
ಅದು ನೆಲಮಂಗಳದ ಬಳಿಯ ವಿಶಾಲವಾದ ಆರು ಎಕರೆ ಗದ್ದೆ. ಆ ಗದ್ದೆಯಲ್ಲಿ 12ಕ್ಕೂ ಹೆಚ್ಚು ಬೃಹತ್ ಸೆಟ್ಟುಗಳನ್ನು ನಿರ್ಮಿಸಲಾಗಿತ್ತು. ಪ್ರತಿ ದಿನ 800 ರಿಂದ 1000 ಸಾವಿರ ಜ್ಯೂನಿಯರ್ ಆರ್ಟಿಸ್ಟ್‌ಗಳ ಹಾಜರಿ ಆಗುತ್ತಿದ್ದಾರೆ. ಮೂರು ಯೂನಿಟ್‌ಗಳು, ನಾಲ್ಕು ಕ್ಯಾಮೆರಾಗಳು, ಸುಮಾರು 10 ಕ್ಯಾರವಾನ್‌ಗಳು ಅಲ್ಲಿವೆ. ಜತೆಗೆ ಪೊಲೀಸರ ಬಂದೋಬಸ್ತ್ ಕೂಡ ಇದೆ. ಚಿತ್ರವೊಂದಕ್ಕೆ ಇಷ್ಟು ದೊಡ್ಡ ಪ್ರಮಾಣದ ಸೆಟ್ಟುಗಳು, ಕಲಾವಿದರು, ತಂತ್ರಜ್ಞರು ಒಂದೇ ಕಡೆ ಸೇರಿದ್ದು ಬಹುಶಃ ಇತ್ತೀಚಿನ ದಿನಗಳಲ್ಲಿ ಇದೇ ಮೊದಲು. ಕಳೆದ 32 ದಿನಗಳಿಂದ ಸತತವಾಗಿ ಇಲ್ಲಿ ಚಿತ್ರೀಕರಣ ನಡೆಯುತ್ತಿದೆ.
ಅಂದಹಾಗೆ ಇದು ಗಣೇಶ್ ನಟನೆ, ನೃತ್ಯ ನಿರ್ದೇಶಕ ಧನಂಜಯ್ ಅವರ ನಿರ್ದೇಶನ, ಪೀಪಲ್ ಮೀಡಿಯಾ ಫ್ಯಾಕ್ಟ್ರಿ ನಿರ್ಮಾಣದ ಚಿತ್ರವಿದು. ಸಾಮಾನ್ಯವಾಗಿ ಗಣೇಶ್ ಅವರ ಸಿನಿಮಾ ಎಂದರೆ ಮಳೆ, ಹಸಿರು, ಲಕಲಕನೇ ಹೊಳೆಯುವ ನಟಿಯರು ನೆನಪಾಗುತ್ತಾರೆ. ಆದರೆ, ಅದ್ಯಾವುದೂ ಇಲ್ಲಿಲ್ಲ. ಮನುಷ್ಯರ ತಲೆಬುರಡೆಗಳು, 40 ರಿಂದ 50 ಅಡಿ ಎತ್ತರದ ನಾಲ್ಕು ಸ್ತಂಭಗಳು, ಒಂದು ಸ್ತಂಭದ ಮೇಲೆ ದೊಡ್ಡ ಮಿರಾರ್, ಉಳಿದ ಸ್ತಂಭಗಳ ಮೇಲೆ ಶಕ್ತಿ ದೇವರುಗಳು ಫೋಟೋಗಳು, ಆಯುಧ ತಯಾರಿಸುವ ಕುಲುಮೆ, ಮಧ್ಯದಲ್ಲಿ ಬೃಹತ್ ಅರ್ಧನಾರೇಶ್ವರಿ ಪ್ರತಿಮೆ, ವಿಶಾಲವಾದ ಅರಮನೆ, ವಿಲಕ್ಷಣವಾದ ವೇಷ ತೊಟ್ಟ ಕಲಾವಿದರು, ವಿಚಿತ್ರವಾದ ಆಯುಧಗಳನ್ನು ಕೈಯಲ್ಲಿಡಿದಿರುವ ನೂರಾರು ಮಂದಿ ಆದಿವಾಸಿಗಳು, ದೊಡ್ಡ ಸಮುದ್ರ, ನಿರ್ಮಾಣದ ಹಂತದಲ್ಲಿರುವ ದೇವಸ್ಥಾನ, ರಹಸ್ಯ ಗುಹೆಯನ್ನು ಒಳಗೊಂಡ ಇದರ ದೇವಗಿರಿ.
