ಹಿಂದಿಯಲ್ಲಿ ಸೈ ಎನ್ನಿಸಿಕೊಂಡು ಕನ್ನಡಕ್ಕೆ ಬಂದ ಪ್ರತಿಭಾವಂತ ಸತ್ಯಜಿತ್‌!

By Kannadaprabha News  |  First Published Oct 11, 2021, 10:07 AM IST

ಕನ್ನಡ ಚಿತ್ರರಂಗದ ಹಿರಿಯ ನಟ ಸತ್ಯಜಿತ್‌ ಇಹಲೋಕ ತ್ಯಿಜಿಸಿದ್ದಾರೆ. ಉತ್ತರ ಕರ್ನಾಟಕದ ಮೂಲದವರಾದ ಅವರು ಬಸ್‌ ಚಾಲಕರಾಗಿದ್ದವರು. ನಟನೆಯ ಪ್ರೀತಿ ಅವರನ್ನು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸುವಂತೆ ಮಾಡಿತು. ಬಹುತೇಕ ಹೀರೋಗಳಿಗೆ ವಿಲನ್‌ ಆಗಿ ನಟಿಸಿದ ಪ್ರತಿಭಾವಂತ ಕಲಾವಿದನಿಗೆ ಅಕ್ಷರ ನಮನ.


ಸಯ್ಯದ್‌ ನಿಜಾಮುದ್ದೀನ್‌ ಈ ಹೆಸರು ಕನ್ನಡ ಚಿತ್ರರಂಗಕ್ಕೆ ಅಪರಿಚಿತ. ಆದರೆ, ಖಳನಟ ಸತ್ಯಜಿತ್‌ ಎಂದರೆ ಎಲ್ಲರಿಗೂ ಪರಿಚಿತ. ಸತ್ಯಜಿತ್‌ ಅವರ ನಿಜವಾದ ಹೆಸರು ಸಯ್ಯದ್‌ ನಿಜಾಮುದ್ದೀನ್‌. ಖಳನಾಯಕನಾಗಿಯೇ ಗುರುತಿಸಿಕೊಂಡ ಈ ಕಲಾವಿದ ನಟನಾಗಿದ್ದೇ ಆಕಸ್ಮಿಕ.

ಉತ್ತರ ಕರ್ನಾಟಕ ಮೂಲದ ಸತ್ಯಜಿತ್‌, ಹುಬ್ಬಳ್ಳಿಯಲ್ಲಿ ಸಂಚರಿಸುತ್ತಿದ್ದ ಸರ್ಕಾರಿ ಸಿಟಿ ಬಸ್‌ನಲ್ಲಿ ಡ್ರೈವರ್‌ ಆಗಿದ್ದವರು. ಆಗಲೇ ನಾಟಕದ ಗೀಳು ಹತ್ತಿಸಿಕೊಂಡಿದ್ದವರು. ಹಲವು ನಾಟಕ ಕಂಪನಿಗಳ ಜತೆ ನಂಟು ಇಟ್ಟುಕೊಂಡಿದ್ದ ಸತ್ಯಜಿತ್‌ ಅವರಿಗೆ ಡ್ರೈವರ್‌ ಉದ್ಯೋಗ ಹೊಟ್ಟೆತುಂಬಿಸಿದರೆ, ನಾಟಕಗಳಲ್ಲಿನ ನಟನೆ ಮನಸ್ಸಿಗೆ ಖುಷಿ ಕೊಡುತ್ತಿತ್ತು. ಸ್ಪಷ್ಟವಾಗಿ ಹಿಂದಿ ಮಾತನಾಡುತ್ತಿದ್ದ ಅವರು ಅಷ್ಟೇ ಶುದ್ಧವಾಗಿ ಕನ್ನಡದ ಜತೆಗೆ ಮರಾಠಿ ಭಾಷೆಯನ್ನೂ ಮಾತನಾಡುತ್ತಿದ್ದರು. ಜತೆಗೆ ಹೈಟು. ಹಿಂದಿ ಭಾಷೆಯ ಮೇಲಿನ ಹಿಡಿತ, ನೋಡಲು ಎತ್ತರವಾಗಿದ್ದ ಸತ್ಯಜಿತ್‌ ಮೊದಲು ಬಣ್ಣ ಹಚಿದ್ದು ಹಿಂದಿಯ ‘ಅಂಕುಶ್‌’ ಚಿತ್ರಕ್ಕೆ. ಸೂಪರ್‌ಹಿಟ್‌ ನಿರ್ದೇಶಕ ಎನ್‌ ಚಂದ್ರ ನಿರ್ದೇಶನದ ‘ಅಂಕುಶ್‌’ ಚಿತ್ರದಲ್ಲಿನ ಅವರ ನಟನೆ ಉದ್ಯಮದ ಗಮನ ಸೆಳೆಯಿತು. ಮೊದಲ ಚಿತ್ರವೇ ಅವರ ದಾರಿಗೆ ದೀಪವಾಯಿತು.

