ ಹೇಳಿಕೊಂಡಿದ್ದಾರೆ.
ಹೌದು, ನಟ ಕಿಚ್ಚ ಸುದೀಪ್ ಅವರ ತಾಯಿ ಸರೋಜಮ್ಮ ನಿಧನರಾಗಿ ಈಗ ಒಂದು ವಾರ ಕಳೆದಿದೆ. ಅಮ್ಮನನ್ನು ಅತಿಯಾಗಿ ಪ್ರೀತಿಸುತ್ತಿದ್ದ ಸುದೀಪ್ ಅವರು ಇನ್ನೂ ಅಮ್ಮನ ಅಗಲಿಕೆ ನೋವಿನಿಂದ ಹೊರಬಂದಂತಿಲ್ಲ. ಎಲ್ಲಿಯೇ ಹೋದರೂ ಅಮ್ಮನ ಒಂದು ಫೋಟೋ ಕಂಡರೆ ನಿಂತಲ್ಲೇ ಕಣ್ಣಾಲಿಗಳಲ್ಲಿ ನೀರು ಜಿನುಗುತ್ತದೆ. ಇದಕ್ಕೆ ಕಾರಣ ಅಮ್ಮ ಕೊಡುತ್ತಿದ್ದ ಪ್ರೀತಿ. ಇನ್ನು ಕಿಚ್ಚ ಸುದೀಪ ಮನೆಯಿಂದ ಎಲ್ಲಿಗೇ ಹೋಗುತ್ತಿದ್ದರೂ ಪ್ರೀತಿಯಿಂದ ಅವರ ಅಮ್ಮನ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಳ್ಳುತ್ತಿದ್ದರು. ಆದರೆ, ಅದೊಂದು ದಿನ ಒಂದೇ ದಿನ ಎರಡು ಬಾರಿಗೆ ಮಗನನ್ನು ಕಾಲಿಗೆ ಬೀಳಿಸಿಕೊಂಡು ಅಮ್ಮ ಆಶೀರ್ವಾದ ಮಾಡಿದ್ದರಿಂದ ಇದರ ಹಿಂದೆ ಅಮ್ಮನ ಅಗಲಿಕೆ ಸುಳಿವೂ ಸಿಕ್ಕಿತ್ತು. ಇದಾದ ಬಳಿಕ ಬಿಗ್ ಬಾಸ್ ರಿಯಾಲಿಟಿ ಶೋ ವಾರದ ಪಂಚಾಯಿತಿ ನಡೆಸಿಕೊಡುತ್ತಿದ್ದ ಕಿಚ್ಚನಿಗೆ ಅಮ್ಮ ಆಸ್ಪತ್ರೆಗೆ ದಾಖಲಾಗಿ, ಕೊನೆಯುಸಿರೆಳೆದ ಸುದ್ದಿ ಬರುತ್ತದೆ. ಆಗ ಅಮ್ಮನನ್ನು ಕೊನೇ ಕ್ಷಣದಲ್ಲಿ ಮಾತನಾಡಿಸಲಾಗಲಿಲ್ಲ ಎಂದು ಈಗಲೂ ಕೊರಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ 3ನೇ ವಾರದ ಪಂಚಾಯಿತಿ ನಡೆಸಿಕೊಡಲು ಬಾರದೇ ಅಮ್ಮನ ಉತ್ತರಾಧಿ ಕ್ರಿಯೆಗಳನ್ನು ನೆರವೇರಿಸುವಲ್ಲಿ ಬ್ಯೂಸಿ ಆಗಿದ್ದರು.
ಇದನ್ನೂ ಓದಿ: ಬಿಗ್ ಬಾಸ್ ಕನ್ನಡ 11 ಮಾನಸಾ ಔಟ್? ಪ್ರೇಕ್ಷಕರ ಮನ ಗೆಲ್ಲಲು ವಿಫಲರಾದರೇ ತುಕಾಲಿ ಪತ್ನಿ!