ಸುಮಾರು 500 ವರ್ಷಗಳ ಹಿಂದಿನ ಸಾಮ್ರಾಜ್ಯವನ್ನು ತೋರಿಸುವ ಈ ಸೆಟ್ಟುಗಳ ನಡುವೆ ‘ಪಿನಾಕ’ ಚಿತ್ರದ ಶೂಟಿಂಗ್ ನಡೆಯುತ್ತಿದೆ. ‘ದಯವಿಟ್ಟು ಯಾರೂ ಫೋಟೋ, ವಿಡಿಯೋ ತೆಗೆದು ಈಗಲೇ ಹಾಕಬೇಡಿ. ಇದನ್ನು ತೆರೆ ಮೇಲೆ ನೋಡಿದರೆ ಮಾತ್ರ ಚೆನ್ನಾಗಿರೋದು’ ಎಂದು ನಿರ್ಮಾಣದ ಸಾರಥ್ಯ ವಹಿಸಿಕೊಂಡಿದ್ದ ವಿಶ್ರಪ್ರಸಾಥ್ ಅವರ ಸೋದರಿ ವಿಜಯಾ ಅವರು ಮನವಿ ಮಾಡಿಕೊಳ್ಳುತ್ತಿದ್ದರು. ಗಣೇಶ್, ‘ಈ ರೀತಿಯ ಪಾತ್ರವನ್ನು ನನ್ನಿಂದ ಮಾಡಿಸಲು ಸಾಧ್ಯ ಎಂದು ನಿರ್ಮಾಪಕರು ಮತ್ತು ನಿರ್ದೇಶಕರು ನನ್ನಿಂದ ಮಾಡಿಸುತ್ತಿದ್ದಾರೆ.
ಧನು ಮೊದಲ ಚಿತ್ರದಲ್ಲಿ ಇಂಥದ್ದೊಂದು ಕತೆಯನ್ನು ಹೇಳುತ್ತಿದ್ದಾರೆ. ಅವರ ಈ ಸಾಹಸ ಗೆಲ್ಲಬೇಕು. ಇದು ನನ್ನ ಕೆರಿಯರ್‌ನಲ್ಲಿ ಮತ್ತೊಂದು ತಿರುವು ಅಥವಾ ಮಜಲನ್ನು ತೆರೆದಿಡುವ ಚಿತ್ರವಾಗಲಿದೆ’ ಎಂದರು. ‘ನಮ್ಮ ಚಿತ್ರದಲ್ಲಿ ಈ ಸೆಟ್‌ಗಳು ಮಹತ್ವದ ಪಾತ್ರ ವಹಿಸಲಿವೆ. ಸಂತೋಷ್ ಪಾಂಚಲ ಮತ್ತು ಅವರ ತಂಡ ಒಂದು ತಿಂಗಳು ಸಮಯ ತೆಗೆದುಕೊಂಡು ಈ ಸೆಟ್ ನಿರ್ಮಿಸಿದೆ. ತೆರೆ ಮೇಲೆ ಈ ಸಾಮ್ರಾಜ್ಯದ ಕತೆ 40 ರಿಂದ 45 ನಿಮಿಷಗಳ ಬರಲಿದೆ. ಕಳೆದ ಒಂದು ತಿಂಗಳಿನಿಂದ ಚಿತ್ರೀಕರಣ ಮಾಡುತ್ತಿದ್ದೇವೆ. ಯುದ್ಧ ನಡೆದ ನಂತರದ ದೃಶ್ಯಗಳನ್ನು ಇಂದು ಚಿತ್ರೀಕರಣ ಮಾಡಿದ್ದೇವೆ.
ಕಳೆದ ಒಂದು ತಿಂಗಳಿನಿಂದ ಪ್ರತಿ ದಿನ 800 ಜನ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಚಿತ್ರೀಕರಣ ಮಾಡಿ, ಹೈದರಾಬಾದ್‍ಗೆ ಫುಟೇಜ್ ಕಳಿಸುತ್ತಿದ್ದೇವೆ. ಅಲ್ಲಿ ಗ್ರಾಫಿಕ್ಸ್ ಕೆಲಸ ಸತತವಾಗಿ ನಡೆಯುತ್ತಿದೆ. ‘ಪಿನಾಕ’ ಎಂದರೆ ಒಬ್ಬ ರಕ್ಷಕ ಎನ್ನುವ ಅವರು, ‘ಇದೊಂದು ಕಾವಲುಗಾರ ಪರಂಪರೆಯ ಕುರಿತಾದ ಚಿತ್ರ’ ಎನ್ನುವ ಮಾಹಿತಿ ಹೇಳಿದ್ದು ನಿರ್ದೇಶಕ ಧನಂಜಯ್. ಚಿತ್ರದಲ್ಲಿ ರಾಜ್‌ಗುರು ಪಾತ್ರ ಮಾಡುತ್ತಿರುವ ಹಿರಿಯ ನಟ ಶ್ರೀನಿವಾಸಮೂರ್ತಿ, ಪ್ರಮುಖ ಪಾತ್ರಧಾರಿಗಳಾದ ಹೊನ್ನವಳ್ಳಿ ಕೃಷ್ಣ, ರವೀಂದ್ರನಾಥ್, ಕರಮ್ ಚಾವ್ಲಾ ಅವರು ಹಾಜರಿದ್ದು, ಚಿತ್ರದ ಬಗ್ಗೆ ಮಾತನಾಡಿದರು. ನಯನ್ ಸಾರಿಕಾ ಹಾಗೂ ಅರ್ಚನಾ ಅಯ್ಯರ್ ಚಿತ್ರದ ನಾಯಕಿಯರು. ಚಿತ್ರ ಮುಂದಿನ ವರ್ಷ ಬಿಡುಗಡೆಯಾಗಲಿದೆ.
