‘ಅಯೋಗ್ಯ 2’ ಸಕ್ಸಸ್‌ ಬೆನ್ನಲ್ಲೇ ಬಿಗ್‌ ಅಪ್‌ಡೇಟ್‌: ರವಿಚಂದ್ರನ್‌ ಪಾತ್ರಕ್ಕೇ ಪ್ರತ್ಯೇಕ ಸಿನಿಮಾ ಮಾಡ್ತಾರಂತೆ ನಿರ್ದೇಶಕ!

Published : Aug 12, 2026, 06:01 PM IST
Ravichandran

ಸಾರಾಂಶ

ಸತೀಶ್‌ ನೀನಾಸಂ ಹಾಗೂ ರಚಿತಾ ರಾಮ್‌ ಅಭಿನಯದ ‘ಅಯೋಗ್ಯ 2’ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಮೊದಲ ಮೂರು ದಿನಗಳಲ್ಲಿ ₹6 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿರುವುದಾಗಿ ಚಿತ್ರತಂಡ ಹೇಳಿಕೊಂಡಿದೆ.

ಸತೀಶ್‌ ನೀನಾಸಂ ಹಾಗೂ ರಚಿತಾ ರಾಮ್‌ ಅಭಿನಯದ ‘ಅಯೋಗ್ಯ 2’ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಮೊದಲ ಮೂರು ದಿನಗಳಲ್ಲಿ ₹6 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿರುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಇದರ ಬೆನ್ನಲ್ಲೇ ಸಿನಿಮಾದ ನಿರ್ದೇಶಕ ಮಹೇಶ್‌ ಕುಮಾರ್‌ ಫ್ರಾಂಚೈಸಿಯ ಮುಂದಿನ ಹೆಜ್ಜೆ ಬಗ್ಗೆ ಕುತೂಹಲಕಾರಿ ಮಾಹಿತಿ ಹಂಚಿಕೊಂಡಿದ್ದಾರೆ. ‘ಅಯೋಗ್ಯ 2’ ಸಿನಿಮಾದಲ್ಲಿ ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರ ಪಾತ್ರವನ್ನು ಚಿತ್ರತಂಡ ಕೊನೆಯವರೆಗೂ ಸೀಕ್ರೆಟ್‌ ಆಗಿಟ್ಟಿತ್ತು. ಸಿನಿಮಾ ಬಿಡುಗಡೆಯಾದ ಬಳಿಕ ರವಿಚಂದ್ರನ್‌ ಅವರ ಎಂಟ್ರಿ ಹಾಗೂ ಪಾತ್ರ ಪ್ರೇಕ್ಷಕರ ಗಮನ ಸೆಳೆದಿದೆ. ಇದೀಗ ಇದೇ ಪಾತ್ರವನ್ನು ಇಟ್ಟುಕೊಂಡು ಪ್ರತ್ಯೇಕ ಸಿನಿಮಾ ಮಾಡುವ ಆಲೋಚನೆ ನಿರ್ದೇಶಕರಿಗಿದೆ!

‘ಅಯೋಗ್ಯ 3’ಗಿಂತ ಮೊದಲು ರವಿಚಂದ್ರನ್‌ ಪಾತ್ರದ ಕಥೆ!

