ಪ್ರಶಸ್ತಿಗಳೇನಿದ್ದರೂ ಬದುಕಿದ್ದಾಗಲೇ ಕೊಡಿ: ಜಯಂತಿ

By Suvarna News  |  First Published Jan 30, 2021, 9:27 AM IST

ಒಂದು ಕಾಲದಲ್ಲಿ ಪಂಚಭಾಷಾ ತಾರೆಯಾಗಿ ಗುರುತಿಸಿಕೊಂಡವರು `ಅಭಿನಯ ಶಾರದೆ' ಜಯಂತಿ. ಇಳಿ ವಯಸ್ಸಿನಲ್ಲಿಯೂ ಚೆನ್ನಾಗಿ ಓಡಾಡಿಕೊಂಡಿದ್ದ ಅವರು ಬಿದ್ದು ಏಟು ಮಾಡಿಕೊಂಡ ಬಳಿಕ ಆರೋಗ್ಯದಲ್ಲಿ ತೀವ್ರ ಏರು ಪೇರು ಅನುಭವಿಸಿದ್ದಾರೆ. ಆದರೆ ಇಂದಿಗೂ ಜೀವನೋತ್ಸಾಹ ಹೊಂದಿರುವ ಅವರು ಸರ್ಕಾರ ನೀಡುವ ಗೌರವಗಳ ಬಗ್ಗೆ ಇಲ್ಲಿ ಮನಸು ಬಿಚ್ಚಿ ಮಾತನಾಡಿದ್ದಾರೆ.


ಶಶಿಕರ ಪಾತೂರು

ಹಿರಿಯ ನಟಿ ಜಯಂತಿಯವರು ಹೊರಗಡೆ ಕಾಣಿಸಿಕೊಳ್ಳುವುದೇ ಅಪರೂಪ. ಅಂಥದ್ದರಲ್ಲಿ ಕಳೆದ ಎರಡು ವಾರಗಳಲ್ಲಿ ಎರಡೆರಡು ಕಡೆಗಳಲ್ಲಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮಾತನಾಡಿದರು. ವಿಶೇಷ ಏನೆಂದರೆ ಅವು ಎರಡೂ ಕೂಡ ಜನ್ಮದಿನದ ಕಾರ್ಯಕ್ರಮಗಳು. ಒಂದು ಗಿರಿಜಾ ಲೋಕೇಶ್ ಅವರ ಜನ್ಮದಿನಾಚರಣೆ ಆಗಿದ್ದರೆ, ಮತ್ತೊಂದು ನಾಗಾಭರಣ ಅವರ ಜನ್ಮದಿನಾಚರಣೆ ಪ್ರಯುಕ್ತ ಪುಸ್ತಕ ಬಿಡುಗಡೆಯಾದ ಕಾರ್ಯಕ್ರಮವಾಗಿತ್ತು.

Tap to resize

Latest Videos

undefined

ಎರಡೂ ವೇದಿಕೆಗಳಲ್ಲಿ ಕನ್ನಡದ ಹಿರಿಯ ಕಲಾವಿದರಿಗೆ ಸಂದಾಯವಾಗದೇ ಹೋದಂಥ ಪ್ರಶಸ್ತಿಗಳ ಬಗ್ಗೆ ಮಾತುಗಳು ಬಂದವು. ನಾಗಾಭರಣರ ಕಾರ್ಯಕ್ರಮದಲ್ಲಂತೂ ಜಯಂತಿ ಜೋರಾಗಿಯೇ ದನಿ ಎತ್ತಿದ್ದಾರೆ. ಆ ಕುರಿತಾದ ಸಂಪೂರ್ಣ ವಿವರ ಇಲ್ಲಿದೆ.

