ಸ್ಯಾಂಡಲ್‌ವುಡ್‌ ಕ್ರಿಕೆಟ್‌ ಕಪ್‌ ಅದ್ಧೂರಿ ಆರಂಭ: ಶಿವಣ್ಣನಿಗೆ ಭಾರಿ ಚಪ್ಪಾಳೆ

By Kannadaprabha NewsFirst Published Dec 24, 2023, 9:21 AM IST
Highlights

ಕನ್ನಡ ಚಲನಚಿತ್ರದ ಕಲಾವಿದರು ಮತ್ತು ಅಂತಾರಾಷ್ಟ್ರೀಯ ಕ್ರಿಕೆಟಿಗರನ್ನು ಒಳಗೊಂಡ ಕರ್ನಾಟಕ ಚಲನಚಿತ್ರ ಕಪ್(ಕೆಸಿಸಿ) ಪಂದ್ಯಾವಳಿಗಳಿಗೆ ಶನಿವಾರ ಇಲ್ಲಿ ಅದ್ಧೂರಿ ಚಾಲನೆ ಸಿಕ್ಕಿತು. 

ಬೆಂಗಳೂರು (ಡಿ.24): ಕನ್ನಡ ಚಲನಚಿತ್ರದ ಕಲಾವಿದರು ಮತ್ತು ಅಂತಾರಾಷ್ಟ್ರೀಯ ಕ್ರಿಕೆಟಿಗರನ್ನು ಒಳಗೊಂಡ ಕರ್ನಾಟಕ ಚಲನಚಿತ್ರ ಕಪ್(ಕೆಸಿಸಿ) ಪಂದ್ಯಾವಳಿಗಳಿಗೆ ಶನಿವಾರ ಇಲ್ಲಿ ಅದ್ಧೂರಿ ಚಾಲನೆ ಸಿಕ್ಕಿತು. 10 ಓವರ್‌ಗಳ ಪಂದ್ಯಾವಳಿಯ ನಾಲ್ಕನೇ ಆವೃತ್ತಿ ಇದಾಗಿದ್ದು ಡಿ.23-ಡಿ.25ರವರೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಾವಳಿಗಳು ನಡೆಯಲಿವೆ. ಮೊದಲ ದಿನ ಆರು ಪಂದ್ಯಗಳು ನಡೆದಿದ್ದು, ಗೋಲ್ಡನ್‌ಸ್ಟಾರ್‌ ಗಣೇಶ್‌ ಸಾರಥ್ಯದ ‘ಗಂಗಾ ವಾರಿಯರ್ಸ್‌’ ಮತ್ತು ಡಾಲಿ ಧನಂಜಯ್ ಸಾರಥ್ಯದ ‘ಕದಂಬ ಲಯನ್ಸ್’ ತಂಡಗಳು ಸತತ ಎರಡು ಪಂದ್ಯಗಳನ್ನು ಗೆದ್ದು ದಿನದಂತ್ಯಕ್ಕೆ ಮುಂಚೂಣಿ ಸಾಧಿಸಿವೆ.

ಸ್ಟಾರ್‌ ಆಟಗಾರರು: ಪಂದ್ಯಾವಳಿಯಲ್ಲಿ ಪ್ರತಿಯೊಂದು ತಂಡಕ್ಕೆ ಐದು ಲೀಗ್ ಪಂದ್ಯಗಳು ಇರುತ್ತವೆ. ಕೊನೆಯಲ್ಲಿ ಟಾಪ್‌ 2 ತಂಡಗಳ ಮಧ್ಯೆ ಫೈನಲ್‌ ಪಂದ್ಯ ನಡೆಯಲಿದೆ. ಒಟ್ಟು ಆರು ತಂಡಗಳು ಪರಸ್ಪರ ಸೆಣೆಸುತ್ತಿದ್ದು, ಪ್ರತಿಯೊಂದು ತಂಡದಲ್ಲಿ ಒಬ್ಬರು ಸ್ಟಾರ್‌ ಕಲಾವಿದ, ಒಬ್ಬರು ಅಂತಾರಾಷ್ಟ್ರೀಯ ಆಟಗಾರ ಇದ್ದಾರೆ.

Latest Videos

ಬೋಲ್ಡ್ ಅವತಾರದಲ್ಲಿ ಇಂಟರ್ನೆಟ್‌ಗೆ ಬೆಂಕಿ ಹಚ್ಚಿದ ಮಾಳವಿಕಾ ಮೋಹನನ್: ಪಡ್ಡೆಹೈಕ್ಳು ಫುಲ್‌ಸುಸ್ತು!

