
ಬೆಂಗಳೂರು (ಆ.08): ಅನಾರೋಗ್ಯದಿಂದ ಚೇತರಿಸಿಕೊಂಡಿರುವ ನಟ ಶಿವರಾಜ್‌ಕುಮಾರ್ ಅವರು ಹೊಸ ಉತ್ಸಾಹದಲ್ಲಿ ಕಂಡುಬಂದಿದ್ದಾರೆ. ಇತ್ತೀಚೆಗೆ ತಮ್ಮ ಮನೆಯೊಳಗೆ ಹೋವರ್ ಬೋರ್ಡ್ ಮೇಲೆ ಜಾಲಿ ರೈಡ್ ಮಾಡುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದಕ್ಷಿಣ ಕರ್ನಾಟಕದ ಅದರಲ್ಲಿಯೂ ಮೈಸೂರು ಕರ್ನಾಟಕ ಹಾಗೂ ತಮಿಳುನಾಡು ಗಡಿ ಪ್ರದೇಶದಲ್ಲಿ ಧರಿಸುವಂತೆ ಪಟ್ಟಾಪಟ್ಟಿ ಚಡ್ಡಿ ಮತ್ತು ಟೀ ಶರ್ಟ್ ಧರಿಸಿ, ಆಟಿಕೆಯಂತಿರುವ ಹೋವರ್ ಬೋರ್ಡ್ ಮೇಲೆ ಶಿವಣ್ಣ ಲವಲವಿಕೆಯಿಂದ ರೈಡ್ ಮಾಡುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕೆಲವು ದಿನಗಳ ಕಾಲ ಅನಾರೋಗ್ಯದಿಂದ ಬಳಲಿದ್ದ ಶಿವರಾಜ್‌ಕುಮಾರ್ ಮೊದಲಿನಂತೆ ಉತ್ಸಾಹಭರಿತವಾಗಿ ಕಾಣುತ್ತಿರುವುದು ಅವರ ಅಭಿಮಾನಿಗಳಲ್ಲಿ ಖುಷಿಯನ್ನು ನೂರ್ಮಡಿಗೊಳಿಸಿದೆ. ಇನ್ನು ಮನೆಯವರು ಕೂಡ ಶಿವಣ್ಣನ ಆರೋಗ್ಯ ಚೇತರಿಕೆಗೆ ಶ್ರಮಿಸಿದ್ದಾರೆ. ಶಿವಣ್ಣನನ್ನು ಆಸ್ಪತ್ರೆಗೆ ಕರೆದೊಯ್ಯುವ ಮುನ್ನ ಹಾಗೂ ಆಸ್ಪತ್ರೆಗೆ ಹೋಗಿಬಂದ ನಂತರವೂ ಅವರ ಪತ್ನಿ ಗೀತಾ ಶಿವರಾಜ್‌ಕುಮಾರ್ ಅವರು ದಂಪತಿ ಸಮೇತವಾಗಿ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ.
ಚೇತರಿಕೆಯ ನಂತರವೂ ಚುರುಕು:
ಇತ್ತೀಚೆಗೆ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿ ಚೇತರಿಕೆ ಕಂಡಿರುವ ಶಿವರಾಜ್‌ಕುಮಾರ್, ತಮ್ಮ ಬಿಡುವಿಲ್ಲದ ಚಿತ್ರಗಳ ನಡುವೆಯೂ ಕುಟುಂಬಕ್ಕೆ ಮತ್ತು ತಮ್ಮ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಈ ವಿಡಿಯೋ ಅವರ ಚೇತರಿಕೆಯ ಹಾದಿಯನ್ನು ತೋರಿಸುತ್ತದೆ. 60ರ ವಯಸ್ಸಿನಲ್ಲಿಯೂ ಯುವಕರನ್ನು ನಾಚಿಸುವಷ್ಟು ಉತ್ಸಾಹ ಮತ್ತು ಕ್ರಿಯಾಶೀಲತೆಯನ್ನು ಅವರು ಕಾಯ್ದುಕೊಂಡಿರುವುದು ಅಭಿಮಾನಿಗಳಿಗೆ ಸಂತೋಷ ತಂದಿದೆ.
