
ಬೆಂಗಳೂರು: ಬಿಗ್‌ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಅವರ 'ಶಂಕರಾಭರಣ' (Shankarabharana) ಬಿಡುಗಡೆಗೆ ಸಿದ್ಧವಾಗಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಅರ್ಥಾತ್ ಇದೇ 20 ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಶೈನ್ ಶೆಟ್ಟಿ ಭರ್ಜರಿ ಪ್ರಚಾರ ನಡೆಸ್ತಿದ್ದಾರೆ. ವಿಶೇಷ ಅಂದ್ರೆ ಒಂದು ಬಸ್ ಮೂಲಕ ಅವರು ರಾಜ್ಯಾದ್ಯಂತ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಇದೀಗ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ವಿಭಿನ್ನ ಕಥಾಹಂದರ ಮತ್ತು ಹಾರರ್ ಥ್ರಿಲ್ಲರ್ ಅಂಶಗಳ ಮೂಲಕ ಗಮನ ಸೆಳೆಯುತ್ತಿದೆ. ಇದೀಗ ಈ ಸಿನಿಮಾ ಬಿಡುಗಡೆಗೂ ಮುನ್ನವೇ ದಾಖಲೆಯೊಂದನ್ನು ಮಾಡಿದೆ. ಚೀನಾದ ಅತ್ಯಂತ ಪ್ರತಿಷ್ಠಿತ ಹಾಗೂ ಹಳೆಯ ಚಲನಚಿತ್ರೋತ್ಸವಗಳಲ್ಲಿ ಒಂದಾದ ‘ಗೋಲ್ಡನ್ ರೂಸ್ಟರ್ ಅಂಡ್ ಹಂಡ್ರೆಡ್ ಫ್ಲವರ್ಸ್ ಫಿಲ್ಮ್ ಫೆಸ್ಟಿವಲ್’ಗೆ (China Film Golden Rooster and Hundred Flowers Film Festival) ಈ ಚಿತ್ರ ಆಯ್ಕೆಯಾಗಿದೆ.
ಸಾಲ ಮಾಡಿ ಬಸ್ ಖರೀದಿಸುವ ಮಾಲೀಕನೊಬ್ಬ ಎದುರಿಸುವ ಸವಾಲುಗಳು, ಬದುಕಿನ ಏರಿಳಿತಗಳು ಹಾಗೂ ಅವುಗಳ ಸುತ್ತ ಹೆಣೆದಿರುವ ಕಥೆಗೆ ಹಾರರ್ ಥ್ರಿಲ್ಲರ್ ಸ್ಪರ್ಶ ನೀಡಿರುವುದು ಚಿತ್ರದ ವಿಶೇಷ. ಸಾಮಾನ್ಯ ಬದುಕಿನ ಕಥೆಯನ್ನು ಕುತೂಹಲಕಾರಿ ಸಿನಿಮಾ ಅನುಭವವಾಗಿ ಕಟ್ಟಿಕೊಡುವ ಪ್ರಯತ್ನವನ್ನು ಟ್ರೇಲರ್‌ನಲ್ಲಿ ಕಾಣಬಹುದು. ಚಿತ್ರದ ಕಥೆಯನ್ನು ಶೈನ್ ಶೆಟ್ಟಿಯವರೇ ಬರೆದಿದ್ದು, ದಿವಾಕರ್ ಶೆಟ್ಟಿ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ. ವಿಭಿನ್ನ ಕಥಾವಸ್ತು, ಹಾರರ್ ಥ್ರಿಲ್ಲರ್ ನಿರೂಪಣೆ ಮತ್ತು ಶೈನ್ ಶೆಟ್ಟಿಯ ಹೊಸ ಅವತಾರದೊಂದಿಗೆ ‘ಶಂಕರಾಭರಣ’ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗಿದೆ.
ರಾಷ್ಟ್ರಪ್ರಶಸ್ತಿ ವಿಜೇತ ‘ಮಿಥ್ಯ’ ಚಿತ್ರದ ಮೂಲಕ ಗುರುತಿಸಿಕೊಂಡಿರುವ ನಿರ್ದೇಶಕ ಸುಮಂತ್ ಭಟ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾದ ‘ಶಂಕರ ನೀ ಭಯಂಕರ...’ ಎಂಬ ಚಿತ್ರದ ಹಾಡು ಈಗಾಗಲೇ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಇದರ ಬೆನ್ನಲ್ಲೇ ಶೈನ್ ಶೆಟ್ಟಿ ಮತ್ತು ತಂಡ ‘ಶಂಕರಾಭರಣ’ ಬಸ್ ಮೂಲಕ ರಾಜ್ಯಾದ್ಯಂತ ಸಂಚರಿಸಿ ವಿನೂತನ ರೀತಿಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ.
ಚೀನಾದ ಅತ್ಯುನ್ನತ ಚಲನಚಿತ್ರ ಪ್ರಶಸ್ತಿ ಮತ್ತು ಮಹೋತ್ಸವ ಎಂದು ಪರಿಗಣಿಸಲಾಗುವ ‘ಗೋಲ್ಡನ್ ರೂಸ್ಟರ್ ಫೆಸ್ಟಿವಲ್’ಗೆ ಪ್ರಪಂಚದಾದ್ಯಂತದ ಸಾವಿರಾರು ಸಿನಿಮಾಗಳ ಪೈಕಿ ಅತ್ಯುತ್ತಮ ಮತ್ತು ಕಲಾತ್ಮಕ ಸಿನಿಮಾಗಳನ್ನ ಮಾತ್ರ ಪ್ರದರ್ಶನಕ್ಕೆ ಆಯ್ಕೆ ಮಾಡಲಾಗುತ್ತದೆ. ಅಂತರರಾಷ್ಟ್ರೀಯ ವಿಭಾಗದಲ್ಲಿ ಭಾರತದ, ಅದೂ ಕನ್ನಡದ ಒಂದು ಚಿತ್ರ ಪ್ರದರ್ಶನಗೊಳ್ಳಲು ಆಯ್ಕೆಯಾಗಿರುವುದು ಭಾರತೀಯ ಸಿನಿಮಾರಂಗಕ್ಕೆ ಹೆಮ್ಮೆಯ ವಿಷಯವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.