Latest Videos

Ashok Rao Passes Away: ಅಣ್ಣಾವ್ರು ಅಭಿನಯದ 'ಪರಶುರಾಮ್' ಚಿತ್ರದ ವಿಲನ್ ಅಶೋಕ್ ರಾವ್ ನಿಧನ

By Suvarna NewsFirst Published Feb 2, 2022, 11:47 AM IST
Highlights

ಕಳೆದ 15 ದಿನಗಳಿಂದ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ಅಶೋಕ್ ರಾವ್ ಇಂದು ನಿಧನರಾಗಿದ್ದಾರೆ. ನಟ ಅಶೋಕ್ ರಾವ್ ಪತ್ನಿ, ಮಗ ಹಾಗೂ ಸೊಸೆಯನ್ನು ಅಗಲಿದ್ದಾರೆ. 

ಬೆಂಗಳೂರು (ಫೆ.02): ಕಳೆದ 15 ದಿನಗಳಿಂದ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ಅಶೋಕ್ ರಾವ್ (Ashok Rao) ಇಂದು ನಿಧನರಾಗಿದ್ದಾರೆ. ನಟ ಅಶೋಕ್ ರಾವ್ ಪತ್ನಿ, ಮಗ ಹಾಗೂ ಸೊಸೆಯನ್ನು ಅಗಲಿದ್ದಾರೆ. ಹಲವು ದಿನಗಳಿಂದ ಕ್ಯಾನ್ಸರ್ (Cancer) ಖಾಯಿಲೆಯಿಂದ ಬಳಲುತ್ತಿದ್ದ ಅಶೋಕ್ ರಾವ್ ಪ್ರತಿ ದಿನ ಚಿಕಿತ್ಸೆ ಪಡೆಯುತ್ತಿದ್ದರು. ಮಂಗಳವಾರ ಕೂಡ ಚಿಕಿತ್ಸೆ ಪಡೆದ ನಂತರವೂ ಚೆನ್ನಾಗಿದ್ದರು. ಆದರೆ ಮಧ್ಯರಾತ್ರಿ 12.30ಕ್ಕೆ ವಿದ್ಯಾರಣ್ಯಪುರದಲ್ಲಿರೋ ಮನೆಯಲ್ಲಿ ಕೊನೆಯುಸಿರೆಳೆದರು. ಈ ಬಗ್ಗೆ ನೆರೆಹೊರೆಯವರಾದ ಸುದರ್ಶನ್ ಮಾಹಿತಿ ನೀಡಿದ್ದಾರೆ. 

ಡಾ. ರಾಜ್ ಕುಮಾರ್ (Dr.Rajkumar) ಅವರ 'ಪರಶುರಾಮ್' (Parashuram) ಚಿತ್ರದ ವಿಲನ್ ಆಗಿದ್ದ ಅಶೋಕ್ ರಾವ್, ಕನ್ನಡದ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಶೋಕ್ ರಾವ್​ ನಟಿಸಿದ್ದರು. ಪರಶುರಾಮ್ ಚಿತ್ರದಲ್ಲಿ ಅಣ್ಣಾವ್ರೇ ಕರೆದು ಖಳನಾಯಕನ ಪಾತ್ರ ಮಾಡಿಸಿದ್ದರು. ಪರಶುರಾಮ ಸಿನಿಮಾ ಇವರಿಗೆ ಒಳ್ಳೆಯ ಹೆಸರನ್ನು ತಂದು ಕೊಟ್ಟಿತ್ತು. ಅಶೋಕ್ ಅವರ ಕಂಚಿನ ಕಂಠದಿಂದಲೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಸದ್ಯ ವಿದ್ಯಾರಣ್ಯಪುರದ ನಿವಾಸದಲ್ಲಿ ಅಶೋಕ್ ಅವರ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿದೆ.

ಯಶ್ 'ಕಿರಾತಕ' ಸಿನಿಮಾ ನಿರ್ದೇಶಕ Pradeep Raj ಇನ್ನಿಲ್ಲ

ಅಶೋಕ್ ರಾವ್ ಅವರು ಕಾಸರಗೋಡಿನಲ್ಲಿ ಜನಿಸಿದರು. ತಮಿಳುನಾಡಿನ ಸೇಲಂ ಬಳಿಯ ವಸತಿ ಶಾಲೆಯಲ್ಲಿ ಅಶೋಕ ರಾವ್​ ಶಿಕ್ಷಣ ಪಡೆದರು. ಆಗಲೇ ಅವರಿಗೆ ನಾಟಕಗಳ ಬಗ್ಗೆ ಆಸಕ್ತಿ ಮೂಡಿತ್ತು. ಶಾಲಾ ದಿನಗಳಿಂದಲೂ ಅಭಿನಯದ ಬಗ್ಗೆ ಆಸಕ್ತಿ ಮೂಡಿಸಿಕೊಂಡಿದ್ದ ಅವರು ವಿದ್ಯಾಭ್ಯಾಸ ಮುಗಿಸಿದ ಬಳಿಕ ಹಲವು ಇಂಗ್ಲಿಷ್​ ನಾಟಕಗಳಲ್ಲಿ ನಟಿಸಿದ್ದರು. ಕಂಚಿನ ಕಂಠದ ಕಾರಣಕ್ಕೆ ಅವರಿಗೆ ಕೆಲವು ಪಾತ್ರಗಳು ಅರಸಿಕೊಂಡು ಬಂದಿತ್ತು. ಇದಾದ ಬಳಿಕ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಇತ್ತೀಚೆಗೆ ಕೆಲ ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಅಶೋಕ್ ರಾವ್ ಅವರು ಇದೀಗ ಕ್ಯಾನ್ಸರ್​ ಕಾಯಿಲೆಯಿಂದ ಇಹಲೋಕ ತ್ಯಜಿಸಿದ್ದಾರೆ.

