
ಹೆಣ್ತನವನ್ನು ಸಂಭ್ರಮಿಸುವ ಹಬ್ಬವಿದು: ಅಂಕಿತಾ ಅಮರ್
ಯಾವುದೇ ವಿಚಾರವನ್ನು ಪ್ರಶ್ನೆ ಮಾಡಿ ಆ ಬಗ್ಗೆ ತಿಳಿದುಕೊಳ್ಳುವ ಸ್ವಭಾವ ನನ್ನದು. ವರಮಹಾಲಕ್ಷ್ಮೀ ಬಗ್ಗೆ ನಾನು ತಿಳಿದುಕೊಂಡದ್ದೂ ಹಾಗೆ. ಹಾಗೊಮ್ಮೆ ‘ಲಕ್ಷ್ಮೀನೂ ದೇವ್ರೇ ಅಲ್ವಾ, ಅವಳ್ಯಾಕೆ ವಿಷ್ಣುವಿನ ಕಾಲು ಒತ್ತಬೇಕು?’ ಅಂತ ಕೇಳಿದ್ದೆ. ‘ಅವಳ ಕೈಯಲ್ಲಿ ಸರ್ವಕೆಡುಕನ್ನು ನಿವಾರಿಸುವ ಶಕ್ತಿ ಇದೆ. ವಿಷ್ಣುವಿನ ಪಾದವನ್ನು ಮುಟ್ಟುವ ಮೂಲಕ ಆಕೆ ವಿಷ್ಣುವಿನ ಅನಿಷ್ಠವನ್ನು ಕಳೆಯುತ್ತಾಳೆ’ ಅನ್ನುವ ಉತ್ತರ ಸಿಕ್ಕಿತ್ತು. ಈ ಹಬ್ಬದಂದು ಅಷ್ಟಲಕ್ಷ್ಮಿಯರ ಪೂಜೆ. ಅಂದು ಲಕ್ಷ್ಮೀ ಸ್ವತಃ ಬರ್ತಾಳೆ ಅಂತಾರೆ. ಇನ್ನೊಂದೆಡೆ ಹೆಣ್ಣು ಅಲಂಕಾರವನ್ನು ತನ್ನ ಅಸ್ಮಿತೆಯಾಗಿ ಕಂಡವಳು.
ದೇವಿಗೆ ಮನಃಪೂರ್ವಕವಾಗಿ ಅಲಂಕಾರ ಮಾಡುವ ಮೂಲಕ ಹೆಣ್ಣಾಗಿ ನನಗೇನು ಹಕ್ಕಿದೆಯೋ ಅದನ್ನು ನಾನು ನಿನಗೇ ಸಮರ್ಪಿಸಿದ್ದೇನೆ ಅನ್ನುತ್ತಾಳೆ. ಹೆಣ್ಣಿನ ಹಸ್ತಗಳಲ್ಲಿ ಲಕ್ಷ್ಮೀ ನೆಲೆಸ್ತಾಳೆ ಅನ್ನೋ ವಾಡಿಕೆ ಇದೆ. ಹೆಣ್ಣು ಮಗು ಹುಟ್ಟಿದರೆ ಲಕ್ಷ್ಮೀ ಬಂದಳು ಅಂತೀವಿ. ಬದಲಿಗೆ ಸರಸ್ವತಿ ಬಂದಳು ಅನ್ನೋದಿಲ್ಲ. ನಮ್ಮ ಮನೆಯಲ್ಲಿ ಲಕ್ಷ್ಮೀ ಕೂರಿಸುವ ಪರಂಪರೆ ಇಲ್ಲ. ಆದರೆ ಬಾಲ್ಯದಿಂದಲೂ ಈ ಹಬ್ಬದಂದು ಅಕ್ಕಪಕ್ಕದ ಮನೆಗೆ ಹೋದರೆ ಅಲ್ಲಿ ದೇವಿ ಮುಂದೆ ಕೂತು ಎರಡು ಹಾಡು ಹಾಡಿ ಬರ್ತಿದ್ದೆ. ಈ ಬಾರಿಯೂ ಮನೆಯಲ್ಲಿ ದೇವರೆದುರು ಕೂತು ಹಾಡು ಹಾಡುವ ಮೂಲಕ ಆಚರಿಸುತ್ತೇನೆ. ಸಮೃದ್ಧಿ, ಸುಭಿಕ್ಷತೆ ನೆಲೆಸಲಿ ಅಂತ ದೇವಿಯಲ್ಲಿ ಕೋರಿಕೊಳ್ಳೋದು ಇದ್ದೇ ಇದೆ.