ಸಿನಿಮಾಗಳಲ್ಲಿ ಸದ್ದು, ಸಮಾಜದಲ್ಲೂ ಧ್ವನಿ:
ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೆ ಸಮಾಜಮುಖಿ ಕೆಲಸಗಳಲ್ಲೂ ಶಿವರಾಜ್‌ಕುಮಾರ್ ಸಕ್ರಿಯರಾಗಿದ್ದಾರೆ. ನಟಿ ರಮ್ಯಾ ಅವರ ಬಗ್ಗೆ ದರ್ಶನ್ ಅಭಿಮಾನಿಗಳು ಅಶ್ಲೀಲವಾಗಿ ಕಾಮೆಂಟ್ ಮಾಡಿದಾಗ, ರಮ್ಯಾ ಅವರ ಬೆಂಬಲಕ್ಕೆ ನಿಂತಿದ್ದ ಶಿವರಾಜ್‌ಕುಮಾರ್, ಇಂತಹ ಕೃತ್ಯ ಎಸಗಿದವರಿಗೆ ಶಿಕ್ಷೆಯಾಗಬೇಕು ಎಂದು ಧ್ವನಿ ಎತ್ತಿದ್ದರು. ಅವರ ಈ ನಿಲುವು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ಗಳಿಸಿತ್ತು.
ಹಲವು ಚಿತ್ರಗಳಲ್ಲಿ ಶಿವಣ್ಣ ಬ್ಯುಸಿ
ಸದ್ಯ ಶಿವರಾಜ್‌ಕುಮಾರ್ ಹಲವು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವೀರ ಚಂದ್ರಹಾಸ, ಮಿಂಚುಹುಳು, ಉತ್ತರಕಾಂಡ, ಭೈರವನ ಕೊನೆ ಪಾಠ, 45, ಪೆದ್ದಿ ಹಾಗೂ 'ಜೈಲರ್ 2' ನಂತಹ ಬೃಹತ್ ಸಿನಿಮಾಗಳಲ್ಲಿ ನಟಿಸುತ್ತಿದ್ದು, ಕನ್ನಡ ಚಿತ್ರರಂಗದಲ್ಲಿ ಮತ್ತೊಮ್ಮೆ ಸದ್ದು ಮಾಡುತ್ತಿದ್ದಾರೆ. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಚಿತ್ರರಂಗಗಳಲ್ಲೂ ನಟನೆಯನ್ನು ಮುಂದುವರೆಸಿದ್ದಾರೆ. ಸದ್ಯಕ್ಕೆ ಶಿವರಾಜ್‌ಕುಮಾರ್ ಅವರ ಈ ಹೊಸ ಉತ್ಸಾಹ ಹಾಗೂ ಸಿನಿಮಾಗಳ ಮೇಲಿನ ಆಸಕ್ತಿ, ಕನ್ನಡ ಚಿತ್ರರಂಗಕ್ಕೆ ಮತ್ತಷ್ಟು ಬಲ ನೀಡಿದೆ.
ನಟಿ ರಮ್ಯಾ ಬೆಂಬಲಕ್ಕೆ ನಿಂತಾಗಿ ಮಾಡಿದ್ದ ಪೋಸ್ಟ್‌ನಲ್ಲೇನಿತ್ತು?
ರಮ್ಯಾ ಅವರ ವಿರುದ್ಧ ಬಳಸಿರುವ ಪದಗಳು ಖಂಡನೀಯ. ಯಾವ ಮಹಿಳೆಯ ವಿರುದ್ಧವೂ ಆ ರೀತಿ ಮಾತನಾಡುವುದು ಸರಿಯಲ್ಲ; ಅದನ್ನು ನಾವು ಸಹಿಸಬಾರದು. ಮಹಿಳೆಯರನ್ನು ತಾಯಿಯಾಗಿ, ಅಕ್ಕನಾಗಿ, ಮಗಳಾಗಿ, ಮಡದಿಯಾಗಿ ಮತ್ತು ಮೊಟ್ಟಮೊದಲು ಒಬ್ಬ ವ್ಯಕ್ತಿಯಾಗಿ ಗೌರವಿಸುವುದು ತುಂಬಾ ಮುಖ್ಯ. ಸೋಶಿಯಲ್ ಮೀಡಿಯಾ ತುಂಬಾ ಬಲಿಷ್ಠವಾದ ಅಸ್ತ್ರ, ಅದನ್ನು ತಮ್ಮ ಏಳಿಗೆಗಾಗಿ ಬಳಸಬೇಕೇ ಹೊರತು, ಅವಾಚ್ಯ ಶಬ್ದಗಳಿಂದ ನಿಂದಿಸಿ, ದ್ವೇಷ-ಅಸೂಯೆಯನ್ನು ಬಿತ್ತಲು ಬಳಸಬಾರದು. ನಿಮ್ಮ ನಿಲುವು ಸರಿಯಿದೆ, ರಮ್ಯಾ. ನಿಮ್ಮ ಜೊತೆಗೆ ನಾವು ಸದಾ ನಿಲ್ಲುತ್ತೇವೆ. ಇಂತಿ ಶಿವರಾಜ್‌ಕುಮಾರ್, ಗೀತಾ ಶಿವರಾಜ್‌ಕುಮಾರ್ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.