700 ವರ್ಷ ಹಿಂದಿನ ಕಥೆ, 400ಕ್ಕೂ ಹೆಚ್ಚು ಜೂನಿಯರ್‌ ಆರ್ಟಿಸ್ಟ್‌: ಶ್ರೀಮುರಳಿ ‘ಉಗ್ರಾಯುಧಮ್’ ಶೂಟಿಂಗ್‌ ಜೋರು!

Published : Aug 12, 2026, 06:16 PM IST
Srimurali Ugrayudham

ಸಾರಾಂಶ

ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಅಭಿನಯದ ಬಹುನಿರೀಕ್ಷಿತ ‘ಉಗ್ರಾಯುಧಮ್’ ಸಿನಿಮಾ ಇದೀಗ ಶೂಟಿಂಗ್‌ ಹಂತದಲ್ಲಿ ವೇಗ ಪಡೆದುಕೊಂಡಿದೆ. 700 ವರ್ಷಗಳ ಹಿಂದಿನ ಕಾಲಘಟ್ಟದ ಕಥೆಯನ್ನು ಒಳಗೊಂಡಿರುವ ಈ ಪೀರಿಯಡ್‌..

ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಅಭಿನಯದ ಬಹುನಿರೀಕ್ಷಿತ ‘ಉಗ್ರಾಯುಧಮ್’ ಸಿನಿಮಾ ಇದೀಗ ಶೂಟಿಂಗ್‌ ಹಂತದಲ್ಲಿ ವೇಗ ಪಡೆದುಕೊಂಡಿದೆ. 700 ವರ್ಷಗಳ ಹಿಂದಿನ ಕಾಲಘಟ್ಟದ ಕಥೆಯನ್ನು ಒಳಗೊಂಡಿರುವ ಈ ಪೀರಿಯಡ್‌ ಡ್ರಾಮಾ ಸದ್ಯ ಬೆಂಗಳೂರಿನಲ್ಲಿ ಚಿತ್ರೀಕರಣಗೊಳ್ಳುತ್ತಿದೆ. ಬರೋಬ್ಬರಿ 400ಕ್ಕೂ ಹೆಚ್ಚು ಜೂನಿಯರ್‌ ಆರ್ಟಿಸ್ಟ್‌ಗಳು ಭಾಗಿಯಾಗಿರುವ ಪ್ರಮುಖ ದೃಶ್ಯಗಳನ್ನು ಚಿತ್ರತಂಡ ಸೆರೆಹಿಡಿಯುತ್ತಿದೆ.

ಬೆಂಗಳೂರಿನಲ್ಲಿ ಭರ್ಜರಿ ಶೂಟಿಂಗ್‌!

‘ಉಗ್ರಾಯುಧಮ್’ ಸಿನಿಮಾದ ಸದ್ಯದ ಶೆಡ್ಯೂಲ್‌ ಬೆಂಗಳೂರಿನ ರಾಕ್‌ಲೈನ್‌ ಸ್ಟುಡಿಯೋದಲ್ಲಿ ನಡೆಯುತ್ತಿದೆ. ಮಳೆಗಾಲದ ಹಿನ್ನೆಲೆಯಲ್ಲಿ ಹೊರಾಂಗಣ ಚಿತ್ರೀಕರಣಕ್ಕೆ ಕೊಂಚ ಬ್ರೇಕ್‌ ನೀಡಿ, ಸ್ಟುಡಿಯೋದಲ್ಲಿ ನಿರ್ಮಿಸಿರುವ ಅದ್ಧೂರಿ ಸೆಟ್‌ಗಳಲ್ಲಿ ಕೆಲವು ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿದೆ. ಕಲಾ ನಿರ್ದೇಶಕ ಅಮರ್‌ ಅವರ ನೇತೃತ್ವದಲ್ಲಿ ಸಿನಿಮಾಗಾಗಿ ಒಳಾಂಗಣ ಸೆಟ್‌ಗಳನ್ನು ನಿರ್ಮಿಸಲಾಗಿದೆ. ಮೂಲತಃ ಬಹುತೇಕ ಹೊರಾಂಗಣದಲ್ಲೇ ಚಿತ್ರೀಕರಿಸಲು ಯೋಜಿಸಿರುವ ಸಿನಿಮಾ ಇದಾಗಿದ್ದು, ಮಳೆ ಕಡಿಮೆಯಾದ ಬಳಿಕ ಚಿತ್ರತಂಡ ತೀರ್ಥಹಳ್ಳಿಯತ್ತ ತೆರಳಲಿದೆ ಎನ್ನಲಾಗಿದೆ.

700 ವರ್ಷಗಳ ಹಿಂದಿನ ಕಥೆ!

‘ಉಗ್ರಾಯುಧಮ್’ ಕಥೆ ಸುಮಾರು 700 ವರ್ಷಗಳ ಹಿಂದಿನ ಕಾಲಘಟ್ಟದಲ್ಲಿ ನಡೆಯಲಿದೆ. ಹೀಗಾಗಿ ಸಿನಿಮಾದಲ್ಲಿ ಆ ಕಾಲದ ವಾತಾವರಣ, ಜೀವನಶೈಲಿ ಹಾಗೂ ಕಥೆಯ ಜಗತ್ತನ್ನು ಕಟ್ಟಿಕೊಡಲು ಚಿತ್ರತಂಡ ವಿಶೇಷ ತಯಾರಿ ಮಾಡಿಕೊಂಡಿದೆ. ಈ ಚಿತ್ರದ ಮೂಲಕ ಪುನೀತ್‌ ರುದ್ರನಾಗ್‌ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಕಥೆ ಮತ್ತು ಚಿತ್ರಕಥೆಯ ಜವಾಬ್ದಾರಿಯನ್ನೂ ಅವರೇ ಹೊತ್ತಿದ್ದು, ಮಂಜು ಅಥರ್ವ ಚಿತ್ರಕಥೆಗೆ ಸಹಕರಿಸಿದ್ದಾರೆ. ಸಂಕೇತ್‌ ಛಾಯಾಗ್ರಹಣ ಮಾಡುತ್ತಿದ್ದಾರೆ.

ಶ್ರೀಮುರಳಿ ಲುಕ್‌, ಪಾತ್ರ ಹೇಗಿರಲಿದೆ?

‘ಉಗ್ರಾಯುಧಮ್’ನಲ್ಲಿ ಶ್ರೀಮುರಳಿ ಈ ಹಿಂದೆ ಕಾಣಿಸಿಕೊಂಡಿರದ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಆದರೆ ಅವರ ಪಾತ್ರದ ಸ್ವರೂಪ ಹಾಗೂ ಕಥೆಯ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ಸದ್ಯಕ್ಕೆ ಗೌಪ್ಯವಾಗಿಡಲಾಗಿದೆ. ಚಿತ್ರದ ನಾಯಕಿ ಸೇರಿದಂತೆ ಉಳಿದ ತಾರಾಗಣದ ವಿವರಗಳನ್ನು ಶೀಘ್ರದಲ್ಲೇ ಘೋಷಿಸುವ ಸಾಧ್ಯತೆ ಇದೆ.

‘ಉಗ್ರಾಯುಧಮ್’ ನಿರ್ಮಿಸುತ್ತಿರುವವರು ಯಾರು?

ಸುರಂ ಮೂವೀಸ್‌ ಬ್ಯಾನರ್‌ನಲ್ಲಿ ಜಯರಾಮ್‌ ದೇವಸಮುದ್ರ ‘ಉಗ್ರಾಯುಧಮ್’ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ‘ನಿದ್ರಾದೇವಿ ನೆಕ್ಸ್ಟ್‌ ಡೋರ್‌’ ಮೂಲಕ ನಿರ್ಮಾಪಕರಾಗಿ ಪದಾರ್ಪಣೆ ಮಾಡಿದ್ದ ಜಯರಾಮ್‌, ಬಳಿಕ ‘ಎಲ್‌ಎಸ್‌ಡಿ’ ಹಾಗೂ ‘ನೀ ನಂಗೆ ಅಲ್ಲವಾ’ ಸಿನಿಮಾಗಳಿಗೂ ಬಂಡವಾಳ ಹೂಡಿದ್ದಾರೆ. ಈ ಎರಡೂ ಸಿನಿಮಾಗಳು ಬಿಡುಗಡೆಯ ಹಂತದಲ್ಲಿವೆ.

‘ಪರಾಕ್‌’ನಲ್ಲೊಂದು ಲುಕ್‌, ‘ಉಗ್ರಾಯುಧಮ್’ನಲ್ಲಿ ಮತ್ತೊಂದು ಅವತಾರ!

ಶ್ರೀಮುರಳಿ ಅವರ ಕೈಯಲ್ಲಿ ಸದ್ಯ ಹಲವು ಕುತೂಹಲಕಾರಿ ಸಿನಿಮಾಗಳಿವೆ. ಹಾಲೇಶ್‌ ಕೊಗುಂಡಿ ನಿರ್ದೇಶನದ ‘ಪರಾಕ್‌’ ಸಿನಿಮಾ ಕೂಡ ಬಿಡುಗಡೆಯ ನಿರೀಕ್ಷೆಯಲ್ಲಿದೆ. ‘ಪರಾಕ್‌’ನಲ್ಲಿ ಸಮಕಾಲೀನ ಕಥಾಹಂದರದಲ್ಲಿ ಕಾಣಿಸಿಕೊಳ್ಳಲಿರುವ ಶ್ರೀಮುರಳಿ, ‘ಉಗ್ರಾಯುಧಮ್’ನಲ್ಲಿ ಸಂಪೂರ್ಣ ವಿಭಿನ್ನವಾದ ಐತಿಹಾಸಿಕ ಹಿನ್ನೆಲೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ಒಂದೇ ಸಮಯದಲ್ಲಿ ಎರಡು ವಿಭಿನ್ನ ಜಾನರ್‌ಗಳ ಸಿನಿಮಾಗಳ ಮೂಲಕ ಶ್ರೀಮುರಳಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ‘ಉಗ್ರಾಯುಧಮ್’ನ ಕಥೆ, ಶ್ರೀಮುರಳಿ ಅವರ ಪಾತ್ರ ಹಾಗೂ 700 ವರ್ಷಗಳ ಹಿಂದಿನ ಆ ಜಗತ್ತು ತೆರೆ ಮೇಲೆ ಹೇಗೆ ಮೂಡಿಬರಲಿದೆ ಎಂಬುದೇ ಈಗ ಸಿನಿಮಂದಿಯ ಕುತೂಹಲಕ್ಕೆ ಕಾರಣವಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

‘ಅಯೋಗ್ಯ 2’ ಸಕ್ಸಸ್‌ ಬೆನ್ನಲ್ಲೇ ಬಿಗ್‌ ಅಪ್‌ಡೇಟ್‌: ರವಿಚಂದ್ರನ್‌ ಪಾತ್ರಕ್ಕೇ ಪ್ರತ್ಯೇಕ ಸಿನಿಮಾ ಮಾಡ್ತಾರಂತೆ ನಿರ್ದೇಶಕ!
ಕನ್ನಡಕ್ಕೆ ಬರಲು ರೆಡಿಯಾದ್ರಾ ಮಾಧುರಿ ದೀಕ್ಷಿತ್‌? ಶಿವಣ್ಣನ ‘ಎ ಫಾರ್‌ ಆನಂದ್‌’ಗೆ ಬಾಲಿವುಡ್‌ ಚೆಲುವೆ!