Tap to resize

Latest Videos

undefined

ಹಿಂದಿ ಟು ಕನ್ನಡ

1986ರಲ್ಲಿ ‘ಅಂಕುಶ್‌’ ಚಿತ್ರದ ನಂತರ ಸತ್ಯಜಿತ್‌ ಪ್ರತಿಭೆಯನ್ನು ಗುರುತಿಸಿದ ಕನ್ನಡ ಚಿತ್ರರಂಗ ಅವರನ್ನು ಸ್ಯಾಂಡಲ್‌ವುಡ್‌ಗೆ ಕರೆತಂದಿತು. ‘ಅರುಣಾ ರಾಗ’, ‘ನ್ಯಾಯಕ್ಕೆ ಶಿಕ್ಷೆ’, ‘ಮಿ.ರಾಜ’, ‘ಅಂತಿಮ ತೀರ್ಪು’, ‘ತಾಯಿಗೊಬ್ಬ ಕರ್ಣ’, ‘ಶಿವ ಮೆಚ್ಚಿದ ಕಣ್ಣಪ್ಪ’, ‘ರಣರಂಗ’, ‘ನಮ್ಮೂರ ರಾಜ’ ಅವರ ಆರಂಭದ ಕನ್ನಡ ಸಿನಿಮಾಗಳು. ಪೋಷಕ ನಟನಾಗಿ, ಖಳನಟನಾಗಿ ಬೇಡಿಕೆ ಹೆಚ್ಚಿಸಿಕೊಂಡ ಸತ್ಯಜಿತ್‌ ಸುಮಾರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ಡಾ. ರಾಜ್‌ಕುಮಾರ್‌, ಡಾ. ವಿಷ್ಣುವರ್ಧನ್‌, ಅಂಬರೀಶ್‌ ಅವರಿಂದ ಆರಂಭವಾಗಿ ಸುದೀಪ್‌, ದರ್ಶನ್‌, ಜಗ್ಗೇಶ್‌, ಶಿವರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌, ರವಿಚಂದ್ರನ್‌, ದೇವರಾಜ್‌ ಹೀಗೆ ಕನ್ನಡದ ಎಲ್ಲಾ ಹೀರೋಗಳಿಗೂ ವಿಲನ್‌ ಆಗಿ ಕಾಡಿದವರು. ಎರಡು ವಾರಗಳ ಹಿಂದೆಯಷ್ಟೆತೆರೆಕಂಡಿದ್ದ ಜಗ್ಗೇಶ್‌ ಪುತ್ರ ಗುರುರಾಜ್‌ ನಟನೆಯ ‘ಕಾಗೆಮೊಟ್ಟೆ’ ಚಿತ್ರದಲ್ಲೂ ವಿಲನ್‌ ಆಗಿ ಕಾಣಿಸಿಕೊಂಡಿದ್ದರು.

