
ಬೆಂಗಳೂರು: ಚಿತ್ರರಂಗದಲ್ಲಿ ದಶಕಗಳ ಕಾಲ ಸಕ್ರಿಯರಾಗಿರುವ ಖ್ಯಾತ ನಿರ್ಮಾಪಕ ಶ್ರೀ ರಾಕ್‌ಲೈನ್ ವೆಂಕಟೇಶ್ (Rockline Venkatesh) ಅವರ ಕುಟುಂಬಕ್ಕೆ ಈಗ ಮತ್ತೊಂದು ಹೆಮ್ಮೆಯ ಗರಿ ಲಭಿಸಿದೆ. ಅವರ 14 ವರ್ಷದ ಮೊಮ್ಮಗ ಶಿವತೇಜ ವೈ (Shivateja Y) ಅವರು ಮಿಶ್ರಣಗೊಂಡ 'ಮೆಗಾಮಿಂಕ್ಸ್ ರೂಬಿಕ್ಸ್ ಕ್ಯೂಬ್' ಬಿಡಿಸುವಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆಯುವ ಮೂಲಕ ತ್ರಿವಳಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಈ ಅಪರೂಪದ ಸಾಧನೆಯನ್ನು ಸಂಭ್ರಮಿಸಲು ಭಾನುವಾರ ಬೆಂಗಳೂರಿನ ದಿ ಕಾನ್ರಾಡ್ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿಯನ್ನು ಆಯೋಜಿಸಲಾಗಿತ್ತು. ಈ ವಿಶೇಷ ಕ್ಷಣದಲ್ಲಿ ಅವರ ಕುಟುಂಬದ ಸದಸ್ಯರಾದ ಯತೀಶ್ ವೆಂಕಟೇಶ್ ಮತ್ತು ಇತರರು ಉಪಸ್ಥಿತರಿದ್ದು, ಮಗನ ಸಾಧನೆಯ ಹಾದಿಯ ಬಗ್ಗೆ ಹೆಮ್ಮೆಯ ಮಾತುಗಳನ್ನು ಹಂಚಿಕೊಂಡರು.
ಸಿನಿಮಾ ಹೊರತಾದ ಹೆಮ್ಮೆಯ ಸಾಧನೆ
ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, "ನಾವು ಸದಾ ಸಿನಿಮಾಗಳಲ್ಲೇ ಹೆಚ್ಚಾಗಿ ತೊಡಗಿಸಿಕೊಂಡಿರುತ್ತೇವೆ ಮತ್ತು ಸಿನಿಮಾ ಕಾರ್ಯಕ್ರಮಗಳಲ್ಲೇ ಕಾಣಿಸಿಕೊಳ್ಳುವುದು ಹೆಚ್ಚು. ಆದರೆ ಈ ಬಾರಿ ಸಿನಿಮಾ ಹೊರತುಪಡಿಸಿ, ನಮ್ಮ ಕುಟುಂಬದ ಮೊಮ್ಮಗ ಶಿವತೇಜನ ಸಾಧನೆ ಬಗ್ಗೆ ಹೇಳಲು ನಿಮ್ಮ ಮುಂದೆ ಬಂದಿರುವುದು ನಮಗೆ ಅಪಾರ ಹೆಮ್ಮೆಯ ಸಂಗತಿ. ಇಂದಿನ ಮಕ್ಕಳು ಹೆಚ್ಚಾಗಿ ಟಿವಿ, ಮೊಬೈಲ್‌ಗಳಲ್ಲಿ ಕಾಲ ಕಳೆಯುವುದನ್ನು ನೋಡುತ್ತೇವೆ, ಅದು ನಮಗೆ ಅಷ್ಟಾಗಿ ಇಷ್ಟವಾಗದ ವಿಷಯ. ಆದರೆ ಅದರ ನಡುವೆಯೂ ನಮ್ಮ ಮುಂದಿನ ಪೀಳಿಗೆ ಇಂತಹ ವಿಭಿನ್ನ ಸಾಧನೆ ಮಾಡಿರುವುದು ಖುಷಿ ತಂದಿದೆ. ಈ ಸಾಧನೆ ನಮ್ಮ ಕುಟುಂಬಕ್ಕೆ ಒಂದು ಕಿರೀಟವಿದ್ದಂತೆ" ಎಂದು ಹರ್ಷ ವ್ಯಕ್ತಪಡಿಸಿದರು.