 

ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ, ಹಿಂದಿ ಮತ್ತು ಮರಾಠಿ ಹೀಗೆ ಆರು ಭಾಷೆಗಳಲ್ಲಿ ಒಟ್ಟು ಐದುನೂರು ಸಿನಿಮಾಗಳಲ್ಲಿ ನಟಿಸಿದ ಹಿರಿಮೆ. ಸಿನಿಮಾ ನಿರ್ಮಾಣ, ನಿರ್ದೇಶನವನ್ನು ಕೂಡ ಮಾಡಿದ ಕಲಾವಿದೆ. ಕನ್ನಡದ ಮೇರುನಟ ಡಾ.ರಾಜ್ ಕುಮಾರ್ ಅವರೊಂದಿಗೆ ಜೋಡಿಯಾಗಿ ಅತಿ ಹೆಚ್ಚು ಹಿಟ್ ಸಿನಿಮಾಗಳನ್ನು ನೀಡಿದ ಜನಪ್ರಿಯತೆ ಬಹುಶಃ ಪದ್ಮಭೂಷಣ ಬೇಡ, ಪದ್ಮಶ್ರೀ ಪಡೆಯುವ ಅರ್ಹತೆ ಕೂಡ ಈ ಕಲಾವಿದೆಗೆ ಇಲ್ಲವೇ?

ಇಂಥದೊಂದು ಪ್ರಶ್ನೆ ವಾರದ ಹಿಂದೆಯೇ ಎದ್ದಿತ್ತು. ಆಗ ನಾಗಾಭರಣ ಅವರು ನಾವು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಆದರೆ ಪದ್ಮ ಪ್ರಶಸ್ತಿಗೆ ಭಾಜನರಾಗಬೇಕಾದ ನಮ್ಮ ಬಹಳಷ್ಟು ಮಂದಿಗೆ ದೊರಕಿಲ್ಲ ಎನ್ನುವುದು ವಿಪರ್ಯಾಸ ಎಂದಿದ್ದರು.

`ಕನ್ನಡತಿ' ನಿರ್ದೇಶಕ ಕೇರಳದ ಯಶವಂತ್ ಮಾತು!

ನಾಗಾಭರಣ ಅವರ ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದ ಜಯಂತಿಯವರು, "ಅನಾರೋಗ್ಯ ಇದ್ದರೂ ಇಂಥದೊಂದು ಕಾರ್ಯಕ್ರಮಕ್ಕೆ ಬರಲೇಬೇಕು ಎಂದು ಹಠತೊಟ್ಟು ಬಂದಿದ್ದೇನೆ" ಎಂದರು. ನಾಗಾಭರಣ ಅವರು ನೀಡಿದಂಥ ವೈವಿಧ್ಯಮಯ ಚಿತ್ರಗಳ ಬಗ್ಗೆ ಮಾತನಾಡಿದರು. ಇಂಥ ಪ್ರತಿಭಾವಂತನಿಗೆ ಸರ್ಕಾರ ಒಂದು ಗೌರವ ಡಾಕ್ಟರೇಟ್ ಕೂಡ ಪ್ರದಾನ ಮಾಡದಿರುವ ಕಾರಣ ಏನಿರಬಹುದು ಎಂದು ಪ್ರಶ್ನಿಸಿದರು.

