Bhargavi Narayan Passes Away: ಕನ್ನಡ ಚಿತ್ರರಂಗದ ಹಿರಿಯ ನಟಿ ಭಾರ್ಗವಿ ನಾರಾಯಣ್ ನಿಧನ

By Suvarna NewsFirst Published Feb 14, 2022, 8:38 PM IST
Highlights

ಕನ್ನಡ ಚಿತ್ರರಂಗದ ಹಿರಿಯ ನಟಿ ಭಾರ್ಗವಿ ನಾರಾಯಣ್ (84) ಇಂದು ನಿಧನರಾಗಿದ್ದಾರೆ. ಸರಳ ಅಭಿನಯದ ಮೂಲಕ  ಕನ್ನಡಿಗರ ಮನೆ ಮನಗಳಲ್ಲಿ ಪ್ರೀತಿ ಹಂಚಿದ್ದ ಕಿರುತೆರೆಯ ಅಜ್ಜಿಯಾಗಿದ್ದ ಭಾರ್ಗವಿ ಅವರು ಕೆಲ ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

ಬೆಂಗಳೂರು (ಫೆ.14): ಕನ್ನಡ ಚಿತ್ರರಂಗದ (Sandalwood) ಹಿರಿಯ ನಟಿ ಭಾರ್ಗವಿ ನಾರಾಯಣ್ (84) (Bhargavi Narayan) ಇಂದು ನಿಧನರಾಗಿದ್ದಾರೆ. ಸರಳ ಅಭಿನಯದ ಮೂಲಕ  ಕನ್ನಡಿಗರ ಮನೆ ಮನಗಳಲ್ಲಿ ಪ್ರೀತಿ ಹಂಚಿದ್ದ ಕಿರುತೆರೆಯ ಅಜ್ಜಿಯಾಗಿದ್ದ ಭಾರ್ಗವಿ ಅವರು ಸೋಮವಾರ ಸಂಜೆ 7.30ರ ಸುಮಾರಿಗೆ ಬೆಂಗಳೂರಿನ ಜಯ ನಗರ ನ್ಯಾಶನಲ್‌ ಕಾಲೇಜ್‌ ಬಳಿ ಇರುವ ಸ್ವಗೃಹದಲ್ಲಿ ಅವರು ಇಹಲೋಕ ತ್ಯಜಿಸಿದ್ದಾರೆ. ಕೆಲವು ದಿನಗಳಿಂದ ಸೋಡಿಯಂ ಕೊರತೆ, ಮರೆವಿನ ಸಮಸ್ಯೆ ಇತ್ಯಾದಿಗಳಿಂದ ಬಳಲುತ್ತಿದ್ದ ಅವರು ನಿದ್ದೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಅವರ ಕಣ್ಣುಗಳನ್ನು ದಾನ ಮಾಡಲಾಗಿದ್ದು, ದೇಹವನ್ನು ಸೇಂಟ್‌ ಜಾನ್ಸ್‌ ಆಸ್ಪತ್ರೆಗೆ ದಾನ ಮಾಡಲು ಕುಟುಂಬ ಸದಸ್ಯರು ತೀರ್ಮಾನಿಸಿದ್ದಾರೆ. ಅವರ ಸಾವಿನ ಕುರಿತು ಅವರ ಮೊಮ್ಮಗಳು, ನಟಿ ಸಂಯುಕ್ತಾ ಹೊರನಾಡು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

1967ರಲ್ಲಿ ತೆರೆಕಂಡ ‘ಸುಬ್ಬಾ ಶಾಸ್ತ್ರಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಭಾರ್ಗವಿ, ‘ಎರಡು ಕನಸು’, ‘ಹಂತಕನ ಸಂಚು’, ‘ಪಲ್ಲವಿ ಅನುಪಲ್ಲವಿ’ ‘ಬಾ ನಲ್ಲೆ ಮಧುಚಂದ್ರಿಕೆ’ ಮೊದಲಾದ ಜನಪ್ರಿಯ ಚಿತ್ರಗಳಲ್ಲಿ ನಟಿಸಿದ್ದರು. ‘ಮಂಥನ’, ‘ಮುಕ್ತ ಮುಕ್ತ’ ಧಾರಾವಾಹಿಗಳ ಮೂಲಕ ಮನೆಮಾತಾಗಿದ್ದರು. ಪ್ರೊಫೆಸರ್‌ ಹುಚ್ಚೂರಾಯ, ಮುಯ್ಯಿ, ಅಂತಿಮ ಘಟ್ಟ, ಜಂಬೂ ಸವಾರಿ, ಕಾಡ ಬೆಳದಿಂಗಳು, ಇದೊಳ್ಳೇ ರಾಮಾಯಣ, ರಾಜ ಕುಮಾರ, ಪ್ರೀಮಿಯರ್‌ ಪದ್ಮಿನಿ, ಬಟರ್‌ ಫ್ಲೈ ಮೊದಲಾದವು ಇವರು ನಟಿಸಿದ ಪ್ರಮುಖ ಚಿತ್ರಗಳು. 2019ರಲ್ಲಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ಭಾರ್ಗವಿ ಅವರು 600ಕ್ಕೂ ಹೆಚ್ಚು ನಾಟಕಗಳ ಪ್ರದರ್ಶನ ನೀಡಿದ್ದಾರೆ. 