ಸತ್ಯಜಿತ್‌ ನೆರವಿಗೆ ನಿಂತ ಕಾಗೆಮೊಟ್ಟೆ ಚಿತ್ರತಂಡ

ಬದುಕು ಕಿತ್ತುಕೊಂಡ ಗ್ಯಾಂಗ್ರಿನ್‌

ಸತ್ಯಜಿತ್‌ ಹಿಂದೂ ಹುಡುಗಿಯನ್ನು ಮದುವೆ ಮಾಡಿಕೊಂಡರು. ಒಂದು ಗಂಡು, ಒಂದು ಹೆಣ್ಣು ಇಬ್ಬರು ಮಕ್ಕಳನ್ನು ಪಡೆದ ಅವರು ಮಗಳನ್ನು ಪೈಲೆಟ್‌ ಮಾಡಿದರು. ಮಗ ಆಕಾಶ್‌ ಸತ್ಯಜಿತ್‌ ಅಪ್ಪನಂತೆ ಕಲಾವಿದನಾಗುವ ನಿಟ್ಟಿನಲ್ಲಿ ‘ತಬ್ಬಲಿ’ ಎನ್ನುವ ಚಿತ್ರಕ್ಕೆ ಹೀರೋ ಆಗಿ ಚಿತ್ರರಂಗಕ್ಕೆ ಲಾಂಚ್‌ ಆದರು. ಎಲ್ಲವೂ ಚೆನ್ನಾಗಿಯೇ ಇದೆಯಲ್ಲ ಎಂದುಕೊಳ್ಳುವ ಹೊತ್ತಿಗೆ ಗ್ಯಾಂಗ್ರಿನ್‌ ಅವರನ್ನು ಕಾಡಲು ಶುರುವಾಯಿತು. ಅವರ ಒಂದು ಕಾಲನ್ನು ತೆಗೆಯಬೇಕಾಯಿತು. ಬಹುಬೇಡಿಕೆಯ ನಟ ಮನೆಯಲ್ಲಿ ಕೂರುವಂತಾಯಿತು. ಇದರ ಬೆನ್ನೆಲ್ಲೇ ಆರ್ಥಿಕ ಸಂಕಷ್ಟಗಳು ಅವರನ್ನು ಆವರಿಸಿಕೊಳ್ಳತೊಡಗಿದವು. ಸಾಲದ್ದಕ್ಕೆ ಕೌಟುಂಬಿಕ ಕಲಹಗಳು ಕೊನೆಯ ದಿನಗಳಲ್ಲಿ ಅವರನ್ನು ಹೈರಾಣು ಮಾಡಿದ್ದವು.

ಹಾರ್ಟ್ ಸ್ಟ್ರೋಕ್: ಆಸ್ಪತ್ರೆಗೆ ದಾಖಲಾದ ಕನ್ನಡದ ಹಿರಿಯ ನಟ ಸತ್ಯಜೀತ್

ಒರಟ, ಆದ್ರೆ ಒಳ್ಳೆಯವ..

ಹಿರಿಯ ಪೋಷಕ ನಟ ಡಿಂಗ್ರಿ ನಾಗರಾಜ್‌ ಅವರು ಸತ್ಯಜಿತ್‌ರನ್ನು ನೆನಪಿಸಿಕೊಳ್ಳುವುದು ಹೀಗೆ... ‘ಸತ್ಯಜಿತ್‌ ತುಂಬಾ ಒಳ್ಳೆಯ ಕಲಾವಿದ. ಅವರ ಭಾಷೆ, ಬಾಡಿ ಲ್ಯಾಂಗ್ವೇಜ್‌ ವಿಶೇಷವಾಗಿತ್ತು. ಮಾತು ಕೊಂಚ ಒರಟು ಅನಿಸಿದರೂ ಒಳ್ಳೆಯ ಮನುಷ್ಯ. ಅವರ ಒರಟು ಮಾತು- ಸ್ವಭಾವದ ಕಾರಣಕ್ಕೆ ಅವರನ್ನು ಹೆಚ್ಚು ಮಂದಿ ಮಾತನಾಡಿಸುತ್ತಿರಲಿಲ್ಲ. ಆತನ ಅಗಲಿಕೆಯಿಂದ ಚಿತ್ರರಂಗ ಒಬ್ಬ ಒಳ್ಳೆಯ ಕಲಾವಿದನನ್ನು ಕಳೆದುಕೊಂಡಂತಾಗಿದೆ’..

click me!