ಯಾರ ತಂಡದಲ್ಲಿ ಯಾರ್‍ಯಾರು?:  ಕಿಚ್ಚ ಸುದೀಪ್‌ ಸಾರಥ್ಯದ ‘ಹೊಯ್ಸಳ ಈಗಲ್ಸ್’ ತಂಡದಲ್ಲಿ ಶ್ರೀಲಂಕಾದ ತಿಲಕರತ್ನೆ ದಿಲ್ಷಾನ್, ಶಿವರಾಜ್‌ ಕುಮಾರ್‌ ಅವರ ‘ರಾಷ್ಟ್ರಕೂಟ ಪ್ಯಾಂಥರ್ಸ್’ ತಂಡದಲ್ಲಿ ಸುರೇಶ್ ರೈನಾ, ಡಾಲಿ ಧನಂಜಯ ಸಾರಥ್ಯದ ‘ಕದಂಬ ಲಯನ್ಸ್’ನಲ್ಲಿ ರಾಬಿನ್‌ ಉತ್ತಪ್ಪ, ಉಪೇಂದ್ರ ಅವರ ‘ಒಡೆಯರ್‌ ಚಾರ್ಜರ್ಸ್‌’ ತಂಡದಲ್ಲಿ ಬದ್ರಿನಾಥ್, ಗೋಲ್ಡನ್‌ ಸ್ಟಾರ್‌ ಗಣೇಶ್‌ ಅವರ ‘ಗಂಗಾ ವಾರಿಯರ್ಸ್’ನಲ್ಲಿ ಮುರಳಿ ವಿಜಯ್‌, ದುನಿಯಾ ವಿಜಯ್‌ ಅವರ ‘ವಿಜಯನಗರ ಪ್ಯಾಟ್ರಿಯಟ್ಸ್‌’ ತಂಡದಲ್ಲಿ ದಕ್ಷಿಣ ಆಫ್ರಿಕಾದ ಹರ್ಶಲ್ ಗಿಬ್ಸ್ ಆಡಿದರು.

ಆರಂಭದಲ್ಲಿ ಗಣೇಶ್ ತಂಡ ಮತ್ತು ಉಪೇಂದ್ರ ತಂಡದ ಮಧ್ಯೆ ಪಂದ್ಯ ನಡೆಯಿತು. ಆ ಪಂದ್ಯವನ್ನು ಗಣೇಶ್‌ ತಂಡ 17 ರನ್‌ಗಳಿಂದ ಗೆದ್ದಿತು. ಶಿವಣ್ಣ ಮತ್ತು ಸುದೀಪ್‌ ತಂಡಗಳ ಮಧ್ಯೆ ನಡೆದ ಪಂದ್ಯ ರೋಚಕವಾಗಿತ್ತು. ಆ ಪಂದ್ಯದಲ್ಲಿ ರಕ್ಷಿತ್‌ ಶಿವರಾಮ್‌ 16 ಎಸೆತಗಳಲ್ಲಿ 50 ರನ್‌ ಗಳಿಸುವ ಮೂಲಕ ಶಿವಣ್ಣ ತಂಡ 100 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕುವಲ್ಲಿ ನೆರವಾದರು. ಆರಂಭದಲ್ಲಿ ಗೆಲ್ಲುವಂತೆ ಕಾಣಿಸಿದ್ದ ಸುದೀಪ್‌ ತಂಡ ನಿರಂತರವಾಗಿ ವಿಕೆಟ್‌ ಕಳೆದುಕೊಂಡು 21 ರನ್‌ಗಳ ಸೋಲು ಕಂಡಿತು.

ಮೂರನೇ ಪಂದ್ಯದಲ್ಲಿ ಧನಂಜಯ್‌ ತಂಡ ರಾಬಿನ್‌ ಉತ್ತಪ್ಪ ಮತ್ತು ರಾಜೀವ್‌ ಅಬ್ಬರದ ಆಟದಿಂದಾಗಿ 171 ರನ್‌ ಕಲೆ ಹಾಕಿತ್ತು. ಆ ಪಂದ್ಯವನ್ನು ವಿಜಯ್‌ ತಂಡ 80 ರನ್‌ಗಳಿಂದ ಸೋತಿತು. ಈ ಪಂದ್ಯದಲ್ಲಿ ಹರ್ಶಲ್‌ ಗಿಬ್ಸ್‌ ರಿಟೈರ್ಡ್ ಹರ್ಟ್ ಆಗಿ ಮರಳಬೇಕಾಯಿತು. ನಾಲ್ಕನೇ ಪಂದ್ಯವನ್ನು ಶಿವಣ್ಣ ತಂಡದ ವಿರುದ್ಧ ಗಣೇಶ್‌ ತಂಡ ಸುಲಭವಾಗಿ ಗೆದ್ದಿತು. ಐದನೇ ಪಂದ್ಯದಲ್ಲಿ ಉಪೇಂದ್ರ ತಂಡದ ವಿರುದ್ಧ ಧನಂಜಯ್ ತಂಡ ಗೆದ್ದುಕೊಂಡಿತು.

