
ಸಾಮಾನ್ಯವಾಗಿ ಚಿತ್ರರಂಗದಲ್ಲಿ ಅಪ್ಪ- ಅಮ್ಮ ನಟ-ನಟಿಯಾಗಿದ್ದರೆ ಅವರ ಮಕ್ಕಳು ಕೂಡ ಅದೇ ಕ್ಷೇತ್ರಕ್ಕೆ ಬರುತ್ತಾರೆ. ಅವರಿಗೆ ಬಣ್ಣದ ಲೋಕದಲ್ಲಿ ದಾರಿ ಸುಲಭವಾಗುತ್ತದೆ ಎನ್ನುವುದು ಹೊಸ ವಿಷಯವೇನಲ್ಲ. ಇದು ಬಾಲಿವುಡ್, ಸ್ಯಾಂಡಲ್‌ವುಡ್ ಅಂತೇನಿಲ್ಲ. ಎಲ್ಲಾ ವುಡ್‌ಗಳಲ್ಲಿಯೂ ಇದು ಸಹಜವೇ. ಹೊಸಬರು ಎಷ್ಟೇ ಟ್ಯಾಲೆಂಟ್ ಇದ್ದರೂ ಅವರಿಗೆ ಚಿತ್ರರಂಗ ಮರೀಚಿಕೆಯೇ ಆದೀತು. ಆದರೆ, ಸೆಲೆಬ್ರಿಟಿ ಮಕ್ಕಳಿಗೆ ಅದೃಷ್ಟ ಎನ್ನುವುದು ಹುಟ್ಟುತ್ತಲೇ ಬರುತ್ತದೆ. ಆದರೆ, ನಟನಾ ಕ್ಷೇತ್ರದಲ್ಲಿ ತಳವೂರಬೇಕು ಎಂದರೆ, ಅವರ ಶ್ರಮವೂ ಅಷ್ಟೇ ಬೇಕಾಗುತ್ತದೆ. ಹಾಗೆಂದು ಎಲ್ಲಾ ನಟ-ನಟಿಯರ ಮಕ್ಕಳೂ ಅವರಂತೆಯೇ ಸೂಪರ್‌ಸ್ಟಾರ್ ಆಗಬೇಕೆಂದೇನೂ ಇಲ್ಲ.
ಅದೇನೇ ಇದ್ದರೂ ಚಿತ್ರತಾರೆಯರ ಮಕ್ಕಳು ಎಂದ ಮೇಲೆ ಅವರು ಯಾವಾಗ ಚಿತ್ರಲೋಕಕ್ಕೆ ಕಾಲಿಡುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದ್ದೇ ಇರುತ್ತದೆ. ಇದೀಗ ಶ್ರೀರಸ್ತು ಶುಭಮಸ್ತು ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿರೋ ಸ್ಯಾಂಡಲ್‌ವುಡ್ ಬ್ಯೂಟಿ ಸುಧಾರಾಣಿ ಅವರ ಮಗಳ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಇದಾಗಲೇ ನಾಯಕಿಯಾಗುವ ಎಲ್ಲಾ ಅರ್ಹತೆ ಪಡೆದಿರುವ ಜೊತೆಗೆ ಅಮ್ಮನಂತೆಯೇ ಭರತನಾಟ್ಯ ಪ್ರವೀಣೆಯೂ ಆಗಿರುವ ಸುಧಾರಾಣಿ ಮಗಳು ನಿಧಿ ಅವರು ಚಿತ್ರರಂಗಕ್ಕೆ ಬರುತ್ತಾರೆಯೇ ಎನ್ನುವ ಪ್ರಶ್ನೆಯನ್ನು ಅವರಿಗೆ ಕೇಳಲಾಗಿದೆ.
ಇದಕ್ಕೆ ಸುಧಾರಾಣಿ ಅವರು, ಅವಳು ಲಾಯರ್ ಕಣ್ರೀ... ಸದ್ಯ ಅಂತೂ ಚಿತ್ರರಂಗಕ್ಕೆ ಬರುವ ಯಾವುದೇ ಛಾನ್ಸ್ ಇಲ್ಲ. ಅವಳು ನೃತ್ಯಪ್ರವೀಣೆ ಕೂಡ. ಸದ್ಯ ಅವಳ ಲಾಯರ್ ಕೆಲಸದಲ್ಲಿ ಆಕೆಗೆ ನೆಮ್ಮದಿ ಇದೆ. ಅದನ್ನೇ ಆಕೆ ಕರಿಯರ್ ಆಗಿ ತೆಗೆದುಕೊಳ್ಳಲಿದ್ದಾಳೆ. ಆದ್ದರಿಂದ ಸದ್ಯ ಅಂತೂ ಅವಳು ಚಿತ್ರರಂಗದ ಬಗ್ಗೆ ಒಲವು ತೋರುತ್ತಿಲ್ಲ ಎಂದಿದ್ದಾರೆ. ಅವಳು ಚಿತ್ರರಂಗಕ್ಕೆ ಬರಬೇಕು ಎಂದು ಅವಳಿಗೂ ಆಸೆ ಇಲ್ಲ, ನನಗೂ ಇಲ್ಲ. ಅವಳ ಕಾನೂನು ವೃತ್ತಿಯ ಬಗ್ಗೆ ಅವಳಿಗೆ ಪ್ರೀತಿ ಇದೆ. ಅದನ್ನೇ ಮುಂದುವರೆಸಲಿದ್ದಾಳೆ. ಹೆಚ್ಚಿನ ಕೋರ್ಸ್‌ಗಳನ್ನು ಮಾಡುತ್ತಾ ಓದುತ್ತಿದ್ದಾಳೆ. ನೃತ್ಯದಲ್ಲಿಯೂ ಖುಷಿಯಾಗಿದ್ದಾಳೆ. ಅವಳ ಸಂತೋಷದಲ್ಲಿ ನನಗೂ ಖುಷಿ ಇದೆ ಎಂದಿದ್ದಾರೆ.
ಇದನ್ನು ಕೇಳಿ ಸುಧಾರಾಣಿ ಫ್ಯಾನ್ಸ್‌ಗೆ ತುಸು ಬೇಸರವಾಗಿದೆ. ಸುಧಾರಾಣಿ ಅವರ ಮಗಳು ನಿಧಿ ಮುಂದಾದರೂ ಚಿತ್ರರಂಗಕ್ಕೆ ಬರಲಿ ಎನ್ನುವುದು ಅವರ ಆಸೆ. ಇನ್ನು ಸುಧಾರಾಣಿ ಕುರಿತು ಹೇಳುವುದಾದರೆ, ಅವರ ಶ್ರೀರಸ್ತು ಶುಭಮಸ್ತು ಇನ್ನೇನು ಮುಗಿಯುವ ಹಂತದಲ್ಲಿದೆ. ಅದರ ಜೊತೆಗೆ ಅವರು ʻನಿದ್ರಾದೇವಿ ನೆಕ್ಸ್ಟ್ ಡೋರ್ʼ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಒಟ್ಟಿನಲ್ಲಿ ಅಮ್ಮ ನಟನೆಯಲ್ಲಿ, ಮಗಳು ವಕೀಲಿಕೆಯಲ್ಲಿ ಯಶಸ್ವಿಯಾಗಲಿ ಎಂದು ಹಾರೈಸುತ್ತಿದ್ದಾರೆ ಅಭಿಮಾನಿಗಳು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.