
ಸಂದೇಶ್ ನಾಗರಾಜ್ ನಿರ್ಮಾಣದ, ಶ್ರೀನಿ ನಿರ್ದೇಶನದ ಶಿವರಾಜ್‌ಕುಮಾರ್, ಅನುಪಮ್ ಖೇರ್, ಜಯರಾಂ, ವಿಜಯಲಕ್ಷ್ಮೀ ಸಿಂಗ್ ನಟಿಸುತ್ತಿರುವ ‘ಘೋಸ್ಟ್’ ಚಿತ್ರದ ಶೂಟಿಂಗ್ ದರ್ಶನ ಇತ್ತೀಚೆಗೆ ಆಯೋಜಿಸಲಾಗಿತ್ತು. ಮೊದಲ ಬಾರಿಗೆ ಅನುಪಮ್ ಖೇರ್ ಹಾಗೂ ಮಲಯಾಳಂನ ಜಯರಾಮ್ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದು, ಅವರು ಶೂಟಿಂಗ್‌ನಲ್ಲಿ ಭಾಗವಹಿಸಿದ್ದರ ಹಿನ್ನೆಲೆಯಲ್ಲಿ ಚಿತ್ರೀಕರಣದ ಸ್ಥಳಕ್ಕೆ ಆಹ್ವಾನ ನೀಡಲಾಗಿತ್ತು.
‘ನಾನು ಕನ್ನಡ ಚಿತ್ರದಲ್ಲಿ ನಟಿಸಬೇಕೆಂಬ ಬಹುದಿನ ಕನಸು ಈ ಚಿತ್ರದ ಮೂಲಕ ಈಡೇರುತ್ತಿದೆ. ನಾನು ಮತ್ತು ಶಿವಣ್ಣ ಕಲ್ಯಾಣ್ ಜ್ಯುವೆಲರಿ ಜಾಹೀರಾತಿನ ಶೂಟಿಂಗ್‌ನಲ್ಲಿ ಭೇಟಿ ಆಗುತ್ತಿದ್ದಾಗ ಕನ್ನಡ ಚಿತ್ರದಲ್ಲಿ ನನಗೆ ಒಂದು ಪಾತ್ರ ಕೊಡಿಸಿ ಅಂತ ಕೇಳಿದ್ದೆ. ಅವರು ತಮ್ಮದೇ ಚಿತ್ರದಲ್ಲಿ ಬಹು ದೊಡ್ಡ ಪಾತ್ರ ಕೊಟ್ಟಿದ್ದಾರೆ. ನನ್ನ ಪಾತ್ರದ ಬಗ್ಗೆ ಹೆಚ್ಚು ವಿವರಣೆ ಹೇಳಲಾರೆ. ಆದರೆ, ಒಂದು ಒಳ್ಳೆಯ ಚಿತ್ರದ ಮೂಲಕ ಕನ್ನಡಕ್ಕೆ ಬಂದಿದ್ದೇನೆಂಬ ಖುಷಿ ಇದೆ’ ಎಂದು ಹೇಳಿದ್ದು ಜಯರಾಮ್.
ಶಿವಣ್ಣನ ಜೊತೆ ಬಣ್ಣ ಹಚ್ಚಲಿರುವ ಅನುಪಮ್ ಖೇರ್: 'ಘೋಸ್ಟ್' ಸಿನಿಮಾದಲ್ಲಿ 'ಕಾಶ್ಮೀರ್ ಫೈಲ್ಸ್' ಸ್ಟಾರ್
ಹಿರಿಯ ನಟ ಅನುಪಮ್ ಖೇರ್, ‘ಇದು ನನ್ನ 550ನೇ ಸಿನಿಮಾ. ಎಲ್ಲಾ ಭಾಷೆಗಳಲ್ಲೂ ನಟಿಸಿದ ಖುಷಿ ಇದೆ. ಬೇರೆ ಭಾಷೆಯ ಚಿತ್ರವನ್ನು ಒಪ್ಪಿಕೊಳ್ಳುತ್ತಿದ್ದೇವೆ ಎಂದರೆ ಬೇರೆ ಊರು, ಬೇರೆ ಜನ, ಅಲ್ಲಿನ ಊಟ, ಅಲ್ಲಿನ ವಾತಾವರಣ ನೋಡುವ ಅವಕಾಶ ಸಿಕ್ಕಂತೆ. ನನ್ನ ಪಾತ್ರ ಪಾರ್ಚ್ 2ನಲ್ಲಿ ದೊಡ್ಡದಾಗಿರುತ್ತದೆ ಎಂದು ನಿರ್ದೇಶಕರು ಆಶ್ವಾಸನೆ ಕೊಟ್ಟಮೇಲೆಯೇ ನಾನು ನಟಿಸಲು ಒಪ್ಪಿಕೊಂಡೆ. ಈ ಹಿಂದೆಯೇ ನನಗೆ ಕನ್ನಡ ಚಿತ್ರದಲ್ಲಿ ನಟಿಸುವ ಅಫರ್ ಬಂದಿತ್ತು. ಉಪೇಂದ್ರ ಅವರ ಚಿತ್ರದಲ್ಲಿ. ಆಗ ನಟಿಸಲು ಆಗಲಿಲ್ಲ. ಈಗ ಅವಕಾಶ ಸಿಕ್ಕಿದೆ. ನಾನು ಇತ್ತೀಚೆಗೆ ನೋಡಿದ ಕನ್ನಡ ಸಿನಿಮಾ ‘ಕಾಂತಾರ’. ಈ ಚಿತ್ರ ನೋಡಿ ರಿಷಬ್ ಶೆಟ್ಟಿಅವರಿಗೆ ಮೆಸೇಜ್ ಕೂಡ ಮಾಡಿದ್ದೆ. ನಮ್ಮದು ಭಾರತೀಯ ಚಿತ್ರರಂಗ. ಬಾಲಿವುಡ್, ಕಾಲಿವುಡ್ ಸೇರಿದಂತೆ ಯಾವ ವುಡ್‌ಗಳಿಂದಲೂ ಚಿತ್ರರಂಗವನ್ನು ಕರೆಯಬೇಡಿ. ಈ ವುಡ್ ಎನ್ನುವ ಕೆಟಗರಿಯನ್ನು ಬಾಯ್ಕಟ್ ಮಾಡಿ. ನಾವೆಲ್ಲ ಭಾರತೀಯ ಸಿನಿಮಾದ ಭಾಗ’ ಎಂದರು. ‘ನಾವು ಶಿವಣ್ಣ ಅವರ ಜತೆಗೆ ಮಾಡಿದ ಚಿತ್ರಗಳು ಸೂಪರ್ ಹಿಟ್ ಆಗಿವೆ. ಈ ಚಿತ್ರ ಕೂಡ ದೊಡ್ಡ ಮಟ್ಟದಲ್ಲಿ ಗೆಲ್ಲುತ್ತದೆ ಎನ್ನುವ ನಂಬಿಕೆ ಇದೆ’ ಎಂದು ಸಂದೇಶ್ ನಾಗರಾಜ್ ಹೇಳಿದರು.
ಶಿವಣ್ಣನ 'ಘೋಸ್ಟ್'ಗೆ ಭಾರೀ ಡಿಮ್ಯಾಂಡ್: ಆಡಿಯೋ ರೈಟ್ಸ್ ಸೇಲ್ ಆಗಿದ್ದು ಎಷ್ಟು ಕೋಟಿಗೆ ಗೊತ್ತಾ?
ನಟ ಶಿವರಾಜ್‌ಕುಮಾರ್, ‘ಚಿಕ್ಕ ಸಿನಿಮಾ ಅಂತ ಶುರು ಮಾಡಿದ್ದು, ಹೋಗ್ತಾ ಹೋಗ್ತಾ ದೊಡ್ಡದಾಯಿತು. ಶ್ರೀನಿ ತುಂಬಾ ಚೆನ್ನಾಗಿರುವ ಕತೆ ಮಾಡಿಕೊಂಡಿದ್ದಾರೆ. ಈ ಚಿತ್ರದಲ್ಲಿ ದೊಡ್ಡ ದೊಡ್ಡ ಕಲಾವಿದವರು ಒಟ್ಟಿಗೆ ನಟಿಸುತ್ತಿದ್ದೇವೆ. ಘೋಸ್ಟ್ ಎಂಬುದು ನನ್ನ ಪಾತ್ರದ ಹೆಸರು. ಹಾರರ್ ಸಿನಿಮಾ ಎಂದುಕೊಳ್ಳಬೇಡಿ. ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಇದು’ ಎಂದು ವಿವರಣೆ ಕೊಟ್ಟರು.
‘ನಾನು ಶಿವಣ್ಣ ಅವರ ಅಭಿಮಾನಿ. ಅವರ ಅಭಿಮಾನಿಯಾಗಿ ಅವರನ್ನು ತೆರೆ ಮೇಲೆ ಹೇಗೆ ತೋರಿಸಿದರೆ ಚೆನ್ನಾಗಿರುತ್ತದೆ ಎಂಬುದನ್ನು ಈ ಚಿತ್ರದಲ್ಲಿ ಪ್ರಯೋಗ ಮಾಡಿದ್ದೇನೆ. ತಾಂತ್ರಿಕವಾಗಿ ತುಂಬಾ ಅದ್ಭುತವಾಗಿ ಮೂಡಿ ಬರುತ್ತಿರುವ ಸಿನಿಮಾ ಇದು. ಇದಕ್ಕೆ ಛಾಯಾಗ್ರಾಹಕ ಮಹೇಂದ್ರ ಸಿಂಹ ಅವರಿಗೆ ಥಾಂಕ್ಸ್ ಹೇಳಬೇಕು. ‘ಘೋಸ್ಟ್’ ಚಿತ್ರ ಎರಡು ಪಾರ್ಚ್‌ಗಳಲ್ಲಿ ಬರಲಿದೆ’ ಎಂದರು ಶ್ರೀನಿ. ಹಿರಿಯ ನಟಿ ವಿಜಯಲಕ್ಷ್ಮೀ ಸಿಂಗ್ ಚಿತ್ರದ ಕುರಿತು ಮಾತನಾಡಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.