ಬಾಕಿ ಉಳಿದಿರುವ ಎರಡು ದಿನಗಳಲ್ಲಿ ಮತ್ತಷ್ಟು ರೋಚಕ ಹಣಾಹಣಿ ನಡೆಯಲಿದ್ದು, ಎಲ್ಲಾ ತಂಡಗಳು ಫೈನಲ್‌ ತಲುಪುವುದಕ್ಕೆ ಛಲದ ಪ್ರಯತ್ನ ನಡೆಸಲಿವೆ. ಈ ಪಂದ್ಯಾವಳಿಯನ್ನು ಜೀ ಪಿಚ್ಚರ್‌ ವಾಹಿನಿಯಲ್ಲಿ ನೇರಪ್ರಸಾರ ನೋಡಬಹುದಾಗಿದೆ.

ಶಿವಣ್ಣನಿಗೆ ಭಾರಿ ಚಪ್ಪಾಳೆ: ಶಿವಣ್ಣ ಬೌಲಿಂಗ್‌ಗೆ ಇಳಿದಾಗ, ಬ್ಯಾಟಿಂಗ್‌ ಮಾಡುವಾಗ ಅಭಿಮಾನಿಗಳ ಚಪ್ಪಾಳೆ ಗೌರವಕ್ಕೆ ಪಾತ್ರವಾದರು. ಅಭಿಮಾನಿಗಳ ಜೊತೆ ಮಾತನಾಡುತ್ತಾ, ಗಣೇಶ್‌ ಜೊತೆ ಡಾನ್ಸ್‌ ಮಾಡುತ್ತಾ ಅತೀವ ಉತ್ಸಾಹವನ್ನು ಪ್ರದರ್ಶಿಸಿದರು. ಪ್ರತಿಯೊಬ್ಬ ಆಟಗಾರ ಕೂಡ ಶಿವಣ್ಣ ಅವರಿಗೆ ಗೌರವ ತೋರಿಸುತ್ತಿದ್ದುದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಮಿಂಚಿದ ಸ್ಟಾರ್‌ ನಟರು: ಅತ್ಯುತ್ತಮ ಆಟ ಪ್ರದರ್ಶಿಸಿ ಮಿಂಚಿದ ಪ್ರಮುಖ ಕಲಾವಿದರಲ್ಲಿ ಗೋಲ್ಡನ್‌ಸ್ಟಾರ್‌ ಗಣೇಶ್‌ ಒಬ್ಬರು. ಅವರು ಎರಡು ಪಂದ್ಯಗಳಲ್ಲಿ ಒಟ್ಟು 5 ವಿಕೆಟ್‌ಗಳನ್ನು ಪಡೆದರು. ಡಾಲಿ ಧನಂಜಯ್‌ ಆರಂಭದ ಪಂದ್ಯದಲ್ಲಿ 2 ವಿಕೆಟ್‌ಗಳನ್ನು ಪಡೆದರು. ನಟ ರಾಜೀವ್‌ 18 ಬಾಲ್‌ಗಳಲ್ಲಿ ಅರ್ಧ ಬಾರಿಸಿ ಮಿಂಚಿದರು.

ತೆರೆ ಮೇಲೆ KGF ಮೇಕರ್ಸ್ ಸೃಷ್ಟಿಯ 'ಸಲಾರ್' ದರ್ಶನ: ಪ್ಯಾನ್ ಇಂಡಿಯಾ ನೀಲ್-ಪ್ರಭಾಸ್ ಬೆಸ್ಟ್ ರಿವ್ಯೂ!

ಸ್ಟಾರ್‌ ಆಟಗಾರರ ಅಬ್ಬರ: ಆರು ಟೀಮ್‌ಗಳಲ್ಲಿದ್ದ ಸ್ಟಾರ್‌ ಆಟಗಾರರಲ್ಲಿ ಅಬ್ಬರಿಸಿದ್ದು ರಾಬಿನ್‌ ಉತ್ತಪ್ಪ ಮತ್ತು ಮುರಳಿ ವಿಜಯ್‌. ರಾಬಿನ್‌ ಉತ್ತಪ್ಪ ಒಂದು ಪಂದ್ಯದಲ್ಲಿ 34 ಬಾಲ್‌ಗಳಲ್ಲಿ 92 ರನ್‌ ಗಳಿಸಿದರೆ, ಮುರಳಿ ವಿಜಯ್‌ 29 ಎಸೆತಗಳಲ್ಲಿ 82 ರನ್‌ ಗಳಿಸಿ ಮೊದಲ ವೈಯಕ್ತಿಕವಾಗಿ ಜಾಸ್ತಿ ರನ್‌ ಗಳಿಸಿದ ಆಟಗಾರರು ಅನ್ನಿಸಿಕೊಂಡರು.

click me!