ದ್ವಾರಕೀಶ್‌ಗೆ ಕುಳ್ಳ ಎಂಬ ಹೆಸರು ಬಂದಿದ್ದೇ ನಮ್ಮ ಸಿನಿಮಾದಿಂದ: ರಾಜೇಂದ್ರ ಸಿಂಗ್‌ ಬಾಬು

By Kannadaprabha News  |  First Published Apr 17, 2024, 11:28 AM IST

ಹುಣಸೂರು ಕೃಷ್ಣಮೂರ್ತಿ ಅವರು ಬರೆದ ‘ಕುಳ್ಳ ನಾನಾಗಿದ್ದೇನೆ ಏನಂತೆ’ ಎಂಬ ಆ ಹಾಡೂ ಬಹಳ ಜನಪ್ರಿಯವಾಯಿತು. ಸತ್ಯಂ ಅವರ ಸಂಗೀತ ಸಂಯೋಜನೆಯಲ್ಲಿ ಉತ್ತಮ ಪಿಕ್ಚರೈಸೇಶನ್‌ ಮೂಲಕವೂ ಗಮನಸೆಳೆಯಿತು. ಈ ಮಧ್ಯೆ ನನಗೂ ಅವರಿಗೂ ಸ್ನೇಹ ಬೆಳೆಯುತ್ತಾ ಹೋಯಿತು. ಆ ಕಾಲದಲ್ಲಿ ದ್ವಾರಕೀಶ್‌ ಇಲ್ಲದ ನಮ್ಮ ಸಿನಿಮಾಗಳೇ ಇರುತ್ತಿರಲಿಲ್ಲ ಎನ್ನಬಹುದು: ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು


ಬೆಂಗಳೂರು(ಏ.17):  ನಾವು ಅಂದರೆ ನಾನು, ದ್ವಾರಕೀಶ್‌, ವಿಷ್ಣುವರ್ಧನ್, ಅಂಬರೀಶ್‌ ಮೂಲತಃ ಮೈಸೂರಿನವರು. ಪದವಿ ವ್ಯಾಸಂಗದ ಅರ್ಧದಲ್ಲೇ ನಾನು ತಂದೆಯವರು ಮಾಡುತ್ತಿದ್ದ ಸಿನಿಮಾಕ್ಕೆ ಹೆಗಲು ಕೊಡುತ್ತಿದ್ದೆ. ಹೊತ್ತಿಗೆ ದ್ವಾರಕೀಶ್‌, ಹುಣಸೂರು ಕೃಷ್ಣಮೂರ್ತಿ ಅವರ ‘ವೀರ ಸಂಕಲ್ಪ’ ಸಿನಿಮಾದಲ್ಲಿ ನಟಿಸುತ್ತಿದ್ದರು. ನನ್ನ ತಂದೆ ಆಗ ‘ಧನ ಪಿಶಾಚಿ’ ಎಂಬ ಸಿನಿಮಾ ಮಾಡುತ್ತಿದ್ದರು. ಈ ಸಿನಿಮಾದಲ್ಲಿ ನರಸಿಂಹ ರಾಜು ಅವರು ನಟಿಸಬೇಕಿತ್ತು. ಆದರೆ ಅವರು ಮತ್ತೊಂದು ಸಿನಿಮಾದಲ್ಲೂ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದ ಕಾರಣ ನಾವು ಈ ಸಿನಿಮಾದಲ್ಲಿ ದ್ವಾರಕೀಶ್‌ ಅವರನ್ನು ಸೇರಿಸಲು ನಿರ್ಧರಿಸಿದೆವು.