ಅಶೋಕ್ ರಾವ್ ಅವರು, ಸಿಕ್ಕಾಪಟ್ಟೆ ಇಷ್ಟಪಟ್ಟೆ, ಶಿವಂ, ವಸುಂಧರಾ, ಬ್ರಹ್ಮ, ಅತಿ ಅಪರೂಪ, ಪರಿಣಯ, ಶತ್ರು, ಮುಗಿಲ ಚುಂಬನ, ರಾಣಾ ಪ್ರತಾಪ್, ಬಾಸ್, ಪೊಲೀಸ್ ಕಥೆ, ಜೇಡ್ರಳ್ಳಿ, ಹೂ, ಕೃಷ್ಣನ್ ಲವ್ ಸ್ಟೋರಿ, ಕುಣಿದು ಕುಣಿದು ಬಾರೆ, ಯುವ, ಮನಸಾರೆ, ಮ್ಯಾಡ್ ಲವ್, ಬೊಂಬಾಟ್, ಅರ್ಜುನ್, ಸಂಗಾತಿ,  ಪೊಲೀಸ್ ಕಥೆ, ಸಜನಿ, ಸೌಂದರ್ಯ, ಬೊಂಬುಗಳು ಸಾರ್ ಬೊಂಬುಗಳು, ಮತಾಡ್ ಮಾತಾಡ್ ಮಲ್ಲಿಗೆ, ಆಪರೇಷನ್ ಅಂಕುಶ, ತವರಿನ ಸಿರಿ, ತಿರುಪತಿ, ಸೈನೈಡ್, ಸಿರಿವಂತ, ರಿಷಿ, ಗಡಿಪಾರ್, ಇನ್ಸ್‌ಪೆಕ್ಟರ್ ಝಾನ್ಸಿ, ಆಟೋ ಶಂಕರ್, ಓಂ ಗಣೇಶ್, ಪ್ರೇಮಾ ಖೈದಿ, ಸೈನಿಕ, ಇಂದ್ರ ಧನುಷ್, ಹಬ್ಬ, ಓ ಪ್ರೇಮವೇ, ಸ್ನೇಹ, ಟುವ್ವಿ ಟುವ್ವಿ ಟುವ್ವಿ, ಜೋಡಿ ಹಕ್ಕಿ, ಅಶ್ವಮೇಧ, ಬಾ ನಲ್ಲೆ ಮಧುಚಂದ್ರಕೆ, ಶೃಂಗಾರ ಕಾವ್ಯ ಸೇರಿದಂತೆ ಕನ್ನಡದ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

KV Gupta Passes Away: ಸತ್ಯಹರಿಶ್ಚಂದ್ರ ಚಿತ್ರ ನಿರ್ಮಿಸಿದ್ದ ಗುಪ್ತಾ ನಿಧನ

ಇನ್ನು ಡಾ.ರಾಜ್‌ಕುಮಾರ್, ವಿಷ್ಣುವರ್ಧನ್, ಸುದೀಪ್, ಉಪೇಂದ್ರ, ಶಿವರಾಜಕುಮಾರ್, ರಾಘವೇಂದ್ರ ರಾಜ್‌ಕುಮಾರ್, ರವಿಚಂದ್ರನ್, ಮಾಲಾಶ್ರೀ, ಜಗ್ಗೇಶ್, ದೇವರಾಜ್,  ಸೇರಿದಂತೆ ಕನ್ನಡದ ಘಟಾನುಘಟಿ ನಾಯಕರುಗಳ ಜೊತೆ ಅಶೋಕ್ ರಾವ್​ ತೆರೆ ಹಂಚಿಕೊಂಡಿದ್ದಾರೆ. ಇತ್ತೀಚೆಗೆ 'ಕಿರಾತಕ' ಚಿತ್ರದ ನಿರ್ದೇಶಕ ಪ್ರದೀಪ್​ ರಾಜ್ ​(Pradeep Raj) ವಿಧಿವಶರಾಗಿದ್ದರು. ಮಾತ್ರವಲ್ಲದೇ ಯುವ ಪ್ರತಿಭೆ ಸ್ಕ್ರಿಪ್ಟ್‌ ರೈಟರ್‌ ಹರ್ಷ (Harsha) ಕೂಡಾ ವಿಧಿವಶರಾಗಿದ್ದರು. ಸದ್ಯ ಒಬ್ಬೊಬ್ಬರಾಗಿ ಕಲಾವಿದರು ಚಿತ್ರರಂಗವನ್ನು ತೊರೆದು ಹೋಗುತ್ತಿರುವುದು ಅನಾಥಭಾವ ಮೂಡಿಸುತ್ತಿದೆ.

click me!