ಗಂಡು ಎಂಬ ಅಹಂ ಬೆಳೆಯಿಸಿಕೊಂಡ ಹುಡುಗ ಮನುಷ್ಯನಾಗಿ ಬದಲಾಗುವಂಥ ಕಥೆಯನ್ನು ಒಪ್ಪಿಕೊಂಡ ಡಾರ್ಲಿಂಗ್ ಕೃಷ್ಣ ಹಾಗೂ ವಿಭಿನ್ನ ಪಾತ್ರವನ್ನು ಚೆಂದವಾಗಿ ನಿಭಾಯಿಸಿದ ಮಿಲನಾ ನಾಗರಾಜ್ ಅಭಿನಯನದ ಸಿನಿಮಾ ಕೌಸಲ್ಯಾ ಸುಪ್ರಜಾ ರಾಮ.
- ಕುಸುಮಾ ಆಯರಹಳ್ಳಿ
ಮಲಯಾಳಂ ಸಿನೆಮಾಗಳನ್ನ ಹೊಗಳಿ ಹೊಗಳಿ ಬೇಜಾರಾಗಿತ್ತಪ್ಪ ನಮಗೂ. ಅಂತೂ ಕನ್ನಡದಲ್ಲಿ ಈ ವರ್ಷ ಹೀರೋಯಿಸಂ ಹೊರತಾದ ಒಂದಷ್ಟು ಸಿನೆಮಾಗಳು ಗೆಲ್ತಿರೋದು ಸಖತ್ ಖುಷಿ. ಈ ಪಟ್ಟಿಗೆ ಹೊಸ ಸೇರ್ಪಡೆ 'ಕೌಸಲ್ಯಾ ಸುಪ್ರಜಾ ರಾಮ'.
ನಮ್ಮ ಹಿಂದಿನ ಜನರೇಷನ್‌ನ ಬಹುತೇಕ ಗಂಡಸರು ಹೆಂಡತಿಯನ್ನು ನಡೆಸಿಕೊಂಡದ್ದೇ ಹಾಗೆ, ಒರಟಾಗಿ ಮತ್ತು ಪುರುಷಾಹಂಕಾರದಿಂದ. ನಾನಿರಬೇಕಾದ್ದು ಹೀಗೇ ತಗ್ಗಿ ಬಗ್ಗಿ ಹೊಂದಿಕೊಳ್ತಾ ಅಂತ ಅಮ್ಮಂದಿರು ನಂಬಿದ್ದರು. ಹಾಗಂತ ಅವರು ದಡ್ಡಿಯರಾಗಿರಲಿಲ್ಲ. ಪ್ರೀತಿಯ ಅಗತ್ಯವಿದ್ದೂ, ಜೀವನದ ಸತ್ಯ ಗೊತ್ತಿತ್ತೂ ಪೆದ್ದಿಯಂತೆ ನಟಿಸುತ್ತಾ ಗಂಡನ EGO ತಣಿಸುತ್ತಾ ಸಂಸಾರ ಉಳಿಸಲು ಹೆಣಗುತ್ತಿದ್ದರು. ಕುಟುಂಬಗಳ ಈ ಚಿತ್ರಣವನ್ನು ಸಿನೆಮಾದಲ್ಲಿ ಯಥಾವತ್ ಕಟ್ಟಿಕೊಟ್ಟಿದ್ದಾರೆ.