ಹಾಗೆ ಬಂದ ದ್ವಾರಕೀಶ್‌ ಅವರಿಂದ ‘ಧನಪಿಶಾಚಿ’ ಚಿತ್ರದಲ್ಲಿ ಹಾಡು, ಸೀನ್‌ ಮಾಡಿಸಿದೆವು. ಆ ಹಾಡು, ಪಾತ್ರದ ಮೂಲಕ ಅವರು ಚಂದನವನದ ಪರ್ಮನೆಂಟ್‌ ‘ಕುಳ್ಳ’ನಾಗಿ ಹೆಸರುವಾಸಿಯಾದರು. ಹುಣಸೂರು ಕೃಷ್ಣಮೂರ್ತಿ ಅವರು ಬರೆದ ‘ಕುಳ್ಳ ನಾನಾಗಿದ್ದೇನೆ ಏನಂತೆ’ ಎಂಬ ಆ ಹಾಡೂ ಬಹಳ ಜನಪ್ರಿಯವಾಯಿತು. ಸತ್ಯಂ ಅವರ ಸಂಗೀತ ಸಂಯೋಜನೆಯಲ್ಲಿ ಉತ್ತಮ ಪಿಕ್ಚರೈಸೇಶನ್‌ ಮೂಲಕವೂ ಗಮನಸೆಳೆಯಿತು.

Latest Videos

undefined

ಏರಿಳಿತದ ಹಾದಿಯ ಏಕಾಂಗಿ ಪಯಣಿಗ ದ್ವಾರಕೀಶ್..!

ಈ ಮಧ್ಯೆ ನನಗೂ ಅವರಿಗೂ ಸ್ನೇಹ ಬೆಳೆಯುತ್ತಾ ಹೋಯಿತು. ಆ ಕಾಲದಲ್ಲಿ ದ್ವಾರಕೀಶ್‌ ಇಲ್ಲದ ನಮ್ಮ ಸಿನಿಮಾಗಳೇ ಇರುತ್ತಿರಲಿಲ್ಲ ಎನ್ನಬಹುದು. ಅವರಾಗ ಮದ್ರಾಸ್‌ನಲ್ಲಿ ಬಾಡಿಗೆ ಮನೆಯಲ್ಲಿದ್ದರು. ನಮ್ಮ ಸಿನಿಮಾ ಶೂಟಿಂಗ್‌ ಇದ್ದಾಗ ಇಲ್ಲಿಂದ ಬೃಂದಾವನ್ ಎಕ್ಸ್‌ಪ್ರೆಸ್‌ನಲ್ಲಿ ಚೆನ್ನೈಗೆ ಹೋಗಿ ಅವರನ್ನು ಕರೆತರುತ್ತಿದ್ದೆ. ಮಧ್ಯಾಹ್ನ ಅವರ ಮನೆಯಲ್ಲೇ ಊಟ. ತಾಯಿ ಬಹಳ ರುಚಿಯಾಗಿ ಅಡುಗೆ ಮಾಡುತ್ತಿದ್ದರು. ಅವರ ಜೊತೆ ಬೆಂಗಳೂರಿಗೆ ಬಂದು ಇಲ್ಲಿ ಶೂಟಿಂಗ್‌ ಮುಗಿಸಿ ವಾಪಾಸ್‌ ಹೊರಡುವಾಗ ಅವರು ನನ್ನನ್ನೂ ಕರೆದುಕೊಂಡು ಹೋಗುತ್ತಿದ್ದರು. ಹೀಗೆ ಆಪ್ತರಾಗುತ್ತಾ ಹೋದೆವು.

ನಾನೂ ಸಿನಿಮಾ ಮಾಡಿದೆ, ಅವರೂ ಮಾಡಿದರು. ನಡುವೆ ವಿಷ್ಣುವರ್ಧನ್‌, ನನಗೂ ಅವರಿಗೂ ಹತ್ತಿರವಾದರು. ದಾಸ್‌ಪ್ರಕಾಶ್‌ನಲ್ಲಿ ಹೊಟೇಲಿನಲ್ಲಿ ನಾನೂ, ದ್ವಾರಕೀಶ್‌ ವಿಷ್ಣು ಅವರಿಂದ ಸಿನಿಮಾಗೆ ಸೈನ್‌ ಮಾಡಿಸಲು ಕೂರುತ್ತಿದ್ದ ಕ್ಷಣ ಅಚ್ಚಳಿಯದ ಹಾಗೆ ಮನಸ್ಸಲ್ಲಿದೆ. ಅವತ್ತು ಅಲ್ಲಿ ದ್ವಾರಕೀಶ್‌ ಸಹಿ ಮಾಡಿಸಿದ್ದು ‘ಕಳ್ಳ ಕುಳ್ಳ’ ಸಿನಿಮಾಕ್ಕೆ. ನಾನು ವಿಷ್ಣು ಜೊತೆಗೆ ತಂದೆಯವರ ಬ್ಯಾನರ್‌ನಲ್ಲಿ ನಾಗಕನ್ಯೆ ಸಿನಿಮಾ ಮಾಡಿದೆ.