ಪ್ರಕೃತಿಗೆ ಮೊದಲ ಪೂಜೆ ಸಲ್ಲಲಿ: ಪ್ರಿಯಾಂಕಾ ಉಪೇಂದ್ರ
ನಮ್ಮ ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆ ಬಲು ವಿಜೃಂಭಣೆಯಿಂದ ನಡೆಯುತ್ತೆ. ಲಕ್ಷ್ಮೀಪೂಜೆಯನ್ನೂ ನಾವು ಮಾಡೋದು ದೀಪಾವಳಿ ಹಬ್ಬದಂದು. ನಾನು ಉಪೇಂದ್ರ ಅವರನ್ನು ಮದುವೆ ಆಗಿ ಇಲ್ಲಿ ಬಂದಮೇಲೆ ಈ ನೆಲದ ಎಲ್ಲ ಹಬ್ಬಗಳನ್ನೂ ಸಂಭ್ರಮದಿಂದ ಆಚರಿಸುತ್ತೇನೆ. ನಮ್ಮ ಮನೆಯಲ್ಲಿ ಮೊದ ಮೊದಲು ಅತ್ತೆ ಅವರೇ ಇದನ್ನೆಲ್ಲ ಮಾಡುತ್ತಿದ್ದರು. ಆದರೆ ಈಗ ನಾನೇ ಮಾಡುತ್ತೇನೆ. ದೇವಿಗೆ ಕಳಶ ಇಡೋದ್ರಿಂದ ಅಲಂಕಾಶ ಮಾಡೋದು, ಸಿಹಿ ತಿನಿಸು ತಯಾರಿಸೋದು ಎಲ್ಲವನ್ನೂ ಮಾಡ್ತೀನಿ. ಸಾಮಾನ್ಯವಾಗಿ ಉಪೇಂದ್ರ ಆ ಹೊತ್ತಿನಲ್ಲಿ ಮನೆಯಲ್ಲಿದ್ದರೆ ಪೂಜೆಯಲ್ಲಿ ಭಾಗಿ ಆಗ್ತಾರೆ.
ಈ ಬಾರಿ ಹೈದರಾಬಾದ್‌ನಲ್ಲಿ ನಡೆಯಬೇಕಿದ್ದ ಅವರ ಶೂಟಿಂಗ್ ಮುಂದಕ್ಕೆ ಹೋಗಿದೆ. ಹೀಗಾಗಿ ಅವರೂ ಇವತ್ತಿನ ಪೂಜೆಯಲ್ಲಿ ಭಾಗಿ ಆಗ್ತಾರೆ. ಲಕ್ಷ್ಮೀ ಅಂದರೆ ಪ್ರಕೃತಿ. ಪೂಜೆಯ ನೆವದಲ್ಲಿ ಕಸ ಚೆಲ್ಲಾಡಿದರೆ ಆ ಪ್ರಕೃತಿಗೆ ನಾವೇನು ಕೊಟ್ಟಂತಾಗುತ್ತದೆ? ಪ್ರಕೃತಿಯನ್ನು ನಾವು ಕಾಳಜಿ ಮಾಡಿದರೆ, ಪ್ರಕೃತಿ ನಮ್ಮನ್ನು ಪೊರೆಯುತ್ತದೆ. ಹಾಗೆ ಮಾಡಿ ಹಬ್ಬವನ್ನು ಅರ್ಥಪೂರ್ಣವಾಗಿಸೋಣ. ಎಲ್ಲರಿಗೂ ಒಳ್ಳೆಯ ಆರೋಗ್ಯ, ಒಳ್ಳೆಯ ಮನಸ್ಥಿತಿ ಕೊಡಲಿ ಅಂತ ದೇವಿಯಲ್ಲಿ ಕೇಳಿಕೊಳ್ತೀನಿ.