Latest Videos

Ashwath Narayan Passes Away: ಕನ್ನಡ ಚಿತ್ರರಂಗದ ಹಿರಿಯ ನಟ ಅಶ್ವತ್ಥ ನಾರಾಯಣ ನಿಧನ

ಇವರ ಆತ್ಮಕತೆ ‘ನಾನು ಭಾರ್ಗವಿ’ 2012ರಲ್ಲಿ ಪ್ರಕಟವಾಗಿತ್ತು. ತಮ್ಮ ಬಣ್ಣದ ಬದುಕಿನ ಹಲವು ಸೂಕ್ಷ್ಮ ವಿವರಗಳನ್ನು ಅವರಿಲ್ಲಿ ದಾಖಲಿಸಿದ್ದರು. ಈ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಶಿವಮೊಗ್ಗ ಕರ್ನಾಟಕ ಸಂಘದ ಗೌರವ ಸಂದಿತ್ತು. ‘ಪ್ರೊಫೆಸರ್‌ ಹುಚ್ಚೂರಾಯ’ ಚಿತ್ರದ ನಟನೆಗಾಗಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಅವರಿಗೆ ಸಂದಿತ್ತು. ಇವರ ರಂಗಸಾಧನೆಗೆ 1998ನೇ ಸಾಲಿನ ನಾಟಕ ಅಕಾಡೆಮಿ ಪ್ರಶಸ್ತಿ ನೀಡಲಾಗಿತ್ತು. ಮಂಗಳೂರಿನ ಸಂದೇಶ ಸಂಸ್ಥೆ ಕೊಡಮಾಡುವ ಪ್ರಶಸ್ತಿ, ಆಳ್ವಾಸ್‌ ನುಡಿಸಿರಿ ಗೌರವ, ಕರ್ನಾಟಕ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ, ಗೌರವಗಳು ಇವರಿಗೆ ಸಂದಿವೆ.



ಭಾರ್ಗವಿಯವರು 1938 ಫೆಬ್ರವರಿ 4ನೇ ತಾರೀಖಿನಂದು ನಾಮಗಿರಿಯಮ್ಮ ಮತ್ತು ಎಂ. ರಾಮಸ್ವಾಮಿಯವರಿಗೆ ಜನಿಸಿದರು. ಬಳಿಕ ಮೇಕಪ್‌ ನಾಣಿ ಎಂದೇ ಖ್ಯಾತರಾಗಿದ್ದ ಹಿರಿಯ ಮೇಕಪ್‌ ಕಲಾವಿದ, ನಟ ದಿ.ಬೆಳವಾಡಿ ನಂಜುಡಯ್ಯ ನಾರಾಯಣ ಅವರನ್ನು ವಿವಾಹವಾಗಿದ್ದರು. ಹಿರಿಯ ನಟಿ ಸುಧಾ ಬೆಳವಾಡಿ, ನಟ, ಚಿಂತಕ ಪ್ರಕಾಶ್‌ ಬೆಳವಾಡಿ, ರಂಗಕರ್ಮಿ ಪ್ರದೀಪ್‌ ಬೆಳವಾಡಿ ಸೇರಿ ನಾಲ್ವರು ಮಕ್ಕಳನ್ನು ಅವರು ಅಗಲಿದ್ದಾರೆ. ಕನ್ನಡ ಚಿತ್ರನಟಿ ಸಂಯುಕ್ತಾ ಬೆಳವಾಡಿ ಇವರ ಮೊಮ್ಮಗಳು. ಭಾರ್ಗವಿ ಅವರು ಬಿಎಸ್ಸಿ ಮತ್ತು ಇಂಗ್ಲಿಷ್‌ ಎಂಎ ಸ್ನಾತಕೋತ್ತರ ಪದವಿ ಪಡೆದಿದ್ದರು. ಅವರು 'ನಾ ಕಂಡ ನಮ್ಮವರು' ಕೃತಿಯನ್ನು ರಚಿಸಿದ್ದರು. 

Ashok Rao Passes Away: ಅಣ್ಣಾವ್ರು ಅಭಿನಯದ 'ಪರಶುರಾಮ್' ಚಿತ್ರದ ವಿಲನ್ ಅಶೋಕ್ ರಾವ್ ನಿಧನ

ಭಾರ್ಗವಿ ಅವರಿಗೆ ಯಾವುದೇ ಪಾತ್ರ ಕೊಟ್ಟರೂ ಅದನ್ನು ಅನಾಯಾಸವಾಗಿ ಮಾಡುತ್ತಿದ್ದರು. ಅವರ ನಟನೆಯನ್ನು ಸಾಕಷ್ಟು ಮಂದಿ ಮೆಚ್ಚಿಕೊಂಡಿದ್ದರು. ಜೊತೆಗೆ ಪುನೀತ್ ರಾಜ್‌ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರದಲ್ಲಿಯೂ ಅತ್ತ್ಯುತ್ತಮವಾಗಿ ನಟಿಸಿದ್ದರು. ಭಾರ್ಗವಿ ನಿಧನವು ಸ್ಯಾಂಡಲ್​ವುಡ್​ಗೆ ತುಂಬಲಾರದ ನಷ್ಟವಾಗಿದ್ದು, ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು, ಆತ್ಮೀಯರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

click me!