ನನ್ನ ‘ನಾಗರಹೊಳೆ’ ನೋಡಿ, ‘ಇಂಗ್ಲೀಷ್‌ ಪಿಕ್ಚರ್‌ ಥರ ತೆಗೆದುಬಿಟ್ಟಿದ್ದೀಯಲ್ಲಪ್ಪಾ ಬಾಬು’ ಎಂದು ದ್ವಾರಕೀಶ್‌ ಮೆಚ್ಚುಗೆ ವ್ಯಕ್ತಪಡಿಸಿದ್ದರು. ‘ಕಿಲಾಡಿ ಜೋಡಿ’ ಸಿನಿಮಾ ಮಾಡುವಾಗ ದ್ವಾರಕೀಶ್‌ಗೆ ಒಂದು ಪಾತ್ರ ಹಾಕಲೇ ಬೇಕು ಎಂದು ವಿಷ್ಣುವರ್ಧನ್‌, ಶ್ರೀನಾಥ್‌ ಜೊತೆಗೆ ಮಲೆಯಾಳಿ ಮಾಂತ್ರಿಕನ ಪಾತ್ರ ಮಾಡಿಸಿದೆ. ಅದು ಸಿನಿಮಾದ ಕಥೆಯಲ್ಲಿ ಇಲ್ಲದಿದ್ದರೂ ದ್ವಾರಕೀಶ್‌ಗಾಗಿ ಸೇರಿಸಿದೆ.

ಹಾಗೇ ‘ಸಿಂಹದ ಮರಿಸೈನ್ಯ’ ಸಿನಿಮಾ ತೆಗೆದಾಗ ಕ್ಲೈಮ್ಯಾಕ್ಸ್‌ನಲ್ಲಿ ದ್ವಾರಕೀಶ್‌ ಅವರನ್ನು ಹೀರೋ ಥರ ಹಾಕಿದ್ವಿ. ಮುಂದೆ ಅವರು ಬೆಳೀತಾ ಬಂದ್ರು. ನಾನೂ ಬೆಳೆದೆ. ನನ್ನ ‘ಅಂತ’ ಸಿನಿಮಾವನ್ನು ಮೊತ್ತ ಮೊದಲು ತೋರಿಸಿದ್ದು ದ್ವಾರಕೀಶ್‌ಗೆ. ಮುಂದೆ ಈ ಚಿತ್ರ ಇತಿಹಾಸ ನಿರ್ಮಿಸಿತು. ನನ್ನ ‘ಬಂಧನ’ ಚಿತ್ರದ 100ನೇ ದಿನ ಸಂಭ್ರಮಕ್ಕೆ ದಿಲೀಪ್‌ ಜೊತೆಗೆ ದ್ವಾರಕೀಶ್‌ ಅವರನ್ನೂ ಕರೆಸಿದ್ದೆ. ಯಾವುದೋ ಹಂತದಲ್ಲಿ ವಿಷ್ಣುವರ್ಧನ್‌ಗೂ ಇವರಿಗೂ ಮನಸ್ತಾಪ ಬೆಳೆಯಿತು. ಮತ್ತೇನಲ್ಲ, ಇಗೋ ಸಮಸ್ಯೆ. ಮಾತು ನಿಂತಿತು. ಐದಾರು ವರ್ಷ ಇಬ್ಬರೂ ಜೊತೆಗೇ ಇರಲಿಲ್ಲ. ಇದರಿಂದ ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ನಷ್ಟವಾಯಿತು. ಇದನ್ನೆಲ್ಲ ನೋಡಿ ನೋಡಿ ಸಾಕಾಗಿ ಕೊನೆಗೆ ನಾನು ಇವರಿಬ್ರನ್ನು ಹೇಗಾದರೂ ಸೇರಿಸಬೇಕು ಅಂದುಕೊಂಡೆ.