ಭುವನ್ ಸಿನಿಮಾ ಚೆನ್ನಾಗಾಗಲಿ ಅಂತ ಕೋರಿಕೆ : ಹರ್ಷಿಕಾ ಪೂಣಚ್ಚ
ನಮ್ಮ ಕೊಡವ ಸಂಪ್ರದಾಯದಲ್ಲಿ ಲಕ್ಷ್ಮೀ ಕೂರಿಸುವ ಪದ್ಧತಿ ಇಲ್ಲ. ಆದರೆ ಈಗ ನಮ್ಮನೆಗೆ ಪುಟ್ಟ ಲಕ್ಷ್ಮಿ ಬಂದಿರುವ ಹಿನ್ನೆಲೆಯಲ್ಲಿ ನಮ್ಮ ಮನೆಯಲ್ಲೂ ಆಚರಣೆ ಶುರು ಮಾಡುತ್ತಿದ್ದೀವಿ. ಪ್ರತಿಯೊಂದನ್ನೂ ತಿಳ್ಕೊಂಡು ಕಲಿತುಕೊಂಡು ಮಾಡಬೇಕಿದೆ. ಈ ಹಬ್ಬದ ಬಗ್ಗೆ ನನಗೊಂದು ಚೆಂದದ ನೆನಪಿದೆ. ನಾವೆಲ್ಲ ಚಿಕ್ಕವರಿದ್ದಾಗ ವರ ಮಹಾಲಕ್ಷ್ಮಿ ಹಬ್ಬ ಬಂದರೆ ಭಾರೀ ಖುಷಿ. ನಮ್ಮ ಮನೆಯಲ್ಲಿ ಆಚರಣೆ ಇಲ್ಲದಿದ್ದರೂ, ಆಚರಣೆ ಮಾಡುವ ಮನೆ ಮನೆಗೆ ಹೋಗಿ ಕೈಗೆ ಬಳೆ ತೊಡಿಸಿಕೊಳ್ಳುವ ಸಂಭ್ರಮ. ಜರಿ ಲಂಗ, ಬ್ಲೌಸ್ ಹಾಕ್ಕೊಂಡು ಚಂದ ಅಲಂಕಾರ ಮಾಡಿಕೊಂಡು ಹೊರಡ್ತಿದ್ವಿ.
ಎಲ್ಲರ ಮನೆಯಲ್ಲಿ ಬಳೆ ತೊಡಿಸ್ಕೊಂಡ ಮೇಲೆ ಒಂದು ಕಡೆ ಎಲ್ಲ ಹುಡುಗಿಯರೂ ಕೂತು ಯಾರಿಗೆ ಎಷ್ಟು ಬಳೆ ಸಿಕ್ಕಿದೆ ಅಂತ ಎಣಿಸೋದು. ಆ ಖುಷಿಯಲ್ಲೇ ಪ್ರಸಾದ ತಿನ್ನೋದು.. ಈ ಬಾರಿ ವರಮಹಾಲಕ್ಷ್ಮಿಯಲ್ಲಿ ಬೇಡಿಕೊಳ್ಳುವುದು ಭುವನ್‌ಗಾಗಿ. ಅವರು 3 ವರ್ಷದಿಂದ ನನಗಾಗಿ ಅವರ ಕೆರಿಯರ್ ತ್ಯಾಗ ಮಾಡಿದ್ದಾರೆ. ಈಗ 3-4 ಪ್ರಾಜೆಕ್ಟ್ ಅವರ ಕೈಯಲ್ಲಿದೆ. ಅವರ ಸಿನಿಮಾ ಜೀವನ ಚೆನ್ನಾಗಾಗಲಿ ಎನ್ನೋದೇ ನನ್ನ ಪ್ರಾರ್ಥನೆ.
