
ಕೃತಕ ಬುದ್ಧಿಮತ್ತೆ (Artificial Intelligence) ಎನ್ನುವುದು ಕಳೆದ ಒಂದೆರಡು ವರ್ಷಗಳಿಂದ ಇಡೀ ವಿಶ್ವದ ತುಂಬ ವ್ಯಾಪಿಸಿ ಹಂಗಾಮಾ ಸೃಷ್ಟಿಸುತ್ತಿದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಈ ತಂತ್ರಜ್ಞಾನ ಕಾಲಿಟ್ಟಿದೆ. ಚಿಕ್ಕಪುಟ್ಟ ಮಕ್ಕಳಿನಿಂದ ಹಿಡಿದು ದೊಡ್ಡ ದೊಡ್ಡ ಉದ್ಯಮಿಗಳಿಗೂ ಎಲ್ಲರಿಗೂ ಎಐ ಬೇಕೇ ಬೇಕು. ಇದು ಮಾಡದ ಕೆಲಸವಿಲ್ಲ. ಒಂದು ವಾಕ್ಯ ಹೇಳಿದರೆ, ಕಥೆಯನ್ನೇ ಬರೆದುಕೊಡುತ್ತದೆ. ಯಾರ ಸ್ಟೈಲ್ನಲ್ಲಿ ಬೇಕೋ ಅವರ ಸ್ಟೈಲ್ನಲ್ಲಿ ಕವನ, ಕಥೆ ಎಲ್ಲವನ್ನೂ ಬರೆದು ಹಾಕಿಬಿಡುವಷ್ಟರ ಮಟ್ಟಿಗೆ ಎಐ ಬೆಳೆದು ನಿಂತಿದೆ. ಅಂದಹಾಗೆ, ಜಾನ್ ಮೆಕಾರ್ಥಿ (John McCarthy) ಅವರನ್ನು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಪಿತಾಮಹ ಎಂದು ಕರೆಯಲಾಗುತ್ತದೆ. ಅವರು 1956 ರಲ್ಲಿ "ಆರ್ಟಿಫಿಷಿಯಲ್ ಇಂಟೆಲಿಜೆನ್ಸ್" (Artificial Intelligence) ಎಂಬ ಪದವನ್ನು ಮೊದಲ ಬಾರಿಗೆ ಪರಿಚಯಿಸಿದ್ದರು ಎನ್ನಲಾಗಿದೆ. ಆದರೆ ಅದು ಈ ಮಟ್ಟಿಗೆ ಬೆಳೆದು ಬಂದದ್ದು ಇತ್ತೀಚೆಗೆ.
ಕಾಲಜ್ಞಾನಿಗಳು ಶತಮಾನದ ಹಿಂದೆಯೇ, ಮುಂದೊಂದು ದಿನ ತಂತ್ರಜ್ಞಾನ ಮನುಷ್ಯರನ್ನು ಆಳುತ್ತದೆ ಎಂದಾಗ ನಕ್ಕವರೇ ಹೆಚ್ಚು. ಆದರೆ ಇಂದು ಅದು ಅಕ್ಷರಶಃ ನಿಜವಾಗುತ್ತಿದೆ. ಇದು ಲಕ್ಷಾಂತರ ಮಂದಿಯ ಉದ್ಯೋಗ ಕಸಿದುಕೊಂಡಿರುವುದು ಒಂದೆಡೆಯಾದರೆ, ಆಧುನಿಕ ಯುಗಕ್ಕೆ ತಕ್ಕಂತೆ ಎಲ್ಲಾ ಕ್ಷೇತ್ರದಲ್ಲಿ ದಾಪುಗಾಲು ಇಡಲು ಈ ಟೇಕ್ನಾಲಾಜಿಯ ಅಗತ್ಯ ಇದ್ದೇ ಇದೆ. ಆದರೆ ಕುತೂಹಲ ಎನ್ನುವಂತೆ, ಈ ತಂತ್ರಜ್ಞಾನದ ಬಗ್ಗೆ 80ರ ದಶಕದಲ್ಲಿ ಶಂಕರ್ನಾಗ್ ನಿರ್ದೇಶನದಲ್ಲಿ ಬಂದಿದ್ದ ಆರ್.