ಸಿನೆಮಾ ಮೊದಲಾರ್ಧದಲ್ಲಿ 'ನಾನಾರು? ಕಶ್ಯಪ ಬ್ರಹ್ಮನ ಮಗ' ಅಂತ ಮೀಸೆ ತಿರುವೋ ಗತ್ತಿನಲ್ಲಿ? 'ನಾನಾರು? ಸಿದ್ದೇಗೌಡರ ಮಗ' ಅಂತ ಟಾಪ್ ಟು ಬಾಟಂ ಗಂಡು ಅಹಂ ಬೆಳೆಸಿಕೊಂಡ ಹುಡುಗ, ಸೆಕೆಂಡ್ ಹಾಫ್‌ನಲ್ಲಿ ತನ್ನೆಲ್ಲ ಪುರುಷಾಹಂಕಾರವನ್ನೂ ಕಳೆದುಕೊಂಡು ಮನುಷ್ಯನಾಗುವ ಕಥೆ ಇದು. ಪ್ರಿಯತಮೆ ಬಿಟ್ಹೋದಾಗ ಇವನು ಹೇಳೋದು 'ಅವಳು ಬಿಟ್ಟೋದ್ಲು ಅಂತ ಯೋಚಿಸ್ತಿಲ್ಲ. ಅದೆಂಗ್ ನನ್ ಬಿಟ್ಟೋದ್ಲು?' ಅಂತಾನೆ. ಎಂತಾ ಕೊಬ್ಬು! Male Ego ಹೇಗೆಲ್ಲಾ ಕೆಲಸ ಮಾಡ್ತದೆ ಅಂತ ಹೀಗೆ ಅನೇಕ ಕಡೆ ಅತ್ಯಂತ ಸೂಕ್ಷ್ಮವಾಗಿ ಹೇಳಿದ್ದಾರೆ.
ಹೆಂಡತಿ ಹೊಗಳೋ ಗಂಡಂದಿರೂ ಇದಾರಾ? ಪ್ಲೀಸ್ ಡಾರ್ಲಿಂಗ್ ಕೃಷ್ಣರನ್ನ ಕೇಳಿ!
EGO ಅನ್ನುವ ಮನುಷ್ಯ ಭಾವನೆಯನ್ನೇ ಆಧರಿಸಿದ್ದ 'ಅಯ್ಯಪ್ಪನುಂ ಕೋಶಿಯುಂ' ಮತ್ತು 'ಡ್ರೈವಿಂಗ್ ಲೈಸನ್ಸ್' (Driving License) ಸಿನೆಮಾಗಳು ಸಾಕಷ್ಟು ಮೆಚ್ಚುಗೆ ಗಳಿಸಿದ್ದವು. ಕನ್ನಡದಲ್ಲಿ 'ಹೀರೋ' ಗಳು ಇಂತಾ ಕತೆಗಳನ್ನು ಒಪ್ಕೊಳ್ಳಲ್ವಲ್ಲ ಯಾಕೆ ಅನಿಸ್ತಿತ್ತು. ಡಾರ್ಲಿಂಗ್ ಕೃಷ್ಣ ಈ ಕತೆ ಒಪ್ಪಿ ಒಳ್ಳೆಯ ಕೆಲಸ ಮಾಡಿದ್ದಾರೆ. 'ನಿಜವಾದ ಗಂಡಸು ಅಂದರೆ ಯಾರು ಗೊತ್ತಾ?' ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋಗುವ ಕತೆ, 'ನಿಜವಾದ ಹೀರೋ ಅಂದ್ರೆ ಯಾರು ಗೊತ್ತಾ?' ಅನ್ನೋ ಸಂದೇಶ ಕೂಡ ಕೊಡ್ತಿದೆ.
ಕುಡುಕಿಯ ಪಾತ್ರ ಮಾಡುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಅದು ಹಾಸ್ಯಾಸ್ಪದ ಅನಿಸಿಬಿಡತ್ತೆ. ಮಿಲನಾ ಅದನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಬಹುಶಃ ಕೂಗೋ ಕೋಳಿಗೆ ಖಾರ ಮಸಾಲ ಎಂಬ ಮಾಲಾಶ್ರೀ ಹಾಡಿನ ನಂತರ ನಾಯಕಿಯೇ ಕುಡಿದ ಹಾಡು ಹಾಡಿದ್ದು ಹೆಚ್ಚು ಬಂದಿಲ್ವೇನೋ. ಇಲ್ಲಿ ಅಂತಾ ಪ್ರಯತ್ನವೂ ಇದೆ.