ಓದಿದ್ದು ಮೆಕ್ಯಾನಿಕಲ್ ಇಂಜಿನಿಯರ್, ಆಗಿದ್ದು ಚಿತ್ರರಂಗದ ಶೋ ಮ್ಯಾನ್: ‘ಪ್ರಚಂಡ ಕುಳ್ಳನಿಗೆ’ ಕರುನಾಡದ ಸಂತಾಪ..!

ಅಷ್ಟೊತ್ತಿಗೆ ದ್ವಾರಕೀಶ್‌ಗೆ ಅಪಘಾತದಲ್ಲಿ ಕೈ ಮುರಿದಿತ್ತು. ‘ನೀನೇ ಸೋಲು ಪರ್ವಾಗಿಲ್ಲ, ಬಾರೋ’ ಎಂದು ದ್ವಾರಕೀಶ್‌ ಅವರನ್ನು ವಿಷ್ಣುವರ್ಧನ್‌ ಮನೆಗೆ ಕರ್ಕೊಂಡು ಹೋದೆ. ಇಬ್ಬರ ನಡುವಿನ ಬಿಗು ಕಳಚಿ ಇಬ್ಬರ ಸಂಬಂಧ ಮತ್ತೆ ಜೋಡಿಕೊಂಡಿತು. ಆಮೇಲೆ ಮತ್ತೆ ಒಂದಾಗಿ ‘ರಾಯರು ಬಂದರು ಮಾವನ ಮನೆಗೆ’ ಸಿನಿಮಾ ಮಾಡಿದರು. ಸುಮಾರು 19 ಸಿನಿಮಾಗಳು ಸೋತು, ‘ಆಪ್ತಮಿತ್ರ’ ಕೈ ಹಿಡಿಯಿತು. ನಮ್ಮ ಸ್ನೇಹ ಹೇಗಿತ್ತು ಎಂದರೆ, ‘ನೋಡೋ ಕುಳ್ಳ ಹಿಂಗೆ ಮಾಡ್ತಾನೆ’ ಅಂತ ವಿಷ್ಣು ನನ್ನ ಬಳಿ ಹೇಳಿಕೊಳ್ಳುವುದು. ‘ಅವ್ನು ಡೇಟ್‌ ಕೊಡದೇ ಸತಾಯಿಸ್ತಿದ್ದಾನೆ, ನೋಡು’ ಎಂದು ದ್ವಾರಕೀಶ್‌ ಹೇಳುವುದು..

1965 ಸುಮಾರಿನಲ್ಲಿ ಸಿನಿಮಾರಂಗಕ್ಕೆ ಬಂದು ಕನ್ನಡ ಚಿತ್ರರಂಗಕ್ಕೆ ಹೊಸ ದಿಕ್ಕು ಕೊಟ್ಟವರ ಯುಗವೇ ಮುಗಿಯುತ್ತಿರುವ ಹಾಗೆ ಭಾಸವಾಗುತ್ತಿದೆ. ಸದಾ ಹೊಸತನಕ್ಕೆ ತುಡಿಯುತ್ತಿದ್ದ ದ್ವಾರಕೀಶ್‌ ಎಂಬ ಪುಟ್ಟ ದೇಹದ ಉನ್ನತ ಚೈತನ್ಯ ಇದೀಗ ಮತ್ತೊಂದು ಹೊಸತನದ ಅನ್ವೇಷಣೆಯಲ್ಲಿ ಮತ್ತೆಲ್ಲಿಗೂ ಹೊರಟುಹೋದಂತೆ ಕಾಣುತ್ತದೆ.

click me!