ಮಗನ ಪ್ರತಿಭೆಗೆ ತಂದೆ-ತಾಯಿಯ ಸಾಥ್
ಮಗನ ಸಾಧನೆಯ ಬಗ್ಗೆ ಮಾತನಾಡಿದ ತಂದೆ ಯತೀಶ್ ವೆಂಕಟೇಶ್, "ಮಕ್ಕಳಲ್ಲಿರುವ ಪ್ರತಿಭೆ ಏನು ಎಂಬುದನ್ನು ಪೋಷಕರು ಮೊದಲೇ ಗಮನಿಸಬೇಕು. ಅದರ ಆಧಾರದ ಮೇಲೆ ಅವರಿಗೆ ಬೇಕಾದ ಬೆಂಬಲ ನೀಡಬೇಕು. ಮಗನ ಈ ವಿಶೇಷ ರೂಬಿಕ್ಸ್ ಪ್ರತಿಭೆಯನ್ನು ಮೊದಲು ಗುರುತಿಸಿದ್ದೇ ಅವನ ತಾಯಿ. ನಾನು ತಂದೆಯಾಗಿ ಅವನಿಗೆ ಬೇಕಾದ ಸೌಲಭ್ಯ ಮತ್ತು ಪ್ರೋತ್ಸಾಹ ನೀಡುವ ಕೆಲಸ ಮಾಡಿದ್ದೇನೆ ಅಷ್ಟೆ" ಎಂದರು.
ಶಿವತೇಜನ ತಾಯಿ ಮಾತನಾಡಿ, "ನಮ್ಮ ಕುಟುಂಬದಲ್ಲಿ ರೂಬಿಕ್ಸ್ ಕ್ಯೂಬ್ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದು ಇದೇ ಮೊದಲು. ಶಿವತೇಜ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ರೂಬಿಕ್ಸ್ ಕ್ಯೂಬ್ ಅಭ್ಯಾಸ ಮಾಡುತ್ತಿದ್ದಾನೆ. ಅದರ ಎಲ್ಲಾ ಕಠಿಣ ಹಂತಗಳನ್ನು ಯಶಸ್ವಿಯಾಗಿ ಮುಗಿಸಿ, ಈಗ ಈ ದಾಖಲೆ ಬರೆದಿದ್ದಾನೆ" ಎಂದು ಮಗನ ಶ್ರಮವನ್ನು ಸ್ಮರಿಸಿದರು.
ಸಾಧನೆಯ ಹಿನ್ನೆಲೆ
ಕರ್ನಾಟಕದ, ಬೆಂಗಳೂರಿನ ಶಿವತೇಜ ಯತೀಶ್ ಅವರು ಅತಿ ಹೆಚ್ಚು ಬಾರಿ ಮಿಶ್ರಣಗೊಂಡ ಮೆಗಾಮಿಂಕ್ಸ್ ರೂಬಿಕ್ಸ್ ಕ್ಯೂಬ್‌ಗಳನ್ನು (Megaminx Rubik’s Cubes) ಬಿಡಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಅವರು 14 ವರ್ಷ 9 ತಿಂಗಳ ವಯಸ್ಸಿನಲ್ಲಿ, 1 ಗಂಟೆ, 27 ನಿಮಿಷ, 12 ಸೆಕೆಂಡ್ ಮತ್ತು 30 ಮಿಲಿಸೆಕೆಂಡ್‌ಗಳಲ್ಲಿ ಒಟ್ಟು 21 ಬಾರಿ ಮೆಗಾಮಿಂಕ್ಸ್ ಕ್ಯೂಬ್‌ಗಳನ್ನು ಬಿಡಿಸಿ ಈ ಸಾಧನೆ ಮಾಡಿದ್ದಾರೆ. ಈ ಮೂಲಕ ಶಾಸಕ ಶ್ರೀ ಮುನಿರತ್ನ ಅವರ ಮೊಮ್ಮಗನೂ ಆಗಿರುವ ಶಿವತೇಜ, ತಮ್ಮ ಈ ವಿಶಿಷ್ಟ ಕೌಶಲ್ಯದ ಮೂಲಕ ರಾಜ್ಯ ಮತ್ತು ದೇಶದ ಗಮನ ಸೆಳೆದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.