
ಜೆಪಿ ತುಮಿನಾಡ್ ನಿರ್ದೇಶನದ, ರಾಜ್ ಬಿ ಶೆಟ್ಟಿ ನಿರ್ಮಾಣದ ಸು ಫ್ರಂ ಸೋ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಪ್ರೀಮಿಯರ್ ಪ್ರದರ್ಶನಗಳಲ್ಲಿ ಜನಮೆಚ್ಚುಗೆ ಗಳಿಸಿದ ಸಿನಿಮಾದ ನಿರ್ದೇಶಕರ ಜೊತೆ ಕನ್ನಡಪ್ರಭದ ರಾಜೇಶ್ ಶೆಟ್ಟಿ ನಡೆಸಿದ ಮಾತುಕತೆ.
ಮಂಗಳೂರಿನಲ್ಲಿ ಪ್ರೀಮಿಯರ್ ಶೋ ಮುಗಿದಿತ್ತು. ಜನ ನಗುತ್ತಿದ್ದರು. ಅಮ್ಮನ ಕಣ್ಣು ತುಂಬಿತ್ತು. ಅವರು ನನ್ನ ಹತ್ತಿರ ಬಂದು ನಿಂತು "ಎನ್ನ ಬಾಲೆ, ಎನ್ನ ಬಾಲೆ' (ನನ್ನ ಮಗು) ಎಂದು ಕೆನ್ನೆ ಸವರುತ್ತಾ ನಿಂತು ಬಿಟ್ಟರು. ಆ ಕ್ಷಣ ನನ್ನ ಜೀವನದ ಸಾರ್ಥಕ ಕ್ಷಣ. ನಾವು ಸಿನಿಮಾ ಮಂದಿ ಬಗ್ಗೆ ಮನೆಯಲ್ಲಿ ಅಪಾರ ಆತಂಕ ಇರುತ್ತದೆ. ನನ್ನ ಬಗ್ಗೆಯೂ ಇತ್ತು. ಏನು ಮಾಡುತ್ತಾನೋ, ಊಟ ಮಾಡುತ್ತಾನೋ ಇಲ್ಲವೋ ಎಂಬ ಪ್ರಶ್ನೆಗಳಿತ್ತು. ಅವರ ನಂಬಿಕೆ ಉಳಿಸಿದೆನೆಂಬ ತೃಪ್ತಿ ಇದೆ.
ಎರಡು ಊರಿನ ಕತೆ. ಆ ಊರಿನ ಜನರ ಮುಗ್ಧತೆ ಮತ್ತು ನಂಬಿಕೆಯ ಕತೆ. ನಾನು ನೋಡಿದ ಪಾತ್ರಗಳ, ನಾನು ಕೇಳಿದ ಕತೆಗಳ, ನನ್ನ ಅನುಭವಕ್ಕೆ ಬಂದ ಸಂಗತಿಗಳನ್ನೆಲ್ಲಾ ಆಡಗಿಸಿಟ್ಟು ಕೊಂಡಿರುವ ಸಿನಿಮಾ. ನಾನು ಹಿಂದೆ ಪೇಂಟ್ ಕೆಲಸಕ್ಕೆ ಬೇರೆ ಬೇರೆ ಮನೆಗಳಿಗೆ ಹೋಗುತ್ತಿದ್ದೆ. ಅಲ್ಲಿ ನೋಡಿದ ಪಾತ್ರಗಳು, ಅರ್ದಂಬರ್ಧ ಸಿಕ್ಕ ಕತೆಗಳು ನನ್ನೊಳಗೆ ಸೇರಿ ಈ ಸಿನಿಮಾ ಆಗಿದೆ. ಬಹಳ ವರ್ಷಗಳಿಂದ ಈ ಕತೆ ನನ್ನೊಳಗಿದೆ. ಈ ಕತೆ ಇಲ್ಲದೇ ಇದ್ದಿದ್ದರೆ ನಾನು ಯಾವಾಗಲೂ ಸಿನಿಮಾ ಬಿಟ್ಟು ಹೋಗಿರುತ್ತಿದ್ದೆ. ಈ ಕತೆ ನನ್ನನ್ನು ಇಲ್ಲಿಯವರೆಗೂ ಕರೆದುಕೊಂಡು ಬಂದಿದೆ. ಇನ್ನು ನಾನು ಯಾವಾಗಲೂ ಅಂದುಕೊಂಡಿರುವುದು ಸಿನಿಮಾ ಮಾಡುವುದಲ್ಲ, ಆಗುವುದು ಅಂತ. ಈ ಸಿನಿಮಾ ಆಗಿದೆ. ಕತೆಯೇ ಸಿನಿಮಾವನ್ನು ರೂಪಿಸಿದೆ.