ಲಕ್ಷ್ಮೀಗೆ ಸೀರೆ ಉಡಿಸಿ ಸಂಭ್ರಮಿಸುವೆ: ಕಾವ್ಯಾ ಶೈವ
ನಮ್ಮ ಮನೆಯಲ್ಲಿ ವರಮಹಾಲಕ್ಷ್ಮೀ ಹಬ್ಬದ ಶಾಸ್ತ್ರೋಕ್ತ ಆಚರಣೆ ಶುರುವಾದದ್ದು 7 ವರ್ಷದ ಹಿಂದೆ. ಅಲ್ಲೀತನಕ ಗಣೇಶನ ಆಚರಣೆಯಷ್ಟೇ ನಡೆಯುತ್ತಿತ್ತು. ವರಮಹಾಲಕ್ಷ್ಮೀ ಹಬ್ಬಕ್ಕೂ ಒಂದು ವಾರ ಮೊದಲೇ ಅಮ್ಮನ ಕ್ಲೀನಿಂಗ್ ಕೆಲಸ ಶುರುವಾಗುತ್ತೆ. ಹಬ್ಬದ ದಿನ ನಾನೂ ಅಮ್ಮನ ಕೆಲಸದಲ್ಲಿ ಕೈ ಜೋಡಿಸ್ತೀನಿ. ದೇವಿಗೆ ಸೀರೆ ಉಡಿಸೋ ಕೆಲಸ ನನ್ನದು. ಕಳೆದ 3 ವರ್ಷದಿಂದ ಬೇರೆ ಬೇರೆ ರೀತಿಯಲ್ಲಿ ಸೀರೆ ಉಡಿಸ್ತಾ ಬರ್ತಿದ್ದೀನಿ. ಆದರೆ ಇವತ್ತಿಗೂ ಯೂಟ್ಯೂಬ್ ನೋಡ್ಕೊಂಡೇ ಇಂಥಾದ್ದನ್ನೆಲ್ಲ ಮಾಡೋದು.
ಅಮ್ಮ ಕೋಡುಬಳೆ, ಚಕ್ಲಿ, ನಿಪ್ಪಟ್ಟು, ಕರ್ಜಿಕಾಯಿ, ಕಜ್ಜಾಯ, ಚಿರೋಟಿ ಇತ್ಯಾದಿ ತಿಂಡಿ ಮಾಡುತ್ತಾರೆ. ಅದರ ಜೊತೆಗೆ ದೇವಿ ಮುಂದೆ ಹಣ್ಣು, ಹಣ ಇಡುತ್ತೇವೆ. ಪೂಜೆ ಮಾಡೋದರ ಜೊತೆಗೆ ಅಕ್ಕಪಕ್ಕದ ಮನೆಯವರೂ ಬರುತ್ತಾರೆ. ಅಮ್ಮನೂ ಅವರ ಮನೆಗೆ ಹೋಗಿ ದೇವಿಗೆ ನಮಸ್ಕಾರ ಮಾಡಿ ಬರುತ್ತಾರೆ. ನಾನು ದೇವಿಯಲ್ಲಿ ಬೇಡಿಕೊಳ್ಳೋದು : ಈಗಷ್ಟೇ ಸಿನಿಮಾ ಜಗತ್ತಿಗೆ ಬಂದಿದ್ದೇನೆ. ಇಲ್ಲಿ ಬೆಳೆಯಲು ಅವಕಾಶ ಸಿಗಲಿ. ಒಳ್ಳೊಳ್ಳೆ ಸಿನಿಮಾಗಳು ಬರಲಿ ಅಂತ. ಮಹಿಳಾ ಪ್ರಧಾನ ಸಿನಿಮಾ ಮಾಡುವ ಇಚ್ಛೆ ಇದೆ.