ಹೆಂಗಸರು ಗ್ರೇಟಾ?..ಗಂಡಸರು ಗ್ರೇಟಾ? : ಕೌಸಲ್ಯಾ ಸುಪ್ರಜಾ ರಾಮ ಕತೆಯಾದ್ರೂ ಏನು?
ಮೊದಲಾರ್ಥದಲ್ಲಿ ಅಹಂಕಾರಿಯಾಗಿಯೂ, ನಂತರ ಸಾತ್ವಿಕ ಗುಣದವನಾಗಿಯೂ ಎರಡೂ ಕ್ಯಾರೆಕ್ಟರ್‌ನಲ್ಲಿ ಕೃಷ್ಣ ತನ್ನ ನಟನಾ ಸಾಮರ್ಥ್ಯ ತೋರಿಸಿದ್ದಾರೆ. ಮಿಲನಾ ಮತ್ತು ಕೃಷ್ಣ ನಿಜಜೀವನದಲ್ಲಿ ಗಂಡ ಹೆಂಡತಿ ಆಗಿದ್ದೂ, ಅದು ನೆನಪೇ ಆಗದಂತೆ ಪಾತ್ರಗಳೇ ಆಗಿ perform ಮಾಡಿದ್ದಾರೆ. ಇದು ಅಷ್ಟು ಸುಲಭವಲ್ಲ. ಯಾವಾಗಲೂ ಏನಾದರೂ ಹೊಸತು ಮಾಡಬೇಕು ಅಂತ ಸದಾ ಚಡಪಡಿಸುವ ಈ ದಂಪತಿಗೆ ಒಳಿತಾಗಲಿ. ಸಿಕ್ಕಾಪಟ್ಟೆ ಚೆನ್ನಾಗಿ ಅಭಿನಯಿಸಿರೋ ನಮ್ಮ ಸುಧಾ ಬೆಳವಾಡಿ ಅವರಿಗೆ ಹಗ್ಸ್. (ಸುಧಾ ನೀವಿದರಲ್ಲಿ ಗಿರಿಜಾ ಲೋಕೇಶ್ ಮತ್ತು ಭಾರ್ಗವಿ ಇಬ್ರೂ ಮೇಳೈಸಿದ ಹಾಗೆ ಕಂಡ್ರಿ) ನಾಗಭೂಷಣ್ ಎನ್.ಎಸ್ ನಮ್ ಕಾಡಿನ ಹುಡುಗ. ಇಡೀ ಸಿನೆಮಾ ಕತೆಯ ನಿರೂಪಕನಾಗಿ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ಚಿಕ್ಕ ಪಾತ್ರವಾದರೂ ಚೊಕ್ಕದಾಗಿ ಅಭಿನಿಯಿಸಿದ ಗಿರಿರಾಜ್‌ಗೂ ಹ್ಯಾಟ್ಸ್ ಆಫ್.
ನಿರ್ದೇಶಕ ಶಶಾಂಕ್ ಮತ್ತು ನೆನಪಿಡುವಂತ ಮಾತುಗಳನ್ನು ಬರೆದ ಯದುನಂದನ್ ಮತ್ತು ಇಡೀ ತಂಡದ ಅಭಿನಯ ಶ್ಲಾಘನೀಯ. ಈ ಸಿನೆಮಾ ನೋಡೋ ಪ್ರತಿಯೊಬ್ಬರಿಗೂ ನಾವೇ ಅಥವಾ ನಾವು ಕಂಡ ಯಾರೋ , ಯಾವ್ದೋ ಒಂದು ಪಾತ್ರದಲ್ಲಿ ಕಾಣಿಸಿಯೇ ಕಾಣಿಸ್ತಾರೆ. ಅಷ್ಟಮಟ್ಟಿಗೆ ಇದು ಎಲ್ಲರ ಭಾವನೆಗಳ ಕತೆ.