"ಕೊಡಬಹುದು; ಕೊಡುತ್ತಾರೆ ಎಂದು ಆಶಾಭಾವನೆಯಿಂದ ಕಾಯುವುದೇ ಬಂತು. ಇಷ್ಟು ವರ್ಷಗಳ ಹಿರಿಯ ನಟನಿಗೆ ಕೊಡದಿದ್ದ ಮೇಲೆ ಇನ್ನುಯಾವಾಗ ಕೊಡುತ್ತೀರಾ ನಾನು ಸತ್ತ ಮೇಲೆ ಕೊಡ್ತೀರ?" ಎಂದು ಆವೇಶದಿಂದ ಪ್ರಶ್ನಿಸಿದರು. ಜಯಂತಿಯವರ ಆವೇಶ ಸರಿಯಾಗಿಯೇ ಇತ್ತು. ಹತ್ತು ರಾಷ್ಟ್ರ ಪ್ರಶಸ್ತಿ, ಇಪ್ಪತ್ತಮೂರು ರಾಜ್ಯ ಪ್ರಶಸ್ತಿಗಳನ್ನು ಕನ್ನಡಕ್ಕೆ ತಂದುಕೊಟ್ಟ ಪ್ರತಿಭೆ ಟಿ.ಎಸ್ ನಾಗಾಭರಣ ಅವರು. ಅವರ ಬಗ್ಗೆ ಕನ್ನಡಿಗರು ಹೆಮ್ಮೆ ಪಡುವಂಥ ಸಾಧನೆ ಇದೆ. ಜಯಂತಿಯವರು ಕೂಡ ಪದ್ಮಗೌರವಕ್ಕೆ ಅರ್ಹತೆ ಪಡೆದಿರುವ ನಟಿ ಎನ್ನುವುದು ಗಮನಾರ್ಹ. 

"ನಟನೆಯಲ್ಲೇ ಸುಖ" ಎನ್ನುತ್ತಾರೆ ನಿಮಿಕಾ!

"ಕೆಲವರು ಪ್ರಶಸ್ತಿಗಳನ್ನು ಮರಣದ ಬಳಿಕ ನೀಡುತ್ತಾರೆ. ಅದರಿಂದ ಯಾರಿಗೆ ಏನು ಉಪಯೋಗ? ಹಸಿವು ಇದ್ದಾಗ ಊಟ ಕೊಟ್ಟರೆ ಮಾತ್ರ ಉಪಯೋಗ. ಸತ್ತ ಮೇಲೆ ಮೃಷ್ಟಾನ್ನ ಬಡಿಸಿದರೆ ಏನು ಪ್ರಯೋಜನ? ತಿನ್ನಲು ನಾವೇ ಇರುವುದಿಲ್ಲವಲ್ಲ?, ಹಾಗಾಗಿ ನಾನು ಬದುಕಿರುವಾಗಲೇ ನಾಗಾಭರಣ ಅವರಿಗೆ ಸರ್ಕಾರ ಡಾಕ್ಟರೇಟ್ ನೀಡುವಂತಾಗಲಿ. ಬಹುಶಃ ಸ್ವತಃ ನಾಗಾಭರಣ ಅವರಿಗೆ ಇಂಥದೊಂದು ಆಕಾಂಕ್ಷೆ ಇರಲಿಕ್ಕಿಲ್ಲವೇನೋ. ಆದರೆ ನನಗಂತೂ ಖಂಡಿತವಾಗಿ ಇದೆ.

ಅವರ ನಿರ್ದೇಶನದಲ್ಲಿ ನಾನು ನಟಿಸಿದ್ದೇನೆ. ನನ್ನ ನಿರ್ದೇಶಕರಿಗೆ ಗೌರವ ಡಾಕ್ಟರೇಟ್ ಸಲ್ಲಬೇಕಾಗಿದೆ" ಎಂದಿದ್ದಾರೆ. ಈ ಬಗ್ಗೆ ಸುವರ್ಣ ನ್ಯೂಸ್.ಕಾಮ್ ನಾಗಾಭರಣ ಅವರೊಡನೆ ಮಾತನಾಡಿದಾಗ, "ನನ್ನ ನಿರ್ದೇಶನದ ಚಿತ್ರದಲ್ಲಿ ನಟಿಸಿರುವ ಹಿರಿಯ ನಟಿ ಅವರು. ಮೊದಲು ಅವರಿಗೆ ಪದ್ಮ ಪ್ರಶಸ್ತಿ ದೊರಕಬೇಕು ಎನ್ನುವುದು ಎಲ್ಲ ಕನ್ನಡಿಗರ ಆಶಯವಾಗಿದೆ" ಎಂದರು. 

click me!