ಹಬ್ಬಕ್ಕೆ ಕಾಂಜೀವರಂನಿಂದಲೇ ಸೀರೆ ತರ್ತೀವಿ: ಆಯನ
ನಮ್ಮದು ದೊಡ್ಡ ಕುಟುಂಬ. ವರಮಹಾಲಕ್ಷ್ಮೀ ಹಬ್ಬ ನಮ್ಮಲ್ಲಿ ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ಈ ಹಬ್ಬಕ್ಕೆ ಮನೆಯ ಹೆಣ್ಮಕ್ಕಳು ಕಾಂಜೀವರಂಗೇ ಹೋಗಿ ಅಲ್ಲಿಂದ ರೇಷ್ಮೆ ಸೀರೆ ತರುವುದು ರೂಢಿ. ಹಾಗೆ ತಂದ ಸೀರೆಯನ್ನು ದೇವಿಗೆ ಉಡಿಸಿ ಅಲಂಕಾರ ಮಾಡುವುದು ನನ್ನ ಕೆಲಸ. ಅದನ್ನು ಬಹಳ ಇಷ್ಟಪಟ್ಟು ಆಸಕ್ತಿಯಿಂದ ಮಾಡುತ್ತೇನೆ. ಚಿಕ್ಕವಯಸ್ಸಿಂದಲೇ ನನಗೆ ಮೇಕಪ್, ಅಲಂಕಾರ ಬಹಳ ಪ್ರೀತಿ. ಬಹುಶಃ ನಾನು ಇವತ್ತು ನಟಿಯಾಗಿರುವುದರ ಸೂಚನೆ ಅಲ್ಲೇ ಇತ್ತು ಅನಿಸುತ್ತೆ. ಹೀಗಾಗಿ ದೇವಿಯ ಅಲಂಕಾರವನ್ನು ಬಹಳ ತನ್ಮಯತೆಯಿಂದ ಮಾಡುತ್ತೇನೆ.
ಇನ್ನೊಂದು ವಿಚಾರ ಅಂದರೆ ನಮ್ಮನೆಯಲ್ಲೊಂದು ನಾಯಿ ಇದೆ. ಅದನ್ನು ನಾಯಿ ಅಂತ ಯಾವತ್ತೂ ಕರೆದಿಲ್ಲ. ಅವನ ಹೆಸರು ಕುಕ್ಕಿ. ಬಹಳ ತುಂಟ. ವರಮಹಾಲಕ್ಷ್ಮೀ ಹಬ್ಬದಂದು ದೇವಿ ಮುಂದೆ ಸ್ವೀಟ್ ಇಟ್ಟರೆ ಅವನ ಕಣ್ಣೆಲ್ಲ ಸ್ವೀಟ್ ಮೇಲೆ ಅವನಿಂದ ಸ್ವೀಟ್ ಕಾಪಾಡಿಕೊಳ್ಳೋದೆ ನಮಗೆ ದೊಡ್ಡ ಚಾಲೆಂಜ್. ಹಬ್ಬದಂದು ನಾನು ದೇವಿಯಲ್ಲಿ ಕೋರಿಕೊಳ್ಳೋದು ಸಂಪತ್ತು, ಸೌಭಾಗ್ಯದ ಜೊತೆಗೆ ನನ್ನ ಕಾರ್ಯಕ್ಷೇತ್ರದಲ್ಲಿ ಒಳ್ಳೆಯ ಬೆಳವಣಿಗೆ ಸಾಧಿಸುವಂತಾಗಲಿ ಅನ್ನೋದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.