
ಕೋವಿಡ್ಗೂ ಮೊದಲು 600 ಇದ್ದ ಕರ್ನಾಟಕದ ಚಿತ್ರಮಂದಿರಗಳ ಸಂಖ್ಯೆ ಈಗ 400ಕ್ಕೆ ತಲುಪಿದೆ. ಅದರಲ್ಲೂ ನಿರ್ವಹಣೆ ಕಷ್ಟವೆಂದು ಮುಚ್ಚಿದ್ದ ಸುಮಾರು 50 ಚಿತ್ರಮಂದಿರಗಳ ಬಾಗಿಲನ್ನು ತೆಗೆಸಿರುವ ಅಪೂರ್ವ ಸಾಧನೆ ಮಾಡಿದೆ ‘ಪ್ರೇಮದ ಊರಲಿ’ ಸಿನಿಮಾ.
ಮಲ್ಟಿಪ್ಲೆಕ್ಸ್ಗಳಿಂದ ಹಿಡಿದು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳವರೆಗೆ ಎಲ್ಲಾ ಕಡೆಯಲ್ಲಿಯೂ ‘ಪ್ರೇಮದ ಊರಲಿ’ ಚಿತ್ರ ಗೆಲುವನ್ನು ಕಂಡಿದೆ. ವಿಶೇಷವೆಂದರೆ ಹಬ್ಬದ ಸಂದರ್ಭದಲ್ಲಿ ಚಿತ್ರಮಂದಿರಗಳು ಸಾಮಾನ್ಯವಾಗಿ ಪರಭಾಷೆ ಬಿಗ್ ಬಜೆಟ್ ಚಿತ್ರಗಳಿಗೆ ಬೇಡಿಕೆ ಸಲ್ಲಿಸುತ್ತಿದ್ದವು. ಆದರೆ ಈ ಸಲ ಬಹುತೇಕ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ‘ಪ್ರೇಮದ ಊರಲಿ’ ಚಿತ್ರಕ್ಕೆ ಮಣೆ ಹಾಕಿವೆ. ಈ ಮೂಲಕ ಅತ್ಯಂತ ಸರಳ ವಿರಳ ಪ್ರೇಮಕತೆಯೊಂದು ಬಿಗ್ ಬಜೆಟ್ ಸಿನಿಮಾಗಳಿಗೆ ಸಡ್ಡು ಹೊಡೆದು ನಿಂತಿದೆ.
ಈ ಕುರಿತು ಮಾತನಾಡುವ ವಿತರಕರ ಸಂಘದ ಅಧ್ಯಕ್ಷರಾದ ಕೆ.ವಿ. ಚಂದ್ರಶೇಖರ್, ‘ಚಿತ್ರಮಂದಿರಗಳು ಉಳಿಯಬೇಕಾದರೆ ದೊಡ್ಡ ಗೆಲುವಿನ ಸಿನಿಮಾಗಳು ಬೇಕು. ‘ಸು ಫ್ರಂ ಸೋ’ ಹಲವು ಚಿತ್ರಮಂದಿರಗಳ ಬಾಗಿಲು ತೆರೆಸಿತ್ತು. ಇದೀಗ ‘ಪ್ರೇಮದ ಊರಲಿ’ 50ಕ್ಕೂ ಹೆಚ್ಚು ಚಿತ್ರಮಂದಿರಗಳ ಬಾಗಿಲು ತೆರೆಸಿವೆ. ಕನಿಷ್ಠ 2 ವಾರಗಳಿಗೊಮ್ಮೆ ಇಂಥ ಗೆಲುವು ಸಿಕ್ಕರೆ ಚಿತ್ರಮಂದಿರಗಳು ಉಳಿಯುತ್ತವೆ’ ಎನ್ನುತ್ತಾರೆ.
ಇಂದು ರಜನೀಕಾಂತ್ ಅವರ ‘ಜೈಲರ್ 2’ ಮತ್ತು ವಿಜಯದೇವರಕೊಂಡ ಅವರ ‘ರಣಬಾಲಿ’ ಸಿನಿಮಾಗಳು ಬಿಡುಗಡೆಯಾಗುತ್ತಿದ್ದು, ಸಹಜವಾಗಿಯೇ ಮಲ್ಟಿಪ್ಲೆಕ್ಸ್ಗಳಲ್ಲಿ ಶೋ ಹೋರಾಟ ಆರಂಭವಾಗಲಿದೆ. ಈ ಹೋರಾಟದಲ್ಲಿ ಯಾರು ಉಳಿಯುತ್ತಾರೆ ಎಂಬುದನ್ನು ಕಾದನೋಡಬೇಕಾಗಿದೆ.
ಪ್ರೇಮದ ಊರಲಿ ಚಿತ್ರಕ್ಕೆ ಉಪೇಂದ್ರ ಮೆಚ್ಚುಗೆ ಸಲ್ಲಿಸಿದ್ದಾರೆ. ‘ಪ್ರೇಮದ ಊರಲಿ ನಿಜಕ್ಕೂ ಅದ್ಭುತವಾಗಿದೆ. ನಿರ್ದೇಶಕರನ್ನು ನೇರವಾಗಿ ಭೇಟಿಯಾಗಿ, ತಬ್ಬಿಕೊಂಡು ಮೆಚ್ಚುಗೆ ವ್ಯಕ್ತಪಡಿಸಬೇಕು ಎಂಬ ಆಸೆಯಿದೆ. ಈ ಸಿನಿಮಾ ನೋಡಿದಾಗ ಮರಳುಗಾಡಿನಲ್ಲಿ ಓಯಸಿಸ್ ಕಂಡಂತಾಯಿತು. ಈ ಚಿತ್ರಕತೆ, ನಿರ್ದೇಶನದ ಶೈಲಿ ನೋಡಿದರೆ ನಿಮಗೆ ಚಿತ್ರರಂಗದಲ್ಲಿ ಅತ್ಯಂತ ಉಜ್ವಲ ಭವಿಷ್ಯವಿದೆ’ ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.