ಇದೀಗ ಬಿಗ್ ಬಾಸ್ ಮನೆಗೆ 4ನೇ ವಾರದ ಪಂಚಾಯಿತಿ ನಡೆಸಿಕೊಡಲು ಬಂದ ಕಿಚ್ಚ ಸುದೀಪ್ ಅವರಿಗೆ ಕಲರ್ಸ್ ಕನ್ನಡ ವಾಹಿನಿಯಿಂದ ವಿಶೇಷ ಗೌರವವನ್ನು ಸಲ್ಲಿಕೆ ಮಾಡಲಾಯಿತು. ಈ ವೇಳೆ ತಾನು ಕೋಟ್ಯಂತರ ವೀಕ್ಷಕರ ಮುಂದೆ ಕಾರ್ಯಕ್ರಮ ನಡೆಸಿಕೊಡುತ್ತಿದ್ದೇನೆ ಎಂಬುದನ್ನೂ ಮರೆತು ಕಣ್ಣಲ್ಲಿ ನಿರು ಹಾಕಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಇದೇ ವೇಳೆ ಬಿಗ್ ಬಾಸ್ ಸ್ಪರ್ಧಿಯಾಗಿರುವ ನಟಿ ಐಶ್ವರ್ಯಾ ಸಿಂಧೋಗಿ ಅವರು ಕೂಡ ಅಪ್ಪ, ಅಮ್ಮನನ್ನು ಕಳೆದುಕೊಂಡು ಅನಾಥ ಭಾವದಲ್ಲಿರುವಾಗ ಅವರ ನೋವನ್ನು ಅರ್ಥ ಮಾಡಿಕೊಂಡು, ತಮ್ಮಿಂದ ಐಶ್ವರ್ಯಾಗೆ ಒಂದು ಸಣ್ಣ ಗಿಫ್ಟ್ ಕೊಟ್ಟು ಕಳಿಸುತ್ತಾರೆ.
ಇದೇ ವೇಳೆ ಬಿಗ್ ಬಾಸ್ ಪಂಚಾಯಿತಿ ವೇದಿಕೆಯಲ್ಲಿ ಮಾತನಾಡುತ್ತಾ ಅಮ್ಮನ ಬಗ್ಗೆ ಒಂದೆರೆಡು ಮಾತುಗಳನ್ನು ಹೇಳುತ್ತಾರೆ. ನನ್ನ ಅಮ್ಮನಿಗೆ ಬಿಗ್ ಬಾಸ್ ರಿಯಾಲಟಿ ಶೊ ಎಂದರೆ ತುಂಬಾ ಇಷ್ಟ. ನಮ್ಮಮ್ಮ ಬಹಳ ಇಷ್ಟಪಟ್ಟು ನೋಡು ಕಾರ್ಯಕ್ರಮ ಬಿಗ್ ಬಾಸ್. ಆದ್ದರಿಂದ ಇದನ್ನು ನಡೆಸಿಕೊಡುವುದಕ್ಕೆ ನನಗೆ ಖುಷಿ ಆಗುತ್ತದೆ. ವಾರದ ಪಂಚಾಯಿತಿ ಎಪಿಸೋಡ್ ಅನ್ನು ನಡೆಸಿಕೊಡುವಾಗ ನಾನು ಹೇಗೆ ಕಾಣಿಸುತ್ತಿದ್ದೆ ಎಂಬುದರಿಂದ ಅಮ್ಮನ ವಿಮರ್ಶೆ ಆರಂಭ ಆಗುತ್ತಿತ್ತು. ವೇದಿಕೆ ಮೇಲೆ ನಾನು ತುಂಬ ಚೆನ್ನಾಗಿ ಕಾಸ್ಟ್ಯೂಮ್ ಹಾಕಿದ್ದ ದಿನ ಕಾರ್ಯಕ್ರಮ ಮುಗಿಸಿ ಮನೆಗೆ ಹೋದಾಗ, 'ಹೇ, ಥೂ.. ನಾಯಿ.. ತುಂಬ ಚೆನ್ನಾಗಿ ಕಾಣಿಸ್ತಾ ಇದ್ದೀಯಾ.. ಹೋಗು ದೃಷ್ಟಿ ತೆಗಿಸಿಕೋ..' ಎಂದು ಪ್ರೀತಿಯಿಂದ ಹೇಳುತ್ತಿದ್ದರು. ಆದರೆ, ಈಗ ಅಮ್ಮನಿಲ್ಲದ ನೋವು ಕಾಡುತ್ತಿದೆ. ಆದರೆ, ಅಮ್ಮನ ಮಾತುಗಳನ್ನೇ ಸ್ಫೂರ್ತಿಯಾಗಿ ಇಟ್ಟುಕೊಂಡು, ಅದನ್ನೇ ಶಕ್ತಿಯಾಗಿ ತೆಗೆದುಕೊಳ್ಳುತ್ತೇನೆ ಎಂದು ಕಿಚ್ಚ ಸುದೀಪ್ ಭಾವನಾತ್ಮಕವಾಗಿ ಹೇಳುತ್ತಾರೆ.
ಇದನ್ನೂ ಓದಿ: ಹೊಟ್ಟೆಲಿರೋದು ನಂದೆ ಮಗು ಅಂತ ಕೈ ಎತ್ತಿದ ತ್ರಿವಿಕ್ರಮ್: ಪಕ್ಕದಲ್ಲಿ ಇರೋ ಆ ಕೈ ಯಾಕೆ ಬಿಡ್ತಿಲ್ಲ ಎಂದ ಕಿಚ್ಚ ಸುದೀಪ್