ಜಿಲ್ಲಾ ಕೇಂದ್ರಗಳಿಂದ ಅಭಿಮಾನಿಗಳಿಗೂ ಅಹ್ವಾನ: ಸಿನಿಮಾ ಸೆಟ್‌ಗಳಿಗೆ ನಟರ ಅಭಿಮಾನಿಗಳನ್ನು ಕರೆಸಲ್ಲ. ಆದರೆ, ತಮ್ಮ ನೆಚ್ಚಿನ ನಟನ ಚಿತ್ರ ಹೇಗಿದೆ, ಅದರ ಸೆಟ್‌ಗಳು ಹಾಗಿರುತ್ತವೆ ಎಂಬುದನ್ನು ತೋರಿಸುವುದಕ್ಕಾಗಿಯೇ ರಾಜ್ಯದ ಜಿಲ್ಲೆಗಳಿಂದ ಗಣೇಶ್ ಅವರ ಅಭಿಮಾನಿ ಸಂಘದ ಸದಸ್ಯರನ್ನು ಕರೆಸಲಾಗಿತ್ತು. ಪ್ರತಿ ಜಿಲ್ಲೆಗೆ ಇಬ್ಬರು ಅಭಿಮಾನಿಗಳು ಆಗಮಿಸಿದ್ದರು. ಇದೊಂದು ವಿಶೇಷವಾದ ಪ್ರಯತ್ನ.
ಗಣೇಶ್ ಅವರ ಜತೆಗೆ ಚಿತ್ರ ಮಾಡಬೇಕು ಎಂಬುದು ನನ್ನ ಸಹೋದರ ವಿಶ್ವಪ್ರಸಾದ್ ಅವರ ಆಸೆ. ಗಣೇಶ್ ಅವರಿಗೆ ಎಂಥಾ ಚಿತ್ರ ಮಾಡಬೇಕು ಎಂದು ಯೋಚಿಸಿ, ಒಂದು ವಿಭಿನ್ನ ಪ್ರಯತ್ನ ಮಾಡುತ್ತಿದ್ದೇವೆ. ಮುಂದೆ ಕನ್ನಡದಲ್ಲಿ ಬೇರೆ ಬೇರೆ ಹೀರೋಗಳ ಜತೆಗೆ ಸಿನಿಮಾ ಮಾಡಲಿದ್ದೇವೆ. ನಟರಾದ ಧ್ರುವ ಸರ್ಜಾ ಹಾಗೂ ಶ್ರೀಮುರಳಿ ಜತೆಗೆ ಸಿನಿಮಾ ಮಾಡೋದು ಫೈನಲ್ ಆಗಿದೆ. ನಟ ದರ್ಶನ್ ಅವರ ಜತೆಗೆ ಮಾತುಕತೆ ನಡೆಯುತ್ತಿದೆ. ಏಳು ವರ್ಷಗಳಲ್ಲಿ ನಮ್ಮ ಸಂಸ್ಥೆಯಿಂದ 50 ಚಿತ್ರಗಳು ತಯಾರಾಗಿದ್ದು, ಈ ಪೈಕಿ 43 ಬಿಡುಗಡೆ ಆಗಿವೆ. 7 ಚಿತ್ರಗಳು ಬಿಡುಗಡೆ ಸಿದ್ದವಾಗಿವೆ. ಇನ್ನು 20 ಚಿತ್ರಗಳು ಬೇರೆಬೇರೆ ಹಂತಗಳಲ್ಲಿದೆ.
-ವಿಜಯಾ, ನಿರ್ಮಾಪಕರು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.