ಬಹಳ ಕಷ್ಟ. ಅದೂ ಈ ಕಾಲದಲ್ಲಿ ನಾನು ಮೊದಲಿನಿಂದಲೂ ನಿರ್ದೇಶಕ ಆಗಬೇಕು ಎಂಬ ಆಸೆ ಇಟ್ಟುಕೊಂಡಿದ್ದೆ, ಕತೆ ಹೇಳುವ ಆಸೆ. ಬಾಲ್ಯದಲ್ಲಿ ನನ್ನದೇ ಕತೆಗಳನ್ನು ಸಿನಿಮಾ ಕತೆ ಅಂತ ಹೇಳುತ್ತಿದ್ದೆ. ಆಮೇಲೆ ರಂಗಭೂಮಿಗೆ ಒಂದು ಕತೆ ಹೇಳಿದೆ. ರಾಜ್ ಬಿ ಶೆಟ್ಟಿಯವರು ಸಿಕ್ಕ ಮೇಲೆ ನಾನು ಸಿನಿಮಾ ನೋಡುವ ರೀತಿಯೇ ಬದಲಾಯಿತು. ಅವರು ಧೈರ್ಯ ಕೊಟ್ಟ ಮೇಲೆ ಸಿನಿಮಾ ಮೂಲಕ ಕತೆ ಹೇಳಲು ಮುಂದಾದೆ. ಸುಮಾರು ಐದು ವರ್ಷದಿಂದ ಈ ಕತೆ ನನ್ನ ಜೊತೆ ಬೆಳೆದು ಬಂದಿದೆ. ಈಗ ಸಿನಿಮಾ ಆಗಿ ನಿಮ್ಮ ಮುಂದಿದೆ.
ನನಗೆ ಈ ತಂಡ ಸಿಕ್ಕಿದ್ದು ನನ್ನ ಅದೃಷ್ಟ, ನಾವು ಬೆಂಗಳೂರಿಗೆ ಮೊದಲ ಸಲ ಬಂದಾಗ ಎಲ್ಲಿ ಹೋಗಬೇಕು, ಏನು ಮಾಡಬೇಕು ಗೊತ್ತಿರುವುದಿಲ್ಲ. ಒಬ್ಬರು ಕೈ ಹಿಡಿದು ನಡೆಸುವವರು ಬೇಕು. ರಾಜ್ ಬಿ ಶೆಟ್ಟಿ ನನ್ನನ್ನು ಸರಿಯಾದ ದಿಕ್ಕಿನಲ್ಲಿ ನಡೆಸಿದರು. ಬೆಂಬಲವಾಗಿ ನಿಂತರು. ಅವರು ಮತ್ತು ತಂಡ ಇಲ್ಲದಿದ್ದರೆ ನಾನು ಈ ಸಿನಿಮಾವನ್ನು ಇದೇ ರೀತಿ ಮಾಡಲಾಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ.
ಬಹಳಷ್ಟು ಜನ ನನ್ನನ್ನು ಮುಂದಕ್ಕೆ ದೂಡಿದ್ದಾರೆ. ಅವರೆಲ್ಲರಿಗೂ ಋಣಿ. ನನಗೆ ಬದುಕು ಕೊಟ್ಟ ನನ್ನ ಶಾರದಾ ಆರ್ಟ್ಸ್ ರಂಗತಂಡ ನನ್ನ ಜೀವಾಳ. ಆ ತಂಡಕ್ಕೆ ಪರಿಚಯಿಸಿದ ಪ್ರಕಾಶ್ ತುಮಿನಾಡು, ರಂಗನಿರ್ದೇಶಕನನ್ನಾಗಿ ಮಾಡಿದ ಕೃಷ್ಣ ಜಿ ಮಂಜೇಶ್ವರ ಇವರನ್ನು ಮರೆಯಲಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.