‘ಅಯೋಗ್ಯ 2’ನಲ್ಲಿ ಸತೀಶ್‌ ನೀನಾಸಂ ಅವರ ತಂದೆಯಾಗಿ ರವಿಚಂದ್ರನ್‌ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಅವರ ಪಾತ್ರ ಸ್ವಲ್ಪ ತಡವಾಗಿ ಎಂಟ್ರಿ ಕೊಟ್ಟರೂ, ಪ್ರೇಕ್ಷಕರ ಪ್ರತಿಕ್ರಿಯೆ ಮಾತ್ರ ಜೋರಾಗಿದೆ. ಇದೇ ಕಾರಣಕ್ಕೆ ರವಿಚಂದ್ರನ್‌ ಅವರ ಪಾತ್ರದ ಹಿಂದಿನ ಕಥೆಯನ್ನು ತೆರೆಗೆ ತರಲು ಮಹೇಶ್‌ ಕುಮಾರ್‌ ಯೋಚಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ನಿರ್ದೇಶಕ ಮಹೇಶ್‌ ಕುಮಾರ್‌, ರವಿಚಂದ್ರನ್‌ ಅವರ ಪಾತ್ರದ ಸುತ್ತ ಈಗಾಗಲೇ ಒಂದು ಕಥೆಯ ಐಡಿಯಾ ತಮ್ಮಲ್ಲಿದೆ ಎಂದು ಹೇಳಿದ್ದಾರೆ. “ರವಿಚಂದ್ರನ್‌ ಸರ್‌ ಅವರ ಪಾತ್ರದ ಸುತ್ತ ಒಂದು ಕಥೆಯನ್ನು ನಾನು ಈಗಾಗಲೇ ಯೋಚಿಸಿದ್ದೆ. ‘ಅಯೋಗ್ಯ 2’ಗೆ ಸಿಗುತ್ತಿರುವ ಪ್ರತಿಕ್ರಿಯೆ ಆ ಆಲೋಚನೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಮೊದಲು ಆ ಕಥೆಯನ್ನು ಪ್ರೀಕ್ವೆಲ್‌ ಆಗಿ ಮಾಡುವ ಆಸಕ್ತಿ ಇದೆ. ಅದರ ನಂತರವಷ್ಟೇ ‘ಅಯೋಗ್ಯ 3’ ಬಗ್ಗೆ ಯೋಚಿಸಲು ಇಷ್ಟಪಡುತ್ತೇನೆ” ಎಂದು ಮಹೇಶ್‌ ಕುಮಾರ್‌ ತಿಳಿಸಿದ್ದಾರೆ.

‘ಅಯೋಗ್ಯ 3’ಗೆ ಆತುರ ಇಲ್ಲ!

ಸಾಮಾನ್ಯವಾಗಿ ಸಿನಿಮಾ ಯಶಸ್ವಿಯಾದ ಕೂಡಲೇ ಮುಂದಿನ ಭಾಗದ ಕೆಲಸ ಶುರುವಾಗುತ್ತದೆ. ಆದರೆ ಮಹೇಶ್‌ ಕುಮಾರ್‌ ಮಾತ್ರ ಸದ್ಯಕ್ಕೆ ‘ಅಯೋಗ್ಯ 3’ ಮಾಡುವ ಆತುರದಲ್ಲಿಲ್ಲ. ‘ಅಯೋಗ್ಯ’ ಸಿನಿಮಾದ ಗ್ರಾಮೀಣ ಹಿನ್ನೆಲೆಯ ಜಗತ್ತಿನಲ್ಲಿ ಇನ್ನೂ ಹಲವು ಕಥೆಗಳಿಗೆ ಅವಕಾಶವಿದೆ ಎಂಬುದು ನಿರ್ದೇಶಕರ ಅಭಿಪ್ರಾಯ. ಅದರಲ್ಲೂ ರವಿಚಂದ್ರನ್‌ ಅವರ ಪಾತ್ರದ ಬದುಕಿನಲ್ಲಿ ನಡೆದ ಘಟನೆಗಳನ್ನು ಪ್ರೇಕ್ಷಕರಿಗೆ ತೋರಿಸುವ ಮೂಲಕ ಫ್ರಾಂಚೈಸಿಗೆ ಹೊಸ ಆಯಾಮ ನೀಡುವ ಯೋಚನೆಯಲ್ಲಿದ್ದಾರೆ. ಆದರೆ ಸದ್ಯಕ್ಕೆ ‘ಅಯೋಗ್ಯ 2’ ಯಶಸ್ಸನ್ನು ಎಂಜಾಯ್‌ ಮಾಡಬೇಕು. ಜೊತೆಗೆ ಈ ಹಿಂದೆ ಒಪ್ಪಿಕೊಂಡಿರುವ ಕೆಲವು ಕೆಲಸಗಳನ್ನು ಮುಗಿಸಿದ ಬಳಿಕವಷ್ಟೇ ಫ್ರಾಂಚೈಸಿಗೆ ಮರಳುವುದಾಗಿ ಮಹೇಶ್‌ ಕುಮಾರ್‌ ಹೇಳಿದ್ದಾರೆ.