ಕೆ.ನಾರಾಯಣ್ ಅವರು ಬರೆದ ಮಾಲ್ಗುಡಿ ಡೇಸ್ (Malgudi Days)ನಲ್ಲಿಯೇ ಒಂದು ಎಪಿಸೋಡ್ನಲ್ಲಿ ಪ್ರಸಾರ ಆಗಿರುವುದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಅನಂತ್ ಕುಮಾರ್ ಅವರು ಕಾಣಿಸಿಕೊಂಡಿದ್ದ ಈ ಎಪಿಸೋಡ್ನಲ್ಲಿ, ಈ ಮಷಿನ್ನಲ್ಲಿ ಯಾವುದೇ ಕಥೆಯನ್ನು ಬರೆಯಬಹುದು ಎಂದು ಸಾಹಿತಿಯಾಗಿದ್ದ ಅನಂತ್ನಾಗ್ಗೆ ಎಡಿಟರ್ ಹೇಳುವ ದೃಶ್ಯವಿದೆ. ಅದು ಹೇಗೆ ಎಂದು ಅನಂತ್ನಾಗ್ ಕೇಳಿದಾಗ, ಅಲ್ಲಿರುವ ಒಂದು ಮಷಿನ್ ತೋರಿಸಿ ಅದರಲ್ಲಿರುವ ಬಟನ್ಗಳ ಬಗ್ಗೆ ವಿವರಿಸುವ ಎಡಿಟರ್, ಈ ಮಷಿನ್ ಒತ್ತಿದರೆ ಒಂದು ಸ್ಟೋರಿ ಐಡಿಯಾ ಕೊಡುತ್ತದೆ. ನಿಮಗೆ ಲವ್, ಇಮೋಷನ್, ಕ್ರೈಂ ಏನು ಬೇಕೋ ಎಲ್ಲವೂ ಹೇಳುತ್ತದೆ. ಇನ್ನೊಂದು ಬಟನ್ ಒತ್ತಿದರೆ, ಕಥೆ ಬರೆದುಕೊಡುತ್ತದೆ. ಮತ್ತೊಂದು ಅದನ್ನು ಸರಿ ಮಾಡುತ್ತದೆ... ಎನ್ನುತ್ತಾ ಎಲ್ಲಾ ಬಟನ್ಗಳ ಬಗ್ಗೆ ಹೇಳುತ್ತಾ, ಕೊನೆಯಲ್ಲಿ ಅಂತಿಮವಾಗಿ ಪ್ರಿಂಟ್ ಮಾಡಿ ಕೊಡುತ್ತದೆ ಎಂದಿದ್ದಾರೆ.
ಆಗ ಇದನ್ನು ತಮಾಷೆಯಾಗಿ ತೆಗೆದುಕೊಂಡವರೇ ಹೆಚ್ಚು. ಆದರೆ ಆ ಕಾಲಘಟ್ಟದಲ್ಲಿಯೇ ಶಂಕರ್ನಾಗ್ ಅವರು ಇದನ್ನು ಯೋಚಿಸಿರುವ ಬಗ್ಗೆ ಈಗ ಎಲ್ಲರೂ ಭೇಷ್ ಎನ್ನುತ್ತಿದ್ದಾರೆ. ಮುಂದೊಂದು ದಿನ ಇಂಥ ಕಾಲ ಬರುತ್ತದೆ ಎನ್ನೋದೇ ಕನಸಿನಲ್ಲಿಯೂ ಯಾರೂ ಊಹಿಸಿರಲಿಲ್ಲ. ಆದರೆ ಕಥೆ ಬರೆದುಕೊಡುವ ಮಷಿನ್ ಕೊನೆಗೂ ಬಂದಿದೆ ಎನ್ನುತ್ತಿದ್ದಾರೆ. ಇದರ ವಿಡಿಯೋ ಅನ್ನು ultramalgudidays ಎನ್ನುವ ಇನ್ಸ್ಟಾಗ್ರಾಮ್ ಚಾನೆಲ್ನಲ್ಲಿ ಶೇರ್ ಮಾಡಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.