‘ಅಯೋಗ್ಯ 2’ಗೆ ವೀಕೆಂಡ್‌ನಲ್ಲಿ ಭರ್ಜರಿ ರೆಸ್ಪಾನ್ಸ್‌!

‘ಅಯೋಗ್ಯ 2’ ಸಿನಿಮಾಗೆ ಕರ್ನಾಟಕದ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಚಿತ್ರತಂಡದ ಮಾಹಿತಿ ಪ್ರಕಾರ, ಬಿಡುಗಡೆಯಾದ ಮೊದಲ ವೀಕೆಂಡ್‌ನಲ್ಲಿ ಸಿನಿಮಾಗೆ 2,200ಕ್ಕೂ ಹೆಚ್ಚು ಶೋಗಳು ನಡೆದಿದ್ದು, ಸುಮಾರು 4 ಲಕ್ಷ ಟಿಕೆಟ್‌ಗಳು ಮಾರಾಟವಾಗಿವೆ. ವೀಕೆಂಡ್‌ ಮಾತ್ರವಲ್ಲದೆ ವಾರದ ದಿನಗಳಲ್ಲೂ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ ಎನ್ನಲಾಗಿದೆ. ಮಲ್ಟಿಪ್ಲೆಕ್ಸ್‌ ಹಾಗೂ ಸಿಂಗಲ್‌ ಸ್ಕ್ರೀನ್‌ ಚಿತ್ರಮಂದಿರಗಳಲ್ಲೂ ಪ್ರೇಕ್ಷಕರ ಹಾಜರಾತಿ ನಿರೀಕ್ಷೆಗಿಂತ ಉತ್ತಮವಾಗಿದ್ದು, ನಾಲ್ಕನೇ ದಿನದಿಂದ 20ಕ್ಕೂ ಹೆಚ್ಚು ಸ್ಕ್ರೀನ್‌ಗಳನ್ನು ಹೆಚ್ಚಿಸಲಾಗಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ರವಿಚಂದ್ರನ್‌ ಎಂಟ್ರಿ ಮಾತ್ರವಲ್ಲ, ಕಾಮಿಡಿಗೂ ಫುಲ್‌ ಮಾರ್ಕ್ಸ್!

‘ಅಯೋಗ್ಯ 2’ನಲ್ಲಿ ರವಿಚಂದ್ರನ್‌ ಅವರ ಸರ್ಪ್ರೈಸ್‌ ಎಂಟ್ರಿ ಪ್ರೇಕ್ಷಕರಿಗೆ ಇಷ್ಟವಾಗಿರುವುದರ ಜೊತೆಗೆ ಸಿನಿಮಾದ ಕಾಮಿಡಿ ಕೂಡ ಮೆಚ್ಚುಗೆ ಪಡೆಯುತ್ತಿದೆ. ಸಾಧುಕೋಕಿಲ, ತಬಲಾ ನಾಣಿ, ಸುಂದರ್‌ ರಾಜ್‌, ಶಿವರಾಜ್‌ ಕೆ.ಆರ್‌. ಪೇಟೆ, ಗಿಲ್ಲಿ ನಟ, ಅರುಣಾ ಬಾಲರಾಜ್‌, ಗಿರಿ ಶಿವಣ್ಣ ಹಾಗೂ ಮಂಜು ಪಾವಗಡ ಸೇರಿದಂತೆ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ. ಪ್ರಜ್ಞಾ ಅವರು ಹಾಡೊಂದರಲ್ಲಿ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಸತೀಶ್‌ ನೀನಾಸಂ ಹಾಗೂ ರವಿಶಂಕರ್‌ ನಡುವಿನ ದೃಶ್ಯಗಳು ಕೂಡ ಪ್ರೇಕ್ಷಕರ ಗಮನ ಸೆಳೆದಿವೆ.

‘ಅಯೋಗ್ಯ’ ಫ್ರಾಂಚೈಸಿಗೆ ಮುಂದಿನ ಕಥೆ ಯಾವುದು?

‘ಅಯೋಗ್ಯ 2’ಗೆ ಸಿಗುತ್ತಿರುವ ಪ್ರತಿಕ್ರಿಯೆ ಚಿತ್ರತಂಡದ ಉತ್ಸಾಹವನ್ನು ಹೆಚ್ಚಿಸಿದೆ. ಸದ್ಯ ಸಿನಿಮಾ ಸಕ್ಸಸ್‌ ಎಂಜಾಯ್‌ ಮಾಡುತ್ತಿರುವ ನಿರ್ದೇಶಕ ಮಹೇಶ್‌ ಕುಮಾರ್‌, ಮುಂದಿನ ದಿನಗಳಲ್ಲಿ ರವಿಚಂದ್ರನ್‌ ಅವರ ಪಾತ್ರದ ಹಿನ್ನೆಲೆಯನ್ನು ಆಧರಿಸಿದ ಪ್ರೀಕ್ವೆಲ್‌ ಮಾಡುವ ಆಲೋಚನೆಯಲ್ಲಿದ್ದಾರೆ. ಹೀಗಾಗಿ ‘ಅಯೋಗ್ಯ 3’ಗೂ ಮುನ್ನ ರವಿಚಂದ್ರನ್‌ ಅವರ ಪಾತ್ರದ ಕಥೆಯೇ ಪ್ರತ್ಯೇಕ ಸಿನಿಮಾವಾಗುತ್ತಾ? ಎಂಬ ಕುತೂಹಲ ಇದೀಗ ‘ಅಯೋಗ್ಯ’ ಅಭಿಮಾನಿಗಳಲ್ಲಿ ಮೂಡಿದೆ. ‘ಅಯೋಗ್ಯ 2’ ಚಿತ್ರವನ್ನು ಎಸ್‌ವಿಸಿ ಫಿಲ್ಮ್ಸ್‌ ಬ್ಯಾನರ್‌ನಲ್ಲಿ ಎಂ. ಮುನೇಗೌಡ ನಿರ್ಮಿಸಿದ್ದಾರೆ. ಅರ್ಜುನ್‌ ಜನ್ಯ ಸಂಗೀತ, ಚೇತನ್‌ ಕುಮಾರ್‌ ಸಾಹಿತ್ಯ, ಮಾಸ್ತಿ ಉಪ್ಪರಹಳ್ಳಿ ಸಂಭಾಷಣೆ ಹಾಗೂ ವಿಶ್ವಜಿತ್‌ ರಾವ್‌ ಛಾಯಾಗ್ರಹಣ ಚಿತ್ರಕ್ಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕನ್ನಡಕ್ಕೆ ಬರಲು ರೆಡಿಯಾದ್ರಾ ಮಾಧುರಿ ದೀಕ್ಷಿತ್‌? ಶಿವಣ್ಣನ ‘ಎ ಫಾರ್‌ ಆನಂದ್‌’ಗೆ ಬಾಲಿವುಡ್‌ ಚೆಲುವೆ!
ಚಿನ್ನದ ತಾಳಿ ಕಳೆದುಕೊಂಡು ಕಣ್ಣೀರಿಟ್ಟ ‘ಲಕ್ಷ್ಮೀ ನಿವಾಸ’ ನಟಿ: ಸ್ಪಾ ಘಟನೆ ಬಿಚ್ಚಿಟ್ಟ ವಿನೋದಿನಿ